ಮೂರನೇ ಬಾರಿಗೆ ಅಧ್ಯಕ್ಷರಾಗಲಿದ್ದಾರಾ ಟ್ರಂಪ್? ಅಮೆರಿಕ ಸಂಸತ್ನಲ್ಲಿ ನಿಲುವಳಿ ಮಂಡನೆ
ಅಮೆರಿಕದಲ್ಲಿ ಅಧ್ಯಕ್ಷರೊಬ್ಬರು ಮೂರನೇ ಬಾರಿಗೆ ಅಧಿಕಾರ ಚಲಾಯಿಸುವ ಸಂಬಂಧ ಇದೆ ಮೊದಲ ಬಾರಿಗೆ ಸಂಸತ್ತಿನಲ್ಲಿ ನಿಳುವಳಿಯೊಂದನ್ನು ಮಂಡಿಸಲಾಗಿದೆ. ಟ್ರಂಪ್‌ಗೆ ಮೂರನೇ ಅವಧಿಗೆ ಅಧ್ಯಕ್ಷರಾಗಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಈ ನಿಲುವಳಿ ಮಂಡಿಸಿದ್ದೇನೆ ಎಂಬುದಾಗಿ ರಿಪಬ್ಲಿಕನ್ ಪಕ್ಷದ ಸಂಸದರು ಹೇಳಿದ್ದಾರೆ. ವಿವರಗಳಿಗೆ ಮುಂದೆ ಓದಿ.
ವಾಷಿಂಗ್ಟನ್, ಜನವರಿ 25: ಅಮೆರಿಕದಲ್ಲಿ ಒಬ್ಬ ವ್ಯಕ್ತಿ ಅಧ್ಯಕ್ಷರಾಗಿ ಎರಡು ಬಾರಿ ಮಾತ್ರ ಕಾರ್ಯನಿರ್ವಹಿಸಲು ಅವಕಾಶವಿದೆ. ಆದರೆ, ಇದೀಗ ಮಹತ್ವದ ಕ್ರಮವೊಂದರಲ್ಲಿ ಅಧ್ಯಕ್ಷರೊಬ್ಬರು ಮೂರನೇ ಬಾರಿಗೆ ಅಧಿಕಾರ ವಹಿಸಲು ಅವಕಾಶ ಮಾಡಿಕೊಡುವ ಜಂಟಿ ಸದನ ನಿಲುವಳಿಯೊಂದನ್ನು ರಿಪಬ್ಲಿಕನ್ ಪಕ್ಷದ ಸಂಸದರೊಬ್ಬರು ಮಂಡಿಸಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮೂರನೇ ಅವಧಿಗೆ ಅಧಿಕಾರ ಒದಗಿಸುವ ಉದ್ದೇಶದೊಂದಿಗೆ ಈ ಜಂಟಿ ಸದನ ನಿಲುವಳಿ ಮಂಡಿಸಲಾಗಿದೆ.
ಮೂರನೇ ಬಾರಿಗೆ ಟ್ರಂಪ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡುವ ಉದ್ದೇಶದೊಂದಿಗೆ ಈ ನಿಲುವಳಿ ಮಂಡಿಸಲಾಗಿದೆ. ಟ್ರಂಪ್ ಮೂರನೇ ಬಾರಿ ಅಧ್ಯಕ್ಷರಾದರೆ ದೇಶಕ್ಕೆ ಮತ್ತೊಮ್ಮೆ ದಿಟ್ಟ ನಾಯಕತ್ವ ದೊರೆಯಲಿದೆ ಎಂದು ರಿಪಬ್ಲಿಕನ್ ಪಕ್ಷದ ಸಂಸದ ಆಂಡಿ ಓಗ್ಲ್ಸ್ ಮಂಡಿಸಿರುವ ಜಂಟಿ ಸದನ ನಿಲುವಳಿಯಲ್ಲಿ ಉಲ್ಲೇಖಿಸಲಾಗಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಮೂರನೇ ಬಾರಿಗೆ ಅಧ್ಯಕ್ಷರನ್ನಾಗಿ ಮಾಡುವ ಉದ್ದೇಶದಿಂದ ಈ ಪ್ರಸ್ತಾಪವನ್ನು ಮಂಡಿಸಲಾಗಿದೆ. ಈ ತಿದ್ದುಪಡಿಯ ನಂತರ ಅಧ್ಯಕ್ಷ ಟ್ರಂಪ್ ಅವರು ಮೂರನೇ ಬಾರಿಗೆ ಅಧ್ಯಕ್ಷರಾಗಲು ಸಾಧ್ಯವಾಗುತ್ತದೆ ಮತ್ತು ದೇಶಕ್ಕೆ ಬಲವಾದ ನಾಯಕತ್ವದ ಭರವಸೆ ದೊರೆಯುತ್ತದೆ. ಇದು ನಮ್ಮ ದೇಶಕ್ಕೆ ತುಂಬಾ ಅಗತ್ಯವಿದೆ ಎಂದು ಆಂಡಿ ಓಗ್ಲ್ಸ್ ಹೇಳಿದ್ದಾರೆ.
ಜೋ ಬೈಡನ್ ಆಡಳಿತವು ಮಾಡಿದ ತಪ್ಪುಗಳನ್ನು ಸರಿಪಡಿಸಲು ಅಗತ್ಯವಿರುವ ಪ್ರತಿಯೊಂದು ಸಂಪನ್ಮೂಲವನ್ನು ನಾವು ಅಧ್ಯಕ್ಷ ಟ್ರಂಪ್‌ಗೆ ಒದಗಿಸುವುದು ಕಡ್ಡಾಯವಾಗಿದೆ. ಅಮೆರಿಕಾದ ಜನರಿಗೆ ಮತ್ತು ನಮ್ಮ ಮಹಾನ್ ರಾಷ್ಟ್ರಕ್ಕೆ ತಮ್ಮ ನಿಷ್ಠೆ ಏನೆಂಬುದನ್ನು ಅಧ್ಯಕ್ಷ ಟ್ರಂಪ್ ಮತ್ತೆ ಮತ್ತೆ ನಿರೂಪಿಸಿ ತೋರಿಸಿದ್ದಾರೆ ಎಂದು ಆಂಡಿ ಓಗ್ಲ್ಸ್ ಹೇಳಿದ್ದಾರೆ.
ಆಧುನಿಕ ಇತಿಹಾಸದಲ್ಲಿ ನಮ್ಮ ದೇಶದ ಅವನತಿಯನ್ನು ಹಿಮ್ಮೆಟ್ಟಿಸುವ ಮತ್ತು ಅಮೆರಿಕವನ್ನು ಶ್ರೇಷ್ಠತೆಗೆ ಹಿಂದಿರುಗಿಸುವ ಸಾಮರ್ಥ್ಯವಿರುವ ಏಕೈಕ ವ್ಯಕ್ತಿ ಟ್ರಂಪ್ ಎಂಬುದು ಸಾಬೀತಾಗಿದೆ ಎಂದು ಓಗ್ಲ್ಸ್ ಹೇಳಿದ್ದಾರೆ. ಆ ಗುರಿಯನ್ನು ಸಾಧಿಸಲು ಅವರಿಗೆ ಅಗತ್ಯವಾದ ಸಮಯವನ್ನು ನೀಡಬೇಕು. ಅದಕ್ಕಾಗಿಯೇ ಈ ನಿಲುವಳಿ ಮಂಡಿಸಿದ್ದೇನೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