ಇಂಗ್ಲೆಂಡ್​ನಲ್ಲೊಂದು ‘ಪತಿ ಪತ್ನಿ ಔರ್ ವೋ’ ಪ್ರಕರಣ, ಪತಿಗೆ ಈಗ ತ್ರಿಶಂಕು ಸ್ಥಿತಿ!

ಆದರೆ ಟೋನಿ ಉಕ್ರೇನಿನ ಹೆಂಗಸಿನೊಂದಿಗೆ ತನ್ನ ದಶಕದ ಸಂಗಾತಿಯನ್ನು ಮರೆತು ದೈಹಿಕ ಸಂಪರ್ಕ ಬೆಳೆಸಿದ. ಅಂತಿಮವಾಗಿ ಲೋರ್ನಾ ಮತ್ತು ಮಕ್ಕಳನ್ನು ತೊರೆದು ಸೋಫಿಯಾಳೊಂದಿಗೆ ಬೇರೆ ಮನೆಯಲ್ಲಿ ವಾಸಮಾಡತೊಡಗಿದ.

ಇಂಗ್ಲೆಂಡ್​ನಲ್ಲೊಂದು ‘ಪತಿ ಪತ್ನಿ ಔರ್ ವೋ’ ಪ್ರಕರಣ, ಪತಿಗೆ ಈಗ ತ್ರಿಶಂಕು ಸ್ಥಿತಿ!
ಲೋರ್ನಾ ಮತ್ತು ಟೋನಿ ಗಾರ್ನೆಟ್
TV9kannada Web Team

| Edited By: Arun Belly

Sep 29, 2022 | 7:36 AM

ಆಶ್ರಯ ನೀಡಿದ ಮನೆಯಲ್ಲೇ ನಡೆದ ವಂಚನೆ ಪ್ರಕರಣವೊಂದರ ವಿಚಿತ್ರ ಕತೆಯಿದು. ಅಸಲಿಗೆ ನಾವು ಮಾತಾಡುತ್ತಿರೋದು ಉಕ್ರೇನ್ ನಲ್ಲಿ ಯುದ್ಧ ಶುರುವಾದ ಬಳಿಕ ಯುನೈಟೆಡ್ ಕಿಂಗ್ಡಮ್ ಗೆ ವಲಸೆ ಹೋದ ಸೋಫಿಯ ಕರ್ಕಾಡಿಮ್ ಹೆಸರಿನ ಮಹಿಳೆಯ ಬಗ್ಗೆ. ಪಶ್ಚಿಮ ಯಾರ್ಕ್ಶೈರ್ ನಲ್ಲಿರುವ ಬ್ರಾಡ್ ಫೋರ್ಡ್ ಗೆ ಸುಮಾರು 4 ತಿಂಗಳ ಹಿಂದೆ ಸೋಫಿಯ ಒಬ್ಬ ನಿರಾಶ್ರಿತಳಾಗಿ ಬಂದಾಗ, ಅವಳ ಸ್ಥಿತಿ ಕಂಡು ಕನಿಕರಪಟ್ಟ 30-ವರ್ಷ ವಯಸ್ಸಿನ ಟೋನಿ ಗಾರ್ನೆಟ್ ಅವನ ಸಂಗಾತಿ ಲೋರ್ನಾ ಗಾರ್ನೆಟ್ ಮತ್ತು ಅವರ ಇಬ್ಬರು ಮಕ್ಕಳು ಅವಳಿಗೆ ತಮ್ಮ ಮನೆಯಲ್ಲಿ ಆಶ್ರಯ ನೀಡಿದರು. ಟೋನಿ ಮತ್ತು ಲೋರ್ನಾ ಆ ಮನೆಯಲ್ಲಿ 10 ವರ್ಷಗಳಿಂದ ಒಟ್ಟಿಗೆ ಜೀವಿಸುತ್ತಿದ್ದರು.

