ನೀವು ಕೆಲಸ ಮುಂದುವರೆಸಿ, ನಾನು ನೋಡ್ತೀನಿ: ಪ್ರವಾಹದ ವೇಳೆ 265 ಕಾರ್ಮಿಕರನ್ನು ಸುರಂಗದಲ್ಲೇ ಬಿಟ್ಟು ಓಡಿಹೋದ ಚೀನಾ ಸೂಪರ್‌ವೈಸರ್

ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಜಲಪ್ರಳಯದಲ್ಲಿ, ತ್ರಿಶೂಲಿ-3ಎ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ 265 ಕಾರ್ಮಿಕರನ್ನು ಚೀನಾ ಸೂಪರ್‌ವೈಸರ್ ನಿರ್ದಯವಾಗಿ ಬಿಟ್ಟು ಪರಾರಿಯಾಗಿದ್ದಾನೆ. ಪ್ರವಾಹ ಮುನ್ಸೂಚನೆ ಇದ್ದರೂ ನಿರ್ಲಕ್ಷ್ಯ ವಹಿಸಿದ ಪರಿಣಾಮ ನೂರಾರು ಜೀವಗಳು ಬಲಿಯಾಗಿವೆ. ಬದುಕುಳಿದ ಕಾರ್ಮಿಕರ ಪ್ರಕಾರ, ಸಮಯಕ್ಕೆ ಎಚ್ಚರಿಕೆ ನೀಡಿದ್ದರೆ ಈ ದುರಂತ ತಪ್ಪಿಸಬಹುದಿತ್ತು. ಚೀನಾದ ಕಂಪನಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ನೀವು ಕೆಲಸ ಮುಂದುವರೆಸಿ, ನಾನು ನೋಡ್ತೀನಿ: ಪ್ರವಾಹದ ವೇಳೆ 265 ಕಾರ್ಮಿಕರನ್ನು ಸುರಂಗದಲ್ಲೇ ಬಿಟ್ಟು ಓಡಿಹೋದ ಚೀನಾ ಸೂಪರ್‌ವೈಸರ್
ಪ್ರವಾಹ

Updated on: Sep 02, 2026 | 1:00 PM

ಕಠ್ಮಂಡು, ಸೆಪ್ಟೆಂಬರ್ 02: ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ  ಪ್ರವಾಹ(Flood)ದ ವೇಳೆ, ತ್ರಿಶೂಲಿ-3ಎ ಜಲವಿದ್ಯುತ್ ಯೋಜನೆಯ ಸುರಂಗ ಸಂಖ್ಯೆ 3 ರೊಳಗೆ ಕೆಲಸ ಮಾಡುತ್ತಿದ್ದ ಸುಮಾರು 265 ಕಾರ್ಮಿಕರನ್ನು ಅಪಾಯದ ಸ್ಥಿತಿಯಲ್ಲೇ ಬಿಟ್ಟು ಚೀನಾದ ಮುಖ್ಯ ಮೇಲ್ವಿಚಾರಕ ಪರಾರಿಯಾಗಿದ್ದ ಎಂಬ ಆಘಾತಕಾರಿ ಸತ್ಯವನ್ನು ಬದುಕುಳಿದ ಕಾರ್ಮಿಕರೊಬ್ಬರು ಬಿಚ್ಚಿಟ್ಟಿದ್ದಾರೆ.

ದುರಂತದಿಂದ ಪವಾಡಸದೃಶವಾಗಿ ಪಾರಾದ ರಾಜ್ ಛೆಟ್ರಿ ಎಂಬ ಕಾರ್ಮಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಸಮಯಕ್ಕೆ ಸರಿಯಾಗಿ ಎಚ್ಚರಿಕೆ ನೀಡಿದ್ದರೆ ಮತ್ತು ಸುರಂಗದಿಂದ ಹೊರಬರಲು ಅನುಮತಿಸಿದ್ದರೆ ನೂರಾರು ಅಮಾಯಕ ಜೀವಗಳನ್ನು ಉಳಿಸಬಹುದಿತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ.

