ಯುರೇನಿಯಂ ಇರಾನ್‌ನಲ್ಲಿಯೇ ಉಳಿಯಬೇಕು; ಅಮೆರಿಕದ ಪ್ರಮುಖ ಬೇಡಿಕೆ ತಿರಸ್ಕರಿಸಿದ ಮೊಜ್ತಾಬಾ ಖಮೇನಿ

ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸೂಕ್ಷ್ಮ ಕದನ ವಿರಾಮ ಮಾತುಕತೆಗಳ ಮಧ್ಯೆ ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅಮೆರಿಕದ ಪ್ರಮುಖ ಬೇಡಿಕೆಯೊಂದನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. "ಇರಾನ್‌ನಲ್ಲಿರುವ ಸಮೃದ್ಧ ಯುರೇನಿಯಂ ದೇಶದ ಒಳಗೇ ಇರಬೇಕು, ಅದನ್ನು ಯಾವುದೇ ಕಾರಣಕ್ಕೂ ವಿದೇಶಕ್ಕೆ ಕಳುಹಿಸುವುದಿಲ್ಲ" ಎಂದು ಅವರು ಖಡಕ್ ಆದೇಶ ಹೊರಡಿಸಿದ್ದಾರೆ. ಇದು ಕದನವಿರಾಮದ ಮಾತುಕತೆಗಳ ಮೇಲೂ ಪರಿಣಾಮ ಬೀರುತ್ತದೆ.

ಯುರೇನಿಯಂ ಇರಾನ್‌ನಲ್ಲಿಯೇ ಉಳಿಯಬೇಕು; ಅಮೆರಿಕದ ಪ್ರಮುಖ ಬೇಡಿಕೆ ತಿರಸ್ಕರಿಸಿದ ಮೊಜ್ತಾಬಾ ಖಮೇನಿ
Mojtaba Khamenei

Updated on: May 21, 2026 | 7:01 PM

ಟೆಹ್ರಾನ್, ಮೇ 21: ಇರಾನ್ ಮತ್ತು ಅಮೆರಿಕದ ನಡುವೆ ನಡೆಯುತ್ತಿರುವ ಸೂಕ್ಷ್ಮ ಕದನ ವಿರಾಮದ ಮಾತುಕತೆಗಳ ಮಧ್ಯೆ ಇರಾನ್‌ನ ಸುಪ್ರೀಂ ನಾಯಕ ಮೊಜ್ತಾಬಾ ಖಮೇನಿ (Mojtaba Khamenei) ಅವರು ಅಮೆರಿಕದ ಪ್ರಮುಖ ಬೇಡಿಕೆಯೊಂದನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಎನ್​ರಿಚ್ಡ್​ ಯುರೇನಿಯಂ ಇರಾನ್ ದೇಶದ ಒಳಗೇ ಇರಬೇಕು ಎಂದು ಮೊಜ್ತಬಾ ಖಮೇನಿ ಹೇಳಿದ್ದಾರೆ. ಇರಾನ್ ತನ್ನ ಪರಮಾಣು ದಾಸ್ತಾನನ್ನು ವಿದೇಶಕ್ಕೆ ಸಾಗಿಸಬೇಕು ಎಂಬ ಅಮೆರಿಕದ ಷರತ್ತನ್ನು ನಾವು ಒಪ್ಪಲು ಸಿದ್ಧರಿಲ್ಲ ಎಂದು ಅವರು ಹೇಳಿದ್ದಾರೆ.

ಇರಾನ್ ಅಣುಬಾಂಬ್ ತಯಾರಿಸುವುದನ್ನು ತಡೆಯುವ ನಿಟ್ಟಿನಲ್ಲಿ ಇರಾನ್ ಹೊಂದಿರುವ ಉನ್ನತ ಮಟ್ಟದ ಸಮೃದ್ಧ ಯುರೇನಿಯಂ ದಾಸ್ತಾನನ್ನು ದೇಶದಿಂದ ಹೊರಗೆ ಕಳುಹಿಸಬೇಕು ಎಂದು ಅಮೆರಿಕ ಕದನ ವಿರಾಮಕ್ಕೆ ಮುಖ್ಯ ಷರತ್ತನ್ನು ವಿಧಿಸಿತ್ತು.

