ಯುಎಸ್: ರಸ್ತೆಯಲ್ಲಿ ಮಳೆಯಂತೆ ಸುರಿಯಲಾರಂಭಿಸಿದ ಹಣವನ್ನು ದಾರಿಹೋಕರು ಹುಚ್ಚರಂತೆ ಬಾಚಿಕೊಂಡರು!!
ಡಾಲರ್ ನೋಟುಗಳು ಹಾರುತ್ತಾ ನೆಲಕ್ಕೆ ಬೀಳುತ್ತಿರುವುದನ್ನು ಕಂಡ ಜನ ನಾ ಮುಂದು ತಾ ಮುಂದು ಅಂತ ಕೈಗೆ ಸಿಕ್ಕಷ್ಟು ಬಾಚಿಕೊಳ್ಳಲಾರಂಭಿಸಿದ್ದಾರೆ. ಅವು 1 ಮತ್ತು 20 ಡಾಲರ್ ಮುಖಬೆಲೆಯ ನೋಟುಗಳು.
ನಡುರಸ್ತೆಯಲ್ಲಿ ಇದ್ದಕ್ಕಿದ್ದಂತೆ ಕರೆನ್ಸಿ ನೋಟುಗಳು ಹಾರುತ್ತಾ ಬಂದು ನಿಮ್ಮ ಮುಂದೆ ಬೀಳಲಾರಂಭಿಸಿದರೆ ಏನು ಮಾಡುತ್ತೀರಿ? ಉಳಿದವರಂತೆ ನಾವು ಸಹ ಕೈಗೆ ಸಿಕ್ಕಷ್ಟನ್ನು ಬಾಚಿಕೊಳ್ಳುತ್ತೇವೆ ತಾನೆ? ಶುಕ್ರವಾರದಂದು ಅಮೆರಿಕಾದ ದಕ್ಷಿಣ ಕ್ಯಾಲಿಫೋರ್ನಿಯಾನಲ್ಲೂ ಅದೇ ಆಗಿದ್ದು. ನಮಗೆ ಲಭ್ಯವಾಗಿರುವ ಮೂಲಗಳ ಪ್ರಕಾರ ಈ ಘಟನೆಯು ಶುಕ್ರವಾರ ಬೆಳಗ್ಗೆ 9:15 ಕ್ಕೆ (ಅಲ್ಲಿನ ಕಾಲಮಾನ) ಸ್ಯಾನ್ ಡೀಗೋನಿಂದ ಭದ್ರತಾ ಸಿಬ್ಬಂದಿಯೊಂದಿಗೆ ಫೆಡರಲ್ ಡೆಪಾಸಿಟ್ ಇನ್ಶೂರನ್ಸ್ ಕಾರ್ಪೋರೇಶನ್ ಕಚೇರಿ ಕಡೆ ಚೀಲಗಳಲ್ಲಿ ಹಣ ತುಂಬಿಕೊಂಡು ಟ್ರಕ್ಕೊಂದು ಹೋಗುತ್ತಿದ್ದಾಗ ಸಂಭವಿಸಿದೆ. ಇದ್ದಕ್ಕಿದ್ದಂತೆ ಟ್ರಕ್ಕಿನ ಒಂದು ಡೋರು ತೆರೆದುಕೊಂಡು ಹಣದ ಚೀಲಗಳು ರಸ್ತೆಗೆ ಬಿದ್ದ ಬಳಿಕ ಅವುಗಳಲ್ಲಿದ್ದ ಗರಿಗರಿ ನೋಟುಗಳು ಹಾರುತ್ತಾ ಬಂದು ದಕ್ಷಿಣ ಕ್ಯಾಲಿಫೋರ್ನಿಯಾದ ಕಾರ್ಲ್ಸ್ಡ ಪ್ರಮುಖ ರಸ್ತೆಯಲ್ಲಿ ಬೀಳಲಾರಂಭಿಸಿವೆ.
ಡಾಲರ್ ನೋಟುಗಳು ಹಾರುತ್ತಾ ನೆಲಕ್ಕೆ ಬೀಳುತ್ತಿರುವುದನ್ನು ಕಂಡ ಜನ ನಾ ಮುಂದು ತಾ ಮುಂದು ಅಂತ ಕೈಗೆ ಸಿಕ್ಕಷ್ಟು ಬಾಚಿಕೊಳ್ಳಲಾರಂಭಿಸಿದ್ದಾರೆ. ಅವು 1 ಮತ್ತು 20 ಡಾಲರ್ ಮುಖಬೆಲೆಯ ನೋಟುಗಳು.
ವೃತ್ತಿಯಲ್ಲಿ ಬಾಡಿ ಬಿಲ್ಡರ್ ಆಗಿರುವ ಡೆಮಿ ಬಾಗ್ಬಿ ಹೆಸರಿನ ಮಹಿಳೆ, ಜನ ರಸ್ತೆಯಲ್ಲಿ ಹುಚ್ಚರ ಹಾಗೆ ಹಣ ಹೆಕ್ಕಿಕೊಳ್ಳುತ್ತಿರುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ, ‘ಇಂಥ ವಿಲಕ್ಷಣ ದೃಶ್ಯವನ್ನು ನಾನ್ಯಾವತ್ತೂ ನೋಡಿರಲಿಲ್ಲ. ಫ್ರೀವೇ ರಸ್ತೆ ಮೇಲೆ ಹೋಗುತ್ತಿದ್ದವರೆಲ್ಲ ಪುಕ್ಕಟೆಯಾಗಿ ಸಿಗುತ್ತಿದ್ದ ಹಣವನ್ನು ಬಾಚಿಕೊಳ್ಳುತ್ತಿದ್ದರು,’ ಅಂತ ಬರೆದುಕೊಂಡಿದ್ದಾರೆ.
View this post on Instagram
ಆದರೆ ಸಂಬಂಧಪಟ್ಟ ಅಧಿಕಾರಿಗಳು ಹಣವನ್ನು ಹಿಂತಿರುಗಿಸುವಂತೆ ಜನರನ್ನು ಆಗ್ರಹಿಸಿದ್ದಾರೆ. ಎಷ್ಟು ಹಣ ಕಳೆದುಹೋಗಿದೆ ಎನ್ನುವುದನ್ನು ಅವರು ತಿಳಿಸಿಲ್ಲವಾದರೂ, ಕೆಲ ಜನ ತಾವು ಹೆಕ್ಕಿಕೊಂಡ ಹಣವನ್ನು ವಾಪಸ್ಸು ನೀಡಿದ್ದಾರೆ. ಕೆಲವರು ಕಂತೆ ಕಂತೆಗಳಲ್ಲಿ ಹಣ ವಾಪಸ್ಸು ನೀಡುತ್ತಿದ್ದಾರೆ, ಜನರಿಗೆ ದೊಡ್ಡ ಪ್ರಮಾಣದಲ್ಲಿ ಹಣ ಸಿಕ್ಕಿದೆ, ಎಂದು ಕ್ಯಾಲಿಫೋರ್ನಿಯಾ ಹೈವೇ ಪೆಟ್ರೊಲ್ನ ಸಾರ್ಜೆಂಟ್ ಕರ್ಟಿಸ್ ಮಾರ್ಟಿನ್ ಹೇಳಿದ್ದಾರೆ.
ಘಟನೆ ಬಗ್ಗೆ ವಿವರಣೆ ನೀಡಿದ ಕರ್ಟಿಸ್, ಟ್ರಕ್ಕಿನ ಒಂದು ಡೋರ್ ತೆರೆದುಕೊಂಡಿದ್ದರಿಂದ ಹಣ ತುಂಬಿದ್ದ ಬ್ಯಾಗ್ಗಳು ರೋಡಿಗೆ ಬಿದ್ದು ಹಣ ಹಾರಾಡಿದೆ, ಎಂದರು.
ಸ್ಥಳದಲ್ಲಿ ಹಣ ಬಾಚಿಕೊಳ್ಳುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಯಾರಾದರೂ ಹಣ ತೆಗೆದುಕೊಂಡಿದ್ದು ಗೊತ್ತಾದರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಅಂತ ಮಾರ್ಟಿನ್ ಎಚ್ಚರಿಸಿದ್ದಾರೆ.
ದಾರಿಹೋಕರ ವಿಡಿಯೋಗಳನ್ನು ಶೂಟ್ ಮಾಡಿಕೊಂಡಿರುವುದು ಉಲ್ಲೇಖಿಸಿದ ಸಾರ್ಜೆಂಟ್ ಮಾರ್ಟನ್ ಸಿ ಎಚ್ ಪಿ ಮತ್ತು ಎಫ್ ಬಿ ಐ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಘಟನೆ ನಡೆದ ನಂತರ ಎರಡು ಗಂಟೆಗಳ ಕಾಲ ಫ್ರೀವೇ ರಸ್ತೆಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.