ಪ್ರವಾಹದ ನಡುವೆಯೂ ದುರಾಸೆ; ಕೊಚ್ಚಿಬಂದ ಬ್ಯಾಂಕ್ ಲಾಕರ್ ಒಡೆದು 57 ಲಕ್ಷ ರೂ. ದೋಚಿದ ನೇಪಾಳಿಗರು

ನೇಪಾಳದ ವಿವಿಧ ಭಾಗಗಳಲ್ಲಿ ಜಲಪ್ರಳಯ ಸೃಷ್ಟಿಸಿರುವ ಭೀಕರ ಪ್ರವಾಹದ ನಡುವೆಯೇ ವಿಚಿತ್ರವಾದ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ನೇಪಾಳದ ಜನರು ಜೀವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರೆ ಪ್ರಾಣಾಪಾಯದಿಂದ ಪಾರಾದ 29 ಜನರು ದುರಾಸೆಯಿಂದ ಪ್ರವಾಹದ ರಭಸಕ್ಕೆ ಕೊಚ್ಚಿಬಂದಿದ್ದ ಬ್ಯಾಂಕ್ ಲಾಕರ್ ಒಡೆದು ಅದರಲ್ಲಿದ್ದ ಹಣವನ್ನು ಲೂಟಿ ಮಾಡಿದ್ದಾರೆ. ಆ 29 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಕಷ್ಟಪಟ್ಟು ದುಡಿದ ಹಣವನ್ನು ಆ ಲಾಕರ್​​ನಲ್ಲಿ ಇಟ್ಟಿದ್ದ ವ್ಯಕ್ತಿ ಪ್ರವಾಹದ ಹೊಡೆತಕ್ಕೆ ಬದುಕಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಜೀವ ಉಳಿದರೆ ಸಾಕೆನ್ನುವ ಪರಿಸ್ಥಿತಿ ಇರುವ ಈ ಸಂದರ್ಭದಲ್ಲೂ ದರೋಡೆ ಮಾಡಿರುವ ಆ ಜನರ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಪ್ರವಾಹದ ನಡುವೆಯೂ ದುರಾಸೆ; ಕೊಚ್ಚಿಬಂದ ಬ್ಯಾಂಕ್ ಲಾಕರ್ ಒಡೆದು 57 ಲಕ್ಷ ರೂ. ದೋಚಿದ ನೇಪಾಳಿಗರು
Nepal Locker Cash Recovered
Image Credit source: x

Updated on: Aug 29, 2026 | 6:11 PM

ಕಠ್ಮಂಡು, ಆಗಸ್ಟ್ 29: ನೇಪಾಳದ ಪ್ರವಾಹದಲ್ಲಿ (Nepal Flash Flood) ಕೊಚ್ಚಿಬಂದ ಬ್ಯಾಂಕ್ ಲಾಕರ್ ಒಡೆದು 57 ಲಕ್ಷ ರೂ. ಲೂಟಿ ಮಾಡಿದ್ದ ಸ್ಥಳೀಯರಾದ 29 ಜನರನ್ನು ಪೊಲೀಸರು ಬಂಧಿಸಿರುವ ವಿಚಿತ್ರವಾದ ಘಟನೆಯೊಂದು ನಡೆದಿದೆ. ನೇಪಾಳದಲ್ಲಿ ಭೀಕರ ಪ್ರವಾಹ ವಿನಾಶ ಸೃಷ್ಟಿಸುತ್ತಿರುವ ಬೆನ್ನಲ್ಲೇ, ತ್ರಿಶೂಲಿ ನದಿಯಲ್ಲಿ ಕೊಚ್ಚಿಬಂದ ಬ್ಯಾಂಕ್ ಲಾಕರ್ ಒಂದನ್ನು ಒಡೆದು ಅದರಲ್ಲಿದ್ದ ಹಣವನ್ನು ದೋಚಿದ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗ 29 ಜನರನ್ನು ಬಂಧಿಸಿದ್ದು, 57 ಲಕ್ಷಕ್ಕೂ ಹೆಚ್ಚು ರೂಪಾಯಿಗಳನ್ನು (ಭಾರತೀಯ ಮೊತ್ತ) ವಶಪಡಿಸಿಕೊಂಡಿದ್ದಾರೆ.

ಪ್ರವಾಹ ಪೀಡಿತ ರಸುವಾ ಪ್ರದೇಶದಿಂದ ನದಿಯ ಹರಿವಿನಲ್ಲಿ ಕೊಚ್ಚಿಬಂದಿದ್ದ ಬ್ಯಾಂಕ್ ಲಾಕರ್, ಧಾದಿಂಗ್ ಜಿಲ್ಲೆಯ ಬೆಲ್ಖುಖೋಲಾದಲ್ಲಿ ಪತ್ತೆಯಾಗಿತ್ತು. ಭದ್ರತಾ ಸಿಬ್ಬಂದಿ ಸ್ಥಳಕ್ಕೆ ತಲುಪುವ ಮುನ್ನವೇ ಸ್ಥಳೀಯ ನಿವಾಸಿಗಳು ಅದನ್ನು ಬಲವಂತವಾಗಿ ಒಡೆದು ನಗದನ್ನು ದೋಚಿದ್ದರು. ನೇಪಾಳ ಪೊಲೀಸ್ ಮತ್ತು ಆರ್ಮ್ಡ್ ಪೊಲೀಸ್ ಫೋರ್ಸ್ ಜಂಟಿ ಕಾರ್ಯಾಚರಣೆ ನಡೆಸಿ 29 ಶಂಕಿತರನ್ನು ವಶಕ್ಕೆ ಪಡೆದಿದೆ.

ಇದನ್ನೂ ಓದಿ: ನೇಪಾಳ-ಟಿಬೆಟ್ ಜಲಪ್ರಳಯ: ಸಾವಿನ ಸಂಖ್ಯೆ 584ಕ್ಕೆ ಏರಿಕೆ, 2,482 ಮಂದಿ ನಾಪತ್ತೆ, 320 ಭಾರತೀಯರು ಸಂಪರ್ಕಕ್ಕೆ ಸಿಗುತ್ತಿಲ್ಲ

ಲಾಕರ್ ಲೂಟಿಯ ಸುಳಿವು:

ನದಿಯ ದಂಡೆಗೆ ಕೊಚ್ಚಿಬಂದಿದ್ದ ಬ್ಯಾಂಕ್ ಲಾಕರ್ ಅನ್ನು ಸ್ಥಳೀಯರು ಒಡೆದು ನಗದನ್ನು ಕಬಳಿಸುತ್ತಿದ್ದಾರೆ ಎಂಬ ಮಾಹಿತಿ ಧಾದಿಂಗ್ ಪೊಲೀಸರಿಗೆ ದೊರಕಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿತು. ಪ್ರಾಥಮಿಕ ಶೋಧ ಕಾರ್ಯಾಚರಣೆಯಲ್ಲೇ 29 ಶಂಕಿತರನ್ನು ಬಂಧಿಸಲಾಗಿದ್ದು, ಅವರಿಂದ ಸುಮಾರು 57 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಬಂಧಿತರ ವಯಸ್ಸು 19ರಿಂದ 49 ವರ್ಷಗಳ ನಡುವೆ ಇದೆ. ತನಿಖೆ ಮತ್ತು ಕಾನೂನು ಪ್ರಕ್ರಿಯೆಗಳು ಮುಂದುವರಿದಿದ್ದು, ಲಾಕರ್‌ನಲ್ಲಿ ಹಣ ಎಷ್ಟಿತ್ತು ಮತ್ತು ಇತರ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us