
ಕೈವ್, ಸೆಪ್ಟೆಂಬರ್ 3: ಉಕ್ರೇನ್‌ಗೆ ಒಂದು ದಿನದ ಅಧಿಕೃತ ಭೇಟಿ ನೀಡಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಇಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿಯಾಗಿ, ರಷ್ಯಾದ ಜೊತೆ ನಡೆಯುತ್ತಿರುವ ಯುದ್ಧವನ್ನು ಅಂತ್ಯಗೊಳಿಸಲು ಭಾರತ ಎಲ್ಲ ರೀತಿಯ ಸಹಾಯ ನೀಡಲು ಸಿದ್ಧವಿರುವುದಾಗಿ ಹೇಳಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಭಾರತವು ಅಗತ್ಯವಿರುವ ಎಲ್ಲಾ ನೆರವು ನೀಡಲು ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಶಾಂತಿ ಸಂದೇಶ ರವಾನಿಸಿದ ಬೆನ್ನಲ್ಲೇ ಈ ಭೇಟಿ ನಡೆದಿರುವುದು ತೀವ್ರ ಕುತೂಹಲ ಮೂಡಿಸಿದೆ.
ಯುದ್ಧಕ್ಕೆ ಈಗ ಅಂತ್ಯ ಹಾಡಬೇಕಿದೆ ಎಂದ ಸಚಿವ ಜೈಶಂಕರ್:
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಭೇಟಿಯ ಕುರಿತು ಮಾತನಾಡಿದ ವಿದೇಶಾಂಗ ಸಚಿವ ಜೈಶಂಕರ್, “ಉಕ್ರೇನ್ ವಿದೇಶಾಂಗ ಸಚಿವ ಆಂಡ್ರಿ ಸಿಬಿಹಾ ಅವರೊಂದಿಗಿನ ಮಾತುಕತೆ ಮತ್ತು ನಡೆಯುತ್ತಿರುವ ಯುದ್ಧಕ್ಕೆ ಅಂತ್ಯ ಹಾಡುವ ಮಾರ್ಗಗಳ ಕುರಿತು ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗೆ ಮಾತನಾಡಿದ್ದೇನೆ” ಎಂದು ತಿಳಿಸಿದ್ದಾರೆ. 5ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಯುದ್ಧವನ್ನು ಕೊನೆಗೊಳಿಸಲು ಭಾರತವು ಯಾವುದೇ ರೀತಿಯ ಸಹಾಯ ಮಾಡಲು ಸಿದ್ಧವಿದ’ ಎಂದು ಉಕ್ರೇನ್ ವಿದೇಶಾಂಗ ಸಚಿವ ಆಂಡ್ರಿ ಸಿಬಿಹಾ ಅವರೊಂದಿಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಜೈಶಂಕರ್ ಪುನರುಚ್ಚರಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಕಿರ್ಗಿಸ್ತಾನ ಭೇಟಿ: ಹಾರ್ಮುಜ್ನಲ್ಲಿ ಶಾಂತಿ, ಉಕ್ರೇನ್ ಯುದ್ಧ ಅಂತ್ಯಕ್ಕೆ ಕರೆ
ಇದು ಯುದ್ಧದ ಯುಗವಲ್ಲ ಎಂದ ಝೆಲೆನ್ಸ್ಕಿ:
ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗಿನ ಭೇಟಿಯ ನಂತರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, “ನಾವು ಪ್ರಮುಖ ವಿಷಯಗಳ ಕುರಿತು ಚರ್ಚಿಸಿದ್ದೇವೆ. ಉಕ್ರೇನ್ ವಿರುದ್ಧದ ರಷ್ಯಾದ ಅನ್ಯಾಯದ ಯುದ್ಧವನ್ನು ಅಂತ್ಯಗೊಳಿಸಲು ಭಾರತ ತೋರುತ್ತಿರುವ ಬದ್ಧತೆಗೆ ಧನ್ಯವಾದಗಳು. ಇದು ಖಂಡಿತವಾಗಿಯೂ ಯುದ್ಧದ ಸಮಯವಲ್ಲ, ಶಾಂತಿಯ ಅಗತ್ಯವಿದೆ ಎಂಬುದೇ ಭಾರತದ ಸ್ಪಷ್ಟ ನಿಲುವಾಗಿದೆ” ಎಂದಿದ್ದಾರೆ.
ಇದನ್ನೂ ಓದಿ: ನೇಪಾಳದ ಪ್ರವಾಹದಿಂದ ರಕ್ಷಿಸಲ್ಪಟ್ಟ ತಮಿಳುನಾಡಿನ 21 ಯಾತ್ರಿಕರನ್ನು ಸ್ವಾಗತಿಸಿದ ವಿದೇಶಾಂಗ ಸಚಿವ ಜೈಶಂಕರ್
ಇದೇ ವೇಳೆ ಕಪ್ಪು ಸಮುದ್ರದ ಭದ್ರತೆ ಹಾಗೂ ನಾಗರಿಕ ಹಡಗು ಸಂಚಾರಕ್ಕಿರುವ ಬೆದರಿಕೆಗಳ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದ ಝೆಲೆನ್ಸ್ಕಿ, “ಜಾಗತಿಕವಾಗಿ ಆಹಾರ ಸರಬರಾಜು ಮಾರ್ಗಗಳನ್ನು ತಡೆಯುವುದನ್ನು ಒಪ್ಪಲು ಸಾಧ್ಯವೇ ಇಲ್ಲ. ರಷ್ಯಾ ನಮ್ಮ ಬಂದರುಗಳು ಮತ್ತು ಆಹಾರ ಪೂರೈಕೆ ಮಾರ್ಗಗಳನ್ನು ನಿರ್ಬಂಧಿಸುತ್ತಿರುವುದು ಜಾಗತಿಕ ಸಂಬಂಧಗಳಲ್ಲಿ ಭಾರಿ ಅಡಚಣೆ ಉಂಟುಮಾಡಿದೆ. ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು” ಎಂದಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