Donald Trump: ಡೊನಾಲ್ಡ್ ಟ್ರಂಪ್ ಮೇಲಿನ ಟ್ವಿಟರ್ ನಿರ್ಬಂಧ ವಾಪಸ್: ಎಲಾನ್ ಮಸ್ಕ್ ಘೋಷಣೆ

Donald Trump: ಡೊನಾಲ್ಡ್ ಟ್ರಂಪ್ ಮೇಲಿನ ಟ್ವಿಟರ್ ನಿರ್ಬಂಧ ವಾಪಸ್: ಎಲಾನ್ ಮಸ್ಕ್ ಘೋಷಣೆ
ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್

Elon Musk: ಕೆಲ ಸಮಯಗಳ ಮೊದಲು ಸುಮಾರು 88 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದ ಡೊನಾಲ್ಡ್​​ ಟ್ರಂಪ್‌ ಖಾತೆಯನ್ನು ಟ್ವಿಟರ್​ನಿಂದ ತೆಗೆದುಹಾಕಲಾಗಿತ್ತು. ಇದೀಗ ಎಲಾನ್ ಮಸ್ಕ್ ಟ್ರಂಪ್ ಮೇಲಿನ ನಿರ್ಬಂಧ ತೆಗೆಯುವುದಾಗಿ ಘೋಷಿಸಿದ್ದಾರೆ.

TV9kannada Web Team

| Edited By: shivaprasad.hs

May 11, 2022 | 7:14 AM

ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ಟ್ವಿಟರ್​ನಿಂದ ನಿಷೇಧಿಸಿರುವ ನಿರ್ಧಾರವನ್ನು ಮರಳಿ ಪಡೆಯುವುದಾಗಿ ಟೆಸ್ಲಾ ಮುಖ್ಯಕಾರ್ಯನಿರ್ವಾಹಕ ಎಲಾನ್ ಮಸ್ಕ್ (Elon Musk) ಹೇಳಿದ್ದಾರೆ. ಫೈನಾನ್ಷಿಯಲ್ ಟೈಮ್ಸ್​ನ ‘ಫ್ಯೂಚರ್ ಆಫ್ ದಿ ಕಾರ್ ಕಾನ್ಫರೆನ್ಸ್‌’ನಲ್ಲಿ ಮಾತನಾಡುತ್ತಾ ಮಂಗಳವಾರ ಈ ವಿಚಾರವನ್ನು ಅವರು ಘೋಷಿಸಿದ್ದಾರೆ. ತಮ್ಮನ್ನು ತಾವು ನಿರಂಕುಶ ಸ್ವಾತಂತ್ರ್ಯವಾದಿ ಎಂದು ಕರೆದುಕೊಂಡಿರುವ ಮಸ್ಕ್, ಇತ್ತೀಚೆಗಷ್ಟೇ ಟ್ವಿಟರ್​ ಖರೀದಿಸುವ 44 ಶತಕೋಟಿ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿದ್ದರು. ಕೆಲ ಸಮಯಗಳ ಮೊದಲು ಸುಮಾರು 88 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದ ಡೊನಾಲ್ಡ್​​ ಟ್ರಂಪ್‌ ಖಾತೆಯನ್ನು ಟ್ವಿಟರ್​ನಿಂದ ತೆಗೆದುಹಾಕಲಾಗಿತ್ತು. ಟ್ವಿಟರ್​ನಲ್ಲಿ ಪ್ರಭಾವಿಗಳ ಖಾತೆಗಳನ್ನು ಮಾಡರೇಟ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮೊದಲಿನಿಂದ ಚರ್ಚೆಗಳು ನಡೆಯುತ್ತಿವೆ.

