
ಕಠ್ಮಂಡು, ಸೆಪ್ಟೆಂಬರ್ 04: ನೇಪಾಳದಲ್ಲಿ ಹಿಮನದಿ ಕುಸಿತದಿಂದ ಉಂಟಾದ ಭೀಕರ ಪ್ರವಾಹ ಸಂಭವಿಸಿದ ಒಂಬತ್ತು ದಿನಗಳ ಬಳಿಕ ಪವಾಡವೊಂದು ನಡೆದಿದ್ದು, ತ್ರಿಶೂಲಿ-3ಎ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಸಿಲುಕಿದ್ದ ಇಬ್ಬರು ಕಾರ್ಮಿಕರನ್ನು ರಕ್ಷಣಾ ಪಡೆಗಳು ಜೀವಂತವಾಗಿ ರಕ್ಷಿಸಿವೆ. ಈ ಪವಾಡಸದೃಶ ಪಾರುಗಾಣಿಕೆ ಬೆನ್ನಲ್ಲೇ ಸುರಂಗದ ಆಳದಿಂದ ಮತ್ತಷ್ಟು ಜನರ ಕೂಗು ಕೇಳಿಬರುತ್ತಿದ್ದು, ವಿವಿಧ ಸುರಂಗಗಳಲ್ಲಿ ಸಿಲುಕಿರುವ ನೂರಾರು ಕಾರ್ಮಿಕರೂ ಬದುಕುಳಿದಿರಬಹುದು ಎಂಬ ಆಶಾಕಿರಣ ಮೂಡಿದೆ.
ರಕ್ಷಿಸಲ್ಪಟ್ಟ ಇಬ್ಬರು ನೌಕರರನ್ನು ನೇಪಾಳ ವಿದ್ಯುತ್ ಪ್ರಾಧಿಕಾರದ ಮೆಕ್ಯಾನಿಕಲ್ ಫೋರ್‌ಮ್ಯಾನ್ ಸಂಜಯ್ ಶಾ (30) ಮತ್ತು ಪ್ರಾಜೆಕ್ಟ್ ಮೇಲ್ವಿಚಾರಕ ಕಬೀರ್ ಮಹಾರ್ಜನ್ (45) ಎಂದು ಗುರುತಿಸಲಾಗಿದೆ. ಸಂಪೂರ್ಣ ಕೆಸರು ಮತ್ತು ಮಣ್ಣಿನಲ್ಲಿ ಹೂತುಹೋಗಿದ್ದ ಸುರಂಗದ ಮುಂಭಾಗವನ್ನು ತೆರವುಗೊಳಿಸಿ ಇಬ್ಬರನ್ನೂ ಸುರಕ್ಷಿತವಾಗಿ ಹೊರತರಲಾಗಿದ್ದು, ರಕ್ಷಣಾ ಸಿಬ್ಬಂದಿ ಅವರನ್ನು ಭುಜದ ಮೇಲೆ ಹೊತ್ತು ಆಸ್ಪತ್ರೆಗೆ ಸಾಗಿಸಿದ್ದಾರೆ. ತಮ್ಮವರು ಜೀವಂತವಾಗಿ ಮರಳಿ ಬಂದಿದ್ದನ್ನು ಕಂಡು ಕುಟುಂಬಸ್ಥರ ನಿಟ್ಟುಸಿರು ಬಿಟ್ಟಿದ್ದಾರೆ.
ಆಗಸ್ಟ್ 26 ರಂದು ಪ್ರವಾಹದ ನೀರು ತ್ರಿಶೂಲಿ ನದಿ ಪಾತ್ರದ ಜಲವಿದ್ಯುತ್ ಸ್ಥಾವರಗಳನ್ನು ಸಂಪೂರ್ಣ ಆವರಿಸಿಕೊಂಡ ಪರಿಣಾಮ, ಸುಮಾರು 12 ವಿವಿಧ ಯೋಜನೆಗಳ 900ಕ್ಕೂ ಹೆಚ್ಚು ಕಾರ್ಮಿಕರು ನಾಪತ್ತೆಯಾಗಿದ್ದರು. ಇದರಲ್ಲಿ ಅಂದಾಜು 500 ಮಂದಿ ಕಾರ್ಮಿಕರು ವಿವಿಧ ಯೋಜನಾ ಸುರಂಗಗಳಲ್ಲೇ ಸಿಲುಕಿಕೊಂಡಿರುವ ಭೀತಿ ವ್ಯಕ್ತವಾಗಿದೆ. ಸದ್ಯ ತ್ರಿಶೂಲಿ-3ಎ ಸುರಂಗದ ಆಳದಿಂದ ಮತ್ತಷ್ಟು ಜನರ ಧ್ವನಿಗಳು ಕೇಳಿಬರುತ್ತಿದ್ದು, ಸಿಲುಕಿರುವವರಿಗೆ ಉಸಿರುಗಟ್ಟದಂತೆ ಎಂಜಿನಿಯರ್‌ಗಳು ಪೈಪ್‌ಗಳ ಮೂಲಕ ನಿರಂತರವಾಗಿ ಗಾಳಿ ಮತ್ತು ಆಮ್ಲಜನಕವನ್ನು ಪಂಪ್ ಮಾಡುತ್ತಿದ್ದಾರೆ.
ಮತ್ತಷ್ಟು ಓದಿ: ನೇಪಾಳದ ಪ್ರವಾಹ: 17 ಮಂದಿ ಕರ್ನಾಟಕದ ಚಾರಣಿಗರು ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್
ಹಿಮನದಿ ಒಡೆದು ಸಂಭವಿಸಿದ ಈ ಮಹಾದುರಂತದಲ್ಲಿ ಈವರೆಗೆ ಸಾವನ್ನಪ್ಪಿದವರ ಅಧಿಕೃತ ಸಂಖ್ಯೆ 1,259 ಕ್ಕೆ ಏರಿಕೆಯಾಗಿದ್ದು, 5 ಸಾವಿರಕ್ಕೂ ಹೆಚ್ಚು ಮಂದಿ ಇನ್ನೂ ಕಾಣೆಯಾಗಿದ್ದಾರೆ. ಇತ್ತ ಗಡಿಯಾಚೆಗಿನ ಟಿಬೆಟ್ ಭಾಗದಲ್ಲೂ 21 ಮಂದಿ ಮೃತಪಟ್ಟು, 541 ಮಂದಿ ನಾಪತ್ತೆಯಾಗಿದ್ದಾರೆ. ನೇಪಾಳ ಸೇನೆ ಮತ್ತು ವಿಪತ್ತು ನಿರ್ವಹಣಾ ಪಡೆಗಳು ಅತ್ಯಾಧುನಿಕ ರಕ್ಷಣಾ ಉಪಕರಣಗಳೊಂದಿಗೆ ಅರ್ಧ ಡಜನ್‌ಗೂ ಹೆಚ್ಚು ಸುರಂಗಗಳಲ್ಲಿ ಸಮರೋಪಾದಿಯಲ್ಲಿ ಶೋಧ ಕಾರ್ಯಾಚರಣೆ ಮುಂದುವರೆಸಿವೆ.
ಪೋಸ್ಟ್
ರಾಸುವಾಗಢಿ, ಲಂಗ್‌ಟಾಂಗ್, ಚಿಲಿಮೆ ಮತ್ತು ಅಪ್ಪರ್ ತ್ರಿಶೂಲಿ-1 ಸೇರಿದಂತೆ ಹಲವು ಪ್ರಮುಖ ಸುರಂಗಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುರೆದಿದೆ. ಸುರಂಗಗಳ ಒಳಗೆ ನೀರು ನುಗ್ಗದ ಸುರಕ್ಷಿತ ‘ಡ್ರೈ ಚೇಂಬರ್’ಗಳಿದ್ದು, ಅಲ್ಲಿ ಆಹಾರ ಮತ್ತು ನೀರು ಸಂಗ್ರಹವಿರಬಹುದಾದ ಕಾರಣ ಹಲವರು ಜೀವಂತವಾಗಿರುವ ಸಾಧ್ಯತೆ ಹೆಚ್ಚಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದುರ್ಗಮ ಹಿಮಾಲಯ ಕಣಿವೆಗಳಲ್ಲಿ ಸಿಲುಕಿರುವವರನ್ನು ಹೊರತರಲು ನೇಪಾಳ ಸೇನೆಯೊಂದಿಗೆ ಭಾರತೀಯ ರಕ್ಷಣಾ ತಜ್ಞರು ಮತ್ತು ಚೀನಾದ ವಿಶೇಷ ತಂಡಗಳು ಥರ್ಮಲ್ ಕ್ಯಾಮೆರಾ, ಹೈಡ್ರಾಲಿಕ್ ಕಟ್ಟರ್‌ಗಳು ಮತ್ತು ಡ್ರಿಲ್ಲಿಂಗ್ ಯಂತ್ರಗಳೊಂದಿಗೆ ಜಂಟಿಯಾಗಿ ಕಾರ್ಯಾಚರಣೆಯಲ್ಲಿ ತೊಡಗಿವೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