ಚೀನಾ ಜೈವಿಕ ಭಯೋತ್ಪಾದನೆಗೆ ಕೆನಡಾ ಸಾಥ್: ಪ್ರಧಾನಿ ಜಸ್ಟಿನ್ ಟ್ರುಡೋ ವಿರುದ್ಧ ಗಂಭೀರ ಆರೋಪ
ಕಳೆದ ಹಲವು ತಿಂಗಳುಗಳಿಂದ ಭಾರತ ವಿರೋಧಿ ನಿಲುವಿನಿಂದಲೇ ಗುರುತಿಸಿಕೊಂಡಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ವಿರುದ್ಧ ಇದೀಗ ಅಲ್ಲಿನ ಪ್ರತಿಪಕ್ಷಗಳೇ ಗಂಭೀರ ಆರೋಪ ಮಾಡಿವೆ. ಜೈವಿಕ ಭಯೋತ್ಪಾದನೆಯಲ್ಲಿ ತೊಡಗಿರುವ ಚೀನಾದ ಪೀಪಲ್ಸ್ ಲಿವರೇಷನ್ ಆರ್ಮಿ ಜೊತೆ ಸರ್ಕಾರ ಕೈಜೋಡಿಸುತ್ತಿದ್ದು, ಅತಿ ಭದ್ರತೆಯ ಪ್ರಯೋಗಾಲಯಕ್ಕೆ ಚೀನಾ ಅಧಿಕಾರಿಗಳಿಗೆ ಪ್ರವೇಶ ಅನುಮತಿ ನೀಡಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಒಟ್ಟಾವಾ, ಮಾರ್ಚ್ 2: ವಿನಪೆಗ್ನಲ್ಲಿರುವ ಅತಿ ಭದ್ರತೆಯ ಪ್ರಯೋಗಾಲಯಕ್ಕೆ (High Security Risk Lab) ಚೀನಾದವರ ನುಸುಳುವಿಕೆಗೆ ಅವಕಾಶ ನೀಡಿದ್ದು, ನಂತರ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮುಚ್ಚಿಡಲು ಯತ್ನಿಸಿದ್ದಾರೆ ಎಂದು ಕೆನಡಾ (Canada) ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೋ (Justin Trudeau) ವಿರುದ್ಧ ಅಲ್ಲಿನ ಪ್ರತಿಪಕ್ಷಗಳು ಆರೋಪಿಸಿವೆ. ಪ್ರತಿಪಕ್ಷದ ನಾಯಕ ಪಿಯರೆ ಪೊಲಿವರೆ ಅವರು ಪ್ರಯೋಗಾಲಯದೊಳಗೆ ನುಸುಳಲು ಚೀನಾಕ್ಕೆ ಅನುಮತಿ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ಅಪಾಯಕಾರಿ ವೈರಸ್‌ಗಳನ್ನು ನಿರ್ವಹಿಸುವ ಪ್ರಯೋಗಾಲಯಕ್ಕೆ ಚೀನಾದವರ ಪ್ರವೇಶಕ್ಕೆ ಅನುಮತಿ ನೀಡುವ ಮೂಲಕ ಆ ದೇಶದ ಜೈವಿಕ ಭಯೋತ್ಪಾದನೆಗೆ ಸಹಕಾರ ನೀಡಲಾಗುತ್ತಿದೆ ಎಂದು ಟೀಕಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ, ಅತ್ಯಂತ ಸೂಕ್ಷ್ಮ ಪ್ರಯೋಗಾಲಯದಲ್ಲಿ ಭಾರಿ ಭದ್ರತಾ ಉಲ್ಲಂಘನೆಯಾಗಿರುವುದನ್ನು ಟ್ರುಡೋ ಸರ್ಕಾರವು ಮುಚ್ಚಿಡುತ್ತಿದೆ ಎಂಬುದಕ್ಕೆ ಸಂಬಧಿಸಿದ ದಾಖಲೆಗಳನ್ನು ಪ್ರದರ್ಶಿಸಿದ್ದಾರೆ.
ಅತ್ಯಂತ ಅಪಾಯಕಾರಿ ವೈರಸ್‌ಗಳು ಮತ್ತು ರೋಗಕಾರಕಗಳನ್ನು ಪ್ರಯೋಗಾಲಯದಲ್ಲಿ ಅಧ್ಯಯನ ಮಾಡಲಾಗುತ್ತದೆ ಮತ್ತು ನಿರ್ವಹಿಸಲಾಗುತ್ತದೆ. ಟ್ರುಡೋ ಸರ್ಕಾರದ ರೋಗಕಾರಕಗಳ ಮುಖ್ಯಸ್ಥರು ಜೈವಿಕ ಶಸ್ತ್ರಾಸ್ತ್ರಗಳು ಮತ್ತು ಜೈವಿಕ ಭಯೋತ್ಪಾದನೆಗೆ ಕುಖ್ಯಾತಿ ಪಡೆದಿರುವ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ ಸದಸ್ಯರೊಂದಿಗೆ ಸಹಕರಿಸುತ್ತಿದ್ದಾರೆ ಎಂದು ಪಿಯರೆ ಪೊಲಿವರೆ ಆರೋಪಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಬಹಿರಂಗಪಡಿಸಿದ ದಾಖಲೆಗಳು, ಚೀನಾದ ಅಧಿಕಾರಿಗಳಿಗೆ ಪ್ರಯೋಗಾಲಯ ಪ್ರವೇಶಿಸಲು ಮತ್ತು ಸೂಕ್ಷ್ಮ ಮಾಹಿತಿಗೆ ಪ್ರವೇಶವನ್ನು ಪಡೆಯಲು ಅನುಮತಿಸಲಾಗಿರುವುದನ್ನು ತೋರಿಸಿದೆ. ಇದು ಕೆನಡಾದ ರಾಷ್ಟ್ರೀಯ ಭದ್ರತೆಯ ಬಗ್ಗೆ ಕಳವಳ ಸೃಷ್ಟಿಸಿದೆ.
