ಅಮೆರಿಕದ ಜೊತೆಗಿನ ಉದ್ವಿಗ್ನತೆ ಬೆನ್ನಲ್ಲೇ ನ್ಯೂಯಾರ್ಕ್‌ಗೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಭೇಟಿ

ಇರಾನ್‌ನ ಅಧ್ಯಕ್ಷ ಡಾ. ಮಸೂದ್ ಪೆಜೆಶ್ಕಿಯಾನ್ ಮುಂದಿನ ದಿನಗಳಲ್ಲಿ ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಭಾಗವಹಿಸಲು ಪ್ರಯಾಣಿಸಲಿದ್ದಾರೆ ಎಂದು ಟೆಹ್ರಾನ್ ಟೈಮ್ಸ್ ವರದಿ ಮಾಡಿದೆ. ಆದರೆ, ಅವರ ಭೇಟಿಯ ನಿಖರ ದಿನಾಂಕಗಳು ಇನ್ನೂ ಅಧಿಕೃತವಾಗಿ ಖಚಿತಗೊಂಡಿಲ್ಲ. ಅಮೆರಿಕದೊಂದಿಗಿನ ಯುದ್ಧ ಮುಂದುವರಿದಿರುವ ಬೆನ್ನಲ್ಲೇ, ಅಧ್ಯಕ್ಷ ಪೆಜೆಶ್ಕಿಯಾನ್ ಅವರು ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಪ್ರಸ್ತುತ ಬಿಕ್ಕಟ್ಟಿನ ಕುರಿತು ಇರಾನ್‌ನ ಸ್ಪಷ್ಟ ನಿಲುವನ್ನು ಜಗತ್ತಿನ ಮುಂದೆ ಮಂಡಿಸಲಿದ್ದಾರೆ.

ಅಮೆರಿಕದ ಜೊತೆಗಿನ ಉದ್ವಿಗ್ನತೆ ಬೆನ್ನಲ್ಲೇ ನ್ಯೂಯಾರ್ಕ್‌ಗೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಭೇಟಿ
ಮಸೂದ್ ಪೆಜೆಶ್ಕಿಯಾನ್
Image Credit source: AP

Updated on: Sep 20, 2026 | 7:47 PM

ಟೆಹ್ರಾನ್, ಸೆಪ್ಟೆಂಬರ್ 20: ಮಧ್ಯಪ್ರಾಚ್ಯದಲ್ಲಿ ತೀವ್ರ ಉದ್ವಿಗ್ನತೆ ಮತ್ತು ರಾಜತಾಂತ್ರಿಕ ಬಿಕ್ಕಟ್ಟು ಮುಂದುವರಿದಿರುವ ಬೆನ್ನಲ್ಲೇ, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 81ನೇ ಅಧಿವೇಶನದಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದಾರೆ.  ಇರಾನ್ ಮತ್ತು ಅಮೆರಿಕದ ನಡುವೆ ತೀವ್ರ ಸಂಘರ್ಷ ಹಾಗೂ ರಾಜತಾಂತ್ರಿಕ ಭಿನ್ನಾಭಿಪ್ರಾಯಗಳಿದ್ದರೂ, ವಿಶ್ವಸಂಸ್ಥೆಯ ಆತಿಥೇಯ ದೇಶವಾಗಿರುವ ಕಾರಣಕ್ಕೆ ಅಮೆರಿಕದ ಡೊನಾಲ್ಡ್ ಟ್ರಂಪ್ ಸರ್ಕಾರ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಹಾಗೂ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಸೇರಿದಂತೆ ಪ್ರಮುಖ ನಿಯೋಗಕ್ಕೆ ವೀಸಾ ಮಂಜೂರು ಮಾಡಿದೆ.

ವಿಶ್ವಸಂಸ್ಥೆಯ ಸಭೆಯಲ್ಲಿ ಸೆಪ್ಟೆಂಬರ್ 23ರಂದು (ಬುಧವಾರ) ಮಸೂದ್ ಪೆಜೆಶ್ಕಿಯಾನ್ ಮಾತನಾಡಲಿದ್ದಾರೆ. ಈ ಭಾಷಣದಲ್ಲಿ ಅವರು ಇರಾನ್ ಮೇಲಿನ ಅಮೆರಿಕ-ಇಸ್ರೇಲ್ ಮಿಲಿಟರಿ ಕ್ರಮಗಳು, ಪ್ರದೇಶದಲ್ಲಿನ ಯುದ್ಧ ಪರಿಸ್ಥಿತಿ, ಅಣ್ವಸ್ತ್ರ ನೀತಿ ಹಾಗೂ ಅಮೆರಿಕದ ಆರ್ಥಿಕ ನಿರ್ಬಂಧಗಳ ಬಗ್ಗೆ ತಮ್ಮ ದೇಶದ ನಿಲುವನ್ನು ಜಾಗತಿಕ ವೇದಿಕೆಯಲ್ಲಿ ಮಂಡಿಸಲಿದ್ದಾರೆ.

ಇದನ್ನೂ ಓದಿ: ಇರಾನ್ ಬಿಕ್ಕಟ್ಟಿನ ನಡುವೆ 2 ವಾರಗಳಲ್ಲಿ 2ನೇ ಬಾರಿ ಪ್ರಧಾನಿ ಮೋದಿ-ಪೆಜೆಶ್ಕಿಯಾನ್ ದ್ವಿಪಕ್ಷೀಯ ಮಾತುಕತೆ

ಕಟ್ಟುನಿಟ್ಟಿನ ಪ್ರಯಾಣ ನಿರ್ಬಂಧಗಳು:

ಇರಾನ್ ನಿಯೋಗಕ್ಕೆ ಅಮೆರಿಕ ವೀಸಾ ನೀಡಿದ್ದರೂ, ಅವರಿಗೆ ನ್ಯೂಯಾರ್ಕ್‌ನಲ್ಲಿನ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಸುತ್ತಮುತ್ತ ಮಾತ್ರ ಪ್ರಯಾಣಿಸಲು ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಲಾಗಿದೆ.   ಈ ಬಾರಿ ಇರಾನ್ ನಿಯೋಗವು ಎಂದಿಗಿಂತಲೂ ಚಿಕ್ಕದಾಗಿದ್ದು, ಇರಾನ್ ಅಧ್ಯಕ್ಷರ ಮಾಧ್ಯಮ ತಂಡಕ್ಕೂ ಅಮೆರಿಕ ವೀಸಾ ನಿರಾಕರಿಸಿದೆ.

ಇಸ್ರೇಲ್-ಇರಾನ್-ಅಮೆರಿಕ ಮುಖಾಮುಖಿ:

ಈ ಪ್ರವಾಸದ ವೇಳೆ, ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ಅವರು ವಿಶ್ವಸಂಸ್ಥೆಯ ಮಹಾಸಭೆಯ ಹಿನ್ನೆಲೆಯಲ್ಲಿ ಹಲವು ದೇಶಗಳ ಪ್ರಮುಖ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆ.  ಈ ಮಹಾಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಭಾಗವಹಿಸುತ್ತಿದ್ದು, ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ಅವರ ಈ ಭೇಟಿಯು ಜಾಗತಿಕವಾಗಿ ತೀವ್ರ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಅಮೆರಿಕ ಜೊತೆ ಶಾಂತಿ ಮಾತುಕತೆಗೆ ಇರಾನ್​ನಿಂದ 7 ಷರತ್ತುಗಳು: ಒಪ್ಪದಿದ್ದರೆ ನಿರ್ಣಾಯಕ ಯುದ್ಧಕ್ಕೆ ಸಿದ್ಧ ಎಂದ ಇರಾನ್

ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಮತ್ತು ಇರಾನ್ ನಡುವೆ ಮಾತುಕತೆಗಳು ನಡೆದಿದ್ದರೂ, ಯಾವುದೇ ಅಂತಿಮ ನಿರ್ಧಾರವಾಗಿಲ್ಲ. ಹಾರ್ಮುಜ್ ಜಲಸಂಧಿಯನ್ನು ತನ್ನ ನಿಯಂತ್ರಣದಲ್ಲೇ ಇರಿಸಿಕೊಳ್ಳಲು ಇರಾನ್ ಪಟ್ಟು ಹಿಡಿದಿದ್ದರೆ, ಅಮೆರಿಕವು ಜಲಸಂಧಿಯಲ್ಲಿ ಎಲ್ಲಾ ಹಡಗುಗಳ ಮುಕ್ತ ಸಂಚಾರವನ್ನು ಬಯಸುತ್ತಿದೆ.

ಅಮೆರಿಕಕ್ಕೆ ಇರಾನ್‌ನ ಷರತ್ತುಗಳು:

ಹಾರ್ಮುಜ್ ಜಲಸಂಧಿಯನ್ನು ಮರುಪರಿಶೀಲಿಸಲು ಇರಾನ್ ಅಮೆರಿಕಕ್ಕೆ ತಮ್ಮ ಷರತ್ತುಗಳನ್ನು ಸ್ಪಷ್ಟವಾಗಿ ರವಾನಿಸಿದೆ. ಎಲ್ಲಾ ರಂಗಗಳಲ್ಲೂ ಸಶಸ್ತ್ರ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕು, ಇರಾನ್‌ನ ಮುಟ್ಟುಗೋಲು ಹಾಕಿಕೊಳ್ಳಲಾದ ಹಣವನ್ನು ಬಿಡುಗಡೆ ಮಾಡಬೇಕು, ನೌಕಾ ದಿಗ್ಬಂಧನವನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು ಎಂಬ  ಷರತ್ತುಗಳನ್ನು ಒಪ್ಪಿಕೊಳ್ಳುವವರೆಗೆ ಮತ್ತು ಅಮೆರಿಕ ತನ್ನ ಭರವಸೆಗಳನ್ನು ಈಡೇರಿಸುವವರೆಗೆ ಹಾರ್ಮುಜ್ ಜಲಸಂಧಿಯನ್ನು ತೆರೆಯುವುದು ಅಸಾಧ್ಯ ಎಂದು ಇರಾನ್ ಸ್ಪಷ್ಟಪಡಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us