
ಇರಾನ್, ನವೆಂಬರ್ 03: ಅರಬ್ಬಿ ಸಮುದ್ರದಲ್ಲಿ ಸೊಮಾಲಿ ಕಡಲ್ಗಳ್ಳರ ಹಿಡಿತಕ್ಕೆ ಸಿಲುಕಿದ್ದ ಇರಾನ್‌ನ ಮೀನುಗಾರಿಕಾ ಹಡಗನ್ನು ಭಾರತೀಯ ನೌಕಾಪಡೆ ಯಶಸ್ವಿಯಾಗಿ ರಕ್ಷಿಸಿದೆ. ಸತತ 48 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ನೌಕಾಪಡೆ, ಹಡಗಿನಲ್ಲಿದ್ದ 20 ಸಿಬ್ಬಂದಿಯನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿದೆ. ಮುಂಬೈನಿಂದ ಸುಮಾರು 3,000 ಕಿಲೋಮೀಟರ್ ದೂರದಲ್ಲಿ ನಡೆದ ಈ ಕಾರ್ಯಾಚರಣೆ, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ಕಡಲ ಭದ್ರತಾ ಸಾಮರ್ಥ್ಯವನ್ನು ಮತ್ತೊಮ್ಮೆ ಪ್ರದರ್ಶಿಸಿದೆ.
‘ಅಜಿನಿ’ ಎಂದು ಗುರುತಿಸಲಾದ ಇರಾನ್‌ನ ಮೀನುಗಾರಿಕಾ ಹಡಗನ್ನು ಅಕ್ಟೋಬರ್ 29ರಂದು ಸೊಮಾಲಿಯಾದ ಈಶಾನ್ಯ ಕರಾವಳಿಯ ಬಳಿ ಕಡಲ್ಗಳ್ಳರು ವಶಪಡಿಸಿಕೊಂಡಿದ್ದರು. ಬಂದರ್ ಬೇಲಾ ಮತ್ತು ಹಫುನ್ ಕರಾವಳಿ ಪಟ್ಟಣಗಳ ನಡುವಿನ ಸಮುದ್ರ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ಹಡಗಿನಲ್ಲಿ 20 ಮಂದಿ ಸಿಬ್ಬಂದಿ ಇದ್ದರು. ಶಸ್ತ್ರಸಜ್ಜಿತ ಕಡಲ್ಗಳ್ಳರು ಹಡಗನ್ನು ತಮ್ಮ ವಶಕ್ಕೆ ಪಡೆದಿರುವ ಮಾಹಿತಿ ದೊರೆತ ತಕ್ಷಣ ಭಾರತೀಯ ನೌಕಾಪಡೆ ರಕ್ಷಣಾ ಕಾರ್ಯಾಚರಣೆಗೆ ಮುಂದಾಯಿತು. ನವೆಂಬರ್ 2ರಂದು ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿತು.
ಈ ಕಾರ್ಯಾಚರಣೆಯಲ್ಲಿ ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್ಎಸ್ ಕೋಲ್ಕತ್ತಾ ಪ್ರಮುಖ ಪಾತ್ರ ವಹಿಸಿತು. ಸಮುದ್ರದಲ್ಲಿ ಹಡಗಿನ ಚಲನವಲನವನ್ನು ಪತ್ತೆಹಚ್ಚಿ, ಅದರ ಬಳಿ ತೆರಳಿ ಕಡಲ್ಗಳ್ಳರನ್ನು ಎದುರಿಸಿ ಸಿಬ್ಬಂದಿಯನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲಾಯಿತು. ಭಾರತೀಯ ವಾಯುಪಡೆಯೂ ಕಾರ್ಯಾಚರಣೆಗೆ ಅಗತ್ಯ ಬೆಂಬಲ ನೀಡಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ. ಶಸ್ತ್ರಸಜ್ಜಿತ ಕಡಲ್ಗಳ್ಳರಿಂದ ಹಡಗು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿರುವುದು ನೌಕಾಪಡೆಯ ಉನ್ನತ ಕಾರ್ಯಾಚರಣಾ ಸನ್ನದ್ಧತೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಅಮೆರಿಕ ಷರತ್ತು ಒಪ್ಪಿದರೆ 7 ದಿನಗಳಲ್ಲಿ ಹಾರ್ಮುಜ್ ಜಲಸಂಧಿ ಮುಕ್ತ: ಇರಾನ್‌ನಿಂದ ಹೊಸ ಪ್ರಸ್ತಾವನೆ
ಸಮುದ್ರದಲ್ಲಿ ಮೀನುಗಾರಿಕಾ ಹಡಗುಗಳನ್ನು ಅಪಹರಿಸುವುದರ ಹಿಂದೆ ಕೇವಲ ಸಿಬ್ಬಂದಿಯನ್ನು ಒತ್ತೆಯಾಳಾಗಿ ಇಟ್ಟು ಹಣ ಪಡೆಯುವ ಉದ್ದೇಶ ಮಾತ್ರ ಇರುವುದಿಲ್ಲ. ಇಂತಹ ಹಡಗುಗಳನ್ನು ಕಡಲ್ಗಳ್ಳರು ದೊಡ್ಡ ಸರಕು ಹಡಗುಗಳ ಮೇಲೆ ದಾಳಿ ನಡೆಸಲು ತಾತ್ಕಾಲಿಕ ನೆಲೆಯಾಗಿ ಬಳಸುವ ಸಾಧ್ಯತೆಯೂ ಇರುತ್ತದೆ.
