ಮದುವೆಯಾಗಿ, ಹೆಚ್ಚು ಮಕ್ಕಳನ್ನು ಹೆರಿ: ಮುಸ್ಲಿಮರ ಜನಸಂಖ್ಯೆ ಹೆಚ್ಚಳ ವರದಿ ಬೆನ್ನಲ್ಲೇ ಅಮೆರಿಕನ್ನರಿಗೆ ಕರೋಲಿನ್ ಲೆವಿಟ್ ಕರೆ!

‘ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುತ್ತಿದೆ, ಹಿಂದೂಗಳು ಸಹ ಹೆಚ್ಚು ಮಕ್ಕಳನ್ನು ಹೊಂದಬೇಕು’ ಎಂಬ ಹೇಳಿಕೆಗಳ ಬಗ್ಗೆ ಭಾರತದಲ್ಲಿ ಆಗಾಗ ವರದಿಯಾಗುತ್ತಿರುತ್ತವೆ. ಕಟ್ಟರ್ ಹಿಂದೂ ಸಂಘಟನೆಗಳ ನಾಯಕರು, ಹಿಂದುತ್ವವಾದಿಗಳು ಈ ರೀತಿಯ ಕರೆಗಳನ್ನು ನೀಡುತ್ತಿರುವುದು ಆಗಾಗ ವಿವಾದಕ್ಕೂ ಗುರಿಯಾಗುತ್ತಿರುತ್ತದೆ. ಇದೀಗ ಅಮೆರಿಕದಲ್ಲೂ ಕ್ರೈಸ್ತರ ಜನಸಂಖ್ಯೆ ಹೆಚ್ಚಿಸಬೇಕೆಂಬ ಕರೆಗಳು ಕೇಳಿಬರಲಾರಂಭಿಸಿವೆ!

ಮದುವೆಯಾಗಿ, ಹೆಚ್ಚು ಮಕ್ಕಳನ್ನು ಹೆರಿ: ಮುಸ್ಲಿಮರ ಜನಸಂಖ್ಯೆ ಹೆಚ್ಚಳ ವರದಿ ಬೆನ್ನಲ್ಲೇ ಅಮೆರಿಕನ್ನರಿಗೆ ಕರೋಲಿನ್ ಲೆವಿಟ್ ಕರೆ!
ಕರೋಲಿನ್ ಲೆವಿಟ್

Updated on: Nov 22, 2026 | 12:09 PM

ಮುಖ್ಯಾಂಶಗಳು

  • 2035ಕ್ಕೆ ಮುಸ್ಲಿಮರ ಜನಸಂಖ್ಯೆ ಹೆಚ್ಚಳದ ಅಂದಾಜು
  • ಮದುವೆಯಾಗಿ ಹೆಚ್ಚು ಮಕ್ಕಳನ್ನು ಹೆರಲು ಅಮೆರಿಕನ್ನರಿಗೆ ಲೆವಿಟ್ ಕರೆ
  • ಮುಸ್ಲಿಂ ಮಹಿಳೆಯರ ಫಲವತ್ತತೆ ಪ್ರಮಾಣವೇ ಜನಸಂಖ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದ ವರದಿ

ವಾಷಿಂಗ್ಟನ್, ನವೆಂಬರ್ 22: ಮದುವೆಯಾಗಿ, ಹೆಚ್ಚು ಮಕ್ಕಳನ್ನು ಹೆತ್ತು, ಅವರನ್ನು ಚರ್ಚ್‌ನ ಧಾರ್ಮಿಕ ವಾತಾವರಣದಲ್ಲಿ ಬೆಳೆಸುವಂತೆ ಅಮೆರಿಕನ್ನರಿಗೆ ಶ್ವೇತಭವನದ ಮಾಜಿ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೆವಿಟ್ ಕರೆ ನೀಡಿದ್ದಾರೆ. 2035ರ ವೇಳೆಗೆ ಜಾಗತಿಕ ಮಟ್ಟದಲ್ಲಿ ಕ್ರೈಸ್ತರಿಗಿಂತ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗಬಹುದು ಎಂಬ ‘ಪ್ಯೂ ರಿಸರ್ಚ್ ಸೆಂಟರ್‌’ನ ಅಂದಾಜಿನ ವರದಿ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.

ಶುಕ್ರವಾರ ‘ವಾಷಿಂಗ್ಟನ್ ಪೋಸ್ಟ್’ ಪ್ರಕಟಿಸಿದ ವರದಿಯ ಸ್ಕ್ರೀನ್‌ಶಾಟ್ ಹಂಚಿಕೊಂಡಿರುವ ಕರೋಲಿನ್ ಲೆವಿಟ್, ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ, ‘ಮದುವೆಯಾಗಿ, ಹೆಚ್ಚು ಮಕ್ಕಳನ್ನು ಹೆತ್ತು, ಅವರನ್ನು ಚರ್ಚ್‌ನಲ್ಲಿ ಬೆಳೆಸಿ ಮತ್ತು ಅಮೆರಿಕವನ್ನು ಪ್ರೀತಿಸುವುದನ್ನು ಕಲಿಸಿ’ ಎಂದು ಬರೆದುಕೊಂಡಿದ್ದಾರೆ.

Loading...

2035ರ ವೇಳೆಗೆ ಮುಸ್ಲಿಮರ ಜನಸಂಖ್ಯೆ ಹೆಚ್ಚಳದ ಅಂದಾಜು

‘2035ರ ವೇಳೆಗೆ ಜಗತ್ತಿನಲ್ಲಿ ಕ್ರೈಸ್ತರಿಗಿಂತ ಮುಸ್ಲಿಮರ ಸಂಖ್ಯೆ ಹೆಚ್ಚಾಗಲಿದೆ’ ಎಂಬ ಶೀರ್ಷಿಕೆಯ ವರದಿಯಲ್ಲಿ ‘ಪ್ಯೂ ರಿಸರ್ಚ್ ಸೆಂಟರ್’ ಮತ್ತು ಪೋಲೆಂಡ್‌ನ ಸೆಂಟರ್ ಫಾರ್ ಅಡ್ವಾನ್ಸ್ಡ್ ಸ್ಟಡೀಸ್ ಆಫ್ ಪಾಪ್ಯುಲೇಷನ್ ಅಂಡ್ ರಿಲಿಜನ್ (CASPAR) ಸಂಸ್ಥೆಗಳ ಅಂದಾಜುಗಳನ್ನು ಉಲ್ಲೇಖಿಸಿ ‘ವಾಷಿಂಗ್ಟನ್ ಪೋಸ್ಟ್’ ವರದಿ ಮಾಡಿತ್ತು. ಗುರುವಾರ ಬಿಡುಗಡೆ ಮಾಡಲಾದ ‘ಪ್ಯೂ ರಿಸರ್ಚ್ ಸೆಂಟರ್‌’ನ ಅಂದಾಜಿನ ಪ್ರಕಾರ, 2035ರ ವೇಳೆಗೆ ಜಗತ್ತಿನಲ್ಲಿ ಮುಸ್ಲಿಮರ ಜನಸಂಖ್ಯೆ 257 ಕೋಟಿ ತಲುಪುವ ನಿರೀಕ್ಷೆಯಿದೆ. ಅದೇ ಅವಧಿಯಲ್ಲಿ ಕ್ರೈಸ್ತರ ಜನಸಂಖ್ಯೆ 252 ಕೋಟಿಯಷ್ಟಿರಬಹುದು ಎಂದು ಅಂದಾಜಿಸಲಾಗಿದೆ. 2020ರಲ್ಲಿ ಜಗತ್ತಿನಲ್ಲಿ ಸುಮಾರು 227 ಕೋಟಿ ಕ್ರೈಸ್ತರು ಹಾಗೂ 202 ಕೋಟಿ ಮುಸ್ಲಿಮರಿದ್ದರು ಎಂದು ಸಂಶೋಧನಾ ಸಂಸ್ಥೆ ತಿಳಿಸಿದೆ.

ಎರಡೂ ಧರ್ಮಗಳ ಜನಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದ್ದರೂ, ಮುಸ್ಲಿಮರ ಜನಸಂಖ್ಯೆ ಹೆಚ್ಚಳದ ವೇಗ ಕ್ರೈಸ್ತರಿಗಿಂತ ಹೆಚ್ಚಿರಲಿದೆ ಎಂದು ಅಂದಾಜಿಸಲಾಗಿದೆ.

ಜನಸಂಖ್ಯೆ ಹೆಚ್ಚಳಕ್ಕೆ ಮುಸ್ಲಿಂ ಮಹಿಳೆಯರ ಫಲವತ್ತತೆ ಪ್ರಮುಖ ಕಾರಣ!

ಮುಸ್ಲಿಂ ಮಹಿಳೆಯರ ಸರಾಸರಿ ಫಲವತ್ತತೆ ಪ್ರಮಾಣ ಇತರ ಪ್ರಮುಖ ಧಾರ್ಮಿಕ ಸಮುದಾಯಗಳ ಮಹಿಳೆಯರಿಗಿಂತ ಹೆಚ್ಚಿರುವುದು ಈ ಜನಸಂಖ್ಯಾ ಬದಲಾವಣೆಗೆ ಪ್ರಮುಖ ಕಾರಣ ಎಂದು ವರದಿ ವಿವರಿಸಿದೆ.

ಪ್ಯೂ ರಿಸರ್ಚ್ ಸೆಂಟರ್‌ನ ಹಿರಿಯ ಜನಸಂಖ್ಯಾಶಾಸ್ತ್ರಜ್ಞ ಕಾನ್ರಾಡ್ ಹ್ಯಾಕೆಟ್ ಪ್ರಕಾರ, 2020ರಿಂದ 2025ರ ಅವಧಿಯಲ್ಲಿ ಮುಸ್ಲಿಂ ಮಹಿಳೆಯರ ಒಟ್ಟು ಫಲವತ್ತತೆ ಪ್ರಮಾಣ ಪ್ರತಿ ಮಹಿಳೆಗೆ ಸರಾಸರಿ 3.1 ಮಕ್ಕಳಷ್ಟಿತ್ತು. ಕ್ರೈಸ್ತ ಮಹಿಳೆಯರಲ್ಲಿ ಈ ಪ್ರಮಾಣ 2.5 ಮಕ್ಕಳಾಗಿದ್ದರೆ, ಇತರ ಧಾರ್ಮಿಕ ಸಮುದಾಯಗಳ ಮಹಿಳೆಯರಲ್ಲಿ 1.6 ಮಕ್ಕಳಷ್ಟಿತ್ತು.

ಒಂದು ಪೀಳಿಗೆಯ ಜನಸಂಖ್ಯೆ ಮುಂದಿನ ಪೀಳಿಗೆಯಲ್ಲಿ ತನ್ನ ಸಂಖ್ಯೆಯನ್ನು ಉಳಿಸಿಕೊಳ್ಳಲು ಪ್ರತಿ ಮಹಿಳೆಗೆ ಸರಾಸರಿ 2.1 ಮಕ್ಕಳ ಜನನ ಅಗತ್ಯವೆಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಜನನ ಮತ್ತು ಮರಣಗಳಲ್ಲಿನ ವ್ಯತ್ಯಾಸವೇ ಧಾರ್ಮಿಕ ಸಮುದಾಯಗಳ ಜನಸಂಖ್ಯಾ ಬದಲಾವಣೆಗೆ ಮತಾಂತರಕ್ಕಿಂತ ಹೆಚ್ಚಿನ ಕಾರಣವಾಗಿದೆ ಎಂದು ಹ್ಯಾಕೆಟ್ ವಿವರಿಸಿದ್ದಾರೆ.

2070ರ ವೇಳೆಗೆ ಮುಸ್ಲಿಮರ ಸಂಖ್ಯೆ 360 ಕೋಟಿ ದಾಟುವ ಸಾಧ್ಯತೆ

ಪ್ಯೂ ರಿಸರ್ಚ್ ಸೆಂಟರ್‌ನ ದೀರ್ಘಾವಧಿಯ ಅಂದಾಜಿನ ಪ್ರಕಾರ, 2020ರಿಂದ 2070ರ ನಡುವಿನ ಅವಧಿಯಲ್ಲಿ ನೈಸರ್ಗಿಕ ಜನಸಂಖ್ಯಾ ಬೆಳವಣಿಗೆಯಿಂದ ಮುಸ್ಲಿಂ ಸಮುದಾಯಕ್ಕೆ 160 ಕೋಟಿ ಜನರು ಸೇರ್ಪಡೆಯಾಗಬಹುದು. ಇದೇ ಅವಧಿಯಲ್ಲಿ ಕ್ರೈಸ್ತರ ಜನಸಂಖ್ಯೆ 79.2 ಕೋಟಿ ಹೆಚ್ಚಾಗುವ ನಿರೀಕ್ಷೆಯಿದೆ.

ಧರ್ಮ ಬದಲಾವಣೆಯಿಂದಾಗುವ ಪರಿಣಾಮ ಇದಕ್ಕಿಂತ ಕಡಿಮೆ ಇರಲಿದೆ. ಈ ಅವಧಿಯಲ್ಲಿ ಮತಾಂತರದ ಕಾರಣದಿಂದ ಕ್ರೈಸ್ತ ಸಮುದಾಯವು ನಿವ್ವಳ 10.5 ಕೋಟಿ ಜನರನ್ನು ಕಳೆದುಕೊಳ್ಳಬಹುದು. ಮುಸ್ಲಿಂ ಸಮುದಾಯದಲ್ಲಿಯೂ ನಿವ್ವಳ 80 ಲಕ್ಷ ಜನರ ಇಳಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: 30 ವರ್ಷಗಳಲ್ಲಿ ಮುಸ್ಲಿಮರ ಜನಸಂಖ್ಯೆ ಶೇ 90ರಷ್ಟು ಏರಿಕೆ: ಜಾತಿ ಗಣತಿ ವರದಿಯ ಮತ್ತಷ್ಟು ಮಾಹಿತಿ ಬಹಿರಂಗ

ಇನ್ನೂ ಮುಂದುವರಿದು, 2070ರ ವೇಳೆಗೆ ಜಾಗತಿಕ ಮುಸ್ಲಿಂ ಜನಸಂಖ್ಯೆ 360 ಕೋಟಿಯನ್ನು ದಾಟಬಹುದು. ಅದೇ ವೇಳೆ ಕ್ರೈಸ್ತರ ಜನಸಂಖ್ಯೆ 300 ಕೋಟಿಗಿಂತ ಸ್ವಲ್ಪ ಕಡಿಮೆ ಇರಬಹುದು ಎಂದು ಪ್ಯೂ ರಿಸರ್ಚ್ ಸೆಂಟರ್ ಅಂದಾಜಿಸಿದೆ. ಈ ಬೆಳವಣಿಗೆ ಕ್ರೈಸ್ತರ ಜನಸಂಖ್ಯೆ ಕಡಿಮೆಯಾಗುವುದರಿಂದ ಮಾತ್ರ ಸಂಭವಿಸುವುದಲ್ಲ; ಎರಡೂ ಧಾರ್ಮಿಕ ಸಮುದಾಯಗಳ ಜನಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂಬುದನ್ನೂ ವರದಿ ಸ್ಪಷ್ಟಪಡಿಸಿದೆ.

ಕರೋಲಿನ್ ಲೆವಿಟ್ ಎಕ್ಸ್ ಸಂದೇಶ

ಆಗಸ್ಟ್‌ನಲ್ಲಿ ಶ್ವೇತಭವನದ ಹುದ್ದೆಗೆ ರಾಜೀನಾಮೆ

ಕರೋಲಿನ್ ಲೆವಿಟ್ ಅವರು 2025ರ ಜನವರಿಯಿಂದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಎರಡನೇ ಮಗುವಿನ ಜನನದ ಬಳಿಕ ಮಾತೃತ್ವ ರಜೆಯಿಂದ ಕೆಲಸಕ್ಕೆ ಮರಳಿದ ನಂತರ, ಹುದ್ದೆಯ ಜವಾಬ್ದಾರಿ ಮತ್ತು ತಾಯ್ತನದ ನಡುವಿನ ಸಮತೋಲನ ಕಾಯ್ದುಕೊಳ್ಳುವುದು ಕಷ್ಟವಾಗುತ್ತಿದೆ ಎಂದು ತಿಳಿಸಿ ಆಗಸ್ಟ್ ಅಂತ್ಯದಲ್ಲಿ ಹುದ್ದೆ ತೊರೆದಿದ್ದರು. ಇದು ಕಹಿ-ಸಿಹಿ ನಿರ್ಧಾರ ಎಂದು ಹೇಳಿದ್ದ ಅವರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಹೊರಗಿನಿಂದ ಸಲಹೆಗಾರ್ತಿಯಾಗಿ ಬೆಂಬಲ ಮುಂದುವರಿಸುವುದಾಗಿ ತಿಳಿಸಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:59 am, Sun, 22 November 26

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us