ನವದೆಹಲಿ: ಒಸಾಮಾ ಬಿನ್ ಲಾಡೆನ್ (Osama Bin Laden) ಹತ್ಯೆಯ ನಂತರ ವಶಪಡಿಸಿಕೊಳ್ಳಲಾದ ದಾಖಲೆಗಳಲ್ಲಿ ಬಿನ್ ಲಾಡೆನ್ ಅಮೆರಿಕಾದ ವಿರುದ್ಧ ಮತ್ತೊಂದು ದಾಳಿಗೆ ಸಂಚು ರೂಪಿಸಿದ್ದ ಎಂಬುದು ಬಯಲಾಗಿದೆ. 2001ರ ಸೆಪ್ಟೆಂಬರ್ 11ರಂದು ನಡೆದ ಭಯಾನಕ ದಾಳಿಯಲ್ಲಿ (ಈ ದಾಳಿಯನ್ನು 9/11 ದಾಳಿ ಎಂದೂ ಕರೆಯಲಾಗುತ್ತದೆ) ಸುಮಾರು 3,000 ಜನರು ಸಾವನ್ನಪ್ಪಿದ್ದರು. ಇದಾದ ಬಳಿಕ ಇದೇ ರೀತಿಯ 2ನೇ ದಾಳಿ ನಡೆಸಲು ಒಸಾಮಾ ಬಿನ್ ಲಾಡೆನ್ ಸಂಚು ರೂಪಿಸಿದ್ದ ಎಂಬುದು ಇದೀಗ ಬೆಳಕಿಗೆ ಬಂದಿದೆ. ಅಮೆರಿಕಾದ ನೌಕಾಪಡೆಯ ಸೀಲ್ ಮಾಡಲಾದ ದಾಖಲೆಗಳ ಪ್ರಕಾರ ಒಸಾಮಾ ಬಿನ್ ಲಾಡೆನ್ ಯಾವ ರೀತಿ ಪ್ಯಾಸೆಂಜರ್ ಪ್ಲಾನ್ ಬದಲು ಪ್ರೈವೇಟ್ ಜೆಟ್ಗಳನ್ನು ಬಳಸಿ ಅಟ್ಯಾಕ್ ಮಾಡಲು ಸೂಚಿಸಿದ್ದ ಎಂಬುದು ದಾಖಲಾಗಿದೆ. ಹಾಗೇ, ತನ್ನ ಸಹಚರರಿಗೆ ಆತ ಯಾವ ರೀತಿ ಅಮೆರಿಕಾದ ರೈಲ್ವೆಯ 12 ಮೀಟರ್ ಹಳಿಗಳನ್ನು ಕಟ್ ಮಾಡಲು ಸೂಚಿಸಿದ್ದ ಎಂಬುದು ಕೂಡ ದಾಖಲಾಗಿದೆ. ಈ ದುರಂತದಲ್ಲಿ ನೂರಾರು ಜನರು ಸಾವನ್ನಪ್ಪಬಹುದಾಗಿತ್ತು.