ಸುರಂಗದೊಳಗೆ ಅಂದು ನಡೆದಿದ್ದೇನು?
ಸ್ಫೋಟದಂತಹ ಶಬ್ದ ಹಾಗೂ ಚೀನಿ ಅಧಿಕಾರಿಯ ವಂಚನೆ: ಸುರಂಗದೊಳಗೆ ಇದ್ದಕ್ಕಿದ್ದಂತೆ ಭಾರಿ ಬಿರುಗಾಳಿಯಂತಹ ಭೀಕರ ಸದ್ದು ಕೇಳಿಬಂದಾಗ ಅನುಮಾನಗೊಂಡ ಕಾರ್ಮಿಕರು ಹೊರಹೋಗಲು ಅನುಮತಿ ಕೇಳಿದರು. ಆದರೆ ಚೀನಾದ ಸೂಪರ್‌ವೈಸರ್, “ನೀವು ಇಲ್ಲೇ ಕಾಯಿರಿ, ಕೆಲಸ ನಿಲ್ಲಿಸಬೇಡಿ, ನಾನು ಹೊರಗೆ ಹೋಗಿ ಪರಿಸ್ಥಿತಿ ನೋಡಿ ಬರುತ್ತೇನೆ” ಎಂದು ಹೇಳಿ ಹೋದವರು ಮತ್ತೆ ಹಿಂತಿರುಗಲೇ ಇಲ್ಲ.

ಕಾರ್ಮಿಕರ ಮೇಲೆ ನುಗ್ಗಿದ ಕೆಸರು, ನೀರಿನ ರಾಶಿ: ಸೂಪರ್‌ವೈಸರ್ ಹೋದ ಕೆಲವೇ ನಿಮಿಷಗಳಲ್ಲಿ ಬೃಹತ್ ಪ್ರಮಾಣದ ಪ್ರವಾಹದ ನೀರು, ಬಂಡೆಗಲ್ಲುಗಳು ಮತ್ತು ಕೆಸರು ಸುರಂಗದೊಳಗೆ ನುಗ್ಗಿತು. ಪ್ರವೇಶದ್ವಾರದತ್ತ ಓಡಿದವರಲ್ಲಿ ರಾಜ್ ಛೆಟ್ರಿ ಸೇರಿದಂತೆ ಕೇವಲ ನಾಲ್ವರು ಹೊರಬರಲು ಯಶಸ್ವಿಯಾದರು, ಆದರೆ ಅವರಲ್ಲಿದ್ದ ಇಬ್ಬರು ನೀರಿನ ಸೆಳೆತಕ್ಕೆ ಸಿಲುಕಿ ಮತ್ತೆ ನಾಪತ್ತೆಯಾಗಿದ್ದಾರೆ.

ಸುರಂಗದೊಳಗೆ ಕೇಳಿಸುತ್ತಿದ್ದ ಚೀರಾಟ: ಸುರಂಗದೊಳಗೆ ಹಲವು ಮೃತದೇಹಗಳು ಬಿದ್ದಿದ್ದವು. ಜೊತೆಗೆ ಅವಶೇಷಗಳಡಿ ಸಿಲುಕಿದ ಕಾರ್ಮಿಕರು ನಮ್ಮನ್ನು ಉಳಿಸಿ ಎಂದು ಚೀರುತ್ತಿದ್ದ ಶಬ್ದ ಹೊರಗಿನಿಂದ ಕೇಳಿಸುತ್ತಿತ್ತು. ಆದರೆ ಅಸಹಾಯಕರಾಗಿ ಜೀವ ಉಳಿಸಿಕೊಳ್ಳಲು ತಾವು ಕಾಡಿನತ್ತ ಓಡಬೇಕಾಯಿತು ಎಂದು ಛೆಟ್ರಿ ಕಣ್ಣೀರು ಹಾಕಿದ್ದಾರೆ.

ಮತ್ತಷ್ಟು ಓದಿ:
Nepal Floods: ನೇಪಾಳದ ಪ್ರವಾಹದ ಸಾವಿನ ಸಂಖ್ಯೆ 1,050ಕ್ಕೆ ಏರಿಕೆ; 163 ಭಾರತೀಯರ ರಕ್ಷಣೆ

ಕಾಡಿನಲ್ಲಿ ಕಳೆದ ಭಯಾನಕ ರಾತ್ರಿ

ಪ್ರವಾಹದಿಂದ ತಪ್ಪಿಸಿಕೊಂಡು ಬೆಟ್ಟದ ಕಾಡಿಗೆ ಓಡಿದ ಕಾರ್ಮಿಕರು ಮೊಬೈಲ್ ನೆಟ್‌ವರ್ಕ್ ಮತ್ತು ಸಂಪರ್ಕವಿಲ್ಲದೆ ಮಳೆಯಲ್ಲೇ ಇಡೀ ರಾತ್ರಿಯನ್ನು ಮರದ ಕೆಳಗೆ ಆಶ್ರಯ ಪಡೆದು ಕಳೆದರು.

ಮರುದಿನ ಬೆಳಗ್ಗೆ ಸ್ಥಳೀಯ ಗ್ರಾಮಸ್ಥರು ಮತ್ತು ರಕ್ಷಣಾ ಪಡೆಗಳ ಕಣ್ಣಿಗೆ ಬಿದ್ದ ನಂತರ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.

ಟಿಬೆಟ್ ಕಡೆಯಿಂದ ಎಚ್ಚರಿಕೆ ನೀಡದ ಚೀನಾ: ಟಿಬೆಟ್ ಗಡಿಯಲ್ಲಿ ನೈಸರ್ಗಿಕ ಜಲಾಶಯ ಮತ್ತು ಹಿಮಸರೋವರ ಒಡೆದು ಪ್ರವಾಹ ಉಂಟಾಗುವ ಮುನ್ಸೂಚನೆ ಚೀನಾದ ಹವಾಮಾನ ಮತ್ತು ಜಲವಿಜ್ಞಾನ ಇಲಾಖೆಗೆ ಮುಂಚಿತವಾಗಿಯೇ ತಿಳಿದಿತ್ತು. ಆದರೆ ಕೆಳಭಾಗದಲ್ಲಿರುವ ನೇಪಾಳಕ್ಕೆ ಅಧಿಕೃತವಾಗಿ ‘ಅರ್ಲಿ ವಾರ್ನಿಂಗ್’ ಸಂದೇಶ ನೀಡುವಲ್ಲಿ ವಿಫಲವಾಯಿತು ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಪ್ರಾಜೆಕ್ಟ್ ಹೊಣೆಗಾರಿಕೆ: ತ್ರಿಶೂಲಿ-3ಎ ಜಲವಿದ್ಯುತ್ ಯೋಜನೆಯನ್ನು ಚೀನಾ ಮೂಲದ ‘ಚೀನಾ ಗೆಝೌಬಾ ಗ್ರೂಪ್ ಕಂಪನಿ’ ನಿರ್ಮಾಣ ಮಾಡುತ್ತಿದ್ದು, ತುರ್ತು ನಿರ್ವಹಣಾ ಶಿಷ್ಟಾಚಾರಗಳನ್ನು  ಸಂಪೂರ್ಣ ಗಾಳಿಗೆ ತೂರಲಾಗಿದೆ ಎಂದು ಸ್ಥಳೀಯ ಕಾರ್ಮಿಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ನೇಪಾಳದಲ್ಲಿ ಸಾವಿನ ಸರಣಿ: ಈ ಮಹಾ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ ಈಗಾಗಲೇ ಸಾವಿರದ ಗಡಿ ದಾಟಿದ್ದು, ಇನ್ನೂ 4 ಸಾವಿರಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ. ಸುರಂಗಗಳ ಒಳಗೆ ಸಿಲುಕಿರುವವರನ್ನು ರಕ್ಷಿಸಲು ಭಾರತೀಯ ಎನ್‌ಡಿಆರ್‌ಎಫ್ ಮತ್ತು ಸೇನಾ ತಜ್ಞರು ಸತತ ಶ್ರಮಿಸುತ್ತಿದ್ದಾರೆ.

 

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us