ವಿನಪೆಗ್ ಲ್ಯಾಬ್‌ನಲ್ಲಿ ನಡೆದಿದ್ದೇನು?
2019 ರಲ್ಲಿ ವಿಜ್ಞಾನಿಗಳಾದ ಡಾ. ಕ್ರಿಯಾಂಗ್‌ಗುವೂ ಕಿಯು ಮತ್ತು ಅವರ ಪತಿ ಕಡಿಂಗ್ ಚೆಂಗ್ ಅವರನ್ನು ಪ್ರಯೋಗಾಲಯದ ಕರ್ತವ್ಯಗಳಿಂದ ವಜಾಗೊಳಿಸಲಾಗಿತ್ತು. ಆದರೂ ಅವರು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ನಂತರ ಅವರನ್ನು 2021ರಲ್ಲಿ ಅಧಿಕೃತವಾಗಿ ವಜಾಗೊಳಿಸಲಾಗಿತ್ತು. ಇತ್ತೀಚೆಗಷ್ಟೇ ಅವರ ವಜಾ ಕುರಿತ ಮಾಹಿತಿಯನ್ನು ಸರ್ಕಾರ ಅಧಿಕೃತವಾಗಿ ಬಹಿರಂಗಪಡಿಸಿತ್ತು. ಆ ವಿಜ್ಞಾನಿಗಳಿಬ್ಬರು ಚೀನಾದೊಂದಿಗೆ ವೈಜ್ಞಾನಿಕ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಹಂಚಿಕೊಂಡಿದ್ದಾರೆ ಎಂಬುದು ಗುಪ್ತಚರ ಇಲಾಖೆ ತನಿಖೆಯಿಂದ ತಿಳಿದುಬಂದಿದೆ. ಇದು ಒಟ್ಟಾರೆಯಾಗಿ ಕನಡಾ ಸರ್ಕಾರಕ್ಕೆ ಅತ್ಯಂತ ಗಂಭೀರವಾದ ಸಮಸ್ಯೆ ಸೃಷ್ಟಿಸುವುದರ ಜತೆಗೆ ಅಪಾಯವನ್ನೂ ತಂದೊಡ್ಡಿದೆ ಎಂದು ಪ್ರತಿಪಕ್ಷ ನಾಯಕರು ಆರೋಪಿಸಿದ್ದಾರೆ.
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಭಾರೀ ಹಿಮಪಾತ, 15 ಸಾವು, 30 ಜನರಿಗೆ ಗಾಯ
ಭಾರತಕ್ಕೂ ತಪ್ಪಿದ್ದಲ್ಲ ಆತಂಕ
ಅತ್ಯಂತ ರಹಸ್ಯ ಮತ್ತು ಅಪಾಯಕಾರಿ ಜೈವಿಕ ಮಾಹಿತಿಯನ್ನು ಚೀನಾ ಜೊತೆ ಹಂಚಿಕೊಂಡಿರುವುದು ನಿಜವೇ ಆಗಿದ್ದಲ್ಲಿ ಪರೋಕ್ಷವಾಗಿ ಅದು ಭಾರತಕ್ಕೂ ಆತಂಕಕಾರಿ ವಿಚಾರವೇ ಆಗಿದೆ. ಸಿಖ್ ಪ್ರತ್ಯೇಕತಾವಾದ ಮತ್ತು ಅದಕ್ಕೆ ಸಂಬಂಧಿಸಿದ ಭಯೋತ್ಪಾದನೆ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಿದ ಆರೋಪ ಎದುರಿಸುತ್ತಿರುವ ಕೆನಡಾ ಜತೆಗಿನ ಭಾರತದ ಬಾಂಧವ್ಯ ಕಳೆದ ಕೆಲವು ತಿಂಗಳುಗಳಿಂದ ಹದಗೆಟ್ಟಿದೆ. ಈ ಎಲ್ಲ ದೃಷ್ಟಿಕೋನದಿಂದಲೂ ಕೆನಡಾ – ಚೀನಾ ಬಾಂಧವ್ಯವನ್ನು ಗಮನಿಸಬೇಕಾಗುತ್ತದೆ ಎಂಬುದು ವಿದೇಶಾಂಗ ನೀತಿ ಮತ್ತು ಭದ್ರತಾ ವಿಶ್ಲೇಷಕರ ಅಭಿಪ್ರಾಯವಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