ಕೀವ್: ಉಕ್ರೇನ್‌ನ ಕೀವ್‌ನಲ್ಲಿರುವ ವಸತಿ ಕಟ್ಟಡದ ಮೇಲೆ ರಷ್ಯಾದ ರಾಕೆಟ್ ದಾಳಿಯಲ್ಲಿ (Russia Ukraine War) ಉಕ್ರೇನಿಯನ್ ಚಲನಚಿತ್ರ ಮತ್ತು ರಂಗಭೂಮಿ ನಟಿ ಒಕ್ಸಾನಾ ಶ್ವೆಟ್ಸ್ (Oksana Shvets) ದುರ್ಮರಣಕ್ಕೀಡಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ನಟಿಯ ಮರಣವನ್ನು ‘ಯಂಗ್ ಥಿಯೇಟರ್’ ದೃಢಪಡಿಸಿದ್ದು, ಈ ಕುರಿತು ಮಾಹಿತಿ ನೀಡಿದೆ. ಶ್ವೆಟ್ಸ್ 1980ರಿಂದ ಆ ತಂಡದ ಸದಸ್ಯರಾಗಿದ್ದರು. ‘ಯಂಗ್ ಥಿಯೇಟರ್ ಕುಟುಂಬದಲ್ಲಿ ಶಮನವಾಗದ ದುಃಖ’ ಎಂದು ಬರೆದು ತಂಡವು ಫೇಸ್ಬುಕ್ ಪೋಸ್ಟ್ ಹಂಚಿಕೊಂಡಿದೆ. ‘ಪ್ರತಿಭಾವಂತ ನಟಿಗೆ ನಮನ. ನಮ್ಮ ನೆಲಕ್ಕೆ ಬಂದ ಶತ್ರುಗಳಿಗೆ ಕ್ಷಮೆಯಿಲ್ಲ’ ಎಂದು ಬರೆದು ತಂಡವು ಪೋಸ್ಟ್ ಹಂಚಿಕೊಂಡಿದೆ. ಉಕ್ರೇನ್‌ನ ಆಂಗ್ಲ ಮಾಧ್ಯಮ ಕೀವ್ ಪೋಸ್ಟ್ ಕೂಡ ಪ್ರತಿಭಾವಂತ ನಟಿಯ ಸಾವನ್ನು ದೃಢಪಡಿಸಿದೆ. ‘ಯುದ್ಧದ ಸಮಯದಲ್ಲಿ ಕೀವ್‌ನಲ್ಲಿ ಅವರು ಹತ್ಯೆಯಾಗಿದ್ದಾರೆ’ ಎಂದು ಅದು ವರದಿ ಮಾಡಿದೆ.
ಒಕ್ಸಾನಾ ಉಕ್ರೇನ್‌ನಲ್ಲಿ ಹಲವು ದಶಕಗಳಿಂದ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದವರು. ದೇಶದ ಹಲವಾರು ಉನ್ನತ ಪ್ರಶಸ್ತಿಗಳನ್ನು ಅವರು ಮುಡಿಗೇರಿಸಿಕೊಂಡಿದ್ದರು. ಪ್ರದರ್ಶನ ಕಲೆಗಾಗಿ ಉಕ್ರೇನ್‌ನ ಅತ್ಯುನ್ನತ ಗೌರವಗಳಲ್ಲಿ ಒಂದಾದ ಉಕ್ರೇನ್‌ನ ಮೆರಿಟೆಡ್ ಆರ್ಟಿಸ್ಟ್ ಪ್ರಶಸ್ತಿಯನ್ನೂ ನಟಿ ಪಡೆದಿದ್ದರು.
