Liz Truss Resigns ಬ್ರಿಟನ್ ಪ್ರಧಾನಿ ಲಿಜ್ ಟ್ರಸ್ ರಾಜೀನಾಮೆ
ಯುಕೆ ಪ್ರಧಾನಿ ಲಿಜ್ ಟ್ರಸ್ ರಾಜೀನಾಮೆ ನೀಡಿದ್ದಾರೆ. ಆರ್ಥಿಕ ಬಿಕ್ಕಟ್ಟಿನ ನಡುವೆಯೇ ಇವರು ಪ್ರಧಾನಿ ಹುದ್ದೆ ತ್ಯಜಿಸಿದ್ದು ಬ್ರಿಟನ್ ರಾಜಕೀಯದಲ್ಲಿನ ಮುಂದಿನ ನಡೆಗಳು ಏನು ಎಂಬುದು ಕಾದು ನೋಡಬೇಕಿದೆ
ಬೃಹತ್ ಆರ್ಥಿಕ ಬಿಕ್ಕಟ್ಟಿನ ನಡುವೆ ಯುಕೆ (UK) ಪ್ರಧಾನಿ ಲಿಜ್ ಟ್ರಸ್ (Liz Truss) ಇಂದು(ಗುರುವಾರ) ರಾಜೀನಾಮೆ ನೀಡಿದ್ದಾರೆ. ಅವರು 45 ದಿನಗಳ ಅಧಿಕಾರದ ನಂತರ ಬ್ರಿಟನ್ ಪ್ರಧಾನಿ ಲಿಜ್ ಟ್ರಸ್ ರಾಜೀನಾಮೆ ನೀಡಿದ್ದು ಬ್ರಿಟನ್ ಇತಿಹಾಸದಲ್ಲಿ ಕಡಿಮೆ ಅಧಿಕಾರವಧಿ ಹೊಂದಿದ ಪ್ರಧಾನಿಯಾಗಿದ್ದಾರೆ ಇವರು. ಲಿಜ್ ಅವರ ಆರ್ಥಿಕ ಯೋಜನೆಗಳು ಮಾರುಕಟ್ಟೆಗೆ ಆಘಾತ ತರಂಗಗಳನ್ನು ಕಳುಹಿಸಿದ್ದು ಕೇವಲ ಆರು ವಾರಗಳಲ್ಲಿ ಅವರ ಕನ್ಸರ್ವೇಟಿವ್ ಪಕ್ಷವನ್ನು ವಿಭಜಿಸಿತು. ಪರಿಸ್ಥಿತಿಯನ್ನು ಗಮನಿಸಿದರೆ, ನನಗೆ ನೀಡಿದ ಜನಾದೇಶವನ್ನು ನಾನು ಪೂರೈಸಲು ಸಾಧ್ಯವಿಲ್ಲ ಎಂದು ನಾನು ಅರಿತುಕೊಂಡೆ. ನಾನು ಮಹಾರಾಜರೊಂದಿಗೆ ಮಾತನಾಡಿದ್ದೇನೆ ಮತ್ತು ನನ್ನ ನಿರ್ಧಾರದ ಬಗ್ಗೆ ಅವರಿಗೆ ತಿಳಿಸಿದ್ದೇನೆ. ಉತ್ತರಾಧಿಕಾರಿ ಆಯ್ಕೆಯಾಗುವವರೆಗೂ ನಾನು ಪ್ರಧಾನ ಮಂತ್ರಿಯಾಗಿ ಇರುತ್ತೇನೆ ಎಂದು ಸುದ್ದಿಗಾರರ ಜತೆ ಮಾತನಾಡಿದ ಟ್ರಸ್ ಹೇಳಿದ್ದಾರೆ.
ತನ್ನ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ಇರುವ ಚುನಾವಣೆಯು “ಮುಂದಿನ ವಾರದೊಳಗೆ ಪೂರ್ಣಗೊಳ್ಳಲಿದೆ” ಎಂದು ಅವರು ಹೇಳಿದರು.
ತನ್ನನ್ನು ಟೀಕಿಸಿದ ಸಂಸದರಿಗೆ ಪ್ರತಿಕ್ರಿಯೆ ನೀಡಿದ ಟ್ರಸ್, ನಾನು ಹೋರಾಟಗಾರ್ತಿ, ಅರ್ಧದಿಂದ ತೊರೆದು ಹೋಗುವುದಿಲ್ಲ ಎಂದು ಹೇಳಿದ 24 ಗಂಟೆಗಳ ನಂತರ ರಾಜೀನಾಮೆ ಘೋಷಿಸಿದ್ದಾರೆ. “ನಾನು ಮುನ್ನುಗ್ಗಲು ಸಿದ್ಧವಾಗಿರುವ ವ್ಯಕ್ತಿ. ನಾನು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಿದ್ಧ” ಎಂದು ಅವರು ನಿನ್ನೆ ಹೇಳಿದ್ದರು.
ಟ್ರಸ್‌ನ ಪ್ರಧಾನಿ ಅಧಿಕಾರವಧಿ ಆರಂಭ ಆಗುವ ಹೊತ್ತಲ್ಲೇ ಮುಗಿದಿದೆ. ದಿವಂಗತ ರಾಣಿ ಎಲಿಜಬೆತ್ II ಗಾಗಿ 10 ದಿನಗಳ ಶೋಕಾಚರಣೆಯೊಂದಿಗೆ ಟ್ರಸ್ ಅವರ ರಾಜಕೀಯ ಕಾರ್ಯಕ್ರಮ ಆರಂಭವಾಗಿತ್ತು. ಒಂದು ವಾರದ ಹಿಂದೆಯಷ್ಟೇ ಹಣಕಾಸು ಸಚಿವ ಕ್ವಾಸಿ ಕ್ವಾರ್ಟೆಂಗ್ ಅವರನ್ನು ಟ್ರಸ್ ವಜಾ ಮಾಡಿದ್ದರು.
ಕ್ವಾರ್ಟೆಂಗ್ ಟ್ರಸ್ ಅವರ ಸಮಾನ ಮನಸ್ಕರಂತೆ ಕಾಣುತ್ತಿದ್ದರು. ಅವರು ಮುಂದಿನ ಆರು ತಿಂಗಳಲ್ಲಿ $67 ಶತಕೋಟಿ ಮೌಲ್ಯದ ಇಂಧನ ಯೋಜನೆಯ ಬೆಲೆಯನ್ನು ವಿವರಿಸುವ “ಮಿನಿ-ಬಜೆಟ್” ಅನ್ನು ಘೋಷಿಸಿದ್ದರು. ಆದರೆ ನಿಧಿ ಸಂಗ್ರಹಿಸುವ ಕ್ರಮ ಅವರ ಬಳಿ ಇರಲಿಲ್ಲ. ಇದರ ಬದಲಿಗೆ ಅವರು ವ್ಯಾಪಕವಾದ ತೆರಿಗೆ ಕಡಿತಗಳಿಗೆ ಪಾವತಿಸಲು ಬೃಹತ್ ಹೊಸ ಸಾಲವನ್ನು ಘೋಷಿಸಿದರು. ಈ ಪ್ರಕಟಣೆಯು ಅನ್ಯಾಯವಾಗಿರುವುದರಿಂದ ತಕ್ಷಣವೇ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಯಾಯಿತು. ಪರಿಣಾಮ ಪೌಂಡ್ ಡಾಲರ್ ವಿರುದ್ಧ ಕುಸಿಯಿತು.
Published On - 6:16 pm, Thu, 20 October 22