ಈ ಪ್ರಕರಣದಲ್ಲೂ ‘ಅಜಿನಿ’ ಹಡಗು ಪ್ರಮುಖ ವಾಣಿಜ್ಯ ಹಡಗುಗಳ ಸಂಚಾರ ಮಾರ್ಗದತ್ತ ಸಾಗುತ್ತಿರುವುದನ್ನು ಕಡಲ ಭದ್ರತಾ ಸಂಸ್ಥೆಗಳು ಗಮನಿಸಿದ್ದವು. ಅದನ್ನು ‘ಮದರ್‌ಶಿಪ್’ ಆಗಿ ಬಳಸಿಕೊಂಡು ಇತರ ಹಡಗುಗಳ ಮೇಲೆ ದಾಳಿ ನಡೆಸುವ ಆತಂಕ ವ್ಯಕ್ತವಾಗಿತ್ತು. ಹೀಗಾಗಿ ಭಾರತೀಯ ನೌಕಾಪಡೆಯ ತ್ವರಿತ ಕಾರ್ಯಾಚರಣೆ ಕೇವಲ 20 ಮಂದಿಯ ರಕ್ಷಣೆಗೆ ಮಾತ್ರವಲ್ಲ, ಸಮುದ್ರ ಮಾರ್ಗಗಳ ಭದ್ರತೆಯ ದೃಷ್ಟಿಯಿಂದಲೂ ಮಹತ್ವ ಪಡೆದಿದೆ.
ಸೊಮಾಲಿಯಾ ಕರಾವಳಿ ಪ್ರದೇಶದಲ್ಲಿ ಕಡಲ್ಗಳ್ಳರ ಚಟುವಟಿಕೆ ಹಲವು ವರ್ಷಗಳಿಂದ ಅಂತಾರಾಷ್ಟ್ರೀಯ ಸಮುದ್ರ ಭದ್ರತೆಗೆ ಸವಾಲಾಗಿದೆ. 2008ರಿಂದ ಭಾರತೀಯ ನೌಕಾಪಡೆ ಗಲ್ಫ್ ಆಫ್ ಏಡನ್ ಮತ್ತು ಪೂರ್ವ ಆಫ್ರಿಕಾ ಕರಾವಳಿಯಲ್ಲಿ ಕಡಲ್ಗಳ್ಳತನ ತಡೆಗಟ್ಟಲು ನಿರಂತರ ಗಸ್ತು ಕಾರ್ಯಾಚರಣೆ ನಡೆಸುತ್ತಿದೆ.
ಇತ್ತೀಚಿನ ತಿಂಗಳುಗಳಲ್ಲಿ ಸೊಮಾಲಿ ಕಡಲ್ಗಳ್ಳರ ದಾಳಿಗಳು ಮತ್ತೆ ಹೆಚ್ಚುತ್ತಿರುವ ಬಗ್ಗೆ ವರದಿಗಳು ಬಂದಿವೆ. ಏಪ್ರಿಲ್‌ನಿಂದ ಹಲವು ವಾಣಿಜ್ಯ ಹಡಗುಗಳು ಅಪಹರಣಕ್ಕೆ ಒಳಗಾಗಿರುವುದು ಆತಂಕ ಹೆಚ್ಚಿಸಿದೆ. ಕೆಂಪು ಸಮುದ್ರ, ಗಲ್ಫ್ ಆಫ್ ಏಡನ್ ಮತ್ತು ಅರೇಬಿಯನ್ ಸಮುದ್ರದ ವ್ಯಾಪಾರ ಮಾರ್ಗಗಳಲ್ಲಿ ಈಗಾಗಲೇ ಹಲವು ಭದ್ರತಾ ಸವಾಲುಗಳಿರುವುದರಿಂದ ಈ ಬೆಳವಣಿಗೆ ಮಹತ್ವ ಪಡೆದಿದೆ.