ಆದರೆ ಟೋನಿ ಉಕ್ರೇನಿನ ಹೆಂಗಸಿನೊಂದಿಗೆ ತನ್ನ ದಶಕದ ಸಂಗಾತಿಯನ್ನು ಮರೆತು ದೈಹಿಕ ಸಂಪರ್ಕ ಬೆಳೆಸಿದ. ಅಂತಿಮವಾಗಿ ಲೋರ್ನಾ ಮತ್ತು ಮಕ್ಕಳನ್ನು ತೊರೆದು ಸೋಫಿಯಾಳೊಂದಿಗೆ ಬೇರೆ ಮನೆಯಲ್ಲಿ ವಾಸಮಾಡತೊಡಗಿದ.

ಸೋಫಿಯಾ ಮನೆಗೆ ಬಂದ ಕೆಲವೇ ದಿನಗಳ ನಂತರ ಲೋ-ಕಟ್ ಉಡುಪು ಧರಿಸಿ ತುಟಿಗಳಿಗೆ ಕೆಂಪು ಲಿಪ್ ಸ್ಟಿಕ್ ಮೆತ್ತಿಕೊಂಡು ತನ್ನ ಗಂಡನನ್ನು ಬುಟ್ಟಿಗೆ ಹಾಕಿಕೊಳ್ಳುವ ಪ್ರಯತ್ನ ಆರಂಭಿಸಿದಳೆಂದು ಲೋರ್ನಾ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾಳೆ.

ಆದರೆ 4-ತಿಂಗಳು ಸೋಫಿಯಾಳೊಂದಿಗೆ ಜೀವಿಸುವುದರಲ್ಲೇ ಟೋನಿಗೆ ಸಾಕಾಗಿಬಿಟ್ಟಿದೆ. ಕಳೆದ ವಾರ ಅದ್ಯಾವುದೋ ಕಾರಣಕ್ಕೆ ಅವರ ನಡುವೆ ಜಗಳವಾಗಿ ಟೋನಿ ಅವಳ ವಿರುದ್ಧ ಪೊಲೀಸ್ ಗೆ ದೂರು ಸಲ್ಲಿಸಿದ್ದಾನೆ. ಪೊಲೀಸರು ಬಂದು ಅವಳನ್ನು ಕರೆದೊಯ್ಯುವಾಗ ‘ಟೋನಿ ಐ ಲವ್ ಯೂ, ನನ್ನನ್ನು ದೂರ ಮಾಡಬೇಡ,’ ಅಂತ ಜೋರಾಗಿ ಕಿರುಚಿದ್ದನ್ನು ನೆರೆಹೊರೆಯವರು ಕೇಳಿಸಿಕೊಂಡಿದ್ದಾರೆ.

Sofia and Tony Garnett

ಸೋಫಿಯ ಮತ್ತು ಟೋನಿ

ಅದಲ್ಲದೆ ಅವಳು ಅಲ್ಲಿಂದ ಹೋಗುವಾಗ ಟೋನಿಯ ಕಾರಿಗೆ ಜೋರಾಗಿ ಒದ್ದಳಂತೆ. ಪೊಲೀಸರು ಅರೆಸ್ಟ್ ಮಾಡಲು ಬಂದಾಗ ಅವಳು ಮನೆ ಪಕ್ಕದಲ್ಲಿರುವ ಉದ್ಯಾನವನದ ಪೊದೆಯಲ್ಲಿ ಅವಿತಿದ್ದಳೆಂದು ಅಕ್ಕಪಕ್ಕದ ಮನೆಯವರು ಹೇಳಿದ್ದಾರೆ.

ಅವಳನ್ನು ವಿಚಾರಣೆಗೆ ಕರೆದೊಯ್ದ ಪೊಲೀಸರು ಯಾವುದೇ ಚಾರ್ಜ್ ಅವಳ ಮೇಲೆ ವಿಧಿಸದೆ ವಾಪಸ್ಸು ಕಳಿಸಿದ್ದಾರೆ.

ತನ್ನ ಮತ್ತು ಸೋಫಿಯಾಳ ಸಂಬಂಧ ಮುರಿದುಬಿದ್ದ ಮೇಲೆ ಟೋನಿ, ‘ಅವಳೊಂದಿಗೆ ಬದುಕುವುದು ಸಾಧ್ಯವೇ ಇಲ್ಲ. ದಂಪತಿಯಾಗಿ ನಮ್ಮ ಸಂಬಂಧ ಮುಗಿದುಹೋಗಿದೆ,’ ಎಂದು ಪತ್ರಿಕೆಯೊಂದಕ್ಕೆ ತಿಳಿಸಿದ್ದಾನೆ.

