ಮರಿಯುಪೋಲ್ನಿಂದ ರಷ್ಯಾ ಸೇನೆ ಹಿಮ್ಮೆಟ್ಟಿಸಲು ಸಹಾಯ ಮಾಡಿ; ಇಸ್ರೇಲ್ಗೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮನವಿ
ಮರಿಯುಪೋಲ್ ನಗರವನ್ನು ರಷ್ಯಾಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ನಮ್ಮ ಸೇನೆ ಯಾವ ಕಾರಣಕ್ಕೂ ಶಸ್ತ್ರಾಸ್ತ್ರ ತ್ಯಜಿಸುವುದಿಲ್ಲ, ಶರಣಾಗುವುದೂ ಇಲ್ಲ ಎಂದು ಉಕ್ರೇನ್ ಉಪಪ್ರಧಾನಮಂತ್ರಿ ಹೇಳಿದ್ದಾರೆ.
ಉಕ್ರೇನ್ನ (Ukraine) ಬಂದರು ನಗರ ಮರಿಯುಪೋಲ್ನಲ್ಲಿ ರಷ್ಯಾ ಆಕ್ರಮಣ ಹೆಚ್ಚಾಗಿದ್ದು, ಅಲ್ಲಿ ಅವ್ಯವಸ್ಥೆಯುಂಟಾಗಿದೆ. ಜನರಿಗೆ ಆಹಾರ ಸಿಗುತ್ತಿಲ್ಲ. ನೀರಿಲ್ಲ, ವಿದ್ಯುತ್ ಸಂಪರ್ಕ ತಪ್ಪಿದೆ. ಅಲ್ಲಿ ಸೈನ್ಯವನ್ನು ಹಿಂಪಡೆಯಿರಿ ಎಂದು ರಷ್ಯಾ ಹೇಳಿದ್ದರೆ, ಯಾವುದೇ ಕಾರಣಕ್ಕೂ ಮರಿಯುಪೋಲ್ ರಷ್ಯಾಕ್ಕೆ ಶರಣಾಗುವುದಿಲ್ಲ ಎಂದು ಉಕ್ರೇನ್ ಸರ್ಕಾರ ತಿಳಿಸಿದೆ. ಅಷ್ಟೇ ಅಲ್ಲ, ರಷ್ಯಾ ಸೇನೆಯನ್ನು ಹಿಮ್ಮೆಟ್ಟಿಸಲು ಸಹಾಯ ಮಾಡಿ ಎಂದು ಇಸ್ರೇಲ್ಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮನವಿ ಮಾಡಿದ್ದಾರೆ. ಮರಿಯುಪೋಲ್ನಲ್ಲಿ ರಷ್ಯಾ ಸೇನೆ ಆಕ್ರಮಣದ ಬಗ್ಗೆ ಮಾತನಾಡಿದ ಉಕ್ರೇನ್ ಉಪ ಪ್ರಧಾನಮಂತ್ರಿ ಐರಿನ್ ಐರಿನಾ ವೆರೆಶ್‌ಚುಕ್, ಮರಿಯುಪೋಲ್ ನಗರವನ್ನು ರಷ್ಯಾಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ನಮ್ಮ ಸೇನೆ ಯಾವ ಕಾರಣಕ್ಕೂ ಶಸ್ತ್ರಾಸ್ತ್ರ ತ್ಯಜಿಸುವುದಿಲ್ಲ, ಶರಣಾಗುವುದೂ ಇಲ್ಲ ಎಂದಿದ್ದಾರೆ.
- ರಷ್ಯಾ-ಉಕ್ರೇನ್ ಯುದ್ಧದ ಪ್ರಮುಖ ಬೆಳವಣಿಗೆಗಳ ವಿವರ ಇಲ್ಲಿದೆರಷ್ಯಾ ಮತ್ತು ಉಕ್ರೇನ್ ಮಧ್ಯೆ ಮಧ್ಯಸ್ಥಿಕೆ ವಹಿಸುವುದಾಗಿ ಟರ್ಕಿ ಹೇಳಿಕೊಂಡಿದೆ. ರಷ್ಯಾ ಉಕ್ರೇನ್ ಮೇಲೆ ಯುದ್ಧಸಾರಿ ಒಂದು ತಿಂಗಳಾಗುತ್ತ ಬಂದಿದ್ದು, ಸೇನೆಯನ್ನು ಹಿಂಪಡೆಯುವಂತೆ ರಷ್ಯಾವನ್ನು ಅನೇಕ ರಾಷ್ಟ್ರಗಳು ಒತ್ತಾಯಿಸುತ್ತಿವೆ. ಟರ್ಕಿ ಕೂಡ ಎರಡೂ ದೇಶಗಳ ಮಧ್ಯೆ ಸಂಧಾನ ಮಾತುಕತೆ ಏರ್ಪಡಿಸಲು ನಾವು ಮಧ್ಯಸ್ಥಿಕೆ ವಹಿಸಲು ಸಿದ್ಧವಿರುವುದಾಗಿ ಹೇಳಿಕೊಂಡಿದೆ. ಅಷ್ಟೇ ಅಲ್ಲ, ಈ ಎರಡೂ ದೇಶಗಳ ಮಧ್ಯೆ ರಾಜಿ ಸಂಧಾನ ಮಾತುಕತೆ ಪ್ರಗತಿಯಲ್ಲಿದೆ ಎಂದೂ ಹೇಳಿದೆ.
- ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾದೊಂದಿಗೆ ನೇರವಾಗಿ ಮಾತುಕತೆಯಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಫೇಸ್ಬುಕ್ ವಿಡಿಯೋ ಮಾಡಿದ ಅವರು, ರಷ್ಯಾ ತಾನು ಮಾಡಿದ ಹಾನಿಯನ್ನು, ತಪ್ಪನ್ನು ಸರಿ ಮಾಡಿಕೊಳ್ಳಲು ಇದೊಂದು ಅವಕಾಶ. ಅಲ್ಲಿನ ಅಧ್ಯಕ್ಷರು ನೇರವಾಗಿ ಮಾತುಕತೆಗೆ ಬರಬೇಕು ಎಂದು ಹೇಳಿದ್ದಾರೆ. ಹಾಗೇ, ವಿಡಿಯೋ ಕಾನ್ಫರೆನ್ಸ್ ಮೂಲಕ ಇಸ್ರೇಲ್ ಪಾರ್ಲಿಮೆಂಟ್ ಉದ್ದೇಶಿಸಿ ಮಾತನಾಡಿದ ಝೆಲೆನ್ಸ್ಕಿ, ಜಗತ್ತಿನ ಪ್ರತಿಯೊಬ್ಬರಿಗೂ ಇಸ್ರೇಲ್ ಕ್ಷಿಪಣಿ ವ್ಯವಸ್ಥೆ ತುಂಬ ಬಲಿಷ್ಠವಾಗಿದೆ ಎಂಬುದು ಗೊತ್ತಿದೆ. ಹೀಗಾಗಿ ನೀವು ನಮ್ಮ ಜನರನ್ನು ರಕ್ಷಿಸಬಹುದು. ಉಕ್ರೇನ್ಗೆ ಸಹಾಯ ಮಾಡಿ. ರಷ್ಯಾ ಕಪಿಮುಷ್ಠಿಯಿಂದ ಪಾರಾಗಲು ನೆರವು ನೀಡಿ ಎಂದು ಕೇಳಿಕೊಂಡಿದ್ದಾರೆ.
- ರಷ್ಯಾ ಮತ್ತು ಉಕ್ರೇನ್ ನಡುವಿನ ಬಿಕ್ಕಟ್ಟು, ಯುದ್ಧ ಸನ್ನಿವೇಶವನ್ನು ಕೊನೆಗಾಣಿಸಲು ಇಸ್ರೇಲ್ ಪ್ರಧಾನಮಂತ್ರಿ ನಫ್ತಾಲಿ ಬೆನೆಟ್ ಕೂಡ ಹಲವು ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಬೆನೆಟ್ ಅವರು ಇಸ್ರೇಲ್ ಮತ್ತು ಉಕ್ರೇನ್ ಅಧ್ಯಕ್ಷರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದ್ದಾಗಿಯೂ ವರದಿಯಾಗಿದೆ. ಝೆಲೆನ್ಸ್ಕಿ ಹೀಗೆ ಒಂದೊಂದೇ ರಾಷ್ಟ್ರದ ಸಂಸತ್ತನ್ನು ಉದ್ದೇಶಿಸಿ ಮಾತನಾಡಿ, ನೆರವು ಕೋರುತ್ತಿದ್ದಾರೆ.
- ಉಕ್ರೇನ್ನಲ್ಲಿ ಸಿಲುಕಿರುವ ಇತರ ದೇಶಗಳ ನಾಗರಿಕರು, ಉಕ್ರೇನ್ ನಾಗರಿಕರನ್ನು ಸ್ಥಳಾಂತರ ಮಾಡಲು ಮಾನವೀಯ ಕಾರಿಡಾರ್ಗಳನ್ನು ಸೃಷ್ಟಿಸಿಕೊಡಲು ರಷ್ಯಾ ಮತ್ತು ಉಕ್ರೇನ್ ಪರಸ್ಪರ ಒಪ್ಪಂದ ಮಾಡಿಕೊಂಡಿವೆ. ಆದರೆ ಇದನ್ನು ಎರಡೂ ದೇಶಗಳು ಆಗಾಗ ಉಲ್ಲಂಘನೆ ಮಾಡುತ್ತಿವೆ. ಅಷ್ಟೇ ಅಲ್ಲ, ಪರಸ್ಪರ ಆರೋಪವನ್ನೂ ಮಾಡಿಕೊಳ್ಳುತ್ತಿವೆ. ನಾಗರಿಕರ ಸ್ಥಳಾಂತರದ ಬಗ್ಗೆ ಮರಿಯುಪೋಲ್ ಸಿಟಿ ಕೌನ್ಸಿಲ್ ಟೆಲಿಗ್ರಾಂ ಚಾನಲ್ ಮೂಲಕ ಹೇಳಿಕೆ ಬಿಡುಗಡೆ ಮಾಡಿದ್ದು, ಸಾವಿರಾರು ಜನ ನಿರಾಶ್ರಿತರು ಮಾರಿಯುಪೋಲ್ನಿಂದ ರಷ್ಯಾಕ್ಕೆ ಬಸ್ ಮತ್ತಿತರ ವಾಹನಗಳ ಮೂಲಕ ಹೋಗಿದ್ದಾರೆ ಎಂದು ಹೇಳಿಕೊಂಡಿದೆ.
ಇದನ್ನೂ ಓದಿ: ಈಗ ಜನರು ಯಾರಲ್ಲಿ ಪುನೀತ್ ಅವರನ್ನು ಕಾಣ್ತಾರೆ? ಉತ್ತರ ನೀಡಿದ ಯುವ ರಾಜ್ಕುಮಾರ್
Published On - 9:44 am, Mon, 21 March 22