Ukraine Crisis: ಉಕ್ರೇನ್ ಮೇಲೆ ಯುದ್ಧ ಸಾರಿದ ರಷ್ಯಾದ ವಿರುದ್ಧ ‘ಸೈಬರ್ ವಾರ್’ ಘೋಷಿಸಿದ ಹ್ಯಾಕರ್ಗಳು
Cyber War on Russia: ವರದಿಗಳ ಪ್ರಕಾರ ಅನಾಮಧೇಯ ತಂಡವೊಂದು ರಷ್ಯಾದ ಮೇಲೆ ಸೈಬರ್ ದಾಳಿ ನಡೆಸಲು ಮುಂದಾಗಿದೆ. ಇದರಲ್ಲಿ ರಷ್ಯಾದ ಸರ್ಕಾರಿ ವೆಬ್ಸೈಟ್ಗಳನ್ನು ಗುರಿಯಾಗಿಸಲಾಗಿದೆ.
ರಷ್ಯಾ ಉಕ್ರೇನ್ ಮೇಲೆ ದಾಳಿಯನ್ನು (Russia- Ukraine War) ತೀವ್ರಗೊಳಿಸುತ್ತಿರುವಂತೆಯೇ ಅದರ ವಿರುದ್ಧ ಜಗತ್ತಿನ ಪ್ರತಿಭಟನೆ ಜೋರಾಗಿದೆ. ಇದೀಗ ಅನಾಮಧೇಯ ಹ್ಯಾಕರ್ಗಳ ತಂಡವಾದ ‘ಅನಾನಿಮಸ್’ ರಷ್ಯಾದ ಮೇಲೆ ‘ಸೈಬರ್ ಯುದ್ಧ’ (Cyber War) ಸಾರಿದೆ. ಉಕ್ರೇನ್ ರಾಜಧಾನಿ ಕೈವ್ ವಶಪಡಿಸಿಕೊಳ್ಳಲು ಮುಂದಾಗಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿಲುವನ್ನು ವಿರೋಧಿಸಿ, ಹ್ಯಾಕರ್ಗಳು ರಷ್ಯಾದ ವಿರುದ್ಧ ಸೈಬರ್ ವಾರ್ ಮೊರೆ ಹೋಗಿದ್ದಾರೆ. ಅಂತಾರಾಷ್ಟ್ರೀಯ ವರದಿಗಳ ಪ್ರಕಾರ ಹ್ಯಾಕರ್ಗಳು ರಷ್ಯಾದ ಸರ್ಕಾರಿ ವೆಬ್ಸೈಟ್ಗಳನ್ನು ಸ್ಥಗಿತಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೇ ಅಲ್ಲಿಯ ರಾಜ್ಯ ನಿಯಂತ್ರಣ ಹೊಂದಿರುವ ಟೆಲಿವಿಶನ್ ನೆಟ್ವರ್ಕ್ ಆರ್ಟಿ.ಕಾಮ್ ಮೇಲೂ ಹ್ಯಾಕರ್ಗಳು ಟಾರ್ಗೆಟ್ ಮಾಡಿದ್ದಾರೆ. ವೆಬ್‌ಸೈಟ್‌ಗಳು ಹಾಗೂ ಟೆಲಿವಿಶನ್ ನೆಟ್ವರ್ಕ್ ಸೇವೆಗಳು ಲಭ್ಯವಾಗದಂತೆ ಮಾಡುವ ‘ಡಿನೈಯಲ್ ಆಫ್ ಸರ್ವಿಸ್’ (ಡಿಡಿಒಎಸ್) ಮಾಡಲು ಹ್ಯಾಕರ್ಗಳು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಈ ಸೈಬರ್ ವಾರ್ಅನ್ನು ಸರ್ಕಾರಿ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿ ಗುರುತಿಸಿಕೊಂಡಿರುವ ‘ಅನಾನಿಮಸ್’ ಘೋಷಿಸಿದೆ. ಈ ಕುರಿತು ಟ್ವೀಟ್ ಮಾಡಲಾಗಿದ್ದು, ಈಗಾಗಲೇ ಹಲವು ರಷ್ಯನ್ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ತಿಳಿಸಲಾಗಿದೆ. ‘ರಷ್ಯನ್ ಸರ್ಕಾರದ ವಿರುದ್ಧ ಅಧಿಕೃತವಾಗಿ ದಿ ಅನಾನಿಮಸ್ ಕಲೆಕ್ಟಿವ್ ಸೈಬರ್ ವಾರ್ ನಡೆಸುತ್ತಿದೆ’ ಎಂದು ಟ್ವೀಟ್ ಮಾಡಲಾಗಿದೆ.
