ಸಿಗರೇಟ್ ಬಿಟ್ಟ ಮೆಲೋನಿ, ವಾಚ್ ಮರೆತ ಮ್ಯಾಕ್ರನ್, ಮತ್ತೆ ಮೆಲೋಡಿ ಮೋಡಿ; ಜಿ7 ಶೃಂಗಸಭೆಯ ವೈರಲ್ ಕ್ಷಣಗಳಿವು

ಫ್ರಾನ್ಸ್‌ನ ಎವಿಯಾನ್-ಲೆ-ಬೈನ್ಸ್‌ನಲ್ಲಿ ಮುಕ್ತಾಯದ ಹಂತಕ್ಕೆ ತಲುಪಿರುವ ಜಿ7 (G7) ಶೃಂಗಸಭೆಯ ಗಂಭೀರ ರಾಜತಾಂತ್ರಿಕ ಚರ್ಚೆಗಳ ನಡುವೆ, ಜಾಗತಿಕ ನಾಯಕರ ವೈಯಕ್ತಿಕ ರಹಸ್ಯಗಳು ಹಾಗೂ ಮೋಜಿನ ಕ್ಷಣಗಳು ಮೈಕ್ರೋಫೋನ್‌ನಲ್ಲಿ ಆಕಸ್ಮಿಕವಾಗಿ ರೆಕಾರ್ಡ್ ಆಗಿದೆ. ಈ ವಿಡಿಯೋ ಜಾಗತಿಕವಾಗಿ ವೈರಲ್ ಆಗಿವೆ. ಜಿ7 ಶೃಂಗಸಭೆಯು ಕೇವಲ ಜಾಗತಿಕ ಬಿಕ್ಕಟ್ಟುಗಳ ಚರ್ಚೆಗೆ ಮಾತ್ರವಲ್ಲದೆ, ನಾಯಕರ ತಮಾಷೆಯ ಆಫ್-ದಿ-ರೆಕಾರ್ಡ್ ಮಾತುಗಳಿಗೂ ಸಾಕ್ಷಿಯಾಗಿದೆ.

ಸಿಗರೇಟ್ ಬಿಟ್ಟ ಮೆಲೋನಿ, ವಾಚ್ ಮರೆತ ಮ್ಯಾಕ್ರನ್, ಮತ್ತೆ ಮೆಲೋಡಿ ಮೋಡಿ; ಜಿ7 ಶೃಂಗಸಭೆಯ ವೈರಲ್ ಕ್ಷಣಗಳಿವು
G7 Summit Moments
Image Credit source: PTI

Updated on: Jun 17, 2026 | 5:53 PM

ಎವಿಯಾನ್, ಜೂನ್ 17: ಫ್ರಾನ್ಸ್​ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ (G7 Summit) ಅನೇಕ ಗಂಭೀರ ವಿಚಾರಗಳು ಚರ್ಚೆಯಾಗಿವೆ. ಇದರ ಜೊತೆಗೆ ಹಾಸ್ಯಮಯ ಸನ್ನಿವೇಶವೂ ನಡೆಯಿತು. ಈ ಸಭೆಯಲ್ಲಿ ಭಾಗವಹಿಸಿದ್ದ ಜಾಗತಿಕ ನಾಯಕರ ತಮಾಷೆಯ ಕ್ಷಣಗಳು ಕೂಡ ರೆಕಾರ್ಡ್ ಆಗಿದೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಧೂಮಪಾನ ತ್ಯಜಿಸಿದ ರಹಸ್ಯ ಬಿಚ್ಚಿಟ್ಟಿರುವುದು, ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಮರೆತುಹೋದ ವಾಚ್ ಮೇಲೆ ಟ್ರಂಪ್ ಕಣ್ಣು, ಫಿಫಾ ವಿಶ್ವಕಪ್ ಕುರಿತ ನಾಯಕರ ಹರಟೆ ಮುಂತಾದ ಕ್ಷಣಗಳು ಸೆರೆಯಾಗಿವೆ.

ಮಂಗಳವಾರದ ಜಿ7 ಸಭೆಯ ಮುನ್ನ ಜರ್ಮನ್ ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ, “ಇವತ್ತು ಬೆಳಗ್ಗೆ ಸಿಗರೇಟ್ ಸೇದಿದ್ದೀರಾ?” ಎಂದು ತಮಾಷೆಯಾಗಿ ಕೇಳಿದ್ದಾರೆ. ಅದಕ್ಕೆ ಮೆಲೋನಿ, “ನಾನು ಕಳೆದ ಮೇ 1ರಿಂದ ಸಿಗರೇಟ್ ಮುಟ್ಟಿಲ್ಲ, ಧೂಮಪಾನ ಬಿಟ್ಟಿದ್ದೇನೆ!” ಎಂದು ಉತ್ತರಿಸಿದ್ದಾರೆ. ಇದು ಆಕಸ್ಮಿಕವಾಗಿ ಆನ್ ಆಗಿದ್ದ ಅವರ ಮೈಕ್‌ ಮೂಲಕ ಸುತ್ತಲಿದ್ದವರಿಗೆಲ್ಲ ಕೇಳಿದೆ.

