ಕುವೈತ್‌ನ ಪ್ರಮುಖ ವಿದ್ಯುತ್ ಸ್ಥಾವರದ ಮೇಲೆ ಇರಾನ್ ದಾಳಿ: ದಟ್ಟ ಹೊಗೆ, ಭಾರಿ ಬೆಂಕಿ

ಕುವೈತ್‌ನ ಪ್ರಮುಖ ಅಲ್-ಸುಬಿಯಾ ವಿದ್ಯುತ್ ಉತ್ಪಾದನಾ ಮತ್ತು ನೀರು ಶುದ್ಧೀಕರಣ ಘಟಕದ ಮೇಲೆ ಇರಾನ್ ದಾಳಿ ಮಾಡಿದೆ. ಈ ದಾಳಿಯಿಂದ ಸ್ಥಾವರಕ್ಕೆ ತೀವ್ರ ಹಾನಿಯಾಗಿದ್ದು, ದಟ್ಟ ಹೊಗೆ ಮತ್ತು ಭಾರಿ ಬೆಂಕಿ ಆವರಿಸಿದೆ. ಕುವೈತ್ ವಿದ್ಯುತ್ ಮತ್ತು ಕುಡಿಯುವ ನೀರಿನ ಕೊರತೆಯ ಭೀತಿಯಲ್ಲಿದೆ. ಅಮೆರಿಕ ಇರಾನ್ ಮಿಲಿಟರಿ ನೆಲೆಗಳ ಮೇಲೆ ವೈಮಾನಿಕ ದಾಳಿಗಳನ್ನು ತೀವ್ರಗೊಳಿಸಿದ್ದು, ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮತ್ತಷ್ಟು ಭೀಕರವಾಗಿದೆ.

ಕುವೈತ್‌ನ ಪ್ರಮುಖ ವಿದ್ಯುತ್ ಸ್ಥಾವರದ ಮೇಲೆ ಇರಾನ್ ದಾಳಿ: ದಟ್ಟ ಹೊಗೆ, ಭಾರಿ ಬೆಂಕಿ
ಕುವೈತ್

Updated on: Jul 20, 2026 | 9:19 AM

ಕುವೈತ್, ಜುಲೈ 20: ಅಮೆರಿಕ ಮತ್ತು ಇರಾನ್(Iran) ನಡುವಿನ ಸಶಸ್ತ್ರ ಸಂಘರ್ಷ ದಿನದಿಂದ ದಿನಕ್ಕೆ ಅತ್ಯಂತ ಭೀಕರ ರೂಪ ಪಡೆದುಕೊಳ್ಳುತ್ತಿದೆ. ಇರಾನ್ ಪಡೆಗಳು ಕುವೈತ್‌ನ ಪ್ರಮುಖ ಅಲ್-ಸುಬಿಯಾ ವಿದ್ಯುತ್ ಉತ್ಪಾದನಾ ಕೇಂದ್ರ ಹಾಗೂ ಉಪ್ಪು ನೀರನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸುವ ಘಟಕವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ. ಈ ದಾಳಿಯ ಪರಿಣಾಮವಾಗಿ ಉಂಟಾದ ಭಾರಿ ಸ್ಫೋಟದಿಂದಾಗಿ ಸ್ಥಾವರದಲ್ಲಿ ದಟ್ಟವಾದ ಕಪ್ಪು ಹೊಗೆ ಹಾಗೂ ಜ್ವಾಲೆಗಳು ಆವರಿಸಿದ್ದು, ಕುವೈತ್‌ನ ಮೂಲಸೌಕರ್ಯಕ್ಕೆ ತೀವ್ರ ಹಾನಿಯಾಗಿದೆ.

ವಾಯುಪ್ರದೇಶದಲ್ಲಿ ಕುವೈತ್ ಕಟ್ಟುನಿಟ್ಟಿನ ಕಾವಲು

ಕುವೈತ್ ರಕ್ಷಣಾ ಸಚಿವಾಲಯದ ವಕ್ತಾರ ಮೇಜರ್ ಜನರಲ್ ಸೌದ್ ಅಬ್ದುಲಜೀಜ್ ಅಲ್-ಒಟೈಬಿ ಮಾತನಾಡಿ, “ಇರಾನ್‌ನ ಪಡೆಗಳು ಕುವೈತ್‌ನ ಪ್ರಮುಖ ಸೌಲಭ್ಯಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿವೆ. ಇಂದು ಬೆಳಗಿನ ಜಾವದಿಂದಲೇ ದೇಶದ ವಾಯುಪ್ರದೇಶದತ್ತ ಬಂದ ಇರಾನಿನ ಹಲವಾರು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ನಮ್ಮ ವಾಯುಪಡೆ ಯಶಸ್ವಿಯಾಗಿ ತಡೆದು ಹೊಡೆದುರುಳಿಸಿದೆ” ಎಂದು ತಿಳಿಸಿದ್ದಾರೆ.ಆದಾಗ್ಯೂ, ಈ ದಾಳಿಗಳಿಂದ ವಿದ್ಯುತ್ ಮತ್ತು ನೀರು ಪೂರೈಕೆ ಇಲಾಖೆಯ ಉಸ್ತುವಾರಿಯಲ್ಲಿದ್ದ ಸೌಲಭ್ಯಗಳಿಗೆ ಹಾನಿಯಾಗಿದ್ದು, ವಿದ್ಯುತ್ ಮತ್ತು ನೀರಿನ ಅಭಾವ ಉಂಟಾಗುವ ಆತಂಕ ಎದುರಾಗಿದೆ.

ಅಧ್ಯಕ್ಷ ಟ್ರಂಪ್  ಇರಾನ್‌ ದಾಳಿಗೆ ಪ್ರತಿಯಾಗಿ ಅಮೆರಿಕದ ಮಿಲಿಟರಿ ಕಮಾಂಡ್ ಇರಾನ್ ಮೇಲಿನ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಅಮೆರಿಕ ಸೇನೆಯ ಸೆಂಟ್ಕಾಮ್ ಇರಾನ್ ಮಿಲಿಟರಿ ನೆಲೆಯನ್ನು ಗುರಿಯಾಗಿಸಿಕೊಂಡು ಸತತ ಒಂಬತ್ತನೇ ರಾತ್ರಿಯೂ ಭಾರಿ ಪ್ರಮಾಣದ ವೈಮಾನಿಕ ದಾಳಿಗಳನ್ನು ಮುಂದುವರೆಸಿದೆ.

ಹಾರ್ಮುಜ್ ಜಲಸಂಧಿಯಲ್ಲಿ ಪ್ರಯಾಣಿಸುವ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಲು ಇರಾನ್ ಬಳಸುತ್ತಿದ್ದ ಡ್ರೋನ್ ಮತ್ತು ಕ್ಷಿಪಣಿ ತಾಂತ್ರಿಕ ಸಾಮರ್ಥ್ಯಗಳನ್ನು ಹಾನಿಗೊಳಿಸಲು ಈ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಸೆಂಟ್ಕಾಮ್ ಸ್ಪಷ್ಟಪಡಿಸಿದೆ.

ಮತ್ತಷ್ಟು ಓದಿ: ನಾವು ಯಾವುದೇ ಒಪ್ಪಂದ, ಮಾತುಕತೆಗೆ ಸಿದ್ಧವಿಲ್ಲ, ಯುಎಸ್ ಜೊತೆಗಿನ ಶಾಂತಿ ಒಪ್ಪಂದ ರದ್ದು ಎಂದ ಇರಾನ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿ,”ಇತ್ತೀಚೆಗೆ ಮಧ್ಯಪ್ರಾಚ್ಯದ ಸಂಘರ್ಷದಲ್ಲಿ ಮೃತಪಟ್ಟ ಮೂವರು ಅಮೆರಿಕ ಸೈನಿಕರ ಗೌರವಾರ್ಥವಾಗಿ ನಾವು ಇರಾನ್ ಮೇಲೆ ಅತ್ಯಂತ ತೀವ್ರವಾದ ಮತ್ತು ಬಲವಾದ ದಾಳಿಗಳನ್ನು ನಡೆಸಿದ್ದೇವೆ” ಎಂದು ಬಹಿರಂಗಪಡಿಸಿದ್ದಾರೆ

ಕುವೈತ್ ಜಲ ಮತ್ತು ಇಂಧನ ಬಿಕ್ಕಟ್ಟು ಕುಡಿಯುವ ನೀರಿಗೆ ಆಪತ್ತು

ಕುವೈತ್ ದೇಶವು ತನ್ನ ಶೇ. 90 ಕ್ಕೂ ಹೆಚ್ಚು ಕುಡಿಯುವ ನೀರಿಗಾಗಿ ಸಮುದ್ರದ ಉಪ್ಪು ನೀರನ್ನು ಶುದ್ಧೀಕರಿಸುವ ‘ಡೆಸಾಲಿನೇಷನ್’ ಸ್ಥಾವರಗಳನ್ನೇ ಅವಲಂಬಿಸಿದೆ. ಇರಾನ್ ಸತತವಾಗಿ ಇಂತಹ ಘಟಕಗಳನ್ನು ಗುರಿಯಾಗಿಸುತ್ತಿರುವುದು ದೇಶದಲ್ಲಿ ಕುಡಿಯುವ ನೀರಿನ ಭಾರಿ ಅಭಾವಕ್ಕೆ ದಾರಿ ಮಾಡಿಕೊಡುವ ಆತಂಕ ಮೂಡಿಸಿದೆ.

ವಿಡಿಯೋ

ತಾತ್ಕಾಲಿಕ ಕದನ ವಿರಾಮ ಅಂತ್ಯ: ಈ ಹಿಂದೆ ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿದ್ದ ತಾತ್ಕಾಲಿಕ ಕದನ ವಿರಾಮದ ಒಪ್ಪಂದ ಮುರಿದುಬಿದ್ದಿದ್ದು, ಗಲ್ಫ್ ಪ್ರದೇಶದಲ್ಲಿರುವ ಅಮೆರಿಕದ ಸೇನಾ ನೆಲೆಗಳು ಹಾಗೂ ಹಡಗುಗಳಿಗೆ ಕುವೈತ್ ಬೆಂಬಲ ನೀಡುತ್ತಿದೆ ಎಂಬ ಕಾರಣಕ್ಕೆ ಇರಾನ್ ಕುವೈತ್ ಮೇಲಿನ ದಾಳಿಯನ್ನು ತೀವ್ರಗೊಳಿಸಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us