ಪಾಕಿಸ್ತಾನ ಸೇರಿ 41 ದೇಶಗಳಿಗೆ ಟ್ರಂಪ್ ಸರ್ಕಾರದಿಂದ ಪ್ರಯಾಣ ನಿಷೇಧ ಸಾಧ್ಯತೆ
ಡೊನಾಲ್ಡ್ ಟ್ರಂಪ್ ಸರ್ಕಾರವು ಪಾಕಿಸ್ತಾನ, ಉತ್ತರ ಕೊರಿಯಾ ಸೇರಿದಂತೆ 41 ದೇಶಗಳಿಗೆ ಪ್ರಯಾಣದ ನಿಷೇಧವನ್ನು ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಿದೆ. 2ನೇ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಅವರ ಆಡಳಿತವು ಹೊಸ ನಿಷೇಧದ ಭಾಗವಾಗಿ ಡಜನ್ಗಟ್ಟಲೆ ದೇಶಗಳ ನಾಗರಿಕರಿಗೆ ಪ್ರಯಾಣ ನಿರ್ಬಂಧಗಳನ್ನು ಹೊರಡಿಸುವ ಬಗ್ಗೆ ಚಿಂತಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಒಟ್ಟು 41 ದೇಶಗಳನ್ನು ಮೂರು ಪ್ರತ್ಯೇಕ ಗುಂಪುಗಳಾಗಿ ವಿಂಗಡಿಸಲಾಗಿದೆ. ಅಫ್ಘಾನಿಸ್ತಾನ, ಇರಾನ್, ಸಿರಿಯಾ, ಕ್ಯೂಬಾ ಮತ್ತು ಉತ್ತರ ಕೊರಿಯಾ ಸೇರಿದಂತೆ 10 ದೇಶಗಳ ಮೊದಲ ಗುಂಪಿನ ಪೂರ್ಣ ವೀಸಾ ಅಮಾನತುಗೊಳಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ವಾಷಿಂಗ್ಟನ್, (ಮಾರ್ಚ್ 15): ಡೊನಾಲ್ಡ್ ಟ್ರಂಪ್ ಅವರ ಮೊದಲ ಅವಧಿಯಲ್ಲಿ 7 ಬಹುಸಂಖ್ಯಾತ ಮುಸ್ಲಿಂ ರಾಷ್ಟ್ರಗಳ ಪ್ರಯಾಣಿಕರಿಗೆ ವಿಧಿಸಲಾದ ನಿರ್ಬಂಧಗಳಿಗಿಂತ ಈ ಬಾರಿ ಪ್ರಯಾಣ ನಿರ್ಬಂಧಗಳು ಕಠಿಣವಾಗಿರುತ್ತವೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಆಡಳಿತವು ಅಕ್ರಮ ವಲಸೆಯನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ಅಮೆರಿಕಕ್ಕೆ ಪ್ರಯಾಣ ನಿಷೇಧವನ್ನು ಎದುರಿಸುವ ಸಾಧ್ಯತೆ ಇರುವ 41 ದೇಶಗಳಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಭೂತಾನ್ ಕೂಡ ಸೇರಿವೆ. ಟ್ರಂಪ್ ಅವರ ಮೊದಲ ಅವಧಿಯಲ್ಲಿ 7 ಬಹುಸಂಖ್ಯಾತ ಮುಸ್ಲಿಂ ರಾಷ್ಟ್ರಗಳ ಪ್ರಯಾಣಿಕರ ಮೇಲೆ ನಿಷೇಧ ಹೇರಲಾಗಿತ್ತು. ಆ ನಿರ್ಬಂಧಗಳಿಗಿಂತ ಈ ಬಾರಿಯ ನಿರ್ಬಂಧಗಳು ವಿಶಾಲವಾಗಿರುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನ ಮಾತ್ರವಲ್ಲದೆ ಈ ಗುಂಪಿನಲ್ಲಿರುವ ಇತರ ದೇಶಗಳಲ್ಲಿ ತುರ್ಕಮೆನಿಸ್ತಾನ್, ಬೆಲಾರಸ್, ಭೂತಾನ್ ಮತ್ತು ವನವಾಟು ಕೂಡ ಸೇರಿವೆ. ವನವಾಟು ಇತ್ತೀಚೆಗೆ ದೇಶಭ್ರಷ್ಟ ಮತ್ತು ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ತಮ್ಮ ಪೌರತ್ವವನ್ನು ಪಡೆದುಕೊಂಡಿರುವುದಾಗಿ ಹೇಳಿಕೊಂಡ ನಂತರ ಗಮನ ಸೆಳೆದಿದೆ. ನಿಷೇಧ ಹೇರಲ್ಪಡುವ ದೇಶಗಳ ಮೊದಲ ಪಟ್ಟಿಯಲ್ಲಿ ಅಫ್ಘಾನಿಸ್ತಾನ, ಇರಾನ್, ಸಿರಿಯಾ, ಕ್ಯೂಬಾ ಮತ್ತು ಉತ್ತರ ಕೊರಿಯಾ ಸೇರಿದಂತೆ 10 ದೇಶಗಳಿವೆ. ಇವುಗಳಿಗೆ ಪೂರ್ಣ ವೀಸಾ ಅಮಾನತುಗೊಳಿಸಲಾಗುವುದು.