ಇದನ್ನು ಕೇಳಿದ ತಕ್ಷಣ ಟೇಬಲ್ ಸುತ್ತ ಕುಳಿತಿದ್ದ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ, ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ಜಪಾನ್ ಪ್ರಧಾನಿ ಸನಾ ಇ ಟಕೈಚಿ ಸೇರಿದಂತೆ ಹಲವರು ಜೋರಾಗಿ ಚಪ್ಪಾಳೆ ತಟ್ಟಿ ಮೆಲೋನಿಗೆ ಅಭಿನಂದನೆ ಸಲ್ಲಿಸಿದರು. ಕಾರ್ನಿ ಅವರು, “ಹಾಗಾದರೆ ಏನಾದರೂ ನಿಕೋಟಿನ್ ಪ್ಯಾಚ್ ಬಳಸುತ್ತಿದ್ದೀರಾ?” ಎಂದು ಕೇಳಿದಾಗ, ಮೆಲೋನಿ ಎರಡು ಕೈಗಳನ್ನು ಎತ್ತಿ ನಗುತ್ತಿರುವ ವಿಡಿಯೋ ವೈರಲ್ ಆಗಿದೆ. ಬ್ರಿಟನ್ ಪ್ರಧಾನಿ ಸ್ಟಾರ್ಮರ್ ಅವರು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಅವರಿಗೆ ಕೇಳಿದಾಗ, ಕೋಸ್ಟಾ ತಾವು ಕಳೆದ 21 ವರ್ಷಗಳಿಂದ ಸಿಗರೇಟ್ ಮುಟ್ಟಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಫ್ರಾನ್ಸ್‌ನ ಜಿ7 ಶೃಂಗಸಭೆಯ ಗ್ರೂಪ್ ಫೋಟೋ ವೇಳೆಯೂ ಮೌನವಾಗೇ ನಿಂತ ಟ್ರಂಪ್-ಮೋದಿ

ಶೃಂಗಸಭೆಯ ಜಂಟಿ ಮಧ್ಯಾಹ್ನದ ಭೋಜನದ ಬಳಿಕ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ತಮ್ಮ ವಾಚ್ ಅನ್ನು ಟೇಬಲ್ ಮೇಲೆಯೇ ಮರೆತು ಹೊರನಡೆದಿದ್ದಾರೆ. ಇದನ್ನು ಗಮನಿಸಿದ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ, “ಮ್ಯಾಕ್ರಾನ್ ವಾಚ್ ಇಲ್ಲೇ ಬಿಟ್ಟು ಹೋಗಿದ್ದಾರೆ, ಈಗ ಅದು ನಮ್ಮ ಬಳಿ ಇದೆ” ಎಂದು ತಮಾಷೆ ಮಾಡಿದ್ದಾರೆ. ಕೂಡಲೇ ಅಲ್ಲೇ ಇದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಅವನು ಬಿಟ್ಟು ಹೋಗಿದ್ದರೆ ಅದನ್ನು ನನಗೆ ಕೊಟ್ಟುಬಿಡಿ, ಕೊಡಿ ಇಲ್ಲಿ!” ಎಂದು ತಮಾಷೆಯಾಗಿ ಹೇಳಿದ್ದು ಕೇಳಿ ಸುತ್ತಲಿದ್ದ ನಾಯಕರು ನಗುತ್ತಿರುವುದು ಕೂಡ ರೆಕಾರ್ಡ್ ಆಗಿದೆ.


ಮೆಲೋನಿ-ಮೋದಿ ತಮಾಷೆ:

ಜಾಗತಿಕವಾಗಿ ಸದಾ ಸದ್ದು ಮಾಡುವ ಪ್ರಧಾನಿ ನರೇಂದ್ರ ಮೋದಿ ಮತ್ತು ಜಾರ್ಜಿಯಾ ಮೆಲೋನಿ ಅವರ ‘ಮೆಲೋಡಿ’ (Melodi) ಜುಗಲ್‌ಬಂದಿ ಜಿ7 ಶೃಂಗಸಭೆಯಲ್ಲೂ ಮುಂದುವರಿದಿದೆ. ಗ್ರೂಪ್ ಫೋಟೋಗೂ ಮುನ್ನ ಮೋದಿ ಅವರನ್ನು ಬರಮಾಡಿಕೊಂಡ ಮೆಲೋನಿ, “ನಿಮ್ಮನ್ನು ಮತ್ತೆ ಭೇಟಿಯಾಗಿದ್ದು ಸಂತೋಷ ತಂದಿದೆ” ಎಂದಿದ್ದಾರೆ. ಅದಕ್ಕೆ ಪ್ರಧಾನಿ ಮೋದಿ ಅವರು ನಗುತ್ತಾ ‘ಇನ್‌ಸ್ಟಾಗ್ರಾಮ್’ ಎಂದು ಪ್ರಸ್ತಾಪಿಸಿದಾಗ, ಮೆಲೋನಿ ತಕ್ಷಣವೇ, “ಹೌದು, ನಾವಿಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಯಂತ ಜನಪ್ರಿಯ ಜೋಡಿ!” ಎಂದು ಉತ್ತರಿಸಿ ನಕ್ಕಿದ್ದಾರೆ.

