ಗಾಜಾದಲ್ಲಿ ನಡೆಯುತ್ತಿರುವ ಮಾನವ ದುರಂತ ನಿಲ್ಲಿಸುವಂತೆ ಇಸ್ರೇಲ್ಗೆ ಅಂತಾರಾಷ್ಟ್ರೀಯ ನ್ಯಾಯಾಲಯ ಆದೇಶ
ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಪ್ಯಾಲೆಸ್ತೀನ್ನ ಹಮಾಸ್ ಉಗ್ರರು ಮತ್ತು ಇಸ್ರೇಲ್ ಸೇನೆ ನಡುವಿನ ಯುದ್ಧದ ಬಗ್ಗೆ ಅಂತಾರಾಷ್ಟ್ರೀಯ ನ್ಯಾಯಾಲಯವು ಕಳವಳ ವ್ಯಕ್ತಪಡಿಸಿದೆ. ಕೂಡಲೇ ಮಾನವ ದುರಂತ ಹಾಗೂ ಮಿಲಿಟರಿ ಕಾರ್ಯಾಚರಣೆಯಲ್ಲಿ ನಿಲ್ಲಿಸುವಂತೆ ಇಸ್ರೇಲ್ಗೆ ನ್ಯಾಯಾಲಯವು ಆದೇಶಿಸಿದೆ.
ಹೇಗ್, ಜ.26: ಗಾಜಾ ಪಟ್ಟಿಯಲ್ಲಿ (Gaza strip) ನಡೆಯುತ್ತಿರುವ ಮಾನವ ದುರಂತ ಮತ್ತು ಮಾನವೀಯ ಬಿಕ್ಕಟ್ಟಿನ ಬಗ್ಗೆ ಅಂತಾರಾಷ್ಟ್ರೀಯ ನ್ಯಾಯಾಲಯವು ಕಳವಳ ವ್ಯಕ್ತಪಡಿಸಿದ್ದು, ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಇಸ್ರೇಲ್ (Israel) ಸರ್ಕಾರಕ್ಕೆ ಶುಕ್ರವಾರ ಆದೇಶಿಸಿದೆ. ಅಲ್ಲದೆ, ಆದೇಶದ ಅನ್ವಯ ತೆಗೆದುಕೊಂಡ ಕ್ರಮಗಳ ಕುರಿತು ಒಂದು ತಿಂಗಳೊಳಗೆ ವರದಿ ಸಲ್ಲಿಸುವಂತೆ ನಿರ್ದೇಶಿಸಿದೆ.
ಗಾಜಾ ಪಟ್ಟಿಯಲ್ಲಿ ಪ್ಯಾಲೆಸ್ತೀನಿಯಾದವರ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಎಲ್ಲಾ ಮಿಲಿಟರಿ ಕ್ರಮಗಳನ್ನು ನಿಲ್ಲಿಸಲು ನಿರ್ದೇಶನ ಕೋರಿ 2023ರ ಡಿಸೆಂಬರ್ ತಿಂಗಳಲ್ಲಿ ರಿಪಬ್ಲಿಕ್ ಆಫ್ ಸೌತ್ ಆಫ್ರಿಕಾ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಅಂತಾರಾಷ್ಟ್ರೀಯ ನ್ಯಾಯಾಲಯ, ಈ ನಿರ್ದೇಶನ ನೀಡಿದೆ.
ಇದನ್ನೂ ಓದಿ: ಇಸ್ರೇಲ್ ಹಮಾಸ್ ಸಂಘರ್ಷ: ಪ್ಯಾಲೆಸ್ಟೈನ್ ಜತೆ ಮಾತುಕತೆ ನಡೆಸಲು ಇಷ್ಟವಿಲ್ಲ: ಬೆಂಜಮಿನ್ ನೆತನ್ಯಾಹು
ನ್ಯಾಯಾಲಯದ ಜಡ್ಜ್ ಜೋನ್ ಡೊನೊಗ್ಯು, ಇಸ್ರೇಲ್ ತನ್ನ ಮಿಲಿಟರಿ ಪಡೆಗಳು ಗಾಜಾದಲ್ಲಿ ಪ್ಯಾಲೇಸ್ಟಿನಿಯನ್ ಗುಂಪುಗಳನ್ನು ಕೊಲ್ಲುವ, ಗುಂಪಿನ ಸದಸ್ಯರಿಗೆ ದೈಹಿಕ ಅಥವಾ ಮಾನಸಿಕ ಹಾನಿ ಉಂಟುಮಾಡುವಂತಹ ಯಾವುದೇ ಕೃತ್ಯವನ್ನು ನಡೆಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಅಲ್ಲದೆ, ಗಾಜಾ ಪಟ್ಟಿಯಲ್ಲಿ ಪ್ಯಾಲೆಸ್ತೀನಿಯಾದ ಜೀವನದ ಪ್ರತಿಕೂಲ ಪರಿಸ್ಥಿತಿಗಳನ್ನು ಪರಿಹರಿಸಲು ಮೂಲಭೂತ ಸೇವೆಗಳು ಮತ್ತು ಮಾನವೀಯ ನೆರವು ಒದಗಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಇಸ್ರೇಲ್ ಸರ್ಕಾರಕ್ಕೆ ನಿರ್ದೇಶಿಸಿದ್ದಾರೆ.
ದಕ್ಷಿಣ ಆಫ್ರಿಕಾ ಗಣರಾಜ್ಯವು ಗಾಜಾದಲ್ಲಿ ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸಲು ಪ್ರಯತ್ನಿಸಿತ್ತು. ಇದಾದ ನಂತರ, ಇಸ್ರೇಲ್ ವಿರುದ್ಧ ರಿಪಬ್ಲಿಕ್ ಆಫ್ ಸೌತ್ ಆಫ್ರಿಕಾ ನ್ಯಾಯಾಲಯದ ಮೊರೆ ಹೋಗಿತ್ತು. ಅರ್ಜಿಯನ್ನು ಅಂತರರಾಷ್ಟ್ರೀಯ ನ್ಯಾಯಾಲಯವು ಜನವರಿ 11 ಮತ್ತು 12 ರಂದು ನಡೆಸಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