
ವಾಷಿಂಗ್ಟನ್, ಜೂನ್ 27: ಭಾರತವನ್ನು ಜಾಗತಿಕ ವೇದಿಕೆಯಲ್ಲಿ ಅತ್ಯಂತ ಪ್ರಭಾವಶಾಲಿ ಶಕ್ತಿಯನ್ನಾಗಿ ರೂಪಿಸಿರುವ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ ದೃಢ ನಾಯಕತ್ವವನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅತ್ಯಂತ ಆಪ್ತ ಉನ್ನತ ರಾಜತಾಂತ್ರಿಕರಾಗಿರುವ ರೂಬಿಯೊ, ಅಮೆರಿಕ ಅಧ್ಯಕ್ಷರು ಮತ್ತು ಭಾರತದ ಪ್ರಧಾನಿ ನಡುವಿನ ಸ್ನೇಹ ಸಂಬಂಧವು ಇದಕ್ಕಿಂತ ಹತ್ತಿರವಾಗಲು ಸಾಧ್ಯವೇ ಇಲ್ಲ ಎಂಬಷ್ಟು ಗಟ್ಟಿಯಾಗಿದೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿಯವರ ಅಪಾರ ಅಭಿಮಾನಿಗಳು ನಾವು
ಶ್ವೇತಭವನದಲ್ಲಿ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, ಟ್ರಂಪ್ ಆಡಳಿತವು ಭಾರತವನ್ನು ತನ್ನ ಅತ್ಯಂತ ಆಪ್ತ ಹಾಗೂ ಕಾರ್ಯತಂತ್ರದ ಪಾಲುದಾರ ರಾಷ್ಟ್ರವಾಗಿ ನೋಡುತ್ತಿದೆ ಎಂದು ಸ್ಪಷ್ಟಪಡಿಸಿದರು.
ಭಾರತವು ಅಮೆರಿಕದ ಅತ್ಯಂತ ನಿಕಟ ಮಿತ್ರ ರಾಷ್ಟ್ರವಾಗಿದೆ. ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ನಡುವಿನ ವೈಯಕ್ತಿಕ ಬಾಂಧವ್ಯವು ರಾಜತಾಂತ್ರಿಕತೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ.ನಾವೆಲ್ಲರೂ ಪ್ರಧಾನಿ ಮೋದಿಯವರ ಅಪಾರ ಅಭಿಮಾನಿಗಳು. ಅವರ ನಾಯಕತ್ವದಲ್ಲಿ ಭಾರತವು ಅದ್ಭುತ ಆರ್ಥಿಕ ಪ್ರಗತಿಯನ್ನು ಸಾಧಿಸುತ್ತಿದೆ.
ಮತ್ತಷ್ಟು ಓದಿ: ಸೆಶೆಲ್ಸ್ ರಾಷ್ಟ್ರೀಯ ದಿನಾಚರಣೆಗೆ ಪ್ರಧಾನಿ ಮೋದಿ ಮುಖ್ಯ ಅತಿಥಿ; ಜೂನ್ 27ರಿಂದ ದ್ವೀಪ ರಾಷ್ಟ್ರಕ್ಕೆ ಪ್ರವಾಸ
ಭಾರತದ ಬೆಳೆಯುತ್ತಿರುವ ಜಾಗತಿಕ ಪ್ರಭಾವವು ನವದೆಹಲಿ ಮತ್ತು ವಾಷಿಂಗ್ಟನ್ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎಂದು ರೂಬಿಯೊ ಅಭಿಪ್ರಾಯಪಟ್ಟಿದ್ದಾರೆ. ಭಾರತ ಮತ್ತು ಅಮೆರಿಕ ದೇಶಗಳು ಜಾಗತಿಕ ಅರ್ಥಶಾಸ್ತ್ರ, ಪೂರೈಕೆ ಸರಪಳಿ ನಿರ್ಣಾಯಕ ಖನಿಜಗಳು, ಹಸಿರು ಇಂಧನ, ಜಾಗತಿಕ ಭದ್ರತೆ ಹಾಗೂ ಸಮುದ್ರಯಾನದ ಸ್ವಾತಂತ್ರ್ಯದಂತಹ ಪ್ರಮುಖ ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿವೆ.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ (ಭಾರತ) ಮತ್ತು ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ (ಅಮೆರಿಕ) ಒಟ್ಟಾಗಿ ಜಾಗತಿಕ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮುತ್ತಿವೆ ಎಂದು ಅವರು ಒತ್ತಿ ಹೇಳಿದರು.
ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ಅಮೆರಿಕನ್ನರ ಕೊಡುಗೆಯನ್ನು ರೂಬಿಯೊ ಇದೇ ವೇಳೆ ವಿಶೇಷವಾಗಿ ನೆನಪಿಸಿಕೊಂಡರು. ಅಮೆರಿಕದಲ್ಲಿ ಅತ್ಯಂತ ಬಲಿಷ್ಠವಾಗಿ ಬೆಳೆದಿರುವ ಭಾರತೀಯ ಅಮೆರಿಕನ್ ಸಮುದಾಯವು ಉಭಯ ದೇಶಗಳ ನಡುವಿನ ಸ್ನೇಹದ ಪ್ರಮುಖ ಕೊಂಡಿಯಾಗಿದೆ. ಅವರು ತಮ್ಮ ಶ್ರಮ ಮತ್ತು ಸಂಸ್ಕೃತಿಯ ಮೂಲಕ ಅಮೆರಿಕ ದೇಶವನ್ನು ಹಲವು ವಿಧಗಳಲ್ಲಿ ಶ್ರೀಮಂತಗೊಳಿಸಿದ್ದಾರೆ ಎಂದು ಅವರು ಪ್ರಶಂಸಿಸಿದರು. ಟ್ರಂಪ್ ನೇತೃತ್ವದ ನೂತನ ಆಡಳಿತದಲ್ಲಿ ಭಾರತಕ್ಕೆ ಸಿಗುತ್ತಿರುವ ಈ ಅಭೂತಪೂರ್ವ ಗೌರವವು ಜಾಗತಿಕ ರಾಜಕಾರಣದಲ್ಲಿ ಭಾರತದ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