ಇದನ್ನೂ ಓದಿ: ಜಿ7 ಶೃಂಗಸಭೆ: ಫ್ರಾನ್ಸ್‌ಗೆ ಪ್ರಧಾನಿ ಮೋದಿ ಭೇಟಿ, ಇಂದು ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆ ಮಹತ್ವದ ಮಾತುಕತೆ

ಪ್ರಸ್ತುತ ಉತ್ತರ ಅಮೆರಿಕದಲ್ಲಿ ನಡೆಯುತ್ತಿರುವ ಫಿಫಾ (FIFA) ವಿಶ್ವಕಪ್ ಕುರಿತು ಕೂಡ ಜಾಗತಿಕ ನಾಯಕರು ಮುಕ್ತವಾಗಿ ಹರಟೆ ಹೊಡೆದಿದ್ದಾರೆ. ಫ್ರಾನ್ಸ್ ತಂಡದ ಬೆಂಬಲದ ಘೋಷಣೆಗಳು ಕೇಳಿಬಂದರೆ, ಸ್ಪೇನ್ ವಿರುದ್ಧ ಕೇಪ್ ವರ್ಡೆ ತಂಡ 0-0 ಗೋಲುಗಳಿಂದ ಪಂದ್ಯ ಡ್ರಾ ಮಾಡಿಕೊಂಡಿದ್ದನ್ನು ಬ್ರಿಟನ್ ಪ್ರಧಾನಿ ಸ್ಟಾರ್ಮರ್ ಆಶ್ಚರ್ಯದಿಂದ ನೆನಪಿಸಿಕೊಂಡಿದ್ದಾರೆ. ಮತ್ತೊಂದೆಡೆ, ಟ್ರಂಪ್ ಅವರು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷರಾದ ಆಂಟೋನಿಯೊ ಕೋಸ್ಟಾ ಅವರೊಂದಿಗೆ ಮಾತನಾಡುತ್ತಾ, ಡೆನ್ಮಾರ್ಕ್ ಅಡಿಯಲ್ಲಿರುವ ಸ್ವಾಯತ್ತ ಪ್ರದೇಶವಾದ ‘ಗ್ರೀನ್‌ಲ್ಯಾಂಡ್’ ಅನ್ನು ಅಮೆರಿಕ ವಶಪಡಿಸಿಕೊಳ್ಳುವ ಹಳೆಯ ವಿವಾದಾತ್ಮಕ ವಿಷಯವನ್ನು ಮತ್ತೆ ರಹಸ್ಯವಾಗಿ ಪ್ರಸ್ತಾಪಿಸಿ ಕುತೂಹಲ ಮೂಡಿಸಿದ್ದಾರೆ.

ಮುಂದಿನ ವರ್ಷ ಫ್ರೆಂಚ್ ಆಲ್ಪ್ಸ್‌ನಲ್ಲಿ ನಡೆಯಲಿರುವ ವಿಶ್ವ ಸೈಕ್ಲಿಂಗ್ ಚಾಂಪಿಯನ್‌ಶಿಪ್ ಪ್ರಚಾರಕ್ಕಾಗಿ ಅಧ್ಯಕ್ಷ ಮ್ಯಾಕ್ರನ್ ಅವರು ಶೃಂಗಸಭೆಗೆ ಬಂದಿದ್ದ ಎಲ್ಲ 7 ರಾಷ್ಟ್ರಗಳ ನಾಯಕರಿಗೆ ವಿಶಿಷ್ಟ ವಿನ್ಯಾಸದ ಸೈಕಲ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಗಾಲ್ಫ್ ಹೊರತುಪಡಿಸಿ ಬೇರೆ ಯಾವುದೇ ವ್ಯಾಯಾಮ ಮಾಡದ ಟ್ರಂಪ್ ಈ ಸೈಕಲ್ ಅನ್ನು ಹೇಗೆ ಬಳಸಲಿದ್ದಾರೆ ಎಂಬುದು ಅಲ್ಲಿ ಚರ್ಚೆಗೆ ಗ್ರಾಸವಾಯಿತು. ಇಂತಹ ಹಲವು ಲಘು ಪ್ರಸಂಗಗಳಿಗೆ ಜಿ7 ಶೃಂಗಸಭೆ ಸಾಕ್ಷಿಯಾಯಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us