Joe Biden: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮನೆ ಮೇಲೆ ಎಫ್​ಬಿಐ ದಾಳಿ; ಮಹತ್ವದ ದಾಖಲೆಗಳು ವಶ

ತಮ್ಮ ನಿವಾಸದಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ಅಧಿಕೃತ ಮತ್ತು ವರ್ಗೀಕೃತ ದಾಖಲೆಗಳು ಪತ್ತೆಯಾಗಿರುವುದು ಅಧ್ಯಕ್ಷ ಬೈಡೆನ್ ಅವರಿಗೆ ಮುಜುಗರ ತಂದಿದೆ.

Joe Biden: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮನೆ ಮೇಲೆ ಎಫ್​ಬಿಐ ದಾಳಿ; ಮಹತ್ವದ ದಾಖಲೆಗಳು ವಶ
ಅಮೆರಿಕ ಅಧ್ಯಕ್ಷ ಜೋ ಬೈಡೆನ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 22, 2023 | 9:57 AM

ವಾಷಿಂಗ್​ಟನ್: ಅಮೆರಿಕದ ನ್ಯಾಯಾಂಗ ಇಲಾಖೆಯ ತನಿಖಾಧಿಕಾರಿಗಳಿಗೆ (US Department of Justice) ಡೆಲವೇರ್ (Delaware) ಎಂಬಲ್ಲಿ ಇರುವ ಅಧ್ಯಕ್ಷ ಜೋ ಬೈಡೆನ್ (Joe Biden) ಅವರ ಕುಟುಂಬಕ್ಕೆ ಸೇರಿದ್ದ ಮನೆಯಲ್ಲಿ ಆರು ವರ್ಗೀಕೃತ ದಾಖಲೆಗಳು (classified documents) ಸಿಕ್ಕಿವೆ ಎಂದು ಅಧ್ಯಕ್ಷರ ವಕೀಲರು ತಿಳಿಸಿದ್ದಾರೆ. 2024ರಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೊಂದು ಅವಧಿಗೆ ಸ್ಪರ್ಧಿಸುವ ಕುರಿತು ತೀರ್ಮಾನ ಪ್ರಕಟಿಸಬೇಕಾದ ಹೊತ್ತಿನಲ್ಲಿ ಬಹಿರಂಗಗೊಂಡಿರುವ ಈ ವಿವರಗಳು ಬೈಡೆನ್ ಅವರನ್ನು ಮುಜುಗರಕ್ಕೀಡು ಮಾಡಿವೆ. ‘ತನ್ನಿಂದ ಯಾವುದೇ ತಪ್ಪು ಆಗಿಲ್ಲ ಎಂದಿರುವ ಬೈಡೆನ್, ಈ ದಾಖಲೆಗಳನ್ನು ಮನೆಯಲ್ಲಿರಿಸಿಕೊಳ್ಳುವುದು ಅಪರಾಧ ಎಂದು ಗೊತ್ತಿರಲಿಲ್ಲ’ ಎಂದು ಹೇಳಿದ್ದಾರೆ. ಬೈಡೆನ್ ಅಮೆರಿಕದ ಉಪಾಧ್ಯಕ್ಷರಾಗಿದ್ದ ಕಾಲದ ವರ್ಗೀಕೃತ ದಾಖಲೆಗಳು ಈ ಮೊದಲು ಬೈಡೆನ್ ಬೆಂಬಲಿತ ಚಿಂತಕರ ಚಾವಡಿಯ (Think Tank) ಕಚೇರಿಯಲ್ಲಿ ಪತ್ತೆಯಾಗಿತ್ತು. ಎರಡೂ ಸ್ಥಳಗಳಲ್ಲಿ ಪತ್ತೆಯಾದ ದಾಖಲೆಗಳ ಸಂಖ್ಯೆ 12 ದಾಟುತ್ತದೆ.

ಎರಡನೇ ಬಾರಿಗೆ ದಾಖಲೆಗಳು ಪತ್ತೆಯಾದ ನಂತರ ಅಧ್ಯಕ್ಷರ ಕಚೇರಿಯು ಬೈಡೆನ್ ಅವರ ಡೆಲಾವೇರ್ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಲು ನ್ಯಾಯಾಂಗ ಇಲಾಖೆಗೆ ಅನುಮಿತಿಸಿತ್ತು. ಶುಕ್ರವಾರದಿಂದ ಶೋಧ ಆರಂಭವಾಗಿತ್ತು ಎಂದು ಬೈಡೆನ್ ಪರ ವಕೀಲ ಬಾಬ್ ಬೊಯರ್ ಹೇಳಿದ್ದಾರೆ. ‘ವರ್ಗೀಕೃತ ದಾಖಲೆಗಳನ್ನು ಸದ್ಯಕ್ಕೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ದಾಖಲೆಗಳಿಗೆ ಸಂಬಂಧಿಸಿದ ಇತರ ಕಾಗದ ಪತ್ರಗಳನ್ನೂ ಅಧಿಕಾರಿಗಳು ಕೊಂಡೊಯ್ದಿದ್ದಾರೆ’ ಎಂದು ಬೈಡೆನ್ ಪರ ವಕೀಲರು ತಿಳಿಸಿದ್ದಾರೆ.

