ಎಲ್ಲ ದೇಶಗಳ ಕಮರ್ಷಿಯಲ್ ಹಡಗಿಗೂ ಹಾರ್ಮುಜ್ ಜಲಸಂಧಿ ತೆರೆದಿದೆ; ಇರಾನ್ ಮಹತ್ವದ ಘೋಷಣೆ

ಜಾಗತಿಕ ತೈಲ ಟ್ಯಾಂಕರ್ ಸಂಚಾರದ ಮುಖ್ಯವಾದ ಜಲಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ್ದಕ್ಕೆ ಇರಾನ್ ಹಲವು ದೇಶಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಹಾರ್ಮುಜ್ ಅನ್ನು ತೆರೆಸಿಯೇ ಸಿದ್ಧ ಎಂದು ಡೊನಾಲ್ಡ್ ಟ್ರಂಪ್ ಕೂಡ ಶಪಥ ಮಾಡಿದ್ದರು. ಕೊನೆಗೂ ಇದೀಗ ಇರಾನ್ ಮಹತ್ವದ ಘೋಷಣೆ ಮಾಡುವ ಮೂಲಕ ಯಾವ ದೇಶದ ಹಡಗಿಗೂ ಹಾರ್ಮುಜ್ ಜಲಸಂಧಿಯಲ್ಲಿ ನಿರ್ಬಂಧವಿಲ್ಲ ಎಂದು ಹೇಳಿದೆ. ಇದರಿಂದ ಎಲ್ಲ ದೇಶಗಳು ನಿಟ್ಟುಸಿರು ಬಿಟ್ಟಿವೆ.

ಎಲ್ಲ ದೇಶಗಳ ಕಮರ್ಷಿಯಲ್ ಹಡಗಿಗೂ ಹಾರ್ಮುಜ್ ಜಲಸಂಧಿ ತೆರೆದಿದೆ; ಇರಾನ್ ಮಹತ್ವದ ಘೋಷಣೆ
Hormuz
Image Credit source: PTI

Updated on: Apr 17, 2026 | 7:24 PM

ಟೆಹ್ರಾನ್, ಏಪ್ರಿಲ್ 17: ವಿಶ್ವದಾದ್ಯಂತದ ಎಲ್ಲಾ ರಾಷ್ಟ್ರಗಳ ದೊಡ್ಡ ತಲೆನೋವೊಂದು ಬಗೆಹರಿದಂತಾಗಿದೆ. ನಿನ್ನೆ (ಗುರುವಾರ) ಇಸ್ರೇಲ್ ಮತ್ತು ಲೆಬನಾನ್ ನಡುವೆ ಕದನ ವಿರಾಮ ಘೋಷಣೆಯಾದ ನಂತರ ಕೊನೆಗೂ ಇಂದು ಇರಾನ್ ಎಲ್ಲಾ ದೇಶಗಳ ವಾಣಿಜ್ಯ ಹಡಗುಗಳ ಸಾಗಣೆಗೆ ಹಾರ್ಮುಜ್ ಜಲಸಂಧಿಯನ್ನು (Strait Of Hormuz) ತೆರೆಯುವುದಾಗಿ ಘೋಷಿಸಿದೆ. ಇದು ವಿಶ್ವದ ಅತ್ಯಂತ ಪ್ರಮುಖ ಜಲಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯ ನಿರ್ಬಂಧಗಳಲ್ಲಿ ಗಮನಾರ್ಹ ಸಡಿಲಿಕೆಯನ್ನು ಸೂಚಿಸುತ್ತದೆ.

ಈ ಬಗ್ಗೆ ಎಕ್ಸ್ (ಹಿಂದೆ ಟ್ವಿಟರ್)ನಲ್ಲಿ ಪೋಸ್ಟ್‌ ಮಾಡಿರುವ ಇರಾನ್​ ವಿದೇಶಾಂಗ ಸಚಿವ ಅರಘ್ಚಿ, “ಲೆಬನಾನ್‌ನಲ್ಲಿನ ಕದನ ವಿರಾಮಕ್ಕೆ ಅನುಗುಣವಾಗಿ ಹಾರ್ಮುಜ್ ಜಲಸಂಧಿಯ ಮೂಲಕ ಎಲ್ಲಾ ವಾಣಿಜ್ಯ ಹಡಗುಗಳಿಗೆ ಮಾರ್ಗವನ್ನು ಉಳಿದ ಕದನ ವಿರಾಮದ ಅವಧಿಗೆ ಸಂಪೂರ್ಣವಾಗಿ ಮುಕ್ತವೆಂದು ಘೋಷಿಸುತ್ತಿದ್ದೇವೆ” ಎಂದಿದ್ದಾರೆ.

ಇದನ್ನೂ ಓದಿ: ಇಸ್ರೇಲ್, ಲೆಬನಾನ್ 10 ದಿನಗಳ ಕದನವಿರಾಮಕ್ಕೆ ಒಪ್ಪಿಕೊಂಡಿವೆ; ಟ್ರಂಪ್ ಘೋಷಣೆ

ಇರಾನ್‌ನ ಈ ಘೋಷಣೆಯ ನಂತರ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರುತ್ ಸೋಷಿಯಲ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ಇರಾನ್​ಗೆ ಧನ್ಯವಾದ ಅರ್ಪಿಸಿದ್ದಾರೆ. “ಇರಾನ್ ಜಲಸಂಧಿ ಸಂಪೂರ್ಣವಾಗಿ ಮುಕ್ತವಾಗಿದೆ ಮತ್ತು ಪೂರ್ಣ ಮಾರ್ಗಕ್ಕೆ ಸಿದ್ಧವಾಗಿದೆ ಎಂದು ಇರಾನ್ ಘೋಷಿಸಿದೆ. ಥ್ಯಾಂಕ್ಯೂ ಇರಾನ್” ಎಂದು ಅವರು ಬರೆದಿದ್ದಾರೆ.

ಇದನ್ನೂ ಓದಿ: ಜಾಗತಿಕ ರಾಜಕೀಯದಲ್ಲಿ ಬದಲಾದ ಲೆಕ್ಕಾಚಾರ, ಪಾಕಿಸ್ತಾನ ಭೇಟಿಗೆ ಇರಾನ್ ಒಪ್ಪಂದದ ಷರತ್ತು ವಿಧಿಸಿದ ಟ್ರಂಪ್

ಇಸ್ರೇಲ್ ಮತ್ತು ಲೆಬನಾನ್ 10 ದಿನಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಟ್ರಂಪ್ ಘೋಷಿಸಿದ ನಂತರ ಇರಾನ್ ಈ ಘೋಷಣೆ ಮಾಡಿದೆ. ಟ್ರಂಪ್ ಗುರುವಾರ ಲೆಬನಾನ್ ಮತ್ತು ಇಸ್ರೇಲ್ ನಡುವೆ 10 ದಿನಗಳ ಕದನ ವಿರಾಮ ಒಪ್ಪಂದವನ್ನು ಘೋಷಿಸಿದ್ದರು. ಹಾಗೇ, ಎರಡು ದೇಶಗಳ ನಾಯಕರ ನಡುವೆ ಮೊದಲ ಸಭೆಯನ್ನು ಸಂಘಟಿಸಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದರು. 10ನೇ ಯುದ್ಧವನ್ನು ನಿಲ್ಲಿಸಿದ ಹೆಮ್ಮೆ ನನಗಿದೆ ಎಂದು ಟ್ರಂಪ್ ತಾವೇ ತಮ್ಮ ಬೆನ್ನು ತಟ್ಟಿಕೊಂಡಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 7:23 pm, Fri, 17 April 26

Follow Us