ಇದು ಕಡಲ್ಗಳ್ಳರಿಂದ ವಿದೇಶಿ ಹಡಗುಗಳನ್ನು ಭಾರತೀಯ ನೌಕಾಪಡೆ ರಕ್ಷಿಸಿರುವ ಮೊದಲ ಘಟನೆಯಲ್ಲ. 2024ರ ಜನವರಿಯಲ್ಲಿ ಸೊಮಾಲಿಯಾ ಕರಾವಳಿಯ ಬಳಿ ಅಪಹರಣಕ್ಕೊಳಗಾಗಿದ್ದ ಇರಾನ್‌ನ ‘ಇಮಾನ್’ ಮೀನುಗಾರಿಕಾ ಹಡಗನ್ನು ಐಎನ್ಎಸ್ ಸುಮಿತ್ರಾ ರಕ್ಷಿಸಿತ್ತು. ಅದರಲ್ಲಿದ್ದ 17 ಇರಾನ್ ಸಿಬ್ಬಂದಿಯನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲಾಗಿತ್ತು. ಅದೇ ಅವಧಿಯಲ್ಲಿ ಪಾಕಿಸ್ತಾನದ ಸಿಬ್ಬಂದಿ ಇದ್ದ ಮತ್ತೊಂದು ಮೀನುಗಾರಿಕಾ ಹಡಗನ್ನೂ ನೌಕಾಪಡೆ ಕಡಲ್ಗಳ್ಳರಿಂದ ಬಿಡಿಸಿತ್ತು. 2024ರ ಮಾರ್ಚ್‌ನಲ್ಲಿ ‘ಎಂವಿ ರೂಯೆನ್’ ಎಂಬ ಕಡಲ್ಗಳ್ಳರ ಹಡಗನ್ನು ಐಎನ್ಎಸ್ ಕೋಲ್ಕತ್ತಾ ನೇತೃತ್ವದಲ್ಲಿ ಭಾರತೀಯ ನೌಕಾಪಡೆ ತಡೆದು, 35 ಕಡಲ್ಗಳ್ಳರನ್ನು ಶರಣಾಗುವಂತೆ ಮಾಡಿತ್ತು. ಆ ಕಾರ್ಯಾಚರಣೆಯಲ್ಲೂ ಭಾರತೀಯ ವಾಯುಪಡೆಯ ನೆರವು ಪಡೆಯಲಾಗಿತ್ತು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಭಾರತೀಯ ನೌಕಾಪಡೆಯ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ. “ಮುಂಬೈನಿಂದ 3,000 ಕಿ.ಮೀ.ಗೂ ಹೆಚ್ಚು ದೂರದಲ್ಲಿರುವ ಅರೇಬಿಯನ್ ಸಮುದ್ರದಲ್ಲಿ ಕಡಲ್ಗಳ್ಳರ ವಶದಲ್ಲಿದ್ದ ಅಜಿನಿ ಹಡಗಿನ 20 ಸಿಬ್ಬಂದಿಯನ್ನು ರಕ್ಷಿಸಲು ನವೆಂಬರ್ 2ರಂದು 48 ಗಂಟೆಗಳ ಕಾಲ ಸೂಕ್ಷ್ಮವಾಗಿ ಸಂಯೋಜಿಸಿದ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ” ಎಂದು ಅವರು ತಿಳಿಸಿದ್ದಾರೆ.
ಭಾರತೀಯ ವಾಯುಪಡೆಯ ಸಮಯೋಚಿತ ನೆರವನ್ನೂ ಅವರು ಶ್ಲಾಘಿಸಿದ್ದಾರೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಜೀವಗಳನ್ನು ರಕ್ಷಿಸುವುದು, ಕಡಲ ಭದ್ರತೆಯನ್ನು ಕಾಪಾಡುವುದು ಮತ್ತು ಸ್ಥಿರತೆಯನ್ನು ಖಚಿತಪಡಿಸುವುದು ಭಾರತದ ಬದ್ಧತೆ ಎಂದು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