ಒಕ್ಸಾನಾ ಶ್ವೆಟ್ಸ್ ಪರಿಚಯ:
1955ರಲ್ಲಿ ಜನಿಸಿದ ಒಕ್ಸಾನಾ ಶ್ವೆಟ್ಸ್ ಇವಾನ್ ಫ್ರಾಂಕೊ ಥಿಯೇಟರ್ ಮತ್ತು ಕೀವ್ ಸ್ಟೇಟ್ ಇನ್ಸ್ಟಿಟ್ಯೂಟ್ ಆಫ್ ಥಿಯೇಟರ್ ಆರ್ಟ್ಸ್ನಲ್ಲಿ ರಂಗಭೂಮಿ ವಿಷಯದಲ್ಲಿ ಅಧ್ಯಯನ ನಡೆಸಿದ್ದರು. ತಮ್ಮ ರಂಗಭೂಮಿ ಕೆಲಸದ ಜೊತೆಗೆ, ‘ದಿ ಸೀಕ್ರೆಟ್ ಆಫ್ ಸೇಂಟ್ ಪ್ಯಾಟ್ರಿಕ್’, ‘ದಿ ರಿಟರ್ನ್ ಆಫ್ ಮುಖ್ತಾರ್’ ಮತ್ತು ಟಿವಿ ಶೋ ‘ಹೌಸ್ ವಿತ್ ಲಿಲೀಸ್’ ಸೇರಿದಂತೆ ವಿವಿಧ ಉಕ್ರೇನಿಯನ್ ಚಲನಚಿತ್ರಗಳಲ್ಲಿ ಶ್ವೆಟ್ಸ್ ಬಣ್ಣಹಚ್ಚಿದ್ದರು.
ರಷ್ಯಾದ ಆಕ್ರಮಣದ ಸಮಯದಲ್ಲಿ ಸಾವನ್ನಪ್ಪಿದ ಹಲವಾರು ಉನ್ನತ ವ್ಯಕ್ತಿಗಳಲ್ಲಿ ಒಕ್ಸಾನಾ ಕೂಡ ಒಬ್ಬರು. ಅವರಿಗಿಂತ ಮೊದಲು, ನಟ ಪಾಶಾ ಲೀ ಈ ತಿಂಗಳ ಆರಂಭದಲ್ಲಿ ನಿಧನರಾಗಿದ್ದರು ಎಂದು ವರದಿಯಾಗಿತ್ತು. ಇತ್ತೀಚೆಗೆ ಉಕ್ರೇನ್ ಮೇಲಿನ ಯುದ್ಧ ನಿಲ್ಲಿಸುವಂತೆ ರಷ್ಯಾಗೆ ಖ್ಯಾತ ನಟ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಮನವಿ ಮಾಡಿದ್ದರು. ಅವರು ಕದನ ವಿರಾಮಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಲ್ಲಿ ಮನವಿ ಮಾಡಿದ್ದರು.
ರಷ್ಯಾ ಅಧ್ಯಕ್ಷ ಪುಟಿನ್ ಕದನದಿಂದ ಹಿಂದೆ ಸರಿಯುವುದಿಲ್ಲ. ಉಕ್ರೇನ್ ಸೇನೆ ಉದ್ದೇಶಿತ ಗುರಿಯನ್ನು ತಲುಪಲಿದೆ ಎಂದಿದ್ದಾರೆ. ಇದರ ನಡುವೆ ಮಾತುಕತೆಗೆ ಸಿದ್ಧ ಎಂದೂ ಅವರು ಹೇಳಿದ್ದಾರೆ. ರಷ್ಯಾದ ದಾಳಿಯಿಂದ ಇತ್ತೀಚೆಗೆ ಮರಿಯುಪೋಲ್ನಲ್ಲಿ ರಂಗಮಂದಿರ ನಾಶವಾಗಿತ್ತು. ಅದರಲ್ಲಿ 50 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ರಂಗಮಂದಿರದ ಮರುನಿರ್ಮಾಣಕ್ಕೆ ಸಹಾಯ ಮಾಡುವುದಾಗಿ ಇಟಲಿ ಘೋಷಿಸಿದೆ.
ಇದನ್ನೂ ಓದಿ:
36 ಮಿಲಿಯನ್ ವರ್ಷಗಳಷ್ಟು ಹಳೆಯ ತಿಮಿಂಗಿಲದ ಪಳೆಯುಳಿಕೆ ಪತ್ತೆ; ಏನಿದರ ವಿಶೇಷ? ಸಚಿತ್ರ ಮಾಹಿತಿ ಇಲ್ಲಿದೆ
Published On - 3:18 pm, Fri, 18 March 22