Israel-Iran War: ಇಸ್ರೇಲ್-ಇರಾನ್ ಯುದ್ಧ; ಕದನವಿರಾಮವಿಲ್ಲ, ದೊಡ್ಡ ಅಂತ್ಯವೇ ಸಿಗಲಿದೆ ಎಂದ ಟ್ರಂಪ್!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆನಡಾದಲ್ಲಿ ನಡೆದ ಜಿ7 ಶೃಂಗಸಭೆಯನ್ನು ಮಧ್ಯದಲ್ಲಿ ಬಿಟ್ಟು ವಾಷಿಂಗ್ಟನ್‌ಗೆ ಮರಳಿದ್ದಾರೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದ ಕಾರಣದಿಂದಲೇ ಅವರು ಶೃಂಗಸಭೆಯನ್ನು ಅರ್ಧಕ್ಕೆ ಬಿಟ್ಟು ತೆರಳಿದ್ದಾರೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿದೆ. ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡೊನಾಲ್ಡ್ ಟ್ರಂಪ್, ಮುಂದೆ ಏನೋ ದೊಡ್ಡ ಘಟನೆ ಸಂಭವಿಸಲಿದೆ ಎಂಬ ಸುಳಿವು ನೀಡಿದ್ದಾರೆ. ಹಾಗೇ, ಇಸ್ರೇಲ್-ಇರಾನ್ ಯುದ್ಧದ ಕಾರಣದಿಂದ ನಾನು ಶೃಂಗಸಭೆಯನ್ನು ಬಿಟ್ಟು ಬಂದಿಲ್ಲ ಎಂಬ ಸ್ಪಷ್ಟನೆಯನ್ನೂ ನೀಡಿದ್ದಾರೆ.

ವಾಷಿಂಗ್ಟನ್, ಜೂನ್ 17: ಇಸ್ರೇಲ್ ಮತ್ತು ಇರಾನ್ (Israel-Iran War) ನಡುವೆ ನಡೆಯುತ್ತಿರುವ ಸಮರ ಸದ್ಯಕ್ಕಂತೂ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಇದೀಗ ಈ ಎರಡೂ ದೇಶಗಳ ನಡುವಿನ ಯುದ್ಧಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮಧ್ಯ ಪ್ರವೇಶಿಸಿದ್ದಾರೆ. ಈ ಹಿಂದೆ ಇಸ್ರೇಲ್ ಜೊತೆ ಕದನವಿರಾಮ ಮಾಡಿಕೊಳ್ಳುವಂತೆ ಇರಾನ್ಗೆ ಟ್ರಂಪ್ ಸಲಹೆ ನೀಡಿದ್ದರು. ಆದರೆ, ಈಗ ಯಾವುದೇ ಕದನವಿರಾಮ ಇಲ್ಲ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷಕ್ಕೆ “ನಿಜವಾದ ಮತ್ತು ಶಾಶ್ವತವಾದ ಅಂತ್ಯ” ಸಿಗಲಿದೆ ಎಂದು ಹೇಳಿಕೆ ನೀಡಿದ್ದಾರೆ. ಇದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಈ ಮೂಲಕ ಟ್ರಂಪ್ ಮುಂದಿನ ದಿನಗಳಲ್ಲಿ ದೊಡ್ಡದೇನೋ ಸಂಭವಿಸಲಿದೆ ಎಂಬ ಸೂಚನೆ ನೀಡಿದ್ದಾರೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷಕ್ಕೆ “ನಿಜವಾದ ಮತ್ತು ಶಾಶ್ವತವಾದ ಅಂತ್ಯ”ವನ್ನು ಗುರಿಯಾಗಿಟ್ಟುಕೊಂಡು ಅಮೆರಿಕ ಕೇವಲ ಕದನ ವಿರಾಮಕ್ಕಿಂತ ಹೆಚ್ಚಿನದನ್ನು ಕಂಡುಕೊಳ್ಳಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಹಾಗೇ, ಶಾಂತಿ ಮಾತುಕತೆಗಾಗಿ ಇರಾನ್ ಅನ್ನು ಯಾವುದೇ ರೀತಿಯಲ್ಲಿ ಸಂಪರ್ಕಿಸಿಲ್ಲ ಎಂದು ಟ್ರಂಪ್ ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇರಾನ್ ದೇಶವು ಒಪ್ಪಂದವನ್ನು ಪರಿಗಣಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: Video: ಇರಾನ್ ನಿರೂಪಕಿ ಸುದ್ದಿ ಓದುತ್ತಿರುವಾಗಲೇ ಕಚೇರಿ ಮೇಲೆ ಇಸ್ರೇಲ್ ವೈಮಾನಿಕ ದಾಳಿ
ಇಂದು ಟ್ರಂಪ್, ಕೆನಡಾದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಿಂದ ಇದ್ದಕ್ಕಿದ್ದಂತೆ ಅಮೆರಿಕಕ್ಕೆ ವಾಪಾಸ್ ಹೊರಟಿದ್ದರು. ಇದಕ್ಕೆ ಇರಾನ್-ಇಸ್ರೇಲ್ ನಡುವಿನ ಯುದ್ಧವೇ ಕಾರಣ ಎಂದು ಫ್ರೆಂಚ್ ಅಧ್ಯಕ್ಷ ಅಭಿಪ್ರಾಯಪಟ್ಟಿದ್ದರು. ಆದರೆ, ಅದನ್ನು ನಿರಾಕರಿಸಿರುವ ಡೊನಾಲ್ಡ್ ಟ್ರಂಪ್, “ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಯಾವಾಗಲೂ ತಪ್ಪಾಗಿ ಭಾವಿಸುತ್ತಾರೆ” ಎಂದು ಲೇವಡಿ ಮಾಡಿದ್ದಾರೆ. ಯಾವಾಗಲೂ ಪ್ರಚಾರ ಬಯಸುವ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ನಾನು ಕೆನಡಾದಲ್ಲಿ ನಡೆದ ಜಿ7 ಶೃಂಗಸಭೆಯಿಂದ ಹೊರಟು, ಇಸ್ರೇಲ್ ಮತ್ತು ಇರಾನ್ ನಡುವಿನ “ಕದನ ವಿರಾಮ”ಕ್ಕೆ ಕೆಲಸ ಮಾಡಲು ವಾಷಿಂಗ್ಟನ್‌ಗೆ ವಾಪಾಸ್ ಹೋಗುತ್ತಿದ್ದೇನೆ ಎಂದು ತಪ್ಪಾಗಿ ಹೇಳಿದ್ದಾರೆ ಎಂದು ಹೇಳಿದ್ದಾರೆ. ನಾನು ವಾಪಾಸ್ ಬರಲು ಇರಾನ್ ಮತ್ತು ಇಸ್ರೇಲ್ ನಡುವಿನ ಕದನ ವಿರಾಮ ಒಪ್ಪಂದಕ್ಕಿಂತ ದೊಡ್ಡ ಉದ್ದೇಶವಿದೆ ಎಂದು ಹೇಳಿದ್ದಾರೆ. ಆದರೆ, ಆ ಕಾರಣವೇನೆಂಬುದರ ಬಗ್ಗೆ ಮಾಹಿತಿ ನೀಡಿಲ್ಲ.
ಇದನ್ನೂ ಓದಿ: ಅಮೆರಿಕ ಸೇನಾ ದಿನ: ಪಾಕ್ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ಗೆ ಆಹ್ವಾನ, ಭಾರತ, ಚೀನಾಗೆ ಆತಂಕ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧದ ಯುದ್ಧದಲ್ಲಿ ಇಸ್ರೇಲ್‌ಗೆ ಬಹಿರಂಗವಾಗಿ ಬೆಂಬಲ ನೀಡಿದ್ದಾರೆ. ಆದರೆ ಇಲ್ಲಿಯವರೆಗೆ ಅಮೆರಿಕ ಈ ದಾಳಿಗಳಲ್ಲಿ ತನ್ನ ನೇರ ಭಾಗವಹಿಸುವಿಕೆಯನ್ನು ನಿರಾಕರಿಸಿದೆ. ಶಾಂತಿ ಮಾತುಕತೆಯ ಮೂಲಕ ದಾಳಿ ನಿಲ್ಲಿಸಲು ಅಮೆರಿಕ ಕರೆ ನೀಡಿದೆ. ಆದರೆ, ಇದೀಗ ಟ್ರಂಪ್ ನೀಡಿರುವ ಹೇಳಿಕೆಯಿಂದ ಅಮೆರಿಕ ಈ ಯುದ್ಧದಲ್ಲಿ ತಟಸ್ಥವಾಗಿರಲು ಬಯಸುವುದಿಲ್ಲ, ಇಸ್ರೇಲ್ ಪರವಾಗಿ ಮತ್ತು ಇರಾನ್ ವಿರುದ್ಧ ದೊಡ್ಡ ಹೆಜ್ಜೆ ಇಡುವ ಸಾಧ್ಯತೆಯಿದೆ ಎಂಬ ಅನುಮಾನ ವ್ಯಕ್ತವಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








