ಅಮೆರಿಕದ ರೆಕಾರ್ಡಿಂಗ್ ಅಕಾಡೆಮಿ ಮತ್ತು ಸಿಬಿಎಸ್ 63 ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನ ಪಟ್ಟಿಯನ್ನು ಪ್ರಕಟಿಸಿದೆ. ಮಂಗಳವಾರ ನೇರ ಪ್ರಸಾರದಲ್ಲಿ ನಾಮ ನಿರ್ದೇಶನಗಳನ್ನು ಬಹಿರಂಗಪಡಿಸಲಾಗಿದೆ. ಅಮೇರಿಕದ ಗಾಯಕಿ ಬಿಯಾನ್ಸ್ ಒಂಬತ್ತು ನಾಮ ನಿರ್ದೇಶನಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಹಾಡುಗಾರರಾದ ಟೈಲರ್ ಸ್ವಿಫ್ಟ್ , ರೊಡ್ಡಿ ರಿಚ್ ಮತ್ತು ದುವಾ ಲಿಪಾ ತಲಾ ಆರು ನಾಮ ನಿರ್ದೇಶನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
24 ಗ್ರ್ಯಾಮಿಗಳ ವಿಜೇತೆ ಬಿಯಾನ್ಸ್ ಒಟ್ಟು 79 ನಾಮ ನಿರ್ದೇಶನಗಳೊಂದಿಗೆ ಪ್ರಶಸ್ತಿಯ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ನಾಮನಿರ್ದೇಶಿತರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಬಿಯಾನ್ಸ್ ಬಿಡುಗಡೆ ಮಾಡಿದ ‘ಬ್ಲ್ಯಾಕ್ ಪೆರೇಡ್’ ಹಾಡು, ಆಫ್ರಿಕನ್ ಅಮೆರಿಕನ್ನರು ತಾವು ಸ್ವತಂತ್ರರು ಎಂದು ತಿಳಿದಾಗ ನೆನಪಿಸಿಕೊಳ್ಳುವ ಹಾಡಾಗಿದ್ದು ಅತ್ಯುತ್ತಮ ಪ್ರದರ್ಶನಕ್ಕಾಗಿ ನಾಮನಿರ್ದೇಶನಗೊಂಡಿದೆ.
ಗ್ರ್ಯಾಮಿ ಅವಾರ್ಡ್ಸ್ನಲ್ಲಿ ಒಟ್ಟು 83 ವಿಭಾಗಗಳಿವೆ. ಎಲ್ಲಾ ವಿಭಾಗಗಳ ಪ್ರಶಸ್ತಿ ಪುರಸ್ಕೃತ ನಾಮನಿರ್ದೇಶನಗಳ ಪಟ್ಟಿ ಬಿಡುಗಡೆಗೊಂಡಿದೆ. ಪ್ರತಿಷ್ಠಿತ ಸಂಗೀತ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಜನವರಿ 31, 2021 ರಂದು ನೇರ ಪ್ರಸಾರ ಮಾಡಲಾಗುವುದು. ಸಮಾರಂಭವನ್ನು ಹಾಸ್ಯನಟ ಟ್ರೆವರ್ ನೋವಾ ನಡೆಸಿಕೊಡಲಿದ್ದಾರೆ.
ಏನಿದು ಗ್ರ್ಯಾಮಿ ಪ್ರಶಸ್ತಿ?
ಅಮೇರಿಕನ್ ಮ್ಯೂಸಿಕ್ ಅವಾರ್ಡ್ಸ್ ಮತ್ತು ಬಿಲ್ಬೋರ್ಡ್ ಮ್ಯೂಸಿಕ್ ಅವಾರ್ಡ್ಸ್ ಸೇರಿದಂತೆ ವಾರ್ಷಿಕವಾಗಿ ನಡೆಯುವ ಮೂರು ಪ್ರಮುಖ ಸಂಗೀತ ಪ್ರಶಸ್ತಿಗಳಲ್ಲಿ ಗ್ರ್ಯಾಮಿ ಪ್ರಶಸ್ತಿ ಸಮಾರಂಭವೂ ಒಂದು. ಸಂಗೀತ ಉದ್ಯಮದಲ್ಲಿನ ಸಾಧನೆಗಳನ್ನು ಗುರುತಿಸಲು, ದಿ ರೆಕಾರ್ಡಿಂಗ್ ಅಕಾಡೆಮಿ ನೀಡುವ ಪ್ರಶಸ್ತಿ ಇದಾಗಿದೆ. ವಾರ್ಷಿಕವಾಗಿ ಸಮಾರಂಭದಲ್ಲಿ ಪ್ರಮುಖ ಕಲಾವಿದರ ಪ್ರದರ್ಶನಗಳು ಮತ್ತು ಹೆಚ್ಚು ಜನಪ್ರಿಯ ಆಸಕ್ತಿಯನ್ನು ಹೊಂದಿರುವವರಿಗೆ ಈ ಪ್ರಶಸ್ತಿ ವಿತರಣೆ ಮಾಡಲಾಗುವುದು.