‘ಸುಮಾರು 12 ತಾಸು ನಡೆದ ಶೋಧ ಕಾರ್ಯಾಚರಣೆಯಲ್ಲಿ ಮನೆಯ ಎಲ್ಲ ಪ್ರದೇಶಗಳನ್ನೂ ತಪಾಸಣೆಗೆ ಒಳಪಡಿಸಲಾಯಿತು. ಹಲವು ದಶಕಗಳಷ್ಟು ಹಳೆಯದಾದ ಕೈಲಿ ಬರೆದ ಟಿಪ್ಪಣಿಗಳು, ಕಡತಗಳು, ಕಾಗದಗಳು, ಬೈಂಡ್ ಆಗಿರುವ ದಾಖಲೆಗಳು, ನೆನಪೋಲೆಗಳು, ಕಾರ್ಯಯೋಜನೆ ಪಟ್ಟಿಗಳನ್ನು ಅಧಿಕಾರಿಗಳು ಪರಿಶೀಲಿಸಿದರು. ಇದೀಗ ಅಧಿಕಾರಿಗಳು ವಶಕ್ಕೆ ಪಡೆದಿರುವ ದಾಖಲೆಗಳು ಬೈಡೆನ್ ಅವರು ಉಪಾಧ್ಯಕ್ಷರಾಗಿ 2ನೇ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯದ್ದು’ ಎಂದು ಅವರು ಹೇಳಿದ್ದಾರೆ.

ಬೈಡೆನ್ ಅವರ ಖಾಸಗಿ ವಕೀಲರು ಮತ್ತು ಶ್ವೇತಭವನದ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು. ಶೋಧ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಮೊದಲೇ ಬಹಿರಂಗಪಡಿಸಬಾರದೆಂದು ಸೂಚಿಸಲಾಗಿತ್ತು. ಪ್ರಸ್ತುತ ಈ ದಾಖಲೆಗಳನ್ನು ಪತ್ರಾಗಾರ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಮುಜುಗರಕ್ಕೀಡಾದ ಬೈಡೆನ್

ತಮ್ಮ ನಿವಾಸದಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ಅಧಿಕೃತ ಮತ್ತು ವರ್ಗೀಕೃತ ದಾಖಲೆಗಳು ಪತ್ತೆಯಾಗಿರುವುದು ಅಧ್ಯಕ್ಷ ಬೈಡೆನ್ ಅವರಿಗೆ ಮುಜುಗರ ತಂದಿದೆ. ಈ ಸಂಬಂಧ ಕ್ಯಾಲಿಫೋರ್ನಿಯಾದಲ್ಲಿ ತಮ್ಮನ್ನು ಪ್ರಶ್ನಿಸಿದ ವರದಿಗಾರರಿಗೆ ಪ್ರತಿಕ್ರಿಯಿಸಿದ್ದ ಅಧ್ಯಕ್ಷರು, ‘ಅಲ್ಲಿ ಏನೂ ಇಲ್ಲ ಎಂಬುದು ಶೀಘ್ರದಲ್ಲಿಯೇ ಬಹಿರಂಗವಾಗಲಿದೆ’ ಎಂದಿದ್ದರು.

ಅಮೆರಿಕದ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವಧಿಯಲ್ಲಿ ಸರ್ಕಾರ ನಡೆಯುತ್ತಿದ್ದ ರೀತಿ ಹಾಗೂ ಟ್ರಂಪ್ ಕಾರ್ಯವೈಖರಿಯ ಬಗ್ಗೆ ಹಲವಾರು ಆರೋಪಗಳು ಕೇಳಿಬಂದಿದ್ದವು. ಪ್ರಾಮಾಣಿಕ ಆಡಳಿತದ ಆಶಾವಾದ ಬಿತ್ತಿ ಅಧಿಕಾರಕ್ಕೆ ಬಂದಿದ್ದ ಬೈಡೆನ್​ಗೆ ಇದೀಗ ಪತ್ತೆಯಾಗಿರುವ ದಾಖಲೆಪತ್ರಗಳು ತಲೆನೋವಾಗಿ ಪರಿಣಮಿಸಿದೆ.

ಡೊನಾಲ್ಡ್ ಟ್ರಂಪ್ ಅವರು ತಾವು ಅಧ್ಯಕ್ಷರಾಗಿದ್ದ ಸರ್ಕಾರದ ಅಧಿಕೃತ ದಾಖಲೆಗಳನ್ನು ಶ್ವೇತ ಭವನದಿಂದ ಫ್ಲೋರಿಡಾದಲ್ಲಿದ್ದ ತಮ್ಮ ಸ್ವಗೃಹಕ್ಕೆ ಕೊಂಡೊಯ್ದಿದ್ದರು. ಅವನ್ನು ಮತ್ತೆ ಪಡೆದುಕೊಳ್ಳುವ ಬಗ್ಗೆ ಸರ್ಕಾರ ನಡೆಸುತ್ತಿದ್ದ ಪ್ರಯತ್ನಗಳಿಗೆ ತಡೆಯೊಡ್ಡಿದ್ದರು. ಈ ಬಗ್ಗೆ ಅಧಿಕಾರಿಗಳು ತಡೆಸುತ್ತಿದ್ದ ವೇಳೆ ಬೈಡೆನ್ ಅವರ ಕರ್ತವ್ಯಲೋಪ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬಾಸ್ಕೆಟ್‌ಬಾಲ್ ತಂಡದ ಜತೆ ಫೋಟೊ ತೆಗೆಯುವಾಗ ಮಂಡಿಯೂರಿ ಕುಳಿತ ಜೋ ಬೈಡನ್​​, ನಾ ಹಾಗೆ ಕೂರಲ್ಲ ಎಂದ ಕಮಲಾ ಹ್ಯಾರಿಸ್​​

ಮತ್ತಷ್ಟು ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:56 am, Sun, 22 January 23