ಚೀನಾ ಆಯ್ತು ಈಗ ರಷ್ಯಾ: ಮಿತಿಮೀರಿದ ಕೊರೊನಾ ಸೋಂಕು, ಮಾಸ್ಕೋದಲ್ಲಿ 11 ದಿನ ಲಾಕ್ಡೌನ್
ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 30ರಂದ ನವೆಂಬರ್ 7ರವರೆಗೆ ವೇತನ ಸಹಿತ ಸರ್ಕಾರಿ ರಜೆಯನ್ನು ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಘೋಷಣೆ ಮಾಡಿದ್ದಾರೆ.
ಮಾಸ್ಕೋ: ಚೀನಾದಲ್ಲಿ ಕೊರೊನಾ (Coronavirus) ಹೆಚ್ಚಳವುಂಟಾಗಿ ಎರಡ್ಮೂರು ನಗರಗಳು ಸಂಪೂರ್ಣ ಲಾಕ್ಡೌನ್ ಆಗಿರುವ ಬೆನ್ನಲ್ಲೇ ರಷ್ಯಾದಲ್ಲೂ ಕೂಡ ಕೊರೊನಾ ಸಾಂಕ್ರಾಮಿಕ ಉಲ್ಬಣಗೊಂಡಿದೆ. ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜಧಾನಿ ಮಾಸ್ಕೋದಲ್ಲಿ 11 ದಿನಗಳ ಕಾಲ ಲಾಕ್ಡೌನ್ (Lockdown) ಘೋಷಿಸಲಾಗಿದ್ದು, ಇಂದು ಅಂಗಡಿಗಳು, ಶಾಲೆಗಳು, ರೆಸ್ಟೋರೆಂಟ್ಗಳೆಲ್ಲ ಬಂದ್ ಆಗಿವೆ. ಅಗತ್ಯವಲ್ಲದ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ರೀತಿಯ ಅಂದರೆ, ರೆಸ್ಟೋರೆಂಟ್ಗಳು, ಚಿಲ್ಲರೆ ವ್ಯಾಪಾರ ಅಂಗಡಿಗಳು, ಮನರಂಜನಾ ಸ್ಥಳಗಳು, ಶಾಲೆಗಳು ನವೆಂಬರ್ 7ರವರೆಗೆ ಮುಚ್ಚಿರುತ್ತವೆ ಎಂದು ಸ್ಥಳೀಯ ಸರ್ಕಾರ ಘೋಷಿಸಿದೆ. ಇನ್ನು ಆಹಾರ ಮತ್ತು ಔಷಧ ಪೂರೈಕೆಗಳಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ ಎಂದೂ ಹೇಳಲಾಗಿದೆ.
ರಷ್ಯಾದಲ್ಲಿ ಮತ್ತೀಗ ಕೊರೊನಾ ಪ್ರಕರಣಗಳು ಮಿತಿಮೀರುತ್ತಿರುವ ಹಿನ್ನೆಲೆಯಲ್ಲಿ ಲಾಕ್ಡೌನ್ ವಿಧಿಸಲಾಗಿದೆ. ಒಟ್ಟಾರೆ ಕೊರೊನಾದಿಂದ ಅತ್ಯಂತ ಹೆಚ್ಚು ಹಾನಿಗೆ ಒಳಗಾದ ರಾಷ್ಟ್ರಗಳಲ್ಲಿ ರಷ್ಯಾ ಕೂಡ ಒಂದು. ಅಲ್ಲಿ ಇದುವರೆಗೆ ಸುಮಾರು 2,30,000 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ರಷ್ಯಾದಲ್ಲಿ ಕೊರೊನಾ ಲಸಿಕೆಯನ್ನೂ ಕೂಡ ನೀಡಲಾಗುತ್ತಿದೆ. ರಷ್ಯಾದಲ್ಲಿ ತಯಾರಾದ ಸ್ಪುಟ್ನಿಕ್ ವಿ ಕೊರೊನಾ ಲಸಿಕೆಯನ್ನೇ ಜನರಿಗೆ ಕೊಡಲು ಪ್ರಯತ್ನಿಸಲಾಗುತ್ತಿದೆ. ಆದರೆ ರಷ್ಯಾದ ಜನರು ಕೊವಿಡ್ 19 ಲಸಿಕೆ ಹಾಕಿಸಿಕೊಳ್ಳಲೂ ಹಿಂದೇಟು ಹಾಕುತ್ತಿದ್ದಾರೆ ಎಂದು ವರದಿಯಾಗಿದೆ. ಇಂದಿನವರೆಗೆ ರಷ್ಯಾದಲ್ಲಿ ಕೇವಲ ಶೇ.32ರಷ್ಟು ಜನರಿಗೆ ಮಾತ್ರ ಕೊವಿಡ್ 19 ಲಸಿಕೆ ನೀಡಿ ಮುಗಿದಿದೆ. ಈ ಬಗ್ಗೆ ರಷ್ಯಾ ಸರ್ಕಾರದ ವೆಬ್ಸೈಟ್ನಲ್ಲಿಯೇ ದಾಖಲಾಗಿದೆ.
ಇನ್ನು ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 30ರಂದ ನವೆಂಬರ್ 7ರವರೆಗೆ ವೇತನ ಸಹಿತ ಸರ್ಕಾರಿ ರಜೆಯನ್ನು ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಘೋಷಣೆ ಮಾಡಿದ್ದಾರೆ. ಮಾಸ್ಕೋ ನಗರದಲ್ಲಿ ಇಂದು ಮುಂಜಾನೆಯಿಂದಲೇ ಲಾಕ್ಡೌನ್ ಪರಿಣಾಮ ಕಾಣಿಸಿದೆ. ವಾಹನ ಸಂಚಾರ ಕಡಿಮೆ ಇತ್ತು. ಜನರ ಓಡಾಟವೂ ವಿರಳವಾಗಿತ್ತು. ಆದರೆ ಮೆಟ್ರೋ ಬಳಿ ಮಾತ್ರ ಎಂದಿನಂತೆ ಜನಜಂಗುಳಿಯಿತ್ತು. ಅದರಲ್ಲೂ ಹಲವರು ಮಾಸ್ಕ್ ಧರಿಸದೆ ಓಡಾಡುತ್ತಿದ್ದರು. ಅಕ್ಟೋಬರ್ 30ರಿಂದ ವೇತನ ಸಹಿತ ರಜೆ ಘೋಷಣೆಯಾಗಿದ್ದರಿಂದ ಅಲ್ಲಿನ ಜನರು ಇಂದಿನಿಂದಲೇ ಪ್ರವಾಸಿ ತಾಣಗಳು, ಮತ್ತಿತರ ಕಡೆ ಕುಟುಂಬ ಸಮೇತ ಹೊರಟಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ನಿನ್ನೆ ಒಂದೇ ದಿನ ರಷ್ಯಾದಲ್ಲಿ ಕೊವಿಡ್ 19 ನಿಂದ 1,123 ಮಂದಿ ಮೃತಪಟ್ಟಿದ್ದು ವರದಿಯಾಗಿದೆ.
ಇದನ್ನೂ ಓದಿ: ಜಾನ್ವಿ ಕಪೂರ್ ದಕ್ಷಿಣ ಭಾರತಕ್ಕೆ ಕಾಲಿಡದೇ ಇರಲು ಕಾರಣವೇನು? ಅವರಿಂದಲೇ ಸಿಕ್ತು ಉತ್ತರ
T20 World Cup 2021: ಟೂರ್ನಿಯಿಂದ ಹೊರಬೀಳುವ ಭಯ! ಕೊಹ್ಲಿ ತಲೆನೋವು ಹೆಚ್ಚಿಸಿವೆ ತಂಡದ ಈ 4 ಸಮಸ್ಯೆಗಳು