ಲೇಖಕಿ ಮತ್ತು ಇಸ್ಲಾಮಿಕ್ ವಿದ್ವಾಂಸರಾದ ನೆಲ್ಲಿ ಲಾಹೌದ್ ಅವರು ತಮ್ಮ ವೃತ್ತಿಜೀವನದ ಬಹುಪಾಲು ಅಲ್-ಖೈದಾ ಕುರಿತು ಸಂಶೋಧನೆ ನಡೆಸಿದ್ದಾರೆ. ಒಸಾಮಾ ಬಿನ್ ಲಾಡೆನ್ ಅವರ ವೈಯಕ್ತಿಕ ಪತ್ರಗಳು ಮತ್ತು ಟಿಪ್ಪಣಿಗಳ ಸಾವಿರಾರು ಪುಟಗಳನ್ನು ಪರಿಶೀಲಿಸಿದ್ದಾರೆ. 11 ವರ್ಷಗಳ ಹಿಂದೆ ಎರಡು ಡಜನ್ ನೇವಿ ಸೀಲ್‌ಗಳ ತಂಡವು ಪಾಕಿಸ್ತಾನಕ್ಕೆ ಒಸಾಮಾ ಬಿನ್ ಲಾಡೆನ್ನನ್ನು ಸೆರೆಹಿಡಿಯಲು ಹೋಗಿತ್ತು. ಉಗ್ರ ಒಸಾಮಾ ಬಿನ್ ಲಾಡೆನ್ ಬಗ್ಗೆ ಸಿಬಿಎಸ್‌ನಲ್ಲಿ ಪ್ರಸಾರವಾದ 60 ನಿಮಿಷಗಳ ಸಂದರ್ಶನದಲ್ಲಿ ಮಾತನಾಡಿದ ಲೇಖಕಿ ಲಾಹೌದ್, 9/11 ದಾಳಿಯ ನಂತರ ಅಮೆರಿಕಾ ಯುದ್ಧಕ್ಕೆ ಹೋಗುವುದನ್ನು ಅಲ್-ಖೈದಾ ನಿರೀಕ್ಷಿಸಿತ್ತೇ, ಇಲ್ಲವೇ ಎಂಬುದನ್ನು ವಿವರಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಯುದ್ಧವು ಉಲ್ಬಣಗೊಳ್ಳುತ್ತಿದ್ದಂತೆ, ಸೆಪ್ಟೆಂಬರ್ 11ರ ಹಿಂಸಾಚಾರಕ್ಕೆ ಅಮೆರಿಕನ್ನರು ಹೇಗೆ ಪ್ರತಿಕ್ರಿಯಿಸಿದರು ಎಂಬುದಕ್ಕೆ ಉಗ್ರ ಒಸಾಮಾ ಬಿನ್ ಲಾಡೆನ್ ಆಶ್ಚರ್ಯಪಟ್ಟಿದ್ದ ಎಂದು ಬಿನ್ ಲಾಡೆನ್ ಪತ್ರದಲ್ಲಿ ವಿವರಿಸಿದ್ದ. ಡಿಕ್ಲಾಸಿಫೈಡ್ ಪೇಪರ್‌ಗಳ ಪ್ರಕಾರ, ಅಮೆರಿಕನ್ನರು ಬೀದಿಗಿಳಿಯುತ್ತಾರೆ ಎಂದು ಬಿನ್ ಲಾಡೆನ್ ಭಾವಿಸಿದ್ದ. ಮುಸ್ಲಿಂ ಬಹುಸಂಖ್ಯಾತ ರಾಜ್ಯದಿಂದ ಹಿಂದೆ ಸರಿಯುವಂತೆ ತಮ್ಮ ಸರ್ಕಾರದ ಮೇಲೆ ಒತ್ತಡ ಹೇರುತ್ತಾರೆ ಎಂದು ಅವರು ಭಾವಿಸಿದ್ದ. ಆದರೆ, ಒಸಾಮಾ ಬಿನ್ ಲಾಡೆನ್ ಲೆಕ್ಕಾಚಾರ ಉಲ್ಟಾ ಆಯಿತು ಎಂದು ಲಾಹೌದ್ ಹೇಳಿದ್ದಾರೆ.
