ಪ್ಯಾಲಸ್ಟೀನ್ಗೆ 10 ಲಕ್ಷ ಕೊವಿಡ್ ಲಸಿಕೆ ಕಳಿಸಲು ಇಸ್ರೇಲ್ ಸಮ್ಮತಿ: ಎಕ್ಸ್ಪೈರಿ ದಿನಕ್ಕೆ ಹತ್ತಿರದ್ದು ಎಂಬುದೇ ವಿಪರ್ಯಾಸ
ಇಸ್ರೇಲ್ ಈಗಾಗಲೇ ತನ್ನ ದೇಶದ ಶೇ 85ರಷ್ಟು ಪ್ರಜೆಗಳಿಗೆ ಲಸಿಕೆ ನೀಡಿದೆ. ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆ ಮತ್ತು ಗಾಜಾಪಟ್ಟಿಗಳಲ್ಲಿರುವ 45 ಲಕ್ಷ ಪ್ಯಾಲಸ್ಟೀನ್ ಪ್ರಜೆಗಳಿಗೆ ಲಸಿಕೆ ಕೊಡದಿರುವ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು.
ಜೆರುಸಲೇಂ: ಪ್ಯಾಲಸ್ಟೀನ್ಗೆ ಇಸ್ರೇಲ್ ಸರ್ಕಾರವು 10 ಲಕ್ಷ ಕೊವಿಡ್ ಲಸಿಕೆಗಳನ್ನು ಪೂರೈಸಲು ಒಪ್ಪಿಕೊಂಡಿದೆ. ಅಂತಿಮ ದಿನದ ಹತ್ತಿರದಲ್ಲಿರುವ ಲಸಿಕೆಗಳನ್ನು ಪ್ಯಾಲಸ್ಟೀನ್ಗೆ ಪೂರೈಸಲಾಗುವುದು. ಇದೇ ವರ್ಷಾಂತ್ಯಕ್ಕೆ ಪ್ಯಾಲಸ್ಟೀನ್ಗೆ ಕೊಡಬೇಕಿದ್ದ ಲಸಿಕೆಗಳ ಸಂಖ್ಯೆಗೆ ಇದು ಸಮನಾಗಿರುತ್ತದೆ ಎಂದು ಇಸ್ರೇಲ್ ಹೇಳಿದೆ. ಇಸ್ರೇಲ್ ಈಗಾಗಲೇ ತನ್ನ ದೇಶದ ಶೇ 85ರಷ್ಟು ಪ್ರಜೆಗಳಿಗೆ ಲಸಿಕೆ ನೀಡಿದೆ. ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆ ಮತ್ತು ಗಾಜಾಪಟ್ಟಿಗಳಲ್ಲಿರುವ 45 ಲಕ್ಷ ಪ್ಯಾಲಸ್ಟೀನ್ ಪ್ರಜೆಗಳಿಗೆ ಲಸಿಕೆ ಕೊಡದಿರುವ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು.
ಭಾನುವಾರವಷ್ಟೇ ಅಧಿಕಾರಕ್ಕೆ ಬಂದ ಇಸ್ಟೇಲ್ನ ಹೊಸ ಸರ್ಕಾರವು ಲಸಿಕೆ ಪೂರೈಕೆ ವಿಚಾರವನ್ನು ದೃಢಪಡಿಸಿದೆ. ಶೀಘ್ರವೇ ಎಕ್ಸ್ಪೈರ್ ಆಗಲಿರುವ ಫಿಜರ್ ಲಸಿಕೆಗಳನ್ನು ಪ್ಯಾಲಸ್ಟೀನ್ ಆಡಳಿತಕ್ಕೆ ಒದಗಿಸಲಾಗುವುದು. ಪ್ಯಾಲಸ್ಟೀನ್ ಆಡಳಿತವು ಇಷ್ಟೇ ಸಂಖ್ಯೆಯ ಲಸಿಕೆಗಳನ್ನು ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಇಸ್ರೇಲ್ಗೆ ನೀಡಲಿದೆ ಎಂದು ಸರ್ಕಾರದ ಉನ್ನತ ಅಧಿಕಾರಿಗಳು ಹೇಳಿದ್ದಾರೆ.
ವಿಶ್ವದಲ್ಲಿ ಅತ್ಯಂತ ಯಶಸ್ವಿ ಲಸಿಕಾ ಅಭಿಯಾನ ನಡೆಸಿದ ಕೀರ್ತಿ ಇಸ್ರೇಲ್ಗೆ ಸೇರುತ್ತದೆ. ವ್ಯಾಪಾರ, ಉದ್ಯಮ ಮತ್ತು ಶಿಕ್ಷಣ ಸಂಸ್ಥೆಗಳನ್ನು ಇಸ್ರೇಲ್ ಪೂರ್ಣ ಪ್ರಮಾಣದಲ್ಲಿ ತೆರೆದಿದೆ. ಸಾರ್ವಜನಿಕರು ಮಾಸ್ಕ್ ಧರಿಸಬೇಕೆಂಬ ನಿಬಂಧನೆಯನ್ನೂ ಈ ವಾರ ಸರ್ಕಾರ ತೆರವುಗೊಳಿಸಿದೆ.
ಪ್ಯಾಲಸ್ಟೀನ್ಗೆ ಸೇರಿದ ಪ್ರದೇಶಗಳನ್ನು ಆಕ್ರಮಿಸಿಕೊಂಡಿರುವ ಇಸ್ರೇಲ್ಗೆ ಅಲ್ಲಿನ ನಾಗರಿಕರಿಗೆ ಲಸಿಕೆ ಒದಗಿಸುವ ಹೊಣೆಗಾರಿಕೆ ಇದೆ ಎಂದು ಮಾನವ ಹಕ್ಕು ಸಂಘಟನೆಗಳು ಹೇಳಿದ್ದವು. ಆದರೆ ಇಂಥ ಹೊಣೆಗಾರಿಕೆಯನ್ನು ಇಸ್ರೇಲ್ ಮೊದಲಿನಿಂದಲೂ ನಿರಾಕರಿಸುತ್ತಲೇ ಬಂದಿತ್ತು. ಈ ಹಿಂದೆ ಪ್ಯಾಲಸ್ಟೀನ್ ಸರ್ಕಾರದೊಂದಿಗೆ ಮಾಡಿಕೊಂಡಿರುವ ಹಲವು ಒಪ್ಪಂದಗಳ ಪ್ರಕಾರ ಈ ಪ್ರದೇಶಗಳಲ್ಲಿ ಪ್ಯಾಲಸ್ಟೀನ್ ಆಡಳಿತಕ್ಕೇ ಅಧಿಕಾರವಿದೆ. ಜನರ ಆರೋಗ್ಯವು ಪ್ಯಾಲಸ್ಟೀನ್ ಸರ್ಕಾರದ ಹೊಣೆ ಎಂದು ಇಸ್ರೇಲ್ ವಾದಿಸಿತ್ತು.
ಪ್ರಸ್ತುತ ಗಾಜಾಪಟ್ಟಿಯಲ್ಲಿ ಹಮಾಸ್ನ ಪ್ರಭಾವ ವ್ಯಾಪಕವಾಗಿದೆ. ಇಸ್ರೇಲ್ ಮತ್ತು ಹಲವು ಪಾಶ್ಚಿಮಾತ್ಯ ದೇಶಗಳು ಹಮಾಸ್ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿವೆ. ವಿಶ್ವ ಆರೋಗ್ಯ ಸಂಸ್ಥೆಯ ನೆರವಿನೊಂದಿ ಪ್ಯಾಲಸ್ಟೀನ್ ಆಡಳಿತವು ಲಸಿಕೆ ಪಡೆದುಕೊಳ್ಳಲು ಪ್ರಯತ್ನಸುತ್ತಿತ್ತು. ಇದೀಗ ಇಸ್ರೇಲ್ ಸರ್ಕಾರ ಘೋಷಿಸಿರುವ ಲಸಿಕೆಗಳ ನೆರವು ವಿಶ್ವಸಂಸ್ಥೆಯ ಯೋಜನೆಯ ಭಾಗವಾಗಿರುತ್ತದೆಯೇ ಎಂಬ ಬಗ್ಗೆ ಯಾವುದೇ ಖಚಿತತೆ ಇಲ್ಲ.
(Israel to send 1 million coronavirus vaccine doses to Palestinians But These are at soon-to-expire date)
ಇದನ್ನೂ ಓದಿ: ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಯ ಸಿಂಗಲ್ ಡೋಸ್ ಕೊರೊನಾ ಲಸಿಕೆಯನ್ನು ಭಾರತಕ್ಕೆ ತರಲು ಪ್ರಯತ್ನ
ಇದನ್ನೂ ಓದಿ: ಮೊದಲ ಡೋಸ್ ಆಸ್ಟ್ರಾಜೆನೆಕಾ ಲಸಿಕೆ ಪಡೆದವರು ಎರಡನೇ ಡೋಸ್ಗೆ ಫೈಜರ್-ಬಯೋಎನ್ಟೆಕ್ ಅಥವಾ ಮಾಡೆರ್ನಾ ಪಡೆಯಿರಿ
Published On - 10:49 pm, Fri, 18 June 21