ಜನವರಿ 6 ರಂದು ಅಮೇರಿಕಾ ರಾಜಧಾನಿಯಲ್ಲಿ ನಡೆದ ಗಲಭೆಯ ನಂತರ ಟ್ರಂಪ್ ಅವರನ್ನು ಟ್ವಿಟರ್‌ನಿಂದ ಶಾಶ್ವತವಾಗಿ ಅಮಾನತುಗೊಳಿಸಲಾಯಿತು. ‘ಹಿಂಸಾಚಾರವನ್ನು ಮತ್ತಷ್ಟು ಪ್ರಚೋದಿಸುವ ಅಪಾಯವಿದೆ’ ಎಂದು ಕಾರಣವನ್ನು ನೀಡಿದ್ದ ಟ್ವಿಟರ್, ಟ್ರಂಪ್ ಖಾತೆಯನ್ನು ಬ್ಯಾನ್ ಮಾಡಿತ್ತು. ಟ್ವಿಟರ್​ನ ಈ ನಿರ್ಧಾರ ಜನರಲ್ಲಿ ಅವರ ಬಗೆಗಿನ ರಾಜಕೀಯ ಅಭಿಪ್ರಾಯಗಳನ್ನು ಹೆಚ್ಚಿಸಿತು ಎಂದಿರುವ ಎಲಾನ್ ಮಸ್ಕ್, ನೈತಿಕವಾಗಿ ಅದು ತಪ್ಪಾದ ನಿರ್ಧಾರ ಎಂದಿದ್ದಾರೆ.

ಎಲಾನ್ ಮಸ್ಕ್ ಖರೀದಿಸಿದ್ದ ನಂತರವೂ ಟ್ವಿಟರ್​ಗೆ ವಾಪಸ್ ಬರಲ್ಲ ಎಂದಿದ್ದ ಟ್ರಂಪ್:

ಇತ್ತೀಚೆಗಷ್ಟೇ ಎಲಾನ್ ಮಸ್ಕ್ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್​ಅನ್ನು ಖರೀದಿಸಿದ್ದರು. ಅದಾಗ್ಯೂ ತಾವು ಟ್ವಿಟರ್​ಗೆ ಮರಳುವುದಿಲ್ಲ ಎಂದು ಡೊನಾಲ್ಡ್ ಟ್ರಂಪ್ ನುಡಿದಿದ್ದರು. ಈ ಬಗ್ಗೆ ಫಾಕ್ಸ್ ನ್ಯೂಸ್​ಗೆ ತಿಳಿಸಿದ್ದ ಅವರು, ಫೆಬ್ರವರಿ ಅಂತ್ಯದಲ್ಲಿ ಆಪಲ್ ಆಪ್ ಸ್ಟೋರ್‌ನಲ್ಲಿ ಪ್ರಾರಂಭವಾಗಿರುವ ‘ಟ್ರೂತ್ ಸೋಶಿಯಲ್’ ಎಂಬ ತಮ್ಮದೇ ಹೊಸ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಅನ್ನು ಬಳಸುವುದಾಗಿ ಹೇಳಿದ್ದರು. ಆದರೆ ಆ ಆಪ್​ ಗ್ಲಿಚ್​ಗಳನ್ನು ಹೊಂದಿತ್ತು. ಇತ್ತೀಚಿಗಷ್ಟೇ ಬಳಕೆದಾರರ ಪ್ರವೇಶಕ್ಕೆ ಅದು ಲಭ್ಯವಾಗಿದೆ.

ಆದರೆ ಇದೀಗ ಎಲಾನ್ ಮಸ್ಕ್ ಟ್ರಂಪ್ ಮೇಲಿನ ನಿಷೇಧ ಮರಳಿ ಪಡೆಯುವುದಾಗಿ ಹೇಳಿದ್ದರಿಂದ ಅವರ ಮುಂದಿನ ನಿರ್ಧಾರದ ಬಗ್ಗೆ ಕುತೂಹಲ ಮನೆಮಾಡಿದೆ. ಆದರೆ ಇದುವರೆಗೆ ಟ್ರಂಪ್ ಆಗಲಿ ಅಥವಾ ಅವರ ವಕ್ತಾರರಾಗಲಿ ಈ ಬಗ್ಗೆ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಮತ್ತಷ್ಟು ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada