ಇಟಲಿ ಶಾಲೆಗಳಲ್ಲಿ ಬುರ್ಖಾ, ನಖಾಬ್‌ಗೆ ಬೀಳುತ್ತಾ ನಿಷೇಧ?: ಪ್ರಧಾನಿ ಜಾರ್ಜಿಯಾ ಮೆಲೋನಿ ಮಹತ್ವದ 3 ಪ್ರಸ್ತಾಪಗಳು

ಇಟಲಿಯ ಶಾಲೆಗಳಲ್ಲಿ ಬುರ್ಖಾ-ನಖಾಬ್ ನಿಷೇಧಿಸಲು ಪ್ರಧಾನಿ ಮೆಲೋನಿ ಸರ್ಕಾರ ಸಜ್ಜಾಗಿದೆ. ವಿದೇಶಿ ವಿದ್ಯಾರ್ಥಿಗಳಿಗೆ ಮಿತಿ ಹಾಗೂ ಪೋಷಕರಿಗೆ ಇಟಾಲಿಯನ್ ಭಾಷಾ ಕಲಿಕೆ ಕಡ್ಡಾಯಗೊಳಿಸುವ ಪ್ರಸ್ತಾಪಗಳಿವೆ. ಇಟಲಿಯ ಸಂಸ್ಕೃತಿ ಮತ್ತು ಕಾನೂನುಗಳನ್ನು ಗೌರವಿಸುವುದು ಅನಿವಾರ್ಯ ಎಂದು ಮೆಲೋನಿ ಪ್ರತಿಪಾದಿಸಿದ್ದಾರೆ. ಈ ಕ್ರಮಗಳು ವಲಸಿಗರ ಸಮಗ್ರತೆಗೆ ಪೂರಕವೆಂದು ಸರ್ಕಾರ ಹೇಳುತ್ತದೆ, ಆದರೆ ಇದು ತಾರತಮ್ಯ ಎಂದು ವಿರೋಧ ಪಕ್ಷಗಳು ಆಕ್ಷೇಪಿಸುತ್ತಿವೆ. 2027ರ ಚುನಾವಣೆ ಹಿನ್ನೆಲೆಯಲ್ಲಿ ಇದು ಮಹತ್ವ ಪಡೆದಿದೆ.

ಇಟಲಿ ಶಾಲೆಗಳಲ್ಲಿ ಬುರ್ಖಾ, ನಖಾಬ್‌ಗೆ ಬೀಳುತ್ತಾ ನಿಷೇಧ?: ಪ್ರಧಾನಿ ಜಾರ್ಜಿಯಾ ಮೆಲೋನಿ ಮಹತ್ವದ 3 ಪ್ರಸ್ತಾಪಗಳು
ಜಾರ್ಜಿಯಾ ಮೆಲೋನಿ
Image Credit source: PTI

Updated on: Sep 21, 2026 | 1:10 PM

ರೋಮ್, ಸೆಪ್ಟೆಂಬರ್ 21: ಇಟಲಿಯ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮುಖ ಮುಚ್ಚುವ ಮುಸ್ಲಿಂ ಸಾಂಪ್ರದಾಯಿಕ ಉಡುಪುಗಳಾದ ‘ಬುರ್ಖಾ’ ಮತ್ತು ‘ನಖಾಬ್’ ಧರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನೇತೃತ್ವದ ಸರ್ಕಾರ ಸಜ್ಜಾಗಿದೆ. ರೋಮ್‌ನಲ್ಲಿ ನಡೆದ ತಮ್ಮ ಪಕ್ಷ ‘ಬ್ರದರ್ಸ್ ಆಫ್ ಇಟಲಿ’ ಯುವ ಘಟಕದ ಸಮಾವೇಶದಲ್ಲಿ ಮಾತನಾಡಿದ ಅವರು, ತರಗತಿಗಳಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಗೆ ಮಿತಿ ಹೇರುವುದು ಹಾಗೂ ವಿದೇಶಿ ಪೋಷಕರಿಗೆ ಇಟಾಲಿಯನ್ ಭಾಷೆ ಕಲಿಕೆಯನ್ನು ಕಡ್ಡಾಯಗೊಳಿಸುವುದು ಸೇರಿದಂತೆ 3 ಪ್ರಮುಖ ಕರಡು ಪ್ರಸ್ತಾಪಗಳನ್ನು ಪ್ರಕಟಿಸಿದ್ದಾರೆ. ಈ ಹೊಸ ನೀತಿಯು ಸಂಪುಟದ ಅನುಮೋದನೆ ಪಡೆದು, 60  ದಿನಗಳ ಒಳಗೆ ಸಂಸತ್ತಿನ ಒಪ್ಪಿಗೆ ಪಡೆದ ಬಳಿಕ ಕಾನೂನಾಗಿ ಜಾರಿಗೆ ಬರಲಿದೆ.

ಬುರ್ಖಾ, ನಖಾಬ್ ನಿಷೇಧ: ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಮುಖವನ್ನು ಸಂಪೂರ್ಣ ಮುಚ್ಚುವ ಬುರ್ಖಾ ಮತ್ತು ಕಣ್ಣುಗಳು ಮಾತ್ರ ಕಾಣುವ ನಖಾಬ್ ಧರಿಸುವುದನ್ನು ಕಾನೂನುಬದ್ಧವಾಗಿ ನಿಷೇಧಿಸುವುದು (ಆದರೆ ತಲೆ ಮುಚ್ಚುವ ಹಿಜಾಬ್ ಪ್ರಸ್ತಾಪಿಸಿಲ್ಲ).

ವಿದೇಶಿ ವಿದ್ಯಾರ್ಥಿಗಳ ಮಿತಿ: ಇಟಲಿಯ ಶಾಲೆಗಳ ಪ್ರತಿ ತರಗತಿ ಕೊಠಡಿಯಲ್ಲಿ ವಿದೇಶಿ ಮೂಲದ ವಿದ್ಯಾರ್ಥಿಗಳ ಸಂಖ್ಯೆಗೆ ಗರಿಷ್ಠ ಮಿತಿಯನ್ನು (ಕ್ಯಾಪಿಂಗ್) ನಿಗದಿಪಡಿಸುವುದು.

ಪೋಷಕರಿಗೂ ಭಾಷೆ ಕಡ್ಡಾಯ: ಶಾಲಾ-ಕಾಲೇಜು ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟಪಡುವ ವಿದೇಶಿ ವಿದ್ಯಾರ್ಥಿಗಳ ಪೋಷಕರು ಇಟಾಲಿಯನ್ ಭಾಷಾ ತರಗತಿಗಳಿಗೆ ಹಾಜರಾಗುವುದನ್ನು ಕಡ್ಡಾಯಗೊಳಿಸುವುದು.

‘ಇಟಲಿಗೆ ಬರುವವರು ನಿಯಮ ಗೌರವಿಸಲಿ’: “ಇಟಲಿಗೆ ಬಂದು ಭವಿಷ್ಯ ಕಟ್ಟಿಕೊಳ್ಳಲು ಬಯಸುವ ಯಾರೇ ಆದರೂ ನಮ್ಮ ಭಾಷೆ, ಸಂಸ್ಕೃತಿ ಹಾಗೂ ಕಾನೂನುಗಳನ್ನು ಗೌರವಿಸುವುದು ಅನಿವಾರ್ಯ. ಮುಖ ಮುಚ್ಚಿಕೊಂಡು ಶಾಲೆಗೆ ಬರುವುದನ್ನು ಅಥವಾ ಸಂಪ್ರದಾಯದ ಹೆಸರಿನಲ್ಲಿ ಹೆಣ್ಣುಮಕ್ಕಳು ತಮ್ಮ ಗುರುತನ್ನು ಮರೆಮಾಚಿಕೊಳ್ಳುವುದನ್ನು ಇಟಲಿಯಲ್ಲಿ ಒಪ್ಪಲು ಸಾಧ್ಯವಿಲ್ಲ” ಎಂದು ಪ್ರಧಾನಿ ಮೆಲೋನಿ ಪ್ರತಿಪಾದಿಸಿದ್ದಾರೆ.

ಆಸ್ತಿ ತೆರಿಗೆ ವಿನಾಯಿತಿ ಘೋಷಣೆ: ಮಧ್ಯಮ ವರ್ಗದ ಜನರನ್ನು ಸೆಳೆಯುವ ಸಲುವಾಗಿ, ಸಣ್ಣ ಮತ್ತು ಮಧ್ಯಮ ಗಾತ್ರದ ಕಾರುಗಳು ಹಾಗೂ ಸ್ಕೂಟರ್‌ಗಳ ಮೇಲಿದ್ದ ಕಿರಿಕಿರಿ ಉಂಟುಮಾಡುತ್ತಿದ್ದ ಆಸ್ತಿ ತೆರಿಗೆಯಿಂದ ವಿನಾಯಿತಿ ನೀಡುವುದಾಗಿಯೂ ಇದೇ ವೇಳೆ ಅವರು ಘೋಷಿಸಿದರು.

ಮತ್ತಷ್ಟು ಓದಿ: ‘ಆರೋಗ್ಯ, ಯಶಸ್ಸು ನಿಮ್ಮದಾಗಲಿ’; ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ

ಬುರ್ಖಾ ನಿಷೇಧಿಸಿರುವ ಇತರ ರಾಷ್ಟ್ರಗಳು: ಸಾರ್ವಜನಿಕ ಸ್ಥಳಗಳು ಹಾಗೂ ಶಾಲೆಗಳಲ್ಲಿ ಬುರ್ಖಾ ಮತ್ತು ನಿಖಾಬ್ ಅನ್ನು ನಿಷೇಧಿಸುವುದು ಯುರೋಪ್‌ನಲ್ಲಿ ಹೊಸದೇನಲ್ಲ. ವಿಶ್ವದ ಸುಮಾರು ೨೪ ದೇಶಗಳು ಈಗಾಗಲೇ ಮುಖ ಮುಚ್ಚುವ ಮುಸುಕಿನ ಮೇಲೆ ನಿಷೇಧ ಹೇರಿವೆ. 2011 ರಲ್ಲೇ ಫ್ರಾನ್ಸ್ ಈ ಕಾನೂನನ್ನು ಮೊದಲು ತಂದಿದ್ದರೆ, ನಂತರ ಬೆಲ್ಜಿಯಂ, ಆಸ್ಟ್ರಿಯಾ, ಡೆನ್ಮಾರ್ಕ್, ಸ್ವಿಟ್ಜರ್ಲೆಂಡ್, ನೆದರ್ಲ್ಯಾಂಡ್ಸ್ ಹಾಗೂ ಚೀನಾ ಕೂಡ ಇಂತಹ ನಿರ್ಬಂಧಗಳನ್ನು ಜಾರಿಗೆ ತಂದಿವೆ.

2027 ರ ಚುನಾವಣಾ ರಣತಂತ್ರ: ಇಟಲಿಯಲ್ಲಿ 2027 ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಎರಡನೇ ಮಹಾಯುದ್ಧದ ನಂತರ ಇಟಲಿಯಲ್ಲಿ ಅತ್ಯಂತ ಸುದೀರ್ಘ ಕಾಲ ನಿರಂತರವಾಗಿ ಅಧಿಕಾರ ಉಳಿಸಿಕೊಂಡ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೆಲೋನಿ ಅವರ ಬಲಪಂಥೀಯ ಸರ್ಕಾರ, ವಲಸಿಗರ ಸಮಸ್ಯೆ ಮತ್ತು ರಾಷ್ಟ್ರೀಯ ಅಸ್ಮಿತೆಯನ್ನು ಮುಂದಿಟ್ಟುಕೊಂಡು ತನ್ನ ಜನಪ್ರಿಯತೆಯನ್ನು ಭದ್ರಪಡಿಸಿಕೊಳ್ಳಲು ಮುಂದಾಗಿದೆ.

ಸಾಮಾಜಿಕ ಸಂಯೋಜನೆ ಮತ್ತು ವಿವಾದ: ಈ ನಿಯಮಗಳು ವಿದೇಶಿ ವಲಸಿಗರನ್ನು ದೇಶದ ಮುಖ್ಯವಾಹಿನಿಗೆ ಸೇರಿಸಲು ಪೂರಕವಾಗಿವೆ ಎಂದು ಆಡಳಿತಾರೂಢ ಬಣ ಸಮರ್ಥಿಸುತ್ತಿದ್ದರೆ, ವಿರೋಧ ಪಕ್ಷಗಳು ಮತ್ತು ಮಾನವ ಹಕ್ಕುಗಳ ಸಂಘಟನೆಗಳು ಇದು ಅಲ್ಪಸಂಖ್ಯಾತರು ಹಾಗೂ ವಲಸಿಗರನ್ನು ಗುರಿಯಾಗಿಸಿಕೊಂಡಿರುವ ತಾರತಮ್ಯದ ನೀತಿ ಎಂದು ಆಕ್ಷೇಪ ವ್ಯಕ್ತಪಡಿಸುವ ಸಾಧ್ಯತೆಯಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us