ತನ್ನ ಗುಂಪಿನ ಸದಸ್ಯರಿಗೆ ಬರೆದ ವೈಯಕ್ತಿಕ ಪತ್ರಗಳ ಪ್ರಕಾರ, ಒಸಾಮಾ ಬಿನ್ ಲಾಡೆನ್ ತನ್ನ ಅಲ್-ಖೈದಾ ಸಹಚರರೊಂದಿಗೆ ಮೂರು ವರ್ಷಗಳ ಕಾಲ ಸಂವಹನ ನಡೆಸಲಿಲ್ಲ. ಆದರೆ 2004ರಲ್ಲಿ, ಆತ ಅಲ್-ಖೈದಾ ಜೊತೆ ಮತ್ತೆ ಸಂಪರ್ಕ ಹೊಂದಿದ. ಅಮೆರಿಕಾದ ಮೇಲೆ ದಾಳಿ ಮಾಡಲು ತಮ್ಮ ಗುಂಪಿನ ಸದಸ್ಯರಿಗೆ ತಮ್ಮ ಹೊಸ ಯೋಜನೆಯನ್ನು ನೀಡಿದ. 9/11 ದಾಳಿಯ ರೀತಿಯ ಮತ್ತೊಂದು ದಾಳಿ ನಡೆಸಲು ಬಿನ್ ಲಾಡೆನ್ ಬಹಳ ಉತ್ಸುಕನಾಗಿದ್ದ. ಆದರೆ, ವಿಮಾನ ನಿಲ್ದಾಣಗಳಲ್ಲಿನ ಅತ್ಯಂತ ಕಷ್ಟಕರವಾದ ಭದ್ರತಾ ಪರಿಸ್ಥಿತಿಗಳ ಬಗ್ಗೆಯೂ ಅವನು ಗಮನಹರಿಸಿದ್ದ. ಅಲ್-ಖೈದಾದ ಅಂತಾರಾಷ್ಟ್ರೀಯ ಭಯೋತ್ಪಾದನಾ ಘಟಕದ ಮುಖ್ಯಸ್ಥರಿಗೆ ಒಸಾಮಾ ಬಿನ್ ಲಾಡೆನ್ ಬರೆದ ಶಾಕಿಂಗ್ ಪತ್ರದಲ್ಲಿ ಅಮೆರಿಕಾದ ಮೇಲಿನ ಮುಂದಿನ ದಾಳಿಗೆ ಪ್ರಯಾಣಿಕರ ಬದಲಿಗೆ ಚಾರ್ಟರ್ ಪ್ಲೇನ್ ಮೂಲಕ ದಾಳಿ ನಡೆಸುವ ಕಲ್ಪನೆಯನ್ನು ಪ್ರಸ್ತಾಪಿಸಿದ್ದ ಎಂದು ಲೌಹಾದ್ ಬಹಿರಂಗಪಡಿಸಿದ್ದಾರೆ. ವಿಮಾನವನ್ನು ಬಳಸಿ ದಾಳಿ ಮಾಡುವುದು ತುಂಬಾ ಕಷ್ಟವಾಗಿದ್ದರೆ ಅಮೆರಿಕಾದರೈಲ್ವೇಗಳನ್ನು ಗುರಿಯಾಗಿಸಿ ದಾಳಿ ನಡೆಸಬೇಕು ಎಂದು ಆತ ಬರೆದಿದ್ದಾನೆ.
ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದ ಬಿನ್ ಲಾಡೆನ್ ಅಮೆರಿಕಾದ ಮೇಲೆ ಹೇಗೆ ದಾಳಿ ಮಾಡಬೇಕೆಂದು ನಿಖರವಾಗಿ ವಿವರಿಸಿದ್ದ ಎಂದು ಲಹೌದ್ ಹೇಳಿದ್ದಾರೆ. “ಆತ 12 ಮೀಟರ್ ಉಕ್ಕಿನ ರೈಲ್ವೆ ಹಳಿಯನ್ನು ತೆಗೆದುಹಾಕಲು ಬಯಸಿದ್ದ. ಇದರಿಂದಾಗಿ ರೈಲು ಹಳಿ ತಪ್ಪಬಹುದು, ಅದರಿಂದ ಜನ ಸಾಯಬಹುದು ಎಂಬುದು ಅವನ ಲೆಕ್ಕಾಚಾರವಾಗಿತ್ತು. ಆದರೆ, ಅದೃಷ್ಟವಶಾತ್, ಬಿನ್ ಲಾಡೆನ್ ತನ್ನ ಯೋಜನೆಯನ್ನು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ.