ಪಾಕಿಸ್ತಾನ(Pakistan)ದಲ್ಲಿ ಸಾರ್ವತ್ರಿಕ ಚುನಾವಣೆ(Election) ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಇಂದು ಮೊಬೈಲ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಮತದಾನ ಪ್ರಕ್ರಿಯೆಯು ಬೆಳಗ್ಗೆ 8 ರಿಂದ ಶುರುವಾಗಿದ್ದು ಸಂಜೆ 5 ರವರೆಗೆ ನಡೆಯುತ್ತದೆ. ಪಾಕಿಸ್ತಾನದ ಎಲ್ಲಾ ಮತಗಟ್ಟೆಗಳಲ್ಲಿ 128 ಮಿಲಿಯನ್‌ಗಿಂತಲೂ ಹೆಚ್ಚು ಮತದಾರರು ಇದ್ದಾರೆ. ಈ ನಡುವೆ ಭದ್ರತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಮತದಾನಕ್ಕೂ ಮುನ್ನ ಹಲವು ಭಯೋತ್ಪಾದಕ ಚಟುವಟಿಕೆಗಳಿಂದಾಗಿ ದೇಶದ ಭದ್ರತಾ ವಾತಾವರಣದಲ್ಲಿ ಭೀತಿ ಉಂಟಾಗಿತ್ತು.
ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯ ದೃಷ್ಟಿಯಿಂದ ಮತ್ತು ಸಂಭಾವ್ಯ ಭದ್ರತಾ ಬೆದರಿಕೆಗಳನ್ನು ಕಡಿಮೆ ಮಾಡಲು, ಅದರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ದೇಶಾದ್ಯಂತ ಮೊಬೈಲ್ ಸೇವೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಪಾಕಿಸ್ತಾನದ ಉಸ್ತುವಾರಿ ಆಂತರಿಕ ಸಚಿವಾಲಯವು ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಪಾಕಿಸ್ತಾನದ ಒಟ್ಟಾರೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.
ಪೊಲೀಸ್ ಮತ್ತು ಪಾಕಿಸ್ತಾನದ ಚುನಾವಣಾ ಆಯೋಗ (ECP) ಸೇರಿದಂತೆ ಎಲ್ಲಾ ಸಂಬಂಧಿತ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡಿದೆ. ಈ ಕೊಠಡಿಯಲ್ಲಿ ಕಾನೂನು ಜಾರಿ ಸಂಸ್ಥೆಗಳು ಮತ್ತು ಇತರ ಸಂಬಂಧಪಟ್ಟ ಏಜೆನ್ಸಿಗಳ ನಡುವೆ ಮಾಹಿತಿಯ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ.
ಮತ್ತಷ್ಟು ಓದಿ: Pakistan Election: ಇಂದು ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ, 6.50 ಲಕ್ಷ ಭದ್ರತಾ ಸಿಬ್ಬಂದಿ ನಿಯೋಜನೆ
ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ ಚುನಾವಣೆಯಲ್ಲಿ ಬಹುಮತ ಪಡೆದರೆ ನವಾಜ್ ಷರೀಫ್ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ. ಪಾಕಿಸ್ತಾನದ ಚುನಾವಣಾ ಆಯೋಗ (ECP) ಪ್ರಕಾರ, 12.85 ಕೋಟಿಗೂ ಹೆಚ್ಚು ನೋಂದಾಯಿತ ಮತದಾರರು ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಪ್ರಕ್ಷುಬ್ಧ ಬಲೂಚಿಸ್ತಾನದಲ್ಲಿ ಹೆಚ್ಚಿನ ನಿಗಾ ಇರಿಸಲಾಗಿದೆ.