ಅನಾನಿಮಸ್ ಹಂಚಿಕೊಂಡಿರುವ ಟ್ವೀಟ್:
The Anonymous collective is officially in cyber war against the Russian government. #Anonymous #Ukraine
— Anonymous (@YourAnonOne) February 24, 2022
ರಷ್ಯಾದ ಹಲವು ವೆಬ್‌ಸೈಟ್‌ಗಳು ಹ್ಯಾಕರ್ಗಳಿಂದ ಸಮಸ್ಯೆ ಅನುಭವಿಸುತ್ತಿವೆ ಎಂದು ಬಳಕೆದಾರರು ಹೇಳಿದ್ದಾರೆ. ಕ್ರೆಮ್ಲಿನ್, ದಿ ಡುಮಾ, ರಕ್ಷಣಾ ಸಚಿವಾಲಯ ಮೊದಲಾದವುಗಳ ವೆಬ್‌ಸೈಟ್‌ಗಳು ನಿಧಾನವಾಗಿರುವುದಲ್ಲದೇ, ಕೆಲವು ಸೇವೆ ಲಭ್ಯವಿಲ್ಲ ಎಂದು ಹೇಳುತ್ತಿದೆ ಎಂದು ಹಲವರು ಬರೆದುಕೊಂಡಿದ್ದಾರೆ.
ಹಲವು ಹ್ಯಾಕರ್ಗಳ ಗುಂಪು ‘ದಿ ಅನಾನಿಮಸ್’ ಆಗಿದ್ದು ಈ ಹಿಂದೆ ಹಲವು ಸರ್ಕಾರಿ ವೆಬ್ಸೈಟ್ಗಳ ಮೇಲೆ ದಾಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು. ಯುಎಸ್ ಸರ್ಕಾರದ ವೆಬ್‌ಸೈಟ್‌ಗಳು, ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ (ಸಿಐಎ), ವೆಸ್ಟ್‌ಬೊರೊ ಬ್ಯಾಪ್ಟಿಸ್ಟ್ ಚರ್ಚ್, ಐಸಿಸ್ ಮೊದಲಾದ ವೆಬ್ಸೈಟ್ಗಳ ಮೇಲೆ ಈ ಹಿಂದೆ ಅನಾನಿಮಸ್ ದಾಳಿ ನಡೆಸಿತ್ತು. ಇದೀಗ ಉಕ್ರೇನ್ ವಿಷಯದಲ್ಲಿ ರಷ್ಯಾವನ್ನು ಟಾರ್ಗೆಟ್ ಮಾಡಲಾಗಿದೆ.
ಗುರುವಾರ ರಷ್ಯಾ ಉಕ್ರೇನ್ ವಿರುದ್ಧ ಸೈಬರ್ ದಾಳಿ ನಡೆಸಿತ್ತು. ಆಗ ಉಕ್ರೇನ್ ರಾಜಧಾನಿ ಕೈವ್ನ ಜನರು ಹಲವು ಸಮಸ್ಯೆಗಳನ್ನು ಎದುರಿಸಿದ್ದರು. ಕೊನೆಗೆ ಸರ್ಕಾರ ಜನರಿಗೆ ಟೆಕ್ಸ್ಟ್ ರೂಪದಲ್ಲಿ ವ್ಯವಹರಿಸಲು ತಿಳಿಸಿತ್ತು. ರಷ್ಯಾ ಹಾಗೂ ಉಕ್ರೇನ್ ನಡುವಿನ ಕದನ ಇಂದಿಗೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಕೈವ್ ಸುತ್ತಮುತ್ತ ರಷ್ಯನ್ ಸೇನೆ ತಲುಪಿದೆ ಎಂದು ವರದಿಗಳು ಹೇಳಿವೆ. ಯುದ್ಧದ ವಿರುದ್ಧ ವಿಶ್ವದ ಬಹುತೇಕ ರಾಷ್ಟ್ರಗಳು ಅಭಿಪ್ರಾಯ ಹಂಚಿಕೊಂಡಿವೆ. ಆದರೆ ರಷ್ಯಾ ಪಾಶ್ಚಾತ್ಯ ರಾಷ್ಟ್ರಗಳಿಗೆ ತನ್ನ ಸುದ್ದಿಗೆ ಬಂದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದೆ. ಈ ನಡುವೆ ಉಕ್ರೇನ್ ಅಧ್ಯಕ್ಷರು ರಷ್ಯಾ ಮೇಲಿನ ಈ ಯುದ್ಧದಲ್ಲಿ ನಾವು ಏಕಾಂಗಿ ಎಂದು ಅಸಹಾಯಕತೆ ಹೊರಹಾಕಿದ್ದಾರೆ.
ಇದನ್ನೂ ಓದಿ:
ಈ ರೀತಿಯ ದಾಳಿ ಕೊನೆಯದಾಗಿ ನಡೆದಿದ್ದು ನಾಝಿಗಳಿಂದ; ಕೈವ್‌ನಲ್ಲಿ ರಷ್ಯಾದ ಕ್ಷಿಪಣಿ ದಾಳಿ ಬಗ್ಗೆ ಉಕ್ರೇನ್ ಸಚಿವ
ರಷ್ಯಾ ದಾಳಿಗೆ ತತ್ತರಿಸಿದ ಉಕ್ರೇನ್: ಯುದ್ಧದ ನಾಡಿನ ಮನಕಲಕುವ ಫೋಟೋಗಳು ಇಲ್ಲಿವೆ