ಇದನ್ನೂ ಓದಿ: ವಿಜ್ಞಾನಿ ಲೆಕ್ಸ್ ಫ್ರಿಡ್‌ಮನ್ ಜೊತೆ ಪ್ರಧಾನಿ ಮೋದಿಯ ವಿಶೇಷ ಪಾಡ್‌ಕ್ಯಾಸ್ಟ್ ನಾಳೆ ಪ್ರಸಾರ
ಕರಡಿನ ಪ್ರಕಾರ, 10 ದೇಶಗಳನ್ನು “ಕೆಂಪು ಪಟ್ಟಿ”ಯಲ್ಲಿ ಇರಿಸಲಾಗಿದ್ದು, ಅವರ ನಾಗರಿಕರು ಪೂರ್ಣ ವೀಸಾ ಅಮಾನತು ಎದುರಿಸಬೇಕಾಗುತ್ತದೆ. ಅವುಗಳೆಂದರೆ ಅಫ್ಘಾನಿಸ್ತಾನ, ಕ್ಯೂಬಾ, ಇರಾನ್, ಲಿಬಿಯಾ, ಉತ್ತರ ಕೊರಿಯಾ, ಸೊಮಾಲಿಯಾ, ಸುಡಾನ್, ಸಿರಿಯಾ, ವೆನೆಜುವೆಲಾ ಮತ್ತು ಯೆಮೆನ್ ಎಂದು ಅಮೆರಿಕದ ಅಧಿಕಾರಿ ಖಚಿತಪಡಿಸಿದ್ದಾರೆ.
ಎರಡನೇ ಗುಂಪಿನಲ್ಲಿ, ಎರಿಟ್ರಿಯಾ, ಹೈಟಿ, ಲಾವೋಸ್, ಮ್ಯಾನ್ಮಾರ್ ಮತ್ತು ದಕ್ಷಿಣ ಸುಡಾನ್ ಸೇರಿದಂತೆ 5 ದೇಶಗಳು ಪ್ರವಾಸಿ ಮತ್ತು ವಿದ್ಯಾರ್ಥಿ ವೀಸಾಗಳ ಮೇಲೆ ಹಾಗೂ ಇತರ ವಲಸೆ ವೀಸಾಗಳ ಮೇಲೆ ಪರಿಣಾಮ ಬೀರುವ ಭಾಗಶಃ ಅಮಾನತುಗಳನ್ನು ಎದುರಿಸಲಿವೆ. ಇವುಗಳಿಗೆ ಕೆಲವು ವಿನಾಯಿತಿಗಳನ್ನು ನೀಡಲಾಗುವುದು.
ಇದನ್ನೂ ಓದಿ: ಮೋದಿಯಂಥ ನಾಯಕರು ವಾಷಿಂಗ್ಟನ್ನಲ್ಲಿ ಟೆಂಟ್, ರಸ್ತೆಗುಂಡಿಗಳನ್ನು ನೋಡುವುದು ನನಗಿಷ್ಟವಿಲ್ಲ; ಅಮೆರಿಕ ಅಧ್ಯಕ್ಷ ಟ್ರಂಪ್
ಮೂರನೇ ಗುಂಪಿನಲ್ಲಿ, ಬೆಲಾರಸ್, ಪಾಕಿಸ್ತಾನ ಮತ್ತು ತುರ್ಕಮೆನಿಸ್ತಾನ್ ಸೇರಿದಂತೆ ಒಟ್ಟು 26 ದೇಶಗಳಿಗೆ ಯುಎಸ್ ವೀಸಾ ವಿತರಣೆಯನ್ನು ಭಾಗಶಃ ಅಮಾನತುಗೊಳಿಸಲು ಪರಿಗಣಿಸಲಾಗುವುದು ಎಂದು ಜ್ಞಾಪಕ ಪತ್ರದಲ್ಲಿ ತಿಳಿಸಲಾಗಿದೆ.
ಜನವರಿ 20 ರಂದು ಅಧಿಕಾರ ವಹಿಸಿಕೊಂಡ ಮೊದಲ ದಿನವೇ, ಟ್ರಂಪ್ ಅವರು ಭದ್ರತಾ ಬೆದರಿಕೆಗಳನ್ನು ಪತ್ತೆಹಚ್ಚಲು ಯುಎಸ್‌ಗೆ ಪ್ರವೇಶ ಪಡೆಯಲು ಬಯಸುವ ಎಲ್ಲ ವಿದೇಶಿಯರನ್ನು ವ್ಯಾಪಕವಾಗಿ ಪರಿಶೀಲಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