
ಕಠ್ಮಂಡು, ಆಗಸ್ಟ್ 27: ನೇಪಾಳದಲ್ಲಿ (Nepal Flash Flood) ದಿಢೀರ್ ಪ್ರವಾಹದಿಂದ ಭಾರಿ ವಿನಾಶ ಸಂಭವಿಸಿರುವ ನಡುವೆಯೇ, ನೆರೆಯ ರಾಷ್ಟ್ರ ಚೀನಾ ಮತ್ತೊಂದು ಭೀಕರ ಅಪಾಯದ ಎಚ್ಚರಿಕೆ ನೀಡಿದೆ. ನೇಪಾಳ-ಟಿಬೆಟ್ ಗಡಿ ಭಾಗದಲ್ಲಿರುವ ಛೋಚೆನ್ ಖೋಲಾ ಮತ್ತು ಪುರೆಪು ತ್ಸಾಂಗ್ಪೋ ನದಿಗಳ ಸಂಗಮದ ಬಳಿ ನಿರ್ಮಾಣವಾಗಿರುವ ‘ತಡೆಗೋಡೆ ಸರೋವರ’ ಮುಂದಿನ 72 ಗಂಟೆಗಳಲ್ಲಿ ಒಡೆದುಹೋಗುವ ಅಪಾಯವಿದೆ ಎಂದು ಚೀನಾ ಎಚ್ಚರಿಸಿದೆ. ಚೀನಾದಲ್ಲಿ ಈಗಾಗಲೇ ಉಂಟಾಗಿರುವ ಪ್ರಕೃತಿ ವಿಕೋಪದ ನಡುವೆ ಹೊಸದಾಗಿ ಉಂಟಾಗಿರುವ ಕೃತಕ ಸರೋವರವು ಆತಂಕವನ್ನು ಇಮ್ಮಡಿಗೊಳಿಸಿದೆ.
ನೇಪಾಳ-ಚೀನಾ ಗಡಿಯ ನದಿ ತಡೆ ಪ್ರದೇಶದಲ್ಲಿ ಸರೋವರ ನಿರ್ಮಾಣವಾಗಿರುವ ಕುರಿತು ಚೀನಾ ಸರ್ಕಾರದಿಂದ ಮಾಹಿತಿ ಬಂದಿದೆ ಎಂದು ನೇಪಾಳದ ಜಲವಿಜ್ಞಾನ ಮತ್ತು ಹವಾಮಾನ ಇಲಾಖೆ ದೃಢಪಡಿಸಿದೆ. ಚೀನಾ ಸರ್ಕಾರವು ಈ ಮಾಹಿತಿಯನ್ನು ನೇಪಾಳದ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಹಸ್ತಾಂತರಿಸಿದೆ. ಈ ಕೃತಕ ಸರೋವರ ಉಂಟಾಗಿರುವ ಛೋಚೆನ್ ಖೋಲಾ ಮತ್ತು ಪುರೆಪು ತ್ಸಾಂಗ್ಪೋ ನದಿಗಳು ಟಿಬೆಟ್‌ನಲ್ಲಿ ಹುಟ್ಟಿ ನೇಪಾಳವನ್ನು ಪ್ರವೇಶಿಸುತ್ತವೆ. ಇವೆರಡೂ ನೇಪಾಳದ ‘ಭೋಟೇ ಕೋಶಿ’ ನದಿ ವ್ಯವಸ್ಥೆಯ ಪ್ರಮುಖ ಭಾಗಗಳಾಗಿವೆ. ಒಂದು ವೇಳೆ ಈ ಸರೋವರ ಒಡೆದರೆ ನದಿಯ ಕೆಳಭಾಗದಲ್ಲಿ ಮತ್ತೊಮ್ಮೆ ಪ್ರವಾಹದ ರೌದ್ರನರ್ತನ ಉಂಟಾಗಲಿದೆ.
ಇದನ್ನೂ ಓದಿ: ನೇಪಾಳದ ಪ್ರವಾಹದಲ್ಲಿ 288 ಭಾರತೀಯರು ನಾಪತ್ತೆ, ತಮಿಳುನಾಡಿನ 21 ಜನರ ರಕ್ಷಣೆ; ಸರ್ಕಾರದಿಂದ ಮಾಹಿತಿ
ಎಲ್ಲಿದೆ ಈ ಸರೋವರ?:
ನೇಪಾಳ ಮತ್ತು ಟಿಬೆಟ್ ಗಡಿಯಲ್ಲಿ ಹರಿಯುವ ‘ಛೋಚೆನ್ ಖೋಲಾ’ (Chhochen Khola) ಮತ್ತು ‘ಪುರೆಪು ತ್ಸಾಂಗ್ಪೋ’ (Purepu Tsangpo) ನದಿಗಳು ಸಂಧಿಸುವ ಪ್ರದೇಶದಲ್ಲಿ ಈ ಕೃತಕ ಸರೋವರ ರೂಪುಗೊಂಡಿದೆ. ಈ ನದಿಗಳ ನೀರು ಮುಂದೆ ನೇಪಾಳದ ‘ಭೋಟೇ ಕೋಶಿ’ ಮತ್ತು ‘ತ್ರಿಶೂಲಿ’ ನದಿಗಳನ್ನು ಸೇರುತ್ತದೆ. ಪ್ರಸ್ತುತ ಈ ಸರೋವರದಲ್ಲಿ ಸುಮಾರು 20 ಲಕ್ಷ ಕ್ಯೂಬಿಕ್ ಮೀಟರ್ ನೀರು ಸಂಗ್ರಹವಾಗಿದ್ದು, ಈಗಾಗಲೇ ಮೇಲಿಂದ ಹರಿಯಲು ಪ್ರಾರಂಭಿಸಿದೆ. ಮುಂದಿನ 3 ದಿನಗಳಲ್ಲಿ ಹೆಚ್ಚುವರಿಯಾಗಿ ಇನ್ನೂ 30 ಲಕ್ಷ ಕ್ಯೂಬಿಕ್ ಮೀಟರ್ ನೀರು ಈ ಸರೋವರಕ್ಕೆ ಸೇರುವ ನಿರೀಕ್ಷೆಯಿದೆ. ಇದರಿಂದ ನೀರಿನ ಒತ್ತಡ ಹೆಚ್ಚಾಗಿ ನೈಸರ್ಗಿಕ ತಡೆಗೋಡೆ ಒಡೆದುಹೋಗುವ ಭೀತಿ ಎದುರಾಗಿದೆ.
ಇದನ್ನೂ ಓದಿ: ನೇಪಾಳದ ಪ್ರವಾಹಕ್ಕೆ 332 ಜನ ಸಾವು; ಡ್ರೋನ್ ವಿಡಿಯೋದಲ್ಲಿ ದುರಂತದ ಚಿತ್ರಣ ಸೆರೆ
ಮತ್ತೊಂದು ಪ್ರವಾಹದ ಭೀತಿ:
ಬುಧವಾರವಷ್ಟೇ ಇದೇ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ 350ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, 500ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಈಗ ಈ ಸರೋವರ ಒಡೆದರೆ, ನದಿಯ ಕೆಳಭಾಗದಲ್ಲಿರುವ ರಸುವಾ, ತ್ರಿಶೂಲಿ ಹಾಗೂ ನುವಾಕೋಟ್ ಜಿಲ್ಲೆಗಳ ಗ್ರಾಮಗಳಿಗೆ ಮತ್ತೊಮ್ಮೆ ಭಾರಿ ಪ್ರವಾಹದ ಅಲೆ ಅಪ್ಪಳಿಸುವ ಆತಂಕವಿದೆ. ಹೀಗಾಗಿ, ನೇಪಾಳ ಸರ್ಕಾರ ನದಿ ದಂಡೆಯ ಸೌಮ್ಯ ಪ್ರದೇಶಗಳಲ್ಲಿರುವ ಜನರನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸೂಚನೆ ನೀಡಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