ಪಾಕಿಸ್ತಾನ ಹೊತ್ತು ತಂದಿಲ್ಲ ಅಮೆರಿಕ ಸಂದೇಶ: ನಖ್ವಿ ಟೆಹ್ರಾನ್ ಪ್ರವಾಸದ ಅಸಲಿ ಸತ್ಯ ಬಿಚ್ಚಿಟ್ಟ ಇರಾನ್

ಪಾಕ್ ಸಚಿವ ಮೊಹ್ಸಿನ್ ನಖ್ವಿ ಭೇಟಿ ಅಮೆರಿಕ ಸಂದೇಶ ತಂದಿಲ್ಲವೆಂದು ಇರಾನ್ ಸ್ಪಷ್ಟಪಡಿಸಿದೆ. ಈ ಭೇಟಿ ಕೇವಲ ಇರಾನ್-ಪಾಕ್ ದ್ವಿಪಕ್ಷೀಯ ಸಂಬಂಧ, ಗಡಿ ಭದ್ರತೆ ಹಾಗೂ ಹಿಂದಿನ ಒಪ್ಪಂದಗಳ ಅನುಷ್ಠಾನಕ್ಕೆ ಸೀಮಿತ. ಯುಎಸ್-ಇರಾನ್ ಮಧ್ಯಸ್ಥಿಕೆಯಲ್ಲಿ ಕತಾರ್ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಟೆಹ್ರಾನ್ ತಿಳಿಸಿದೆ, ಪಾಕಿಸ್ತಾನದ ಪಾತ್ರ ಕೇವಿತ ಪ್ರಾದೇಶಿಕ ಸಹಕಾರಕ್ಕೆ ಸೀಮಿತ ಎಂದಿದೆ.

ಪಾಕಿಸ್ತಾನ ಹೊತ್ತು ತಂದಿಲ್ಲ ಅಮೆರಿಕ ಸಂದೇಶ: ನಖ್ವಿ ಟೆಹ್ರಾನ್ ಪ್ರವಾಸದ ಅಸಲಿ ಸತ್ಯ ಬಿಚ್ಚಿಟ್ಟ ಇರಾನ್
ನಖ್ವಿ
Image Credit source: Reuters

Updated on: Sep 20, 2026 | 11:46 AM

ಟೆಹ್ರಾನ್, ಸೆಪ್ಟೆಂಬರ್ 20: ಪಶ್ಚಿಮ ಏಷ್ಯಾದಲ್ಲಿ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ತೀವ್ರ ಯುದ್ಧದ ಕಾರ್ಮೋಡ ಆವರಿಸಿರುವ ಬೆನ್ನಲ್ಲೇ, ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಸಚಿವ ಮೊಹ್ಸಿನ್ ನಖ್ವಿ ಅವರ ಟೆಹ್ರಾನ್ ಭೇಟಿ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಆದರೆ, ಈ ಭೇಟಿಯ ವೇಳೆ ಪಾಕಿಸ್ತಾನದ ಮೂಲಕ ಅಮೆರಿಕದಿಂದ ಯಾವುದೇ ರಹಸ್ಯ ಸಂದೇಶವಾಗಲಿ ಅಥವಾ ಶಾಂತಿ ಪ್ರಸ್ತಾವನೆಯಾಗಲಿ ರವಾನೆಯಾಗಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ನಖ್ವಿ ಅವರ ಈ ಭೇಟಿಯು ಕೇವಲ ಇರಾನ್ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಬಾಂಧವ್ಯ ಹಾಗೂ ಹಳೆಯ ಒಪ್ಪಂದಗಳ ಅನುಷ್ಠಾನಕ್ಕೆ ಸೀಮಿತವಾಗಿದೆ ಎಂದು ಟೆಹ್ರಾನ್ ತಿಳಿಸಿದೆ.

ಅಮೆರಿಕದ ಸಂದೇಶ ಬಂದಿಲ್ಲ ಎಂದ ಇರಾನ್: ಮೊಹ್ಸಿನ್ ನಖ್ವಿ ಅವರ ಭೇಟಿಯು ಅಮೆರಿಕದ ಯಾವುದೇ ಹೊಸ ಉಪಕ್ರಮವನ್ನು ಹೊತ್ತು ತಂದಿಲ್ಲ. ಎರಡೂ ದೇಶಗಳ ನಾಯಕತ್ವ ಮಟ್ಟದಲ್ಲಿ ಈ ಹಿಂದೆ ಆದ ಒಪ್ಪಂದಗಳು ಮತ್ತು ತಿಳುವಳಿಕೆಗಳ ಪ್ರಗತಿ ಪರಿಶೀಲನೆಗಾಗಿ ಮಾತ್ರ ಈ ಮಾತುಕತೆ ನಡೆದಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.

ಪಾಕ್ ಪಾತ್ರವನ್ನು ಒಪ್ಪಿಕೊಂಡ ಟೆಹ್ರಾನ್: ಪ್ರಾದೇಶಿಕ ಬಿಕ್ಕಟ್ಟಿನ ನಡುವೆಯೂ ಪಾಕಿಸ್ತಾನ-ಇರಾನ್ ದ್ವಿಪಕ್ಷೀಯ ಸಂಬಂಧಗಳು ಬಲಗೊಳ್ಳುತ್ತಿದ್ದು, ಗಡಿ ಭದ್ರತೆ ಹಾಗೂ ರಾಜತಾಂತ್ರಿಕ ಸಂಪರ್ಕಗಳಲ್ಲಿ ಪಾಕಿಸ್ತಾನದ ಪಾತ್ರವನ್ನು ಇರಾನ್ ಮುಕ್ತವಾಗಿ ಸ್ವಾಗತಿಸಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಮತ್ತು ಗೃಹ ಸಚಿವ ಮೊಹ್ಸಿನ್ ನಖ್ವಿ ಒಟ್ಟಾಗಿ ಟೆಹ್ರಾನ್‌ಗೆ ಭೇಟಿ ನೀಡಿ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ಮಹತ್ವದ ಸಮಾಲೋಚನೆ ನಡೆಸಿದ್ದರು. ಹಾರ್ಮುಜ್ ಜಲಸಂಧಿಯ ಸ್ಥಿರತೆ ಮತ್ತು ಸಂಘರ್ಷ ತಡೆಯುವ ಕುರಿತು ಆಗ ರಚನಾತ್ಮಕ ಚರ್ಚೆ ನಡೆದಿತ್ತು.

ಮತ್ತಷ್ಟು ಓದಿ: ಇಸ್ರೇಲ್-ಇರಾನ್ ಸಂಘರ್ಷ: ಬೆಂಗಳೂರಿನಲ್ಲಿ ಗಗನಕ್ಕೇರಲಿದೆ ಅಡುಗೆ ಎಣ್ಣೆ ದರ, ಮೊಟ್ಟೆ ಉದ್ಯಕ್ಕೆ ಭಾರೀ ನಷ್ಟ

ಟ್ರಂಪ್ ಜೊತೆ ಮುನೀರ್ ಮಾತುಕತೆ ಹಿನ್ನೆಲೆ: ಆ ಭೇಟಿಗೂ ಮುನ್ನ ಪಾಕ್ ಸೇನಾ ಮುಖ್ಯಸ್ಥ ಮುನೀರ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತನಾಡಿದ್ದರು. ಆದರೆ, ಇತ್ತೀಚಿನ ನಖ್ವಿ ಅವರ ಪ್ರವಾಸಕ್ಕೂ ಅಮೆರಿಕದ ಪ್ರಸ್ತುತ ನಿಲುವುಗಳಿಗೂ ಯಾವುದೇ ನೇರ ಲಿಂಕ್ ಇಲ್ಲ ಎಂದು ಇರಾನ್ ತಿಳಿಸಿದೆ.

ಪಾಕಿಸ್ತಾನದ ಇಕ್ಕಟ್ಟಿನ ಪರಿಸ್ಥಿತಿ: ಪಾಕಿಸ್ತಾನಕ್ಕೆ ಇರಾನ್ ನೆರೆಹೊರೆಯ ರಾಷ್ಟ್ರವಾಗಿದ್ದು, ಗಡಿ ಭದ್ರತೆ ಮತ್ತು ಇಂಧನ ಅಗತ್ಯಗಳಿಗಾಗಿ ಟೆಹ್ರಾನ್ ಜೊತೆ ಉತ್ತಮ ಸಂಬಂಧ ಅನಿವಾರ್ಯ. ಇನ್ನೊಂದೆಡೆ ಆರ್ಥಿಕ ನೆರವು ಮತ್ತು ಐಎಂಎಫ್ (IMF) ಬೆಂಬಲಕ್ಕಾಗಿ ಇಸ್ಲಾಮಾಬಾದ್‌ಗೆ ವಾಷಿಂಗ್ಟನ್ ಜೊತೆಗಿನ ಬಾಂಧವ್ಯವೂ ಅಷ್ಟೇ ಮುಖ್ಯವಾಗಿದೆ. ಹೀಗಾಗಿ ಎರಡೂ ಬಣಗಳ ನಡುವೆ ಸಂಧಾನಕಾರನಾಗಿ ಪಾಕಿಸ್ತಾನ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಯತ್ನಿಸುತ್ತಿದೆ.

ಇರಾನ್ ತನ್ನ 7 ಪ್ರಮುಖ ಷರತ್ತುಗಳನ್ನು ಕತಾರ್ ಮೂಲಕವೇ ವಾಷಿಂಗ್ಟನ್‌ಗೆ ರವಾನಿಸಿರುವುದರಿಂದ, ಅಮೆರಿಕದೊಂದಿಗಿನ ನೇರ ಹಾಗೂ ಅಧಿಕೃತ ಮಧ್ಯಸ್ಥಿಕೆಯಲ್ಲಿ ಕತಾರ್ ಮುಂಚೂಣಿಯಲ್ಲಿದೆ; ಪಾಕಿಸ್ತಾನದ ಪಾತ್ರ ಕೇವಲ ಪ್ರಾದೇಶಿಕ ಗಡಿ ಶಾಂತಿಗೆ ಸೀಮಿತವಾಗಿದೆ ಎಂಬುದನ್ನು ಇರಾನ್ ಪರೋಕ್ಷವಾಗಿ ಸೂಚಿಸಿದೆ.

ಗಡಿ ಭದ್ರತೆ ಮತ್ತು ಬಲೂಚಿಸ್ತಾನ್ ಸಂಘರ್ಷ: ಇರಾನ್ ಮತ್ತು ಪಾಕಿಸ್ತಾನ ಗಡಿಯಲ್ಲಿ ಸಕ್ರಿಯವಾಗಿರುವ ‘ಜೈಶ್ ಅಲ್-ಅದ್ಲ್’ ಸೇರಿದಂತೆ ವಿವಿಧ ಬಂಡುಕೋರ ಗುಂಪುಗಳ ಹಾವಳಿ ನಿಯಂತ್ರಣ ಮತ್ತು ಗಡಿ ವ್ಯಾಪಾರವನ್ನು ಸುಗಮಗೊಳಿಸುವುದು ಮೊಹ್ಸಿನ್ ನಖ್ವಿ ಅವರ ಈ ಪ್ರವಾಸದ ಪ್ರಮುಖ ಅಜೆಂಡಾಗಳಲ್ಲೊಂದಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us