ಬಾಂಗ್ಲಾದೇಶ ಸರ್ಕಾರದ ಮುಖ್ಯಸ್ಥರಾಗಿ ಮುಹಮ್ಮದ್ ಯೂನಸ್ ಮುಂದುವರಿಕೆ; ರಾಜೀನಾಮೆ ವದಂತಿಗೆ ಬಿತ್ತು ತೆರೆ
ಬಾಂಗ್ಲಾದೇಶ ಸರ್ಕಾರದ ಮುಖ್ಯಸ್ಥರಾಗಿ ಮುಹಮ್ಮದ್ ಯೂನಸ್ ಮುಂದುವರೆಯಲಿದ್ದಾರೆ. ಅವರು ರಾಜೀನಾಮೆ ನೀಡುವುದಿಲ್ಲ ಎಂದು ಬಾಂಗ್ಲಾದೇಶ ಸರ್ಕಾರ ಖಚಿತಪಡಿಸಿದೆ. ಬಾಂಗ್ಲಾ ಸೇನೆಯೊಂದಿಗಿನ ಭಿನ್ನಾಭಿಪ್ರಾಯದ ನಡುವೆ ಯೂನಸ್ ರಾಜೀನಾಮೆ ನೀಡುತ್ತಾರೆ ಎಂಬ ವದಂತಿ ಹರಡಿತ್ತು. ಆ ವದಂತಿಗೆ ತೆರೆ ಬಿದ್ದಿದೆ. ಸಂಸದೀಯ ಚುನಾವಣೆಗಳನ್ನು ನಡೆಸುವ ಸಾಧ್ಯತೆಯ ಸಮಯದ ಕುರಿತು ಮಿಲಿಟರಿ ಮತ್ತು ಮಧ್ಯಂತರ ಸರ್ಕಾರದ ನಡುವೆ ಭಿನ್ನಾಭಿಪ್ರಾಯದ ವರದಿಗಳ ನಡುವೆ ಯೂನಸ್ ರಾಜೀನಾಮೆಯ ಬೆಳವಣಿಗೆ ನಡೆದಿತ್ತು.

ಢಾಕಾ, ಮೇ 24: ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಮುಹಮ್ಮದ್ ಯೂನಸ್ (Muhammad Yunus) ಮುಂದುವರೆಯಲಿದ್ದಾರೆ. ನೊಬೆಲ್ ಪ್ರಶಸ್ತಿ ವಿಜೇತ ಯೂನಸ್ ರಾಜೀನಾಮೆ ನೀಡುವ ಬಗ್ಗೆ ಯೋಚಿಸುತ್ತಿದ್ದಾರೆ ಎಂಬ ಊಹಾಪೋಹಗಳ ನಡುವೆ ಅವರ ಸಂಪುಟದ ಸಲಹೆಗಾರರೊಬ್ಬರು ಈ ಬಗ್ಗೆ ಇಂದು ಸ್ಪಷ್ಟಪಡಿಸಿದ್ದಾರೆ. “ಯೂನಸ್ ಅವರು ರಾಜೀನಾಮೆ ನೀಡುವುದಾಗಿ ಹೇಳಿರಲಿಲ್ಲ. ನಮಗೆ ನಿಯೋಜಿಸಲಾದ ಕೆಲಸ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ನಾವು ಅನೇಕ ಅಡೆತಡೆಗಳನ್ನು ಎದುರಿಸುತ್ತಿದ್ದರೂ ನಾವು ಅವುಗಳನ್ನು ನಿವಾರಿಸುತ್ತಿದ್ದೇವೆ ಎಂದು ಅವರು ಹೇಳಿದ್ದರು” ಎಂದು ಯೋಜನಾ ಸಲಹೆಗಾರ ವಹೀದುದ್ದೀನ್ ಮಹ್ಮದ್ ಮಾಹಿತಿ ನೀಡಿದ್ದಾರೆ.
ಮಧ್ಯಂತರ ಸರ್ಕಾರದಲ್ಲಿರುವ ಯಾವುದೇ ಸಲಹೆಗಾರರು ಎಲ್ಲಿಯೂ ಹೋಗುತ್ತಿಲ್ಲ. ಏಕೆಂದರೆ ಅವರಿಗೆ ವಹಿಸಲಾಗಿರುವ ಜವಾಬ್ದಾರಿ ಮಹತ್ವದ್ದಾಗಿದೆ. ಅವರು ತಮ್ಮ ಕರ್ತವ್ಯವನ್ನು ತ್ಯಜಿಸಲು ಸಾಧ್ಯವಿಲ್ಲ ಎಂದು ಯೋಜನಾ ಸಲಹೆಗಾರರು ಹೇಳಿದ್ದಾರೆ. ಬಾಂಗ್ಲಾದೇಶದ ಉನ್ನತ ರಾಜಕೀಯ ಪಕ್ಷಗಳ ನಾಯಕರನ್ನು ಯೂನಸ್ ಭೇಟಿಯಾಗಲು ಕೆಲವು ಗಂಟೆಗಳ ಮೊದಲು ಮತ್ತು ಯೂನಸ್ ರಾಜೀನಾಮೆ ನೀಡುವುದಾಗಿ ಹೇಳಿದ ಕೆಲವು ದಿನಗಳ ನಂತರ ಸಲಹಾ ಮಂಡಳಿಯ ಅನಿರೀಕ್ಷಿತ ಸಭೆ ನಡೆಯಿತು. ಈ ಸಭೆಯ ಬಳಿಕ ಯೂನಸ್ ರಾಜೀನಾಮೆ ನೀಡಲಿದ್ದಾರೆ ಎಂದು ಊಹಿಸಲಾಗಿತ್ತು.
ಇದನ್ನೂ ಓದಿ: ದೇಶಕ್ಕೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕಿದೆ; ಭಯೋತ್ಪಾದನೆ ವಿರುದ್ಧ ಭಾರತಕ್ಕೆ ಜರ್ಮನಿ ಬೆಂಬಲ
ಕಳೆದ ವರ್ಷ ಬಾಂಗ್ಲಾದೇಶದಲ್ಲಿ ನಡೆದ ಸಾಮೂಹಿಕ ದಂಗೆಯ ನಂತರ ಅಧಿಕಾರ ವಹಿಸಿಕೊಂಡ ಯೂನಸ್, ರಾಜಕೀಯ ಪಕ್ಷಗಳು ತಮ್ಮನ್ನು ಬೆಂಬಲಿಸದಿದ್ದರೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿತ್ತು. ಈ ವಾರ ಬಾಂಗ್ಲಾದೇಶದ ರಾಜಕೀಯ ಬಿಕ್ಕಟ್ಟು ಉಲ್ಬಣಗೊಂಡಿತು, ಪ್ರತಿಸ್ಪರ್ಧಿ ಪಕ್ಷಗಳು ರಾಜಧಾನಿ ಢಾಕಾದ ಬೀದಿಗಳಲ್ಲಿ ಪೈಪೋಟಿಯ ಬೇಡಿಕೆಗಳೊಂದಿಗೆ ಪ್ರತಿಭಟನೆ ನಡೆಸಿದವು. ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ಸಾವಿರಾರು ಬೆಂಬಲಿಗರು ಗುರುವಾರ ಢಾಕಾದಲ್ಲಿ ಮೆರವಣಿಗೆ ನಡೆಸಿದರು. ಚುನಾವಣೆಯ ದಿನಾಂಕವನ್ನು ಬಹಿರಂಗಪಡಿಸಿ ಎಂದು ಒತ್ತಾಯಿಸಿದ್ದರು. ಜೂನ್ 2026ರೊಳಗೆ ಬಾಂಗ್ಲಾದೇಶದಲ್ಲಿ ಚುನಾವಣೆ ನಡೆಸಲಾಗುವುದು ಎಂದು ಯೂನಸ್ ಭರವಸೆ ನೀಡಿದ್ದಾರೆ. ಆದರೆ ಬಿಎನ್‌ಪಿ ಬೆಂಬಲಿಗರು ದಿನಾಂಕವನ್ನು ನಿಗದಿಪಡಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








