ಟ್ವಿಟರ್ಗೆ ಪ್ರತಿ ದಿನ 40 ಲಕ್ಷ ಡಾಲರ್ ನಷ್ಟ; ಸಿಬ್ಬಂದಿ ವಜಾ ಸಮರ್ಥಿಸಿದ ಎಲಾನ್ ಮಸ್ಕ್
ಕಂಪನಿಯು ಪ್ರತಿ ದಿನ 40 ಲಕ್ಷ ಡಾಲರ್ಗಿಂತಲೂ ಹೆಚ್ಚಿನ ಮೊತ್ತವನ್ನು ಕಳೆದುಕೊಳ್ಳುತ್ತಿರುವುದರಿಂದ ದುರದೃಷ್ಟವಶಾತ್, ಉದ್ಯೋಗ ಕಡಿತ ಬಿಟ್ಟು ಬೇರೆ ಆಯ್ಕೆಯೇ ಇಲ್ಲದಾಗಿದೆ ಟ್ವಿಟರ್ ನೂತನ ಮಾಲೀಕ ಎಲಾನ್ ಮಸ್ಕ್ ಹೇಳಿದ್ದಾರೆ.
ನವದೆಹಲಿ: ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್ನ (Twitter) ಸಿಬ್ಬಂದಿಯ ವಜಾ ಪ್ರಕ್ರಿಯೆ (layoffs) ಆರಂಭಿಸಿರುವುದನ್ನು ಕಂಪನಿಯ ನೂತನ ಮಾಲೀಕ ಎಲಾನ್ ಮಸ್ಕ್ (Elon Musk) ಸಮರ್ಥಿಸಿಕೊಂಡಿದ್ದಾರೆ. ಕಂಪನಿಯು ಪ್ರತಿ ದಿನ 40 ಲಕ್ಷ ಡಾಲರ್ಗಿಂತಲೂ ಹೆಚ್ಚಿನ ಮೊತ್ತವನ್ನು ಕಳೆದುಕೊಳ್ಳುತ್ತಿದೆ. ಹೀಗಾಗಿ ಉದ್ಯೋಗ ಕಡಿತದ ಹೊರತು ಬೇರೆ ಆಯ್ಕೆಯೇ ಇಲ್ಲ ಎಂದು ಅವರು ಹೇಳಿದ್ದಾರೆ. ಜಗತ್ತಿನ ಶ್ರೀಮಂತ ಉದ್ಯಮಿ, ಟೆಸ್ಲಾ ಕಂಪನಿಯ ಮಾಲೀಕರಾಗಿರುವ ಮಸ್ಕ್ ಕಳೆದ ವಾರವಷ್ಟೇ ಟ್ವಿಟರ್ ಅನ್ನು ಸಂಪೂರ್ಣವಾಗಿ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಮಸ್ಕ್, ‘ಕಂಪನಿಯು ಪ್ರತಿ ದಿನ 40 ಲಕ್ಷ ಡಾಲರ್ಗಿಂತಲೂ ಹೆಚ್ಚಿನ ಮೊತ್ತವನ್ನು ಕಳೆದುಕೊಳ್ಳುತ್ತಿರುವುದರಿಂದ ದುರದೃಷ್ಟವಶಾತ್, ಉದ್ಯೋಗ ಕಡಿತ ಬಿಟ್ಟು ಬೇರೆ ಆಯ್ಕೆಯೇ ಇಲ್ಲದಾಗಿದೆ. ಉದ್ಯೋಗದಿಂದ ವಜಾಗೊಳ್ಳುವ ಸಿಬ್ಬಂದಿಗೆ 3 ತಿಂಗಳ ಕಾಲಾವಕಾಶ ನೀಡಲಾಗಿದೆ. ಇದು ಕಾನೂನುಬದ್ಧವಾಗಿ ನೀಡಬೇಕಾದ ಅವಕಾಶಕ್ಕಿಂತಲೂ ಶೇಕಡಾ 50ರಷ್ಟು ಹೆಚ್ಚಿನ ಸೌಲಭ್ಯವಾಗಿದೆ’ ಎಂದು ಉಲ್ಲೇಖಿಸಿದ್ದಾರೆ.
Regarding Twitter’s reduction in force, unfortunately there is no choice when the company is losing over $4M/day.
Everyone exited was offered 3 months of severance, which is 50% more than legally required.
