
ನವದೆಹಲಿ, ಜುಲೈ 24: ರಷ್ಯಾ ಮತ್ತು ಉಕ್ರೇನ್ (Russia-Ukraine War) ನಡುವೆ ನಿರಂತರವಾಗಿ ನಡೆಯುತ್ತಿರುವ ಸಂಘರ್ಷದ ನಡುವೆಯೇ ರಷ್ಯಾಕ್ಕೆ ಹತ್ತಿರವಿರುವ ಕಪ್ಪು ಸಮುದ್ರದ ಜಲಪ್ರದೇಶದಲ್ಲಿ ವಾಣಿಜ್ಯ ಹಡಗೊಂದರ ಮೇಲೆ ನಡೆದ ದಾಳಿಯಲ್ಲಿ ಭಾರತೀಯ ನಾವಿಕರೊಬ್ಬರು ದುರಂತವಾಗಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ಹಡಗಿನಲ್ಲಿದ್ದ ಉಳಿದ ಇಬ್ಬರು ಭಾರತೀಯ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (MEA) ದೃಢಪಡಿಸಿದೆ. ಹಾಗೇ, ಭಾರತೀಯ ನಾವಿಕನ ಸಾವಿಗೆ ತೀವ್ರ ಖಂಡನೆ ವ್ಯಕ್ತಪಡಿಸಿದೆ.
ಮಾರ್ಷಲ್ ಐಲ್ಯಾಂಡ್ಸ್‌ನ ಧ್ವಜ ಹೊಂದಿದ್ದ ‘ಎಮ್‌ವಿ ಒಮೊರ್ಫಿ’ ಎಂಬ ವಾಣಿಜ್ಯ ಹಡಗು ರಷ್ಯಾದ ವ್ಯಾಪ್ತಿಯಲ್ಲಿ ಪ್ರಯಾಣಿಸುತ್ತಿದ್ದಾಗ ಈ ದಾಳಿ ಸಂಭವಿಸಿದೆ. ಹಡಗಿನಲ್ಲಿ ಒಟ್ಟು ಸಿಬ್ಬಂದಿಯ ಪೈಕಿ ಮೂವರು ಭಾರತೀಯರಿದ್ದರು. ಈ ದಾಳಿಯಲ್ಲಿ ಒಬ್ಬ ಭಾರತೀಯ ನಾವಿಕ ಪ್ರಾಣ ಕಳೆದುಕೊಂಡಿದ್ದು, ಉಳಿದ ಇಬ್ಬರು ಭಾರತೀಯ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದು ಸುರಕ್ಷಿತವಾಗಿದ್ದಾರೆ.
ಇದನ್ನೂ ಓದಿ: ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗುತ್ತಿದೆ ‘ಮಾಲ್ವಾಣ್’ ಯುದ್ಧನೌಕೆ: ಸ್ವದೇಶಿ ನಿರ್ಮಿತ ಹಡಗಿನ ವಿಶೇಷಗಳೇನು? ಇಲ್ಲಿದೆ ನೋಡಿ
ರಷ್ಯಾದ ಸೆಂಟ್ ಪೀಟರ್ಸ್‌ಬರ್ಗ್ ಬಂದರಿನಿಂದ ಕೊನೆಯದಾಗಿ ಪ್ರಯಾಣ ಬೆಳೆಸಿದ್ದ ಈ ಹಡಗಿನಲ್ಲಿ ಘಟನೆ ಸಂಭವಿಸಿದಾಗ ಮೂವರು ಭಾರತೀಯರು ಸೇರಿದಂತೆ ಒಟ್ಟು 10 ಮಂದಿ ಸಿಬ್ಬಂದಿ ಇದ್ದರು. ಮೃತರ ಗುರುತನ್ನು ವಿದೇಶಾಂಗ ಸಚಿವಾಲಯ ಇನ್ನೂ ಬಹಿರಂಗಪಡಿಸಿಲ್ಲವಾದರೂ, ಅವರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದೆ.
ರಷ್ಯಾ ಸರ್ಕಾರದ ಸ್ಪಂದನೆ:
ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಮೃತ ನಾವಿಕನ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಕಾನೂನು ಹಾಗೂ ರಾಜತಾಂತ್ರಿಕ ನೆರವು ನೀಡಲು ತಕ್ಷಣದ ಕ್ರಮಗಳನ್ನು ಕೈಗೊಂಡಿದೆ.
ಇದನ್ನೂ ಓದಿ: ನಿಶ್ಚಿತಾರ್ಥ ಮುಗಿದು ವಾರವಷ್ಟೇ ಕಳೆದಿತ್ತು, ರಷ್ಯಾದ ಕ್ಷಿಪಣಿ ದಾಳಿಗೆ ಉಕ್ರೇನ್ ಕರಾವಳಿಯಲ್ಲಿ ಕೇರಳದ ನಾವಿಕ ಬಲಿ
ದಾಳಿಯನ್ನು ಖಂಡಿಸಿದ ಭಾರತ:
ವಾಣಿಜ್ಯ ಹಡಗುಗಳು ಮತ್ತು ನಿರಪರಾಧಿ ನಾಗರಿಕ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ಇಂತಹ ದಾಳಿಗಳನ್ನು ಭಾರತ ಸರ್ಕಾರವು ತೀವ್ರವಾಗಿ ಖಂಡಿಸಿದೆ. ಜಾಗತಿಕ ವಾಣಿಜ್ಯ ಮತ್ತು ಸಮುದ್ರ ಸಂಚಾರದ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹ ಕೃತ್ಯಗಳು ಕಳವಳಕಾರಿಯಾಗಿದ್ದು, ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳು ಹಾಗೂ ಸಿಬ್ಬಂದಿಯ ಸುರಕ್ಷತೆಯನ್ನು ಎಲ್ಲಾ ಕಡೆಯವರೂ ಕಟ್ಟುನಿಟ್ಟಾಗಿ ಕಾಯ್ದುಕೊಳ್ಳಬೇಕು ಎಂದು ಭಾರತ ಒತ್ತಾಯಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