Breaking News ಹಿಜಾಬ್ ವಿರೋಧಿ ಪ್ರತಿಭಟನೆ; ಇರಾನ್​​ನಲ್ಲಿ 31 ನಾಗರಿಕರು ಸಾವು

ಇರಾನ್ ಭದ್ರತಾ ಪಡೆಗಳ ದಮನದಲ್ಲಿ ಕನಿಷ್ಠ 31 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಓಸ್ಲೋ ಮೂಲದ ಎನ್‌ಜಿಒ ಗುರುವಾರ ತಿಳಿಸಿದೆ

Breaking News ಹಿಜಾಬ್ ವಿರೋಧಿ ಪ್ರತಿಭಟನೆ; ಇರಾನ್​​ನಲ್ಲಿ 31 ನಾಗರಿಕರು ಸಾವು
ಇರಾನ್ ಪ್ರತಿಭಟನೆ Image Credit source: AFP
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 22, 2022 | 8:40 PM

ಮಾಹ್ಸಾ ಅಮಿನಿ (Mahsa Amini) ಅವರನ್ನು ಇರಾನ್ (Iran) ಪೊಲೀಸರು ಬಂಧಿಸಿ, ಪೊಲೀಸ್ ಕಸ್ಟಡಿಯಲ್ಲಿ ಅವರ ಸಾವು ಸಂಭವಿಸಿದ ನಂತರ ಭುಗಿಲೆದ್ದ ಪ್ರತಿಭಟನೆಗಳನ್ನು ಇರಾನ್  ಭದ್ರತಾ ಪಡೆ ದಮನಿಸಿದ್ದು ಕನಿಷ್ಠ 31 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಓಸ್ಲೋ ಮೂಲದ ಎನ್‌ಜಿಒ ಗುರುವಾರ ತಿಳಿಸಿದೆ. ಇರಾನ್‌ನ ಜನರು ತಮ್ಮ ಮೂಲಭೂತ ಹಕ್ಕುಗಳು ಮತ್ತು ಘನತೆಯನ್ನು ಸಾಧಿಸಲು ಬೀದಿಗೆ ಬಂದಿದ್ದಾರೆ. ಅವರ ಶಾಂತಿಯುತ ಪ್ರತಿಭಟನೆಗೆ ಸರ್ಕಾರವು ಗುಂಡುಗಳ ಮೂಲಕ ಪ್ರತಿಕ್ರಿಯಿಸುತ್ತಿದೆ ಎಂದು ಇರಾನ್ ಮಾನವ ಹಕ್ಕುಗಳ (IHR) ನಿರ್ದೇಶಕ ಮಹಮೂದ್ ಅಮಿರಿ-ಮೊಗದ್ದಮ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. 30 ಕ್ಕೂ ಹೆಚ್ಚು ನಗರಗಳು ಮತ್ತು ಇತರ ನಗರ ಕೇಂದ್ರಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ದೃಢಪಡಿಸಿದೆ ಎಂದು ಐಎಚ್ಆರ್ ಹೇಳಿದೆ.  ಪ್ರತಿಭಟನಾಕಾರರು ಮತ್ತು ನಾಗರಿಕ ಸಮಾಜದ ಕಾರ್ಯಕರ್ತರ ಸಾಮೂಹಿಕ ಬಂಧನಗಳಾಗುವ ಸಾಧ್ಯತೆಯೂ ಇದೆ. ಪೊಲೀಸ್ ಬಂಧನದಲ್ಲಿದ್ದ ಮಾಹ್ಸಾ ಅಮಿನಿ ಸಾವಿನ ನಂತರ ಪ್ರತಿಭಟನೆಗಳು ಮೊದಲು ವಾರಾಂತ್ಯದಲ್ಲಿ ಉತ್ತರ ಪ್ರಾಂತ್ಯದ ಕುರ್ದಿಸ್ತಾನ್‌ನಲ್ಲಿ ಭುಗಿಲೆದ್ದಿದ್ದು ಈಗ ಅದು ದೇಶಾದ್ಯಂತ ಹರಡಿದೆ.

ಕ್ಯಾಸ್ಪಿಯನ್ ಸಮುದ್ರದ ಉತ್ತರ ಮಜಂದರನ್ ಪ್ರಾಂತ್ಯದ ಅಮೋಲ್ ಪಟ್ಟಣದಲ್ಲಿ ಬುಧವಾರ ರಾತ್ರಿ 11 ಮಂದಿ ಸಾವಿಗೀಡಾಗಿದ್ದಾರೆ. ಅದೇ ಪ್ರಾಂತ್ಯದ ಬಾಬೋಲ್‌ನಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಐಎಚ್ಆರ್ ಹೇಳಿದೆ.

ಏತನ್ಮಧ್ಯೆ, ಪ್ರಮುಖ ಈಶಾನ್ಯ ನಗರವಾದ ತಬ್ರಿಜ್ ಪ್ರತಿಭಟನೆಯಲ್ಲಿ ತನ್ನ ಮೊದಲ ಸಾವನ್ನು ಕಂಡಿತು ಎಂದು ಐಎಚ್ಆರ್ ಹೇಳಿದೆ. ಅಂತರಾಷ್ಟ್ರೀಯ ಸಮುದಾಯದ ಖಂಡನೆ ಮತ್ತು ಕಾಳಜಿಯ ಅಭಿವ್ಯಕ್ತಿ ಇನ್ನು ಮುಂದೆ ಸಾಕಾಗುವುದಿಲ್ಲ” ಎಂದು ಅಮಿರಿ-ಮೊಗದ್ದಮ್ ಹೇಳಿದರು. ಬುಧವಾರ ರಾತ್ರಿ ಎಂಟು ಸೇರಿದಂತೆ ಕುರ್ದಿಸ್ತಾನ್ ಪ್ರಾಂತ್ಯ ಮತ್ತು ಉತ್ತರ ಇರಾನ್‌ನ ಇತರ ಕುರ್ದಿಷ್ ಜನನಿಬಿಡ ಪ್ರದೇಶಗಳಲ್ಲಿ 15 ಜನರನ್ನು ಕೊಲ್ಲಲಾಗಿದೆ ಎಂದು ಕುರ್ದಿಶ್ ಹಕ್ಕುಗಳ ಗುಂಪು ಹೆಂಗಾವ್ ಹೇಳಿದೆ.

ಇಂಟರ್ನೆಟ್ ಸ್ಥಗಿತ

ಇರಾನ್ ಟೆಹ್ರಾನ್ ಮತ್ತು ಕುರ್ದಿಸ್ತಾನ್‌ನ ಕೆಲವು ಭಾಗಗಳಲ್ಲಿ ಇಂಟರ್ನೆಟ್  ಸ್ಥಗಿತಗೊಳಿಸಲಾಗಿದೆ. ಭಿನ್ನಾಭಿಪ್ರಾಯವನ್ನು ದಾಖಲಿಸಲು ಸಾಮಾಜಿಕ ಮಾಧ್ಯಮವನ್ನು ಅವಲಂಬಿಸಿರುವ ಬೆಳೆಯುತ್ತಿರುವ ಪ್ರತಿಭಟನಾ ಚಳುವಳಿಯನ್ನು ತಡೆಯುವ ಪ್ರಯತ್ನದಲ್ಲಿ Instagram ಮತ್ತು WhatsApp ನಂತಹ ವೇದಿಕೆಗಳಿಗೆ ಪ್ರವೇಶವನ್ನು ನಿರ್ಬಂಧಿಸಿದೆ. ಪೊಲೀಸ್ ಕಸ್ಟಡಿಯಲ್ಲಿ 22 ವರ್ಷದ ಕುರ್ದಿಷ್ ಮಹಿಳೆಯ ಸಾವಿನ ನಂತರ ಸೆಪ್ಟೆಂಬರ್ 16 ರಂದು ಭುಗಿಲೆದ್ದ ಪ್ರತಿಭಟನೆಗಳು ಮತ್ತಷ್ಟು ತೀವ್ರವಾಗಿದ್ದು ಗುರುವಾರ, ಪ್ರತಿಭಟನಾಕಾರರು ಹಲವಾರು ನಗರಗಳಲ್ಲಿ ಪೊಲೀಸ್ ಠಾಣೆಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದರು. ಮಹಿಳೆಯರು ತಮ್ಮ ಹಿಜಾಬ್‌ಗಳನ್ನು ಸುಡುವ ವಿಡಿಯೊಗಳು ವೈರಲ್ ಆಗುತ್ತಿವೆ. ಕೆಲವು ಮಹಿಳೆಯರು #Mahsa_Amini ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ತಮ್ಮ ಕೂದಲನ್ನು ಕತ್ತರಿಸುವ ವಿಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಸರಿಯಾದ ರೀತಿಯಲ್ಲಿ ಹಿಜಾಬ್ ಧರಿಸಿಲ್ಲ ಎಂದು ಸೆಪ್ಟೆಂಬರ್ 16 ರಂದು ಮಾಹ್ಸಾ ಅಮಿನಿಯನ್ನು ಬಂಧಿಸಲಾಗಿತ್ತು.

Published On - 7:52 pm, Thu, 22 September 22