ಬ್ರಿಟನ್​​ನ ನೂತನ ಪ್ರಧಾನಿಯಾಗಿ ಆ್ಯಂಡಿ ಬರ್ನ್‌ಹ್ಯಾಮ್ ಅಧಿಕಾರ ಸ್ವೀಕಾರ

ಆ್ಯಂಡಿ ಬರ್ನ್‌ಹ್ಯಾಮ್ ಅವರು ಬ್ರಿಟನ್‌ನ ಲೇಬರ್ ಪಕ್ಷದ ಅತ್ಯಂತ ಪ್ರಭಾವಶಾಲಿ ಮತ್ತು ಜನಪ್ರಿಯ ನಾಯಕರಲ್ಲಿ ಒಬ್ಬರು. ಇವರು 'ಗ್ರೇಟರ್ ಮ್ಯಾಂಚೆಸ್ಟರ್'ನ ಮೇಯರ್ ಆಗಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ್ದು, ಅಲ್ಲಿನ ಸಾರ್ವಜನಿಕ ಸಾರಿಗೆ, ಆರೋಗ್ಯ ಮತ್ತು ವಸತಿ ರಂಗಗಳಲ್ಲಿ ಮಹತ್ತರ ಸುಧಾರಣೆಗಳನ್ನು ತರುವ ಮೂಲಕ ದೇಶಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಇವರು ಇದೀಗ ಯುನೈಟೆಡ್ ಕಿಂಗ್​ಡಮ್​ನ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಬ್ರಿಟನ್​​ನ ನೂತನ ಪ್ರಧಾನಿಯಾಗಿ ಆ್ಯಂಡಿ ಬರ್ನ್‌ಹ್ಯಾಮ್ ಅಧಿಕಾರ ಸ್ವೀಕಾರ
Andy Burnham
Image Credit source: AP

Updated on: Jul 20, 2026 | 8:27 PM

ಲಂಡನ್, ಜುಲೈ 20: ಮ್ಯಾಂಚೆಸ್ಟರ್‌ನ ಮಾಜಿ ಮೇಯರ್ ಮತ್ತು ಲೇಬರ್ ಪಕ್ಷದ ಹಿರಿಯ ನಾಯಕರಾದ ಆ್ಯಂಡಿ ಬರ್ನ್‌ಹ್ಯಾಮ್ (Andy Burnham) ಅಧಿಕೃತವಾಗಿ ಯುನೈಟೆಡ್ ಕಿಂಗ್‌ಡಮ್‌ನ (UK) ನೂತನ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಲಂಡನ್‌ನ ಬಕಿಂಗ್ಹ್ಯಾಮ್ ಅರಮನೆಯಲ್ಲಿ ರಾಜ ಚಾರ್ಲ್ಸ್ III ಅವರನ್ನು ಭೇಟಿಯಾದ ನಂತರ ಆ್ಯಂಡಿ ಬರ್ನ್​ಹ್ಯಾಮ್ ಅಧಿಕಾರ ವಹಿಸಿಕೊಂಡರು. ಇವರು ಕೀರ್ ಸ್ಟಾರ್ಮರ್ (Keir Starmer) ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನವನ್ನು ತುಂಬಿದ್ದು, ಕಳೆದ 1 ದಶಕದಲ್ಲಿ ಅಂದರೆ 2016ರಿಂದೀಚೆಗೆ ಬ್ರಿಟನ್ ಕಂಡ 7ನೇ ಪ್ರಧಾನ ಮಂತ್ರಿಯಾಗಿದ್ದಾರೆ.

ಅಧಿಕಾರ ಹಸ್ತಾಂತರದ ಸಾಂಪ್ರದಾಯಿಕ ವಿಧಿಯಾದ “ಕಿಸ್ಸಿಂಗ್ ಹ್ಯಾಂಡ್ಸ್” (ಅರಮನೆಯ ನಿಯಮದಂತೆ ಕೈಕುಲುಕುವುದು) ಕಾರ್ಯಕ್ರಮದ ಫೋಟೋವನ್ನು ಬಕಿಂಗ್ಹ್ಯಾಮ್ ಅರಮನೆ ಬಿಡುಗಡೆ ಮಾಡಿದೆ. ಅರಮನೆಯ ಪ್ರಕಟಣೆಯ ಪ್ರಕಾರ, “ಮಹಾರಾಜರು ಆ್ಯಂಡಿ ಬರ್ನ್‌ಹ್ಯಾಮ್ ಅವರನ್ನು ಭೇಟಿ ಮಾಡಿ ಹೊಸ ಸರ್ಕಾರವನ್ನು ರಚಿಸಲು ವಿನಂತಿಸಿದರು. ಬರ್ನ್‌ಹ್ಯಾಮ್ ಅವರು ಈ ಪ್ರಸ್ತಾಪವನ್ನು ಸ್ವೀಕರಿಸಿ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು” ಎಂದು ತಿಳಿಸಿದೆ.

ಇದನ್ನೂ ಓದಿ: Video: ಭಾರತಕ್ಕೆ ಬಂದಿಳಿದ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್

ಇದಾದ ಬಳಿಕ, ನಿರ್ಗಮಿತ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಪ್ರಧಾನಿಯ ಅಧಿಕೃತ ನಿವಾಸವಾದ ’10 ಡೌನಿಂಗ್ ಸ್ಟ್ರೀಟ್’ ಹೊರಗೆ ವಿದಾಯ ಭಾಷಣ ಮಾಡಿ, ನನ್ನ ಕೆಲಸ ಮುಗಿದಿದೆ ಎಂದು ಹೇಳಿದರು. ತಮ್ಮದೇ ಪಕ್ಷದ ಒತ್ತಡದಿಂದಾಗಿ ರಾಜೀನಾಮೆ ನೀಡಿದ ಅವರು, “2 ವರ್ಷಗಳ ಹಿಂದೆ ನಾನು ಅಧಿಕಾರ ವಹಿಸಿಕೊಂಡಾಗ ಇದ್ದದ್ದಕ್ಕಿಂತ ಬ್ರಿಟನ್ ಈಗ ಹೆಚ್ಚು ಬಲಶಾಲಿಯಾಗಿದೆ ಮತ್ತು ನ್ಯಾಯಯುತವಾಗಿದೆ” ಎಂದರು.

ಆ್ಯಂಡಿ ಬರ್ನ್‌ಹ್ಯಾಮ್ ಯಾರು?:

56 ವರ್ಷದ ಆ್ಯಂಡಿ ಬರ್ನ್‌ಹ್ಯಾಮ್ ಲೇಬರ್ ಪಕ್ಷದ ಅನುಭವಿ ರಾಜಕಾರಣಿ. ಇವರು ಈ ಹಿಂದೆ ಸಂಸದರಾಗಿ ಮತ್ತು ಲೇಬರ್ ಪಕ್ಷದ ಸರ್ಕಾರಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ತದನಂತರ ‘ಗ್ರೇಟರ್ ಮ್ಯಾಂಚೆಸ್ಟರ್’ನ ಮೇಯರ್ ಆಗಿ ಕಾರ್ಯನಿರ್ವಹಿಸಿ ಭಾರಿ ಜನಪ್ರಿಯತೆ ಗಳಿಸಿದ್ದರು. ಬ್ರಿಟನ್‌ನ ಉತ್ತರದ ನಗರಗಳು ಮತ್ತು ಪ್ರಾದೇಶಿಕ ಸಬಲೀಕರಣದ ಪರವಾಗಿ ಸದಾ ಧ್ವನಿ ಎತ್ತುವ ಕಾರಣಕ್ಕಾಗಿ ಇವರನ್ನು ರಾಜಕೀಯ ವಲಯದಲ್ಲಿ ‘ಕಿಂಗ್ ಆಫ್ ದಿ ನಾರ್ತ್’ (ಉತ್ತರದ ರಾಜ) ಎಂದೇ ಕರೆಯಲಾಗುತ್ತದೆ.

ಇದನ್ನೂ ಓದಿ: ಬ್ರಿಟನ್‌ನ ನೂತನ ಪ್ರಧಾನಿ ಕೀರ್ ಸ್ಟಾರ್ಮರ್​​​ಗೆ ಕರೆ ಮಾಡಿ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ ಮೋದಿ

ಕಳೆದ ತಿಂಗಳಷ್ಟೇ ಉಪಚುನಾವಣೆಯ ಮೂಲಕ ಮತ್ತೆ ಸಂಸತ್ತಿಗೆ ಮರಳಿದ ಇವರು, ದೇಶದಲ್ಲಿ ಒಗ್ಗಟ್ಟು ಮತ್ತು ಭರವಸೆಯ ರಾಜಕೀಯವನ್ನು ತರುವುದಾಗಿ ಭರವಸೆ ನೀಡಿದ್ದಾರೆ. ಬ್ರಿಟನ್ ಪ್ರಸ್ತುತ ಆರ್ಥಿಕ ಹಿಂಜರಿತ ಮತ್ತು ಸಾರ್ವಜನಿಕ ಹಣಕಾಸಿನ ತೀವ್ರ ಮುಕ್ಕಟ್ಟನ್ನು ಎದುರಿಸುತ್ತಿರುವ ಕಠಿಣ ಸಮಯದಲ್ಲಿ ಬರ್ನ್‌ಹ್ಯಾಮ್ ಅಧಿಕಾರ ವಹಿಸಿಕೊಂಡಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us