ಇದನ್ನೂ ಓದಿ: ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್? ಹೊರ್ಮುಜ್ ಆಳದಲ್ಲಿರುವ ಅಂತರ್ಜಾಲ ಕೇಬಲ್​ಗೂ ಆಪತ್ತು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇರಾನ್ ಜೊತೆಗಿನ ಯುದ್ಧವನ್ನು ಕೊನೆಗಾಣಿಸಲು ಪ್ರಮುಖ ಷರತ್ತೊಂದನ್ನು ವಿಧಿಸಿದ್ದರು. ಇರಾನ್ ಅಣುಬಾಂಬ್ ತಯಾರಿಸುವುದನ್ನು ತಡೆಯಲು, ಅದು ಹೊಂದಿರುವ ಶೇ. 60ರಷ್ಟು ಶುದ್ಧತೆಯ ಇಂಧನ-ದರ್ಜೆಯ ಸಮೃದ್ಧ ಯುರೇನಿಯಂ ದಾಸ್ತಾನನ್ನು ಇರಾನ್‌ನಿಂದ ಹೊರಗೆ ಹಾಕಬೇಕು ಮತ್ತು ಬೇರೆ ದೇಶಕ್ಕೆ ವರ್ಗಾಯಿಸಬೇಕು ಎಂಬುದು ಅಮೆರಿಕದ ಮುಖ್ಯ ಬೇಡಿಕೆಯಾಗಿತ್ತು. ಈ ಷರತ್ತನ್ನು ಈಡೇರಿಸುವವರೆಗೂ ಯುದ್ಧ ಕೊನೆಗೊಳ್ಳುವುದಿಲ್ಲ ಎಂದು ಇಸ್ರೇಲ್ ಹೇಳಿತ್ತು.

ಆದರೆ, ಇದಕ್ಕೆ ಇರಾನ್ ಒಪ್ಪಿಗೆ ನೀಡಿಲ್ಲ. ಈ ಬೇಡಿಕೆಯನ್ನು ಒಪ್ಪಿಕೊಂಡರೆ ಇರಾನ್ ಜಾಗತಿಕವಾಗಿ ದುರ್ಬಲವಾಗುತ್ತದೆ. ಅಮೆರಿಕ ಅಥವಾ ಇಸ್ರೇಲ್ ಭವಿಷ್ಯದಲ್ಲಿ ಮತ್ತೆ ದಾಳಿ ನಡೆಸಲು ಇದು ದಾರಿ ಮಾಡಿಕೊಡುತ್ತದೆ ಎಂಬುದು ಇರಾನ್ ಆತಂಕ. ಪ್ರಸ್ತುತ ನಡೆಯುತ್ತಿರುವ ಕದನ ವಿರಾಮ ಮಾತುಕತೆಗಳು ಕೇವಲ ಅಮೆರಿಕದ ಒಂದು ‘ರಾಜತಾಂತ್ರಿಕ ತಂತ್ರ’ ಇರಬಹುದು ಎಂದು ಇರಾನ್ ಅನುಮಾನ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಹಮ್ಜಾ ಬುರ್ಹಾನ್ ಬರ್ಬರ ಹತ್ಯೆ

ಇದೆಲ್ಲದರ ನಡುವೆ, ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಉಭಯ ದೇಶಗಳ ನಡುವೆ ಶಾಂತಿ ಸ್ಥಾಪನೆಗೆ ಪ್ರಯತ್ನಗಳು ನಡೆಯುತ್ತಿವೆಯಾದರೂ ಇರಾನ್‌ನ ಈ ಕಠಿಣ ನಿಲುವಿನಿಂದಾಗಿ ಕದನ ವಿರಾಮದ ಮಾತುಕತೆಗಳು ಮತ್ತಷ್ಟು ಜಟಿಲಗೊಂಡಿವೆ. ಅಮೆರಿಕ ಕೂಡ ಎಲ್ಲ ರೀತಿಯಿಂದಲೂ ಕದನವಿರಾಮಕ್ಕೆ ಪ್ರಯತ್ನ ಮಾಡುತ್ತಿದೆ.

ಅಂತಾರಾಷ್ಟ್ರೀಯ ಸಂಸ್ಥೆಗಳ ಅಂದಾಜಿನ ಪ್ರಕಾರ, ಇರಾನ್ ಪ್ರಸ್ತುತ ಸುಮಾರು 440 ಕೆ.ಜಿ ಗಿಂತಲೂ ಹೆಚ್ಚು ಸಮೃದ್ಧ ಯುರೇನಿಯಂ ದಾಸ್ತಾನನ್ನು ಹೊಂದಿದೆ. ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್‌ನ ಇಸ್ಫಹಾನ್ ಮತ್ತು ನಟಾಂಜ್ ಪರಮಾಣು ನೆಲೆಗಳ ಮೇಲೆ ನಡೆಸಿದ ಭೀಕರ ದಾಳಿಗಳ ನಂತರವೂ ಈ ದಾಸ್ತಾನುಗಳನ್ನು ಸುರಕ್ಷಿತ ಸುರಂಗಗಳಲ್ಲಿ ಸಂಗ್ರಹಿಸಲಾಗಿದೆ ಎನ್ನಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us