ಲಿಬಿಯಾ ಮರುಭೂಮಿ (Libya Desert)ಯಲ್ಲಿ ಬಾಯಾರಿಕೆಯಿಂದ 20 ಮಂದಿ ವಲಸಿಗರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಛಾಡ್ ಗಡಿಯಲ್ಲಿ ಈ ಘಟನೆ ನಡೆದಿದೆ. ಮೃತರು ವಲಸಿಗರು ಎಂದು ಗುರುತಿಸಲಾಗಿದೆ, 320 ಕಿಲೋಮೀಟರ್ ದೂರದಲ್ಲಿರುವ ಕುಫ್ರಾದಿಂದ ಕಪ್ಪು ಪಿಕಪ್ ಟ್ರಕ್ ಒಂದು ಬಂದಿತ್ತು, ಆ ಟ್ರಕ್ನಲ್ಲಿದ್ದ 20 ಮಂದಿ ಮೃತಪಟ್ಟಿದ್ದಾರೆ ಎಂಬುದು ತಿಳಿದುಬಂದಿದೆ.
20 ಮಂದಿ ತೆರಳುತ್ತಿದ್ದ ವಾಹನವು ಮಾರ್ಗಮಧ್ಯದಲ್ಲಿ ಕೈಕೊಟ್ಟಿತ್ತು, ಬಳಿಕ ತಮ್ಮ ಗುರಿ ಮುಟ್ಟಲಾಗದೆ ಹಿಂದಿರುಗಿಯೂ ಹೋಗಲಾಗದೆ, ಬಾಯಾರಿಕೆ, ಹಸಿವಿನಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಟ್ರಕ್ ಚಾಲಕರೊಬ್ಬರು ಕೆಟ್ಟು ನಿಂತಿರುವ ಟ್ರಕ್ ಗಮನಿಸಿದ್ದಾರೆ, ಬಳಿಕ ಹತ್ತಿರ ಹೋಗಿ ನೋಡಿದಾಗ ಶವಗಳು ಕಣ್ಣಿಗೆ ಬಿದ್ದಿವೆ.
14 ದಿನಗಳ ಹಿಂದೆಯೇ ಇವರೆಲ್ಲರೂ ಮೃತಪಟ್ಟಿರಬಹುದು ಎಂದು ಊಹಿಸಲಾಗಿದೆ. ಅವರ ಮೊಬೈಲ್ ಗಮನಿಸಿದಾಗ ಜೂನ್ 13ರಂದು ಕೊನೆಯ ಕರೆ ಮಾಡಲಾಗಿತ್ತು.
ಮತ್ತೊಂದು ಪ್ರಕರಣದಲ್ಲಿ, ಲಿಬಿಯಾ ಕರಾವಳಿಯಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 30 ಮಂದಿ ಹಡಗಿನಲ್ಲಿ ತೆರಳುತ್ತಿದ್ದಾಗ ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿದ್ದಾರೆ. ಡಜನ್ಗೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದ್ದು, ಮಹಿಳೆಯರು ಹಾಗೂ ಮಕ್ಕಳು ಸೇರಿ ಐದು ಮಂದಿ ನಾಪತ್ತೆಯಾಗಿದ್ದು, ಮೃತಪಟ್ಟಿರುವ ಕುರಿತು ಶಂಕೆ ವ್ಯಕ್ತವಾಗಿದೆ.