ಮತ್ತೆ ಕೋವಿಡ್ ಆತಂಕ; ಯುಕೆಯಾದ್ಯಂತ ಹರಡಿದೆ ಹೊಸ ತಳಿ ಎರಿಸ್: ವರದಿ
New Covid variant 'Eris': ಏಳು ಹೊಸ ಕೋವಿಡ್ ಪ್ರಕರಣಗಳ ಪೈಕಿ ಒಂದು ಪ್ರಕರಣದಲ್ಲಿ ಎರಿಸ್ ಎಂಬ EG.5.1 ಪತ್ತೆಯಾಗಿದೆ ಎಂದು ವರದಿ ಹೇಳಿದೆ. ಇತ್ತೀಚಿನ ದತ್ತಾಂಶಗಳ ಪ್ರಕಾರ ಆ ತಳಿ ಈಗ ಶೇ 14.6 ಪ್ರಕರಣಗಳಿಗೆ ಕಾರಣವಾಗಿದೆ ಎಂದು ಸೂಚಿಸುತ್ತದೆ ಎಂದು ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ (ಯುಕೆಎಚ್‌ಎಸ್‌ಎ) ಹೇಳಿರುವುದಾಗಿ ಸ್ಕೈ ನ್ಯೂಸ್ ವರದಿ ಮಾಡಿದೆ.
ಲಂಡನ್ ಆಗಸ್ಟ್ 07: ಕೋವಿಡ್-19 (Covid 19) ಇನ್ನೂ ಮುಗಿದಂತೆ ಕಾಣುತ್ತಿಲ್ಲ. ವೇಗವಾಗಿ ಹರಡುತ್ತಿರುವ ಒಮಿಕ್ರಾನ್ನಿಂದ (Omicron) ಬಂದಿರುವ ಹೊಸ ರೂಪಾಂತರ, EG.51 ಈಗ ಬ್ರಿಟನ್ ನಲ್ಲಿ ಕಾಣಿಸಿಕೊಂಡಿದೆ. ಎರಿಸ್ (Eris)ಎಂದು ಕರೆಯಲ್ಪಡುವ ಈ ತಳಿ ಕಳೆದ ತಿಂಗಳು ಯುಕೆಯಲ್ಲಿ ಮೊದಲ ಬಾರಿ ಪತ್ತೆಯಾಗಿದ್ದು ಇದು ದೇಶದಾದ್ಯಂತ ವೇಗವಾಗಿ ಹರಡುತ್ತಿದೆ ಎಂದು ಇಂಗ್ಲೆಂಡ್‌ನ ಆರೋಗ್ಯ ಅಧಿಕಾರಿಗಳನ್ನು ಉಲ್ಲೇಖಿಸಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಏಳು ಹೊಸ ಕೋವಿಡ್ ಪ್ರಕರಣಗಳ ಪೈಕಿ ಒಂದು ಪ್ರಕರಣದಲ್ಲಿ ಎರಿಸ್ ಎಂಬ EG.5.1 ಪತ್ತೆಯಾಗಿದೆ ಎಂದು ವರದಿ ಹೇಳಿದೆ. ಇತ್ತೀಚಿನ ದತ್ತಾಂಶಗಳ ಪ್ರಕಾರ ಆ ತಳಿ ಈಗ ಶೇ 14.6 ಪ್ರಕರಣಗಳಿಗೆ ಕಾರಣವಾಗಿದೆ ಎಂದು ಸೂಚಿಸುತ್ತದೆ ಎಂದು ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ (UKHSA) ಹೇಳಿರುವುದಾಗಿ ಸ್ಕೈ ನ್ಯೂಸ್ ವರದಿ ಮಾಡಿದೆ.
ನಮ್ಮ ಹಿಂದಿನ ವರದಿಗೆ ಹೋಲಿಸಿದರೆ ಈ ವಾರ ಕೋವಿಡ್- 19 ಪ್ರಕರಣಗಳ ದರಗಳು ಹೆಚ್ಚಾಗುತ್ತಲೇ ಇವೆ. ರೆಸ್ಪಿರೇಟರಿ ಡೇಟಾಮಾರ್ಟ್ ಸಿಸ್ಟಮ್ ಮೂಲಕ ವರದಿ ಮಾಡಲಾದ 4,396 ಉಸಿರಾಟದ ಮಾದರಿಗಳಲ್ಲಿ ಶೇ 5.4 ಅನ್ನು ಕೋವಿಡ್ ಎಂದು ಗುರುತಿಸಲಾಗಿದೆ. ಈ ಹಿಂದೆ ಇದು 4,403 ರಲ್ಲಿ ಶೇ 3.7 ಆಗಿತ್ತು ಎಂದು ಯುಕೆಎಚ್‌ಎಸ್‌ಎ ವರದಿಯಲ್ಲಿ ತಿಳಿಸಿದೆ.
ವಿಶೇಷವಾಗಿ ಏಷ್ಯಾದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಎರಿಸ್ ಅನ್ನು ಜುಲೈ 31 ರಂದು ಒಂದು ರೂಪಾಂತರ ಎಂದು ವರ್ಗೀಕರಿಸಲಾಯಿತು. ಹಾರಿಜಾನ್ ಸ್ಕ್ಯಾನಿಂಗ್‌ನ ಭಾಗವಾಗಿ ಜುಲೈ 3, 2023 ರಂದು EG.5.1 ಅನ್ನು ಮೊದಲ ಬಾರಿಗೆ ಮೇಲ್ವಿಚಾರಣೆಯಲ್ಲಿ ಸಿಗ್ನಲ್ ಆಗಿ ಸಂಗ್ರಹಿಸಲಾಯಿತು ಎಂದು ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ ಹೇಳಿದೆ.
ಜುಲೈ 31, 2023 ರಂದು ಮಾನಿಟರಿಂಗ್‌ನಲ್ಲಿನ ಸಂಕೇತದಿಂದ V-23JUL-01 ರೂಪಾಂತರಕ್ಕೆ ಏರಿಸಲಾಯಿತು. ಇದನ್ನು ರೂಪಾಂತರವೆಂದು ಘೋಷಿಸುವುದರಿಂದ ಹೆಚ್ಚಿನ ವಿವರವಾದ ಗುಣಲಕ್ಷಣ ಮತ್ತು ವಿಶ್ಲೇಷಣೆಯನ್ನು ಅನುಮತಿಸುತ್ತದೆ ಎಂದು ಅದು ಹೇಳಿದೆ. ಈ ವಾರದ ವರದಿಯಲ್ಲಿ ನಾವು ಕೋವಿಡ್-19 ಪ್ರಕರಣಗಳಲ್ಲಿ ಏರಿಕೆಯನ್ನು ಕಾಣುತ್ತಿದ್ದೇವೆ. ಹೆಚ್ಚಿನ ವಯಸ್ಸಿನ ಗುಂಪುಗಳಲ್ಲಿ, ವಿಶೇಷವಾಗಿ ವಯಸ್ಸಾದವರಲ್ಲಿ ಆಸ್ಪತ್ರೆಯ ದಾಖಲಾತಿ ದರಗಳಲ್ಲಿ ಸಣ್ಣ ಏರಿಕೆಯನ್ನು ನಾವು ನೋಡಿದ್ದೇವೆ. ಒಟ್ಟಾರೆ ಪ್ರವೇಶದ ಮಟ್ಟಗಳು ಇನ್ನೂ ತೀರಾ ಕಡಿಮೆಯಾಗಿವೆ ಮತ್ತು ನಾವು ಪ್ರಸ್ತುತ ಐಸಿಯು ಪ್ರವೇಶಗಳಲ್ಲಿ ಇದೇ ರೀತಿಯ ಹೆಚ್ಚಳವನ್ನು ಕಾಣುತ್ತಿಲ್ಲ. ನಾವು ಈ ದರಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಯುಕೆಎಚ್‌ಎಸ್‌ಎಯ ರೋಗನಿರೋಧಕ ಮುಖ್ಯಸ್ಥ ಡಾ ಮೇರಿ ರಾಮ್‌ಸೆ ಹೇಳಿದರು.
ಇದನ್ನೂ ಓದಿ: ಮೊರಾಕೊದಲ್ಲಿ ಬಸ್ ಅಪಘಾತ: 24 ಮಂದಿ ಸಾವು
ನಿಯಮಿತ ಮತ್ತು ಸರಿಯಾಗಿ ಕೈ ತೊಳೆಯುವುದು ಕೋವಿಡ್-19 ಮತ್ತು ಇತರ ವೈರಸ್‌ಗಳಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ನೀವು ಉಸಿರಾಟದ ಕಾಯಿಲೆಯ ಲಕ್ಷಣಗಳನ್ನು ಹೊಂದಿದ್ದರೆ, ಸಾಧ್ಯವಾದರೆ ಇತರರಿಂದ ದೂರವಿರಲು ನಾವು ಶಿಫಾರಸು ಮಾಡುತ್ತೇವೆ ಎಂದು ಅವರು ಹೇಳಿದರು.
ವಿಶ್ವ ಆರೋಗ್ಯ ಸಂಸ್ಥೆ (WHO) ಕೇವಲ ಎರಡು ವಾರಗಳ ಹಿಂದೆ EG.5.1 ರೂಪಾಂತರವನ್ನು ಪತ್ತೆಹಚ್ಚಲು ಪ್ರಾರಂಭಿಸಿತು ಎಂದು ಡಬ್ಲ್ಯುಎಚ್ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದು ಜನರು ಲಸಿಕೆಗಳು ಮತ್ತು ಮೊದಲಿನ ಸೋಂಕಿನಿಂದ ಉತ್ತಮವಾಗಿ ರಕ್ಷಿಸಲ್ಪಟ್ಟಿದ್ದರೂ, ದೇಶಗಳು ತಮ್ಮ ಮುಂಜಾಗ್ರತಾ ಕ್ರಮಗಳನ್ನು ಕಡಿಮೆ ಮಾಡಬಾರದು ಎಂದು ಯುಕೆಯಲ್ಲಿ ಎರಿಸ್ ರೂಪಾಂತರಿ ತ್ವರಿತವಾಗಿ ಹರಡುತ್ತಿದ್ದು ಆರೋಗ್ಯ ಅಧಿಕಾರಿಗಳು ಮತ್ತು ತಜ್ಞರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅದರ ಪ್ರಸರಣವನ್ನು ಮಿತಿಗೊಳಿಸಲು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:07 pm, Mon, 7 August 23