ನವದೆಹಲಿ, ಏಪ್ರಿಲ್ 1: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾನುವಾರ ಇರಾನ್ ಒಂದುವೇಳೆ ಅಮೆರಿಕ ಪ್ರಸ್ತಾಪಿಸಿದ ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಇಸ್ಲಾಮಿಕ್ ಗಣರಾಜ್ಯದ ಮೇಲೆ “ಹಿಂದೆಂದೂ ಕಾಣದ ರೀತಿಯ ಬಾಂಬ್ ದಾಳಿ” ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಹಾಗೇ, ದ್ವಿತೀಯ ಸುಂಕಗಳನ್ನು ವಿಧಿಸುವುದಾಗಿಯೂ ಬೆದರಿಕೆ ಹಾಕಿದ್ದರು. ಖಾಸಗಿ ನ್ಯೂಸ್‌ಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಅನುಸರಿಸಲು ಅಮೆರಿಕ 2 ವಾರಗಳ ಕಾಲಾವಕಾಶ ನೀಡುತ್ತದೆ. ಈ ಒಪ್ಪಂದವು ಹೇಗೆ ಮುಂದುವರಿಯುತ್ತದೆ ಎಂಬುದರ ಆಧಾರದ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಇರಾನ್‌ನ (Iran) ನಾಶಕ್ಕೆ ಬಾಂಬ್ ದಾಳಿಯಾಗಲಿ ಅಥವಾ ಕ್ಷಿಪಣಿ ದಾಳಿಯಾಗಲಿ ಕಾರಣವಾಗುವುದಕ್ಕೂ ಮೊದಲೇ ಇರಾನ್‌ನ ರಾಜಧಾನಿ ಟೆಹ್ರಾನ್ ನಗರದಲ್ಲಿ ದುರಂತ ಭೂಕಂಪದ ಆತಂಕವನ್ನು ಎದುರಿಸುತ್ತಿದೆ. ಹೀಗಾಗಿ, ಈ ದೇಶಕ್ಕೆ ನೈಸರ್ಗಿಕ ದುರಂತವೇ ಕಂಟಕವಾಗುವ ಸಾಧ್ಯತೆ ಹೆಚ್ಚಾಗಿದೆ. ಇಲ್ಲಿ ಇತ್ತೀಚಿನ ಸಣ್ಣ ಭೂಕಂಪಗಳು ಮತ್ತೊಮ್ಮೆ ಈ ಆತಂಕಕಾರಿ ವಾಸ್ತವವನ್ನು ಗಮನಕ್ಕೆ ತಂದಿವೆ.
ಭೂಕಂಪನಗಳ ಜೊತೆಗೆ ನೀರಿನ ಕೊರತೆ, ವಿದ್ಯುತ್ ಕಡಿತ ಮತ್ತು ಮಾಲಿನ್ಯವು ರಾಜಧಾನಿಯ ಹೋರಾಟಗಳನ್ನು ಇನ್ನಷ್ಟು ಹದಗೆಡಿಸಿವೆ. ತುರ್ತು ಕ್ರಮ ಕೈಗೊಳ್ಳದಿದ್ದರೆ ಭೀಕರ ಭೂಕಂಪವು ಲಕ್ಷಾಂತರ ಜೀವಗಳಿಗೆ ಅಪಾಯವನ್ನುಂಟುಮಾಡಬಹುದು ಮತ್ತು ನಗರದ ಸಂಪೂರ್ಣ ವಿನಾಶಕ್ಕೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಟೆಹ್ರಾನ್‌ನ ಆಗ್ನೇಯದಲ್ಲಿರುವ ಜನನಿಬಿಡ ನಗರವಾದ ವರಮಿನ್‌ನಲ್ಲಿ ಮಾರ್ಚ್ 14ರಂದು 3.0 ಮತ್ತು 3.3 ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿದವು. ಯಾವುದೇ ಸಾವುನೋವುಗಳು ವರದಿಯಾಗಿಲ್ಲವಾದರೂ, ಈ ಕಂಪನಗಳು ಟೆಹ್ರಾನ್ ಯಾವುದೇ ಕ್ಷಣದಲ್ಲಿ ದೊಡ್ಡ ಭೂಕಂಪದಿಂದ ಅಪ್ಪಳಿಸಬಹುದು ಎಂಬುದನ್ನು ನೆನಪಿಸುತ್ತವೆ. ಟಿವಿ9 ಹಿಂದಿ ವರದಿಯ ಪ್ರಕಾರ, ಭೂಕಂಪಶಾಸ್ತ್ರ ತಜ್ಞರು ಟೆಹ್ರಾನ್ ನಗರವು ಈಗ ಹಿಂದೆಂದಿಗಿಂತಲೂ ಹೆಚ್ಚಿನ ಅಪಾಯದಲ್ಲಿದೆ ಎಂದು ಎಚ್ಚರಿಸಿದ್ದಾರೆ. 7.0 ತೀವ್ರತೆಯ ಭೂಕಂಪವು ಆರು ಮಿಲಿಯನ್ ಜನರ ಜೀವವನ್ನು ಬಲಿ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ: ರಹಸ್ಯವಾಗಿ ಇರಾನ್ ಸರ್ವೋಚ್ಚ ನಾಯಕನ ಉತ್ತರಾಧಿಕಾರಿ ಆಯ್ಕೆ
ಇರಾನ್‌ನ ರಾಜಧಾನಿ ಟೆಹ್ರಾನ್‌ನಲ್ಲಿ 10 ಮಿಲಿಯನ್‌ಗಿಂತಲೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಆದರೆ, ನಗರವು 3 ಪ್ರಮುಖ ದೋಷ ರೇಖೆಗಳು ಮತ್ತು ಹಲವಾರು ಸಣ್ಣ ಬಿರುಕುಗಳ ಮೇಲೆ ನೆಲೆಗೊಂಡಿದೆ. ಜಪಾನ್ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ (JICA) ಜೊತೆ ನಡೆಸಿದ ಅಧ್ಯಯನವು ಈ ದೋಷ ರೇಖೆಗಳಲ್ಲಿ ಯಾವುದಾದರೂ 7.0 ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆಯ ಭೂಕಂಪವನ್ನು ಪ್ರಚೋದಿಸಬಹುದು ಮತ್ತು ನಗರದ ಅರ್ಧದಷ್ಟು ಕಟ್ಟಡಗಳು ಕುಸಿಯಲು ಕಾರಣವಾಗಬಹುದು ಎಂಬ ಆತಂಕಕಾರಿ ಸಂಗತಿಯನ್ನು ಬಹಿರಂಗಪಡಿಸಿದೆ.
ಟೆಹ್ರಾನ್‌ನ ಆಗ್ನೇಯ ಭಾಗವು ಪ್ರಮುಖ ದೋಷ ರೇಖೆಯ ಮೇಲಿರುವುದರಿಂದ ಅತ್ಯಂತ ದುರ್ಬಲ ಪ್ರದೇಶವೆಂದು ಪರಿಗಣಿಸಲಾಗಿದೆ. ಈ ಪ್ರದೇಶವು ಹಳೆಯ ಮತ್ತು ಶಿಥಿಲಗೊಳ್ಳುತ್ತಿರುವ ಕಟ್ಟಡಗಳಿಂದ ಕೂಡಿದೆ. ಕಿರಿದಾದ ಬೀದಿಗಳು ಮತ್ತು ಅಸ್ತವ್ಯಸ್ತವಾಗಿರುವ ಮೂಲಸೌಕರ್ಯವು ಪ್ರಮುಖ ಭೂಕಂಪದ ನಂತರ ಪರಿಹಾರ ಕಾರ್ಯಗಳಿಗೆ ಗಮನಾರ್ಹ ಸವಾಲುಗಳನ್ನು ಒಡ್ಡಬಹುದು. ಇದಲ್ಲದೆ, ಇತ್ತೀಚಿನ ದಶಕಗಳಲ್ಲಿ ಅಂತರ್ಜಲ ಮಟ್ಟದಲ್ಲಿನ ತ್ವರಿತ ಕುಸಿತವು ಭೂ ಕುಸಿತಕ್ಕೆ ಕಾರಣವಾಗಿದೆ, ಇದು ಪ್ರದೇಶವನ್ನು ಮತ್ತಷ್ಟು ಅಸ್ಥಿರಗೊಳಿಸಿದೆ.
ಇದನ್ನೂ ಓದಿ: ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್ ದಾಳಿ; ಇರಾನ್‌ಗೆ ಟ್ರಂಪ್ ಬೆದರಿಕೆ
ಇರಾನ್ ಜಾಗತಿಕವಾಗಿ ಹೆಚ್ಚು ಭೂಕಂಪ ಪೀಡಿತ ದೇಶಗಳಲ್ಲಿ ಒಂದಾಗಿದೆ. ಸರಿಸುಮಾರು 575 ಸಕ್ರಿಯ ದೋಷ ರೇಖೆಗಳನ್ನು ಹೊಂದಿದೆ. ದೇಶವು ಆಗಾಗ ಭೂಕಂಪಗಳನ್ನು ಅನುಭವಿಸುತ್ತದೆ. ಆಗಾಗ ಭಾರಿ ವಿನಾಶವನ್ನು ಉಂಟುಮಾಡುತ್ತದೆ. 1990ರಲ್ಲಿ ಕ್ಯಾಸ್ಪಿಯನ್ ಪರ್ವತಗಳ ಮಂಜಿಲ್ ಮತ್ತು ರುಡ್ಬಾರ್ ಪ್ರದೇಶಗಳಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತು. ಇದು 35,000ರಿಂದ 50,000 ಜನರ ಜೀವವನ್ನು ಬಲಿ ತೆಗೆದುಕೊಂಡಿತು.
1830ರಲ್ಲಿ ಉಂಟಾದ 7.1 ತೀವ್ರತೆಯ ಭೂಕಂಪವು ಶೆಮಿರಾನ್ ಎಂಬ ಸಣ್ಣ ಹಳ್ಳಿಯನ್ನು ಧ್ವಂಸಮಾಡಿತು. ಇಲ್ಲಿ ಈಗ ಎತ್ತರದ ಕಟ್ಟಡಗಳು, ಸರ್ಕಾರಿ ಕಚೇರಿಗಳು ಮತ್ತು ಶಾಪಿಂಗ್ ಮಾಲ್‌ಗಳಿಗೆ ನೆಲೆಯಾಗಿದೆ. 2003ರಲ್ಲಿ ಬಾಮ್ ನಗರದಲ್ಲಿ ಸಂಭವಿಸಿದ 6.6 ತೀವ್ರತೆಯ ಭೂಕಂಪವು ಕನಿಷ್ಠ 34,000 ಜನರನ್ನು ಬಲಿ ತೆಗೆದುಕೊಂಡಿತು. 2018ರಲ್ಲಿ ನಡೆಸಿದ ಅಧ್ಯಯನವು ಮುಂದಿನ 2 ರಿಂದ 12 ವರ್ಷಗಳಲ್ಲಿ ಟೆಹ್ರಾನ್‌ನ 100 ಕಿಲೋಮೀಟರ್‌ಗಳ ಒಳಗೆ ದೊಡ್ಡ ಭೂಕಂಪ ಸಂಭವಿಸುವ ಸಾಧ್ಯತೆ ಶೇ. 40ರಿಂದ 70ರಷ್ಟು ಇದೆ ಎನ್ನಲಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