
ನವದೆಹಲಿ, ಮಾರ್ಚ್ 16: ಯುದ್ಧದ ತೀವ್ರತೆ ಹೆಚ್ಚುತ್ತಿರುವ ಬೆನ್ನಲ್ಲೇ ಇರಾನ್ (Iran) ಅತ್ಯಾಧುನಿಕ, ದೇಶೀಯ ನಿರ್ಮಿತ ‘ಡ್ಯಾನ್ಸಿಂಗ್ ಮಿಸೈಲ್ (Dancing Missile)’ ಸೆಜ್ಜಿಲ್ (Sejjil) ಮೂಲಕ ಇಸ್ರೇಲ್ ವಿರುದ್ಧ ದಾಳಿ ನಡೆಸಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಇದರೊಂದಿಗೆ, ಇರಾನ್ ಮೊತ್ತಮೊದಲ ಬಾರಿಗೆ ಇಸ್ರೇಲ್ ವಿರುದ್ಧ ಡ್ಯಾನ್ಸಿಂಗ್ ಮಿಸೈಲ್ ಪ್ರಯೋಗ ಮಾಡಿದಂತಾಗಿದೆ. ಇಸ್ರೇಲ್‌ನ ಪ್ರಮುಖ ಪ್ರದೇಶಗಳನ್ನು ಗುರಿಯಾಗಿಸಿ ಇರಾನ್, ಸೆಜ್ಜಿಲ್ ಮೂಲಕ ದಾಳಿ ನಡೆಸಿದೆ.
ಸದ್ಯ ‘ಡ್ಯಾನ್ಸಿಂಗ್ ಮಿಸೈಲ್’ ಎಂಬ ಹೆಸರು ಜಗತ್ತಿನ ಗಮನ ಸೆಳೆದಿದೆ. ‘ಡ್ಯಾನ್ಸಿಂಗ್ ಮಿಸೈಲ್’ ಎಂದರೇನು? ಡ್ಯಾನ್ಸಿಂಗ್ ಮಿಸೈಲ್ ಸೆಜ್ಜಿಲ್ ಇದರ ವಿಶೇಷ ಏನು ಎಂಬ ಮಾಹಿತಿ ಇಲ್ಲಿದೆ.
ಸೆಜ್ಜಿಲ್-2 ಇರಾನ್ನಲ್ಲೇ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿರುವ ಎರಡು ಹಂತಗಳ ಘನ ಇಂಧನ (Solid Fuel) ಬಳಸುವ ಮಧ್ಯಮ ದೂರದ ಬಾಲಿಸ್ಟಿಕ್ ಕ್ಷಿಪಣಿಯಾಗಿದೆ. ಈ ಕ್ಷಿಪಣಿಯ ಅಂದಾಜು ವ್ಯಾಪ್ತಿ ಸುಮಾರು 2,000 ಕಿಲೋಮೀಟರ್ ಆಗಿದ್ದು, ಸುಮಾರು 700 ಕಿಲೋಗ್ರಾಂ ತೂಕದ ಪೇಲೋಡ್ ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ.
ಈ ಕ್ಷಿಪಣಿಯು ಗುರಿಯತ್ತ ಸಾಗುತ್ತಿರುವಾಗ ಚುರುಕಾಗಿ ದಿಕ್ಕು ಬದಲಾಯಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, ಶತ್ರುಗಳ ರೇಡಾರ್ ಕಣ್ತಪ್ಪಿಸಿ ನೆಗೆಯಬಲ್ಲದ್ದಾಗಿದೆ. ಛಂಗನೆ ದಿಕ್ಕು ಬದಲಾಯಿಸಿ ರೇಡಾರ್ಗಳ ಕಣ್ತಪ್ಪಿಸಿ ನೆಗೆಯಬಲ್ಲದ್ದಾದ್ದರಿಂದ ಇದಕ್ಕೆ ‘ಡ್ಯಾನ್ಸಿಂಗ್ ಮಿಸೈಲ್’ ಎಂಬ ಹೆಸರು ಬಂದಿದೆ.
ಅಮೆರಿಕದ ಸೆಂಟರ್ ಫಾರ್ ಸ್ಟ್ರಾಟಜಿಕ್ ಆ್ಯಂಡ್ ಇಂಟರ್ನ್ಯಾಷನಲ್ ಸ್ಟಡೀಸ್(CSIS) ಮಾಹಿತಿಯ ಪ್ರಕಾರ, ಸೆಜ್ಜಿಲ್ ಕ್ಷಿಪಣಿ ಸುಮಾರು 18 ಮೀಟರ್ ಉದ್ದ, 1.25 ಮೀಟರ್ ವ್ಯಾಸ ಹೊಂದಿದ್ದು, ಸುಮಾರು 23,600 ಕಿಲೋಗ್ರಾಂ ತೂಕವಿದೆ.
ಘನ ಇಂಧನ ಬಳಸುವ ಕ್ಷಿಪಣಿಯಾದ್ದರಿಂದ ಹಳೆಯ ಶಹಾಬ್ ಮಿಸೈಲ್ನಂಥ ದ್ರವ ಇಂಧನ ಕ್ಷಿಪಣಿಗಳಿಗಿಂತ ಇದು ಬೇಗ ಸಿದ್ಧಪಡಿಸಿ ಉಡಾಯಿಸಲು ಸಾಧ್ಯವಾಗುತ್ತದೆ.
ಸೆಜ್ಜಿಲ್ ಕ್ಷಿಪಣಿಯ ವಿನ್ಯಾಸ ಕಾರ್ಯ 1990ರ ದಶಕದ ಆರಂಭದಲ್ಲೇ ಪ್ರಾರಂಭಗೊಂಡಿತ್ತು. ಮೊದಲ ಪರೀಕ್ಷಾ ಉಡಾವಣೆ 2008ರಲ್ಲಿ ನಡೆದಿದ್ದು, ಆಗ ಕ್ಷಿಪಣಿ ಸುಮಾರು 800 ಕಿಲೋಮೀಟರ್ ದೂರದ ಗುರಿ ತಲುಪಿತ್ತು. ನಂತರ 2009ರ ಮೇ ತಿಂಗಳಲ್ಲಿ ಎರಡನೇ ಪರೀಕ್ಷೆ ನಡೆಸಿ ಗೈಡೆನ್ಸ್ ಆ್ಯಂಡ್ ನ್ಯಾವಿಗೇಶನ್ ವ್ಯವಸ್ಥೆಯನ್ನು ಸುಧಾರಿಸಲಾಯಿತು. 2009ರಿಂದ ಬಳಿಕ ಇನ್ನೂ ನಾಲ್ಕು ಪರೀಕ್ಷಾರ್ಥ ಉಡಾವಣೆಗಳು ನಡೆದಿದ್ದು, ಆರನೇ ಪರೀಕ್ಷೆಯಲ್ಲಿ ಕ್ಷಿಪಣಿ ಸುಮಾರು 1,900 ಕಿಲೋಮೀಟರ್ ದೂರ ಇಂಡಿಯನ್ ಓಷನ್ ಕಡೆಗೆ ಪ್ರಯಾಣಿಸಿತ್ತು ಎಂದು ವರದಿಯಾಗಿದೆ.
ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ರಕ್ಷಣೆ: ಭಾರತದ ನೆರವಿಗೆ ಅಮೆರಿಕ ಯಾಚನೆ?
ಮಧ್ಯಪ್ರಾಚ್ಯದಲ್ಲಿ ಯುದ್ಧೋನ್ಮಾದ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಸೆಜ್ಜಿಲ್ ಕ್ಷಿಪಣಿಯ ಬಳಕೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:26 pm, Mon, 16 March 26