— Elon Musk (@elonmusk) November 4, 2022
ಉಳಿದಂತೆ ಟ್ವಿಟರ್ನ ಕಂಟೆಂಟ್ ಮಾಡರೇಷನ್ ನೀತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ದ್ವೇಷ ಹರಡುವಿಕೆಗೆ ಸಂಬಂಧಿಸಿದ ಸಂದೇಶಗಳು ಈ ವಾರ ಕಡಿಮೆಯಾಗಿರುವುದನ್ನು ಗಮನಿಸಿದ್ದೇವೆ ಎಂದೂ ಮಸ್ಕ್ ಹೇಳಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಟ್ವಿಟರ್ ಉದ್ಯೋಗಿಗಳ ವಜಾ ಆರಂಭಿಸಿದ ಎಲಾನ್ ಮಸ್ಕ್
ಮಸ್ಕ್ ಅವರು ಟ್ವಿಟರ್ನ ಮಾಲೀಕತ್ವ ವಹಿಸಿಕೊಂಡ ಬೆನ್ನಲ್ಲೇ ಸಿಇಒ ಪರಾಗ್ ಅಗರ್ವಾಲ್ ಸೇರಿದಂತೆ ಪ್ರಮುಖ ಹುದ್ದೆಯಲ್ಲಿದ್ದವರನ್ನು ವಜಾಗೊಳಿಸಲಾಗಿತ್ತು. ಇದರ ಬೆನ್ನಲ್ಲೇ, ಕಂಪನಿಯ ಒಟ್ಟು 7,500 ಸಿಬ್ಬಂದಿಯ ಪೈಕಿ ಅರ್ಧದಷ್ಟು ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಲಾಗಿದೆ ಎಂದು ಶುಕ್ರವಾರ ವರದಿಯಾಗಿದೆ.
ಭಾರತದಲ್ಲಿ ವಜಾ ಪ್ರಕ್ರಿಯೆ ಆರಂಭಿಸಿದ ಟ್ವಿಟರ್
ಭಾರತದಲ್ಲಿ ಟ್ವಿಟರ್ ಸಿಬ್ಬಂದಿ ವಜಾ ಪ್ರಕ್ರಿಯೆ ಶುಕ್ರವಾರ ಆರಂಭಗೊಂಡಿದೆ ಎಂದು ವರದಿಯಾಗಿದೆ. ಆದರೆ, ಎಷ್ಟು ಮಂದಿಯನ್ನು ವಜಾಗೊಳಿಸಲಾಗಿದೆ ಎಂಬ ಕುರಿತು ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಈ ಮಧ್ಯೆ, ಶುಕ್ರವಾರ ಬೆಳಿಗ್ಗೆ ಕೆಲವು ಗಂಟೆಗಳ ಕಾಲ ಟ್ವಿಟರ್ ಕಾರ್ಯಾಚರಣೆ ಸ್ತಬ್ಧವಾಗಿ ಬಳಕೆದಾರರು ತೊಂದರೆ ಅನುಭವಿಸಿದ್ದರು.
ಉದ್ಯೋಗ ಕಡಿತದ ಭೀತಿಯಲ್ಲಿರುವ ಟ್ವಿಟರ್ ಸಿಬ್ಬಂದಿ ಹೆಚ್ಚುವರಿ ಸಮಯ ಕೆಲಸ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿರುವ ಬಗ್ಗೆ ಕೆಲ ದಿನಗಳ ಹಿಂದೆ ವರದಿಯಾಗಿತ್ತು. ಟ್ವಿಟರ್ ಮ್ಯಾನೇಜರ್ಗಳಿಗೆ ದಿನಕ್ಕೆ 12 ಗಂಟೆ ಹಾಗೂ ವಾರದ ಎಲ್ಲ ದಿನಗಳಲ್ಲಿಯೂ ಕೆಲಸ ಮಾಡುವಂತೆ ಸೂಚಿಸಲಾಗಿದೆ ಎನ್ನಲಾಗಿತ್ತು. ಕೆಲವರು ಶುಕ್ರವಾರ ಮತ್ತು ಶನಿವಾರಗಳಂದು ಕೆಲಸದ ಅವಧಿ ಮುಗಿದ ಬಳಿಕ ಮನೆಗೆ ತೆರಳದೆ ಕಚೇರಿಯಲ್ಲಿಯೇ ಮಲಗಿದ್ದಾರೆ ಎಂದೂ ವರದಿಯಾಗಿತ್ತು. ಟ್ವಿಟರ್ ಸಿಬ್ಬಂದಿ ಕಚೇರಿಯಲ್ಲೇ ಮಲಗಿರುವುದು ಎನ್ನಲಾದ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