‘ಅವಳಿಗೋಸ್ಕರ ನಾನು ಲೋರ್ನಾ ಮತ್ತು ಎರಡು ಮಕ್ಕಳನ್ನು ತ್ಯಜಿಸಿದೆ. ಸೋಫಿಯಾಳನ್ನು ಸಂತೋಷವಾಗಿಡಲು ಮತ್ತು ನಮ್ಮ ರಿಲೇಶನ್ ಶಿಪ್ ಮುಂದುವರಿಸಿಕೊಂಡು ಹೋಗಲು ನಾನು ಶಕ್ತಿಮೀರಿ ಪ್ರಯತ್ನಿಸಿದೆ. ನನ್ನ ಪ್ರಯತ್ನಗಳೆಲ್ಲ ವಿಫಲಗೊಂಡವು. ನಾನು ಮಾಧ್ಯಮದಲ್ಲಿ ಕೆಲಸ ಮಾಡುವುದರಿಂದ ಟಿವಿ ಮತ್ತು ಇಂಟರ್ನೆಟ್ ಗಮನವೆಲ್ಲ ನನ್ನ ಮೇಲಿತ್ತು,’ ಎಂದು ಟೋನಿ ಹೇಳಿದ್ದಾನೆ.

ಕಳೆದ ಶನಿವಾರ ಟೋನಿಯ 30ನೇ ವರ್ಷದ ಬರ್ತ್ ಡೇ ಸಮಾರಂಭದಲ್ಲಿ ಅವರಿಬ್ಬರ ನಡುವೆ ಕಲಹ ಶುರುವಿಟ್ಟುಕೊಂಡಿತ್ತಂತೆ. ಅದಾದ ಬಳಿಕ ಪ್ರತಿದಿನ ಅವರಿಬ್ಬರು ಜಗಳವಾಡಿದ್ದಾರೆ.

ಸೋಫಿಯಾ ಜೊತೆಗಿನ ಸಂಬಂಧವನ್ನು ಟೋನಿ ಒಂದು ಪ್ರಮಾದವೆಂದು ಬಣ್ಣಸಿರುವನಾದರೂ ಅವಳ ಖರ್ಚುವೆಚ್ಚಗಳನ್ನು ನೋಡಿಕೊಳ್ಳುತ್ತಿರುವುದಾಗಿ ಹೇಳಿದ್ದಾನೆ. ಬ್ರೇಕ್-ಅಪ್ ನಂತರ ಕೂಡ ಅವಳ ತಾಯಿಗೆ ಟೆಕ್ಸ್ಟ್ ಮೆಸೇಜುಗಳನ್ನು ಕಳಿಸುತ್ತಿರುವುದಾಗಿ ಪತ್ರಿಕೆಗೆ ಹೇಳಿದ್ದಾನೆ.

ಗೃಹ ಇಲಾಖೆ ಸಂಬಂಧಪಟ್ಟ ಇಲಾಖೆಗಳನ್ನು ಸಂಪರ್ಕಿಸಿ ಸೋಫಿಯಾಗೆ ಒಂದು ಹೊಸ ಮನೆಯ ವ್ಯವಸ್ಥೆ ಮಾಡುವುದಾಗಿ ಟೋನಿ ಹೇಳಿದ್ದಾನೆ. ಅವಳೊಂದಿಗೆ ರಿಲೇಶನ್ ಶಿಪ್ ನಲ್ಲಿದ್ದಾಗ ಲೋರ್ನಾ ಜೊತೆಗಿನ ಸಂಬಂಧ ಮುಗಿದು ಹೋದ ಕತೆಯೆಂದು ಅವನು ಹೇಳಿದ್ದ. ಹಾಗಾಗಿ ಅವಳಲ್ಲಿಗೆ ವಾಪಸ್ಸು ಹೋಗುವಂತೆಯೂ ಇಲ್ಲ.

ತ್ರಿಶಂಕು ಸ್ಥಿತಿ ಅಂದರೆ ಇದೇ ಇರಬೇಕು ಮಾರಾಯ್ರೇ!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada