ಮೊಜ್ತಬಾ ಖಮೇನಿ ವಿರುದ್ಧ ಶತ್ರುಗಳು ವದಂತಿ ಹರಡುತ್ತಿದ್ದಾರೆ; ಇರಾನ್​ನಿಂದ ಸುಪ್ರೀಂ ನಾಯಕನ ಆರೋಗ್ಯದ ಬಗ್ಗೆ ಸ್ಪಷ್ಟನೆ

ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿ ಇರಾನ್ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಅವರಿಗೆ ಏನೂ ಆಗಿಲ್ಲ. ಅವರು ಪರಿಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ಇರಾನ್ ಸುಪ್ರೀಂ ನಾಯಕನ ಪ್ರಮುಖ ಸಹಾಯಕ ಮಾಹಿತಿ ನೀಡಿದ್ದಾರೆ. ವಿನಾಕಾರಣ ಶತ್ರುಗಳು ವದಂತಿಗಳನ್ನು ಹರಡುತ್ತಿದ್ದಾರೆ, ಮೊಜ್ತಬಾ ಖಮೇನಿ ಆರೋಗ್ಯವಾಗಿದ್ದಾರೆ, ಅವರೇ ಇರಾನ್​ನ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಮೊಜ್ತಬಾ ಖಮೇನಿ ಅವರ ಆರೋಗ್ಯದ ಬಗ್ಗೆ ತಿಂಗಳುಗಳ ಕಾಲದ ಸಸ್ಪೆನ್ಸ್ ನಂತರ ಈ ಸ್ಪಷ್ಟನೆ ಹೊರಬಿದ್ದಿದೆ.

ಮೊಜ್ತಬಾ ಖಮೇನಿ ವಿರುದ್ಧ ಶತ್ರುಗಳು ವದಂತಿ ಹರಡುತ್ತಿದ್ದಾರೆ; ಇರಾನ್​ನಿಂದ ಸುಪ್ರೀಂ ನಾಯಕನ ಆರೋಗ್ಯದ ಬಗ್ಗೆ ಸ್ಪಷ್ಟನೆ
Mojtaba Khamenei
Image Credit source: x

Updated on: May 01, 2026 | 6:01 PM

ಟೆಹ್ರಾನ್, ಮೇ 1: ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರ ಆರೋಗ್ಯ ತೀರಾ ಹದಗೆಟ್ಟಿದೆ ಎಂದು ಅಮೆರಿಕ ಆಗಾಗ ಆರೋಪ ಮಾಡುತ್ತಲೇ ಇತ್ತು. ಇದಕ್ಕೆ ಇರಾನ್ ಪ್ರತಿಕ್ರಿಯೆ ನೀಡಿದೆ. ಇರಾನ್​ನ (Iran) ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಅವರ ಆಪ್ತ ಅಯತೊಲ್ಲಾ ಮೊಹ್ಸೆನ್ ಕೋಮಿ ಇಂದು ಅಮೆರಿಕದ ಹೇಳಿಕೆಗಳನ್ನು ತಳ್ಳಿಹಾಕಿದ್ದಾರೆ. ಸುಪ್ರೀಂ ನಾಯಕ ಪರಿಪೂರ್ಣವಾಗಿ ಆರೋಗ್ಯವಾಗಿದ್ದಾರೆ, ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶತ್ರು ದೇಶಗಳು ವದಂತಿಗಳನ್ನು ಹರಡಲು ಇಂತಹ ತಂತ್ರಗಳನ್ನು ಬಳಸುತ್ತದೆ ಎಂದು ಕೋಮಿ ಹೇಳಿದ್ದಾರೆ.

ಮೊಜ್ತಾಬಾ ಖಮೇನಿ ಅಮೆರಿಕದಿಂದ ಬಾಂಬ್ ದಾಳಿಗೊಳಗಾದ ಕಟ್ಟಡದಲ್ಲಿದ್ದರು. ಆದರೆ ಅವರನ್ನು ರಕ್ಷಿಸಲಾಯಿತು ಎಂದು ಕೋಮಿ ದೃಢಪಡಿಸಿದ್ದಾರೆ. “ಅವರು ಬಾಂಬ್ ದಾಳಿಗೊಳಗಾದ ಕಟ್ಟಡದಲ್ಲೇ ಇದ್ದರು ಎಂಬುದು ನಿಜ. ಅಲ್ಲಿದ್ದ ಇತರರು ಹುತಾತ್ಮರಾದರು. ಸ್ಫೋಟಕ್ಕೆ ಕೆಲವೇ ನಿಮಿಷಗಳ ಮೊದಲು ದೇವರ ಇಚ್ಛೆಯಿಂದ ಅವರು ಅಂಗಳಕ್ಕೆ ಹೋಗಿದ್ದರು. ದೇವರು ಅವರನ್ನು ರಕ್ಷಿಸಬೇಕೆಂದು ಬಯಸಿದ್ದರು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಇರಾನ್​ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ರಷ್ಯಾದಲ್ಲಿದ್ದಾರಾ? ರಾಯಭಾರಿ ಹೇಳಿದ್ದೇನು?

“ಸದ್ಯಕ್ಕೆ ಅವರು ಪರಿಪೂರ್ಣವಾಗಿ ಆರೋಗ್ಯವಾಗಿದ್ದಾರೆ ಮತ್ತು ಅವರೇ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ, ವಿವಿಧ ಪರಿಸ್ಥಿತಿಗಳಲ್ಲಿ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಅವರು ನಿರ್ದಿಷ್ಟ ಸೂಚನೆಗಳನ್ನು ಸಹ ನೀಡಿದ್ದಾರೆ. ಅವರು ಪರಿಸ್ಥಿತಿಯ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದಾರೆ” ಎಂದು ಕೋಮಿ ಹೇಳಿದ್ದಾರೆ ಎಂದು ಫಾರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us