
ನ್ಯೂಯಾರ್ಕ್, ಸೆಪ್ಟೆಂಬರ್ 22: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ಭಾರತಕ್ಕೆ ಶಾಶ್ವತ ಸದಸ್ಯತ್ವ ನೀಡಬೇಕೆಂಬ ಭಾರತದ ಬಹುಕಾಲದ ಬೇಡಿಕೆಗೆ ಮಧ್ಯ ಯುರೋಪ್‌ನ ಪ್ರಮುಖ ನಾಲ್ಕು ದೇಶಗಳು ಮುಕ್ತ ಬೆಂಬಲ ವ್ಯಕ್ತಪಡಿಸಿವೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಂಗವಾಗಿ ನಡೆದ ಮೊದಲ ‘ವಿ4-ಇಂಡಿಯಾ’ ಸಭೆಯಲ್ಲಿ ಪೋಲೆಂಡ್, ಹಂಗೇರಿ, ಸ್ಲೋವಾಕಿಯಾ ಮತ್ತು ಜೆಕ್ ಗಣರಾಜ್ಯಗಳು ಭಾರತವನ್ನು ಇಂಡೋ-ಪೆಸಿಫಿಕ್ ವಲಯದ ಮುಂಬರುವ ಸೂಪರ್ ಪವರ್ ಎಂದು ಬಣ್ಣಿಸಿದ್ದು, ಇಂದಿನ ಜಾಗತಿಕ ವಾಸ್ತವಗಳಿಗೆ ತಕ್ಕಂತೆ ಭದ್ರತಾ ಮಂಡಳಿಯನ್ನು ವಿಸ್ತರಿಸಿ ಭಾರತಕ್ಕೆ ಕಾಯಂ ಸ್ಥಾನ ನೀಡಲೇಬೇಕು ಎಂದು ಒಕ್ಕೊರಲಿನಿಂದ ಪ್ರತಿಪಾದಿಸಿವೆ.
ವಿಸೆಗ್ರಾಡ್ ಒಕ್ಕೂಟದ ಬೆಂಬಲ: ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ನಡೆದ ಸಭೆಯ ಬಳಿಕ ಮಾತನಾಡಿದ ಸ್ಲೋವಾಕಿಯಾ ವಿದೇಶಾಂಗ ಸಚಿವ ಜುರಾಜ್ ಬ್ಲಾನರ್, “ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯನಾಗಬೇಕು ಎಂಬುದನ್ನು ವಿ4 ರಾಷ್ಟ್ರಗಳಾದ ನಾವೆಲ್ಲರೂ ಒಪ್ಪುತ್ತೇವೆ” ಎಂದು ಅಧಿಕೃತವಾಗಿ ಘೋಷಿಸಿದರು.
ಭಾರತ-ವಿ4 ಹೊಸ ಕಾರ್ಯತಂತ್ರ: ಈ ಸಭೆಯನ್ನು ಜೈಶಂಕರ್ ಅವರು “ಹೊಸ ಐತಿಹಾಸಿಕ ಸಂದರ್ಭ” ಎಂದು ಬಣ್ಣಿಸಿದ್ದಾರೆ. ಯುಎನ್‌ಎಸ್‌ಸಿ ಸುಧಾರಣೆಯಷ್ಟೇ ಅಲ್ಲದೆ, ವಾರ್ಷಿಕ ವಿದೇಶಾಂಗ ಸಚಿವರ ಸಮಾವೇಶ, ವಾರ್ಷಿಕ ವ್ಯಾಪಾರ ವೇದಿಕೆ, ಬಾಹ್ಯಾಕಾಶ, ರಕ್ಷಣೆ ಮತ್ತು ತಂತ್ರಜ್ಞಾನ ವಲಯಗಳಲ್ಲಿ ಸಹಕಾರ ಹೆಚ್ಚಿಸಲು ಎರಡೂ ಕಡೆಯವರು ಒಪ್ಪಂದ ಮಾಡಿಕೊಂಡಿದ್ದಾರೆ.
ಮತ್ತಷ್ಟು ಓದಿ: ಯುಎನ್‌ಜಿಎ ಶೃಂಗದಲ್ಲಿ ಜೈಶಂಕರ್ ಗುಡುಗು: ತೀವ್ರ ಒತ್ತಡದಲ್ಲಿ ಜಾಗತಿಕ ವ್ಯವಸ್ಥೆ, ‘4-ಎಫ್ ಬಿಕ್ಕಟ್ಟು’ ಪರಿಹಾರಕ್ಕೆ ಬಲವಾದ ಬಹುಪಕ್ಷೀಯತೆಯೇ ಮದ್ದು
ಭಾರತದ ವಾದವೇನು?: ವಿಶ್ವಸಂಸ್ಥೆ ಸ್ಥಾಪನೆಯಾದ 1945 ರ ಪರಿಸ್ಥಿತಿಗೂ ಇಂದಿನ ಜಾಗತಿಕ ಸ್ಥಿತಿಗೂ ಭಾರಿ ಅಂತರವಿದೆ. ಆಗ ವಸಾಹತುಶಾಹಿಗೆ ಒಳಪಟ್ಟಿದ್ದ ಭಾರತವೀಗ ವಿಶ್ವದ ಅತಿ ಹೆಚ್ಚು ಜನಸಂಖ್ಯೆ, ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಮತ್ತು ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಅಗ್ರ ಪಾತ್ರವಹಿಸುತ್ತಿದೆ. ಹೀಗಾಗಿ ಇಂದಿನ ವಾಸ್ತವತೆಯನ್ನು ಪ್ರತಿಬಿಂಬಿಸಲು ಕೌನ್ಸಿಲ್ ಸುಧಾರಣೆ ಅತ್ಯಗತ್ಯ ಎಂಬುದು ಭಾರತದ ಸ್ಪಷ್ಟ ನಿಲುವಾಗಿದೆ.
ಜಿ-4 ಪ್ರಸ್ತಾವನೆ: ಭಾರತವು ಬ್ರೆಜಿಲ್, ಜರ್ಮನಿ ಮತ್ತು ಜಪಾನ್ ಜೊತೆಗೂಡಿ ‘ಜಿ-4’ (G4) ಒಕ್ಕೂಟದ ಭಾಗವಾಗಿದ್ದು, ಭದ್ರತಾ ಮಂಡಳಿಯ ಬಲವನ್ನು ಪ್ರಸ್ತುತ ಇರುವ 15 ರಿಂದ 25 ಅಥವಾ 26 ಕ್ಕೆ ವಿಸ್ತರಿಸುವಂತೆ ಮತ್ತು ಏಷ್ಯಾ ಹಾಗೂ ಆಫ್ರಿಕಾಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವಂತೆ ಪ್ರಸ್ತಾಪಿಸಿದೆ.
ಚೀನಾದ ಅಡ್ಡಗಾಲು: ಭದ್ರತಾ ಮಂಡಳಿಯ ಹಾಲಿ ಕಾಯಂ ಸದಸ್ಯ ರಾಷ್ಟ್ರಗಳಾದ (P5) ಅಮೆರಿಕ, ರಷ್ಯಾ, ಫ್ರಾನ್ಸ್ ಮತ್ತು ಬ್ರಿಟನ್ ದೇಶಗಳು ಭಾರತದ ಕಾಯಂ ಸ್ಥಾನಕ್ಕೆ ಈಗಾಗಲೇ ಬಹಿರಂಗವಾಗಿ ಬೆಂಬಲ ಸೂಚಿಸಿವೆ. ಆದರೆ, ಚೀನಾ ಮಾತ್ರ ಭಾರತದ ಸೇರ್ಪಡೆಗೆ ಸ್ಪಷ್ಟ ಬೆಂಬಲ ನೀಡದೆ ವಿಶಾಲ ಒಮ್ಮತದ ನೆಪವೊಡ್ಡಿ ರಾಜತಾಂತ್ರಿಕವಾಗಿ ತಡೆಗೋಡೆ ನಿರ್ಮಿಸುತ್ತಿದೆ.
ವಿಟೊ ಅಧಿಕಾರದ ಜಟಾಪಟಿ: ಹೊಸದಾಗಿ ಶಾಶ್ವತ ಸದಸ್ಯರಾಗುವ ದೇಶಗಳಿಗೂ ಅಸ್ತಿತ್ವದಲ್ಲಿರುವ ಪಿ5 ರಾಷ್ಟ್ರಗಳಂತೆಯೇ ಸಂಪೂರ್ಣ ವೀಟೋ ಅಧಿಕಾರ ಸಿಗಬೇಕೇ ಎಂಬ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಭಾರತವು “ಎಲ್ಲಾ ಅಥವಾ ಯಾವುದೂ ಇಲ್ಲ” ಎಂಬ ದೃಢ ನಿಲುವು ತಳೆದಿದ್ದು, ಕೆಲವರಿಗೆ ಮಾತ್ರ ವೀಟೋ ಹಕ್ಕು ನೀಡಿ ಉಳಿದವರನ್ನು ಎರಡನೇ ದರ್ಜೆಯ ಶಾಶ್ವತ ಸದಸ್ಯರನ್ನಾಗಿ ಮಾಡುವ ಯಾವುದೇ ತಾರತಮ್ಯದ ವರ್ಗೀಕರಣವನ್ನು ಸ್ಪಷ್ಟವಾಗಿ ತಿರಸ್ಕರಿಸಿದೆ
ಯುಎನ್ ಚಾರ್ಟರ್ ತಿದ್ದುಪಡಿಯ ಸವಾಲು: ಯಾವುದೇ ಸದಸ್ಯ ರಾಷ್ಟ್ರವನ್ನು ಕಾಯಂ ಸದಸ್ಯನನ್ನಾಗಿ ಸೇರಿಸಲು ವಿಶ್ವಸಂಸ್ಥೆಯ ಚಾರ್ಟರ್‌ಗೆ ತಿದ್ದುಪಡಿ ತರಬೇಕಾಗುತ್ತದೆ. ಇದಕ್ಕೆ ಸಾಮಾನ್ಯ ಸಭೆಯ ಮೂರನೇ ಎರಡರಷ್ಟು ಬಹುಮತ ಹಾಗೂ ಹಾಲಿ ಐದೂ ಖಾಯಂ ಸದಸ್ಯರ ಒಪ್ಪಿಗೆ ಅನಿವಾರ್ಯವಾಗಿದೆ. ಇಂತಹ ಸಂಕೀರ್ಣ ಪ್ರಕ್ರಿಯೆಯ ನಡುವೆ ಯುರೋಪಿಯನ್ ಒಕ್ಕೂಟದ ಪ್ರಭಾವಿ ವಿ4 ಬಣ ಭಾರತದ ಪರ ನಿಂತಿರುವುದು ನವದೆಹಲಿಯ ರಾಜತಾಂತ್ರಿಕ ತೂಕವನ್ನು ಜಾಗತಿಕವಾಗಿ ಗಣನೀಯವಾಗಿ ಹೆಚ್ಚಿಸಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