Coronavirus: ಚೀನಾದಲ್ಲಿ ಕೋವಿಡ್ ಹೊಸ ಅಲೆ; ಅನೇಕ ನಗರಗಳಲ್ಲಿ ಲಾಕ್​ಡೌನ್

ಸುಮಾರು 10,000 ಕೋವಿಡ್ ಪ್ರಕರಣಗಳು ಶುಕ್ರವಾರ ದೃಢಪಟ್ಟಿವೆ. ಈ ಪೈಕಿ ಹೆಚ್ಚಿನ ಸೋಂಕಿತರಲ್ಲಿ ಲಕ್ಷಣಗಳು ಕಾಣಿಸಿಕೊಂಡಿಲ್ಲ ಎನ್ನಲಾಗಿದೆ.

Coronavirus: ಚೀನಾದಲ್ಲಿ ಕೋವಿಡ್ ಹೊಸ ಅಲೆ; ಅನೇಕ ನಗರಗಳಲ್ಲಿ ಲಾಕ್​ಡೌನ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Nov 12, 2022 | 12:30 PM

ಬೀಜಿಂಗ್: ಕೊರೊನಾ ವೈರಸ್ (Coronavirus) ಸೋಂಕಿನ ಹೊಸ ಅಲೆ ಚೀನಾದಲ್ಲಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದ್ದು, ಅನೇಕ ನಗರಗಳಲ್ಲಿ ಲಾಕ್​ಡೌನ್ (lockdown) ಘೋಷಿಸಲಾಗಿದೆ. ಸುಮಾರು 10,000 ಕೋವಿಡ್ ಪ್ರಕರಣಗಳು ಶುಕ್ರವಾರ ದೃಢಪಟ್ಟಿವೆ. ಈ ಪೈಕಿ ಹೆಚ್ಚಿನ ಸೋಂಕಿತರಲ್ಲಿ ಲಕ್ಷಣಗಳು ಕಾಣಿಸಿಕೊಂಡಿಲ್ಲ ಎನ್ನಲಾಗಿದೆ. ಪಶ್ಚಿಮ ಚೀನಾದ ಚಾಂಗ್​ಕ್ವಿಂಗ್ ಹಾಗೂ ದಕ್ಷಿಣದ ಗುವಾಂಗ್​ಝೌ ನಗರಗಳಲ್ಲಿ ಸುಮಾರು 50 ಲಕ್ಷ ಜನ ಲಾಕ್​ಡೌನ್​ ಪರಿಣಾಮಕ್ಕೆ ಸಿಲುಕಿದ್ದಾರೆ. ಬೀಜಿಂಗ್​ನಲ್ಲಿ ಪ್ರತಿ ದಿನ 21 ಲಕ್ಷ ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಅನೇಕ ನಗರಗಳ ಶಾಲೆಗಳು ಆನ್​ಲೈನ್ ತರಗತಿಗಳ ಮೊರೆ ಹೋಗಿವೆ. ಆಸ್ಪತ್ರೆಗಳಲ್ಲಿ ಸೇವೆಗಳನ್ನು ನಿರ್ಬಂಧಿಸಲಾಗಿದೆ. ಅನೇಕ ಅಂಗಡಿಗಳು ಮತ್ತು ರೆಸ್ಟೋರೆಂಟ್​ಗಳು ಮುಚ್ಚಿವೆ. ಇವುಗಳ ಸಿಬ್ಬಂದಿಯನ್ನು ಕ್ವಾರಂಟೈನ್​​ನಲ್ಲಿ ಇರಿಸಲಾಗಿದೆ. ಕೆಲವು ಪ್ರದೇಶಗಳಲ್ಲಿ ಜನರು ಪೊಲೀಸರು ಮತ್ತು ಆರೋಗ್ಯ ಕಾರ್ಯಕರ್ತರ ಜತೆ ಸೆಣಸಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಕೋವಿಡ್ ವಿರುದ್ಧ ಶೂನ್ಯ ಸಹನೆ; ಆರ್ಥಿಕ ಸಂಕಷ್ಟದಲ್ಲಿ ಜನ

ಕೋವಿಡ್ ವಿರುದ್ಧ ಚೀನಾದ ಶೂನ್ಯ ಸಹನೆ ನೀತಿಯಿಂದಾಗಿ ಸಾರ್ವಜನಿಕರು ಹತಾಶೆಗೊಳಗಾಗಿದ್ದಾರೆ. ಲಕ್ಷಾಂತರ ಜನರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಈ ವಿಚಾರವಾಗಿ ಚೀನಾದ ರಾಜಕೀಯ ನಾಯಕರು ಗುರುವಾರ ಸಭೆ ನಡೆಸಿದ್ದರು. ವಾರಗಳಿಂದ ಕ್ವಾರಂಟೈನ್​ನಲ್ಲಿರುವವರ ಬಿಡುಗಡೆಗೆ ಸಂಬಂಧಿಸಿ ಅವರು ಏನು ನಿರ್ಧಾರ ಕೈಗೊಂಡಿದ್ದಾರೆ ಎಂಬುದು ಇನ್ನೂ ಬಹಿರಂಗವಾಗಿಲ್ಲ ಎಂದೂ ಮೂಲಗಳು ತಿಳಿಸಿವೆ.

ಶೂನ್ಯ ಸಹನೆ ನೀತಿಯಿಂದಾಗಿ ಚೀನಾದಲ್ಲಿ ಸೋಂಕು ಪ್ರಮಾಣ ಕಡಿಮೆಯಾಗಿದೆ. ಆದರೆ ಆರ್ಥಿಕತೆ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಶಾಲೆ, ಕೈಗಾರಿಕೆ, ಅಂಗಡಿಗಳನ್ನು ಮುಂಚಿತವಾಗಿ ಮಾಹಿತಿ ನೀಡದೆ ಏಕಾಏಕಿ ಮುಚ್ಚುವುದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಳ್ಳುತ್ತಿದೆ ಎಂದು ಮೂಲಗಳು ಹೇಳಿವೆ.

ಮತ್ತೆ ಲಾಕ್​ಡೌನ್ ಸಂಕಷ್ಟದಲ್ಲಿ ಜನ

ಕೋವಿಡ್ ಪ್ರಕರಣಗಳು ಮತ್ತೆ ಉಲ್ಬಣಗೊಳ್ಳುವುದರೊಂದಿಗೆ, ಹೆಚ್ಚಿನ ಪ್ರದೇಶಗಳಲ್ಲಿ ವ್ಯವಹಾರಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. ನಿರ್ಬಂಧಗಳನ್ನು ಹೇರಲಾಗುತ್ತಿದೆ. ಕಚೇರಿ ಕಟ್ಟಡಗಳು, ಶಾಪಿಂಗ್ ಮಾಲ್‌ಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಪ್ರವೇಶಿಸಬೇಕಿದ್ದರೆ ಜನರು ದಿನಕ್ಕೆ ಒಂದು ಬಾರಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ವರದಿ ತೋರಿಸಬೇಕಿದೆ.

ಇದನ್ನೂ ಓದಿ: ಚೀನಾನಲ್ಲಿ ಶೂನ್ಯ-ಕೋವಿಡ್ ನೀತಿ ಜಾರಿಯಲ್ಲಿದ್ದರೂ ಸೋಂಕಿನ ಪ್ರಕರಣಗಳಲ್ಲಿ ದಿಢೀರ್ ಹೆಚ್ಚಳ ಕಂಡುಬಂದಿದೆ!