ಕಸ ಆಯಲು ಬಂದ ಮಹಿಳೆಯರ ಮೇಲೆ ಕಳ್ಳತನದ ಆರೋಪ, ಬಟ್ಟೆ ಬಿಚ್ಚಿ, ಕೋಲಿನಿಂದ ಥಳಿತ; ಪಾಕಿಸ್ತಾನದಲ್ಲಿ ಅಮಾನವೀಯ ಕೃತ್ಯ

ಕಸ ಆಯಲು ಬಂದ ಮಹಿಳೆಯರ ಮೇಲೆ ಕಳ್ಳತನದ ಆರೋಪ, ಬಟ್ಟೆ ಬಿಚ್ಚಿ, ಕೋಲಿನಿಂದ ಥಳಿತ; ಪಾಕಿಸ್ತಾನದಲ್ಲಿ ಅಮಾನವೀಯ ಕೃತ್ಯ
ಸಾಂಕೇತಿಕ ಚಿತ್ರ

ಲಾಹೋರ್​​: ಪಾಕಿಸ್ತಾನದಲ್ಲಿ ನಾಲ್ವರು ಮಹಿಳೆಯರನ್ನು ಅಮಾನುಷವಾಗಿ ನಡೆಸಿಕೊಳ್ಳಲಾಗಿದೆ. ಇವರು ಅಂಗಡಿಯಲ್ಲಿ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಬಟ್ಟೆ ಬಿಚ್ಚಿ, ಮೆರವಣಿಗೆ ಮಾಡಲಾಗಿದೆ. ಅಷ್ಟೇ ಅಲ್ಲ, ರಸ್ತೆಯಲ್ಲಿ ಎಳೆದುಕೊಂಡು ಬಂದು ಕೋಲಿನಿಂದ ಥಳಿಸಲಾಗಿದೆ. ಈ ಘಟನೆ ನಡೆದದ್ದು ಪಾಕಿಸ್ತಾನದ ಲಾಹೋರ್​​ನಿಂದ 180 ಕಿಮೀ ದೂರದಲ್ಲಿರುವ ಫೈಸಲಾಬಾದ್​​ ಎಂಬಲ್ಲಿ. ನಾಲ್ವರು ಮಹಿಳೆಯರಲ್ಲಿ ಒಬ್ಬಾಕೆ ಹದಿಹರೆಯದವಳು ಎಂದು ಹೇಳಲಾಗಿದೆ. ಅಮಾನುಷ ಕೃತ್ಯದ ವಿಡಿಯೋ ಕೂಡ ಸಿಕ್ಕಾಪಟೆ ವೈರಲ್​ ಆಗಿದೆ.  

ಹೀಗೆ ತಮ್ಮನ್ನು ಬೆತ್ತಲೆ ಗೊಳಿಸಿ, ಥಳಿಸಿದ್ದರಿಂದ ಯುವತಿಯರು ದೊಡ್ಡದಾಗಿ ಅಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಿಸುತ್ತದೆ. ನಮ್ಮನ್ನು ಹೋಗಲು ಬಿಡಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಆದರೆ ಸುಮಾರು ಒಂದೂವರೆ ತಾಸುಗಳ ಕಾಲ ಮಹಿಳೆಯರನ್ನು ಅವರು ಬಿಡಲಿಲ್ಲ. ಇದು ಮನಕಲಕುವ ದೃಶ್ಯವಾಗಿದ್ದು, ಪಾಕ್​​ನಲ್ಲಿ ನಡೆದ ಕ್ರೌರ್ಯ ನೋಡಿ ನೆಟ್ಟಿಗರು ಕಿಡಿಕಾರಿದ್ದಾರೆ. ಇನ್ನು ಘಟನೆಯ ಎರಡ್ಮೂರು ವಿಡಿಯೋಗಳು ವೈರಲ್​ ಆದ ಬೆನ್ನಲ್ಲೇ, ಪಾಕಿಸ್ತಾನದ ಪಂಜಾಬ್​ ಪ್ರಾಂತ್ಯದ ಪೊಲೀಸರು ಕೇಸ್​ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಐವರನ್ನು ಬಂಧಿಸಿದ್ದಾಗಿ ಹೇಳಿದ್ದಾರೆ. ಪ್ರಕರಣವನ್ನು ಇನ್ನಷ್ಟು ತನಿಖೆ ಮಾಡಲಾಗುತ್ತದೆ. ತಪ್ಪಿತಸ್ಥರನ್ನು ಯಾರನ್ನೂ ಬಿಡುವುದಿಲ್ಲ ಎಂದೂ ಪೊಲೀಸರು ಹೇಳಿದ್ದಾರೆ.

ಮಹಿಳೆಯರು ಹೇಳುವುದೇನು? ಘಟನೆಯ ಬಗ್ಗೆ ಮಹಿಳೆಯರು ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ. ಇವರೆಲ್ಲ ಕಸ, ತ್ಯಾಜ್ಯ ಆಯುವವರಾಗಿದ್ದು, ಎಂದಿನಂತೆ ತ್ಯಾಜ್ಯ ಸಂಗ್ರಹ ಮಾಡಲು ಫೈಸಲಾಬಾದ್​ನ ಬಾವಾ ಚಾಕ್​ ಮಾರ್ಕೆಟ್​ಗೆ ಹೋಗಿದ್ದೆವು. ತುಂಬ ಬಾಯಾರಿಕೆಯಾಗುತ್ತಿದ್ದ ಕಾರಣ ಉಸ್ಮಾನ್​ ಎಲೆಕ್ಟ್ರಿಕ್​ ಅಂಗಡಿಗೆ ಹೋಗಿ ನೀರು ಕೇಳಿದ್ದೇವೆ. ಆದರೆ ಅಂಗಡಿ ಮಾಲೀಕ ಸದ್ದಾಂ ಎಂಬುವರು ನಮ್ಮನ್ನು ತಪ್ಪಾಗಿ ಭಾವಿಸಿದರು. ಕಳ್ಳತನ ಮಾಡಲು ಬಂದಿದ್ದೇವೆ ಎಂದು ಆರೋಪಿಸಿ ಹೊಡೆದರು. ಅಷ್ಟೇ ಅಲ್ಲ, ಬಟ್ಟೆಯನ್ನೂ ಬಿಚ್ಚಲು ಶುರು ಮಾಡಿದರು. ಅದರ ವಿಡಿಯೋ ಕೂಡ ಮಾಡಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ಸದ್ದಾಂ ಸೇರಿ ಐವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ: ಒಮಿಕ್ರಾನ್ ವೈರಸ್ ಲಕ್ಷಣಗಳೇನು? ಸೋಂಕು ಬಂದ್ರೆ ಚಿಕಿತ್ಸೆ ಏನು? ಇಲ್ಲಿದೆ ನೀವು ತಿಳಿದುಕೊಳ್ಳಲೇ ಬೇಕಾದ ಮಾಹಿತಿ

Click on your DTH Provider to Add TV9 Kannada