7 ದಿನಗಳಲ್ಲಿ ಹಾರ್ಮುಜ್ ಜಲಸಂಧಿ ತೆರೆಯಲು ಇರಾನ್ ಆಫರ್; ಅಮೆರಿಕಕ್ಕೆ ವಿಧಿಸಿದ ಷರತ್ತುಗಳೇನು?

ಪಶ್ಚಿಮ ಏಷ್ಯಾದಲ್ಲಿ ಭುಗಿಲೆದ್ದಿರುವ ಸಂಘರ್ಷದ ನಡುವೆ ಇರಾನ್ ಪ್ರಮುಖ ರಾಜತಾಂತ್ರಿಕ ಸಂಕೇತವೊಂದನ್ನು ನೀಡಿದೆ. ಅಮೆರಿಕ ಸರ್ಕಾರವು ತನ್ನ ಸೈನಿಕ ಒತ್ತಡವನ್ನು ತಗ್ಗಿಸಿ, ನೌಕಾ ದಿಗ್ಬಂಧನವನ್ನು ತೆರವುಗೊಳಿಸಿದರೆ ಮುಂದಿನ 7 ದಿನಗಳಲ್ಲಿ ಹಾರ್ಮುಜ್ ಜಲಸಂಧಿಯನ್ನು ಮತ್ತೆ ಮುಕ್ತಗೊಳಿಸುವುದಾಗಿ ಇರಾನ್ ಆಫರ್ ನೀಡಿದೆ. ಹಿರಿಯ ಇರಾನಿ ಅಧಿಕಾರಿಯೊಬ್ಬರು ನೀಡಿರುವ ಈ ಹೇಳಿಕೆ ಅಮೆರಿಕದೊಂದಿಗೆ ಸ್ಥಗಿತಗೊಂಡಿರುವ ಮಾತುಕತೆಯನ್ನು ಮತ್ತೆ ಪುನರಾರಂಭಿಸಲು ಟೆಹ್ರಾನ್ ಸಿದ್ಧವಿದೆ ಎಂಬುದನ್ನು ಸೂಚಿಸಿದೆ.  

7 ದಿನಗಳಲ್ಲಿ ಹಾರ್ಮುಜ್ ಜಲಸಂಧಿ ತೆರೆಯಲು ಇರಾನ್ ಆಫರ್; ಅಮೆರಿಕಕ್ಕೆ ವಿಧಿಸಿದ ಷರತ್ತುಗಳೇನು?
ಇರಾನ್ ಅಧ್ಯಕ್ಷ ಪೆಜೆಷ್ಕಿಯಾನ್- ಟ್ರಂಪ್
Image Credit source: AP

Updated on: Sep 22, 2026 | 6:39 PM

ಟೆಹ್ರಾನ್, ಸೆಪ್ಟೆಂಬರ್ 22: ಜಾಗತಿಕ ತೈಲ ಸಾರಿಗೆಯ ಅತ್ಯಂತ ಪ್ರಮುಖ ಜಲಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯನ್ನು ಮುಂದಿನ 7 ದಿನಗಳ ಒಳಗೆ ಮತ್ತೆ ಸಂಚಾರಕ್ಕೆ ಮುಕ್ತಗೊಳಿಸಲು ಸಿದ್ಧವಿರುವುದಾಗಿ ಇರಾನ್ ಪ್ರಸ್ತಾಪಿಸಿದೆ. ಆದರೆ, ಇದಕ್ಕೆ ಪ್ರತಿಯಾಗಿ ಅಮೆರಿಕ ಸರ್ಕಾರವು ತನ್ನ ಸೇನಾ ಒತ್ತಡವನ್ನು ಕಡಿಮೆಗೊಳಿಸಬೇಕು ಮತ್ತು ಇರಾನ್ ಬಂದರುಗಳ ಮೇಲಿನ ನೌಕಾ ದಿಗ್ಬಂಧನವನ್ನು ತೆರವುಗೊಳಿಸಬೇಕು ಎಂಬ ಪ್ರಮುಖ ಷರತ್ತನ್ನು ವಿಧಿಸಿದೆ.

ಇರಾನ್ ಹಾಕಿದ ಷರತ್ತುಗಳು:

ಕತಾರ್ ಮುಂತಾದ ಮಧ್ಯವರ್ತಿ ದೇಶಗಳ ಮೂಲಕ ಇರಾನ್ ಈ ಪ್ರಸ್ತಾಪವನ್ನು ಅಮೆರಿಕಕ್ಕೆ ತಲುಪಿಸಿದೆ. ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಹಾಸಭೆಯ (UNGA) ಅಧಿವೇಶನದ ವೇಳೆ ಮಧ್ಯಸ್ಥಿಕೆ ವಹಿಸುತ್ತಿರುವ ದೇಶಗಳೊಂದಿಗೆ ಇರಾನ್ ಈ ಕುರಿತು ವಿಸ್ತೃತ ಮಾತುಕತೆ ನಡೆಸಲಿದೆ. ಇರಾನ್ ಬಂದರುಗಳ ಮೇಲೆ ಅಮೆರಿಕ ವಿಧಿಸಿರುವ ನೌಕಾ ತಡೆ ಹಾಗೂ ಮಿಲಿಟರಿ ಬೆದರಿಕೆಯನ್ನು ಅಮೆರಿಕ ತಕ್ಷಣವೇ ಹಿಂತೆಗೆದುಕೊಳ್ಳಬೇಕು.  ಅಮೆರಿಕದಲ್ಲಿ ತಡೆಹಿಡಿಯಲಾಗಿರುವ ಇರಾನ್‌ಗೆ ಸೇರಿದ ಆಸ್ತಿ ಅಥವಾ ಹಣಕಾಸು ನಿಧಿಗಳನ್ನು ಬಿಡುಗಡೆ ಮಾಡಬೇಕು ಎಂಬ ಷರತ್ತು ವಿಧಿಸಲಾಗಿದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಬಿಕ್ಕಟ್ಟು, ಚಬಹಾರ್ ಬಂದರು ಭವಿಷ್ಯ: ಇರಾನ್ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ಹೈವೋಲ್ಟೇಜ್ ಮಾತುಕತೆ

ಕುಸಿದ ಜಾಗತಿಕ ತೈಲದ ಬೆಲೆ:

ಇರಾನ್‌ನ ಈ ಧನಾತ್ಮಕ ಸುಳಿವು ಹೊರಬೀಳುತ್ತಿದ್ದಂತೆಯೇ ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಸಮಾಧಾನದ ವಾತಾವರಣ ನಿರ್ಮಾಣವಾಗಿದ್ದು, ತೈಲ ಬೆಲೆಯಲ್ಲಿ ಕುಸಿತ ಕಂಡುಬಂದಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆಯು ಶೇಕಡಾ 3.5ಕ್ಕಿಂತಲೂ ಹೆಚ್ಚು ಇಳಿಕೆ ಕಂಡಿದೆ. ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾ ತೈಲದ ಬೆಲೆಯು ಶೇ. 2.25ನಷ್ಟು ಕುಸಿದಿದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಗೆ ‘ಟ್ರಂಪ್ ಜಲಸಂಧಿ’ ಎಂದು ಹೆಸರಿಡೋಣವೇ?: ಇರಾನ್ ಸಂಘರ್ಷದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಪ್ರಸ್ತಾಪ

ಇರಾನ್-ಅಮೆರಿಕದ ನಡುವಿನ ಸಂಘರ್ಷ ಶುರುವಾಗಿದ್ದು ಹೇಗೆ?:

ಈ ವರ್ಷದ ಫೆಬ್ರವರಿಯ ಕೊನೆಯಲ್ಲಿ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ಮೇಲೆ ನಡೆಸಿದ ಜಂಟಿ ದಾಳಿಯ ನಂತರ ಪಶ್ಚಿಮ ಏಷ್ಯಾದಲ್ಲಿ ಪೂರ್ಣ ಪ್ರಮಾಣದ ಯುದ್ಧ ಪ್ರಾರಂಭವಾಯಿತು. ಜೂನ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ತಿಳುವಳಿಕೆ ಒಪ್ಪಂದ ಮುರಿದುಬಿದ್ದ ನಂತರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಇರಾನ್ ತನ್ನ ನೌಕಾಪಡೆಯ ಮೂಲಕ ಹಾರ್ಮುಜ್ ಜಲಸಂಧಿಯಲ್ಲಿ ದಿಗ್ಬಂಧನ ಹೇರಿದ್ದರಿಂದ ಜಾಗತಿಕ ಸರಕು ಸಾಗಣೆ ಹಾಗೂ ಇಂಧನ ಪೂರೈಕೆಗೆ ತೀವ್ರ ಧಕ್ಕೆಯುಂಟಾಗಿತ್ತು. ಇದೀಗ ಇರಾನ್ ವಿಧಿಸಿರುವ ಷರತ್ತುಗಳಿಗೆ ವಾಷಿಂಗ್ಟನ್ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 6:31 pm, Tue, 22 September 26

Loading...
Unable to load recommendations.
Follow Us