ಬಾಗ್ಧಾದ್: ಇರಾಕ್ ರಾಜಧಾನಿ ಬಾಗ್ಧಾದ್ನಲ್ಲಿ ನಡೆದ ಅವಳಿ ಆತ್ಮಾಹುತಿ ಬಾಂಬ್ ದಾಳಿಗೆ 32 ಜನರು ಮೃತಪಟ್ಟಿದ್ದು, ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಕೇಂದ್ರ ಬಾಗ್ದಾದ್ನ ಬಾಬ್ ಅಲ್ ಶಾರ್ಕಿ ವಾಣಿಜ್ಯ ಪ್ರದೇಶದ ಬಳಿ ಈ ದಾಳಿ ನಡೆದಿದೆ. ಇದು ಜನ ಸಂದಣಿ ಪ್ರದೇಶವಾಗಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಿದೆ. ತಕ್ಷಣಕ್ಕೆ ಯಾರೊಬ್ಬರೂ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಆದರೆ. ಇದು ಇಸ್ಲಾಮಿಕ್ ಸ್ಟೇಟ್ ಗ್ರೂಪ್ನ ಕೃತ್ಯ ಎಂದು ಇರಾಕ್ ಸೇನೆ ಆರೋಪಿಸಿದೆ.
ಇರಾಕ್ ಆರೋಗ್ಯ ಸಚಿವ ಹಸನ್ ಮೊಹ್ಮದ್ ಅಲ್ ತಮ್ಮಿ ಸಾವು-ನೋವಿನ ಬಗ್ಗೆ ವಿವರಣೆ ನೀಡಿದ್ದಾರೆ. ದಾಳಿ ವೇಳೆ ಒಟ್ಟು 32 ಜನರು ಮೃತಪಟ್ಟಿದ್ದು, 110 ಜನರು ಗಾಯಗೊಂಡಿದ್ದಾರೆ. ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.
ಮಾರುಕಟ್ಟೆ ಬಳಿ ಬಂದ ವ್ಯಕ್ತಿಯೋರ್ವ ದೊಡ್ಡದಾಗಿ ಕೂಗಿ ಜನರನ್ನು ತನ್ನತ್ತ ಆಕರ್ಷಿಸಿದ್ದ. ನಂತರ ತಾನು ಕಟ್ಟಿಕೊಂಡಿದ್ದ ಬಾಂಬ್ ಸ್ಫೋಟ ಮಾಡಿಕೊಂಡಿದ್ದಾನೆ. ಈತ ಮೃತಪಡುತ್ತಿದ್ದಂತೆ, ಅಲ್ಲಿಯೇ ಸಮೀಪದಲ್ಲಿ ತನ್ನನ್ನು ತಾನು ಸ್ಫೋಟ ಮಾಡಿಕೊಂಡಿದ್ದಾನೆ. 2018ರಲ್ಲಿ ಇದೇ ಭಾಗದಲ್ಲಿ ಆತ್ಮಾಹುತಿ ದಾಳಿ ನಡೆದಿತ್ತು. ಇದಾದ ಮೂರು ವರ್ಷಗಳ ನಂತರ ಮತ್ತೊಮ್ಮೆ ಬಾಗ್ಧಾದ್ಅನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ.
ಇನ್ನು, ಸ್ಫೋಟ ನಡೆದ ಜಾಗ ಸಂಪೂರ್ಣ ನಾಶವಾಗಿದೆ. ಎಲ್ಲ ಕಡೆಗಳಲ್ಲಿ ರಕ್ತದೋಕುಳಿ ಹರಿದಿದೆ. ಅಂಗಡಿಗಳಲ್ಲಿ ತೂಗು ಹಾಕಿದ್ದ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿವೆ. ಸ್ಫೋಟದ ನಂತರ ಈ ಭಾಗದಲ್ಲಿ ಕಾಲ್ತುಳಿತ ಉಂಟಾಗಿದೆ.
ಅಕ್ರಮವಾಗಿ ಸಂಗ್ರಹಿಸಿದ ಪಟಾಕಿ: ಶಾರ್ಟ್ ಸರ್ಕ್ಯೂಟ್ನಿಂದ ಸ್ಫೋಟ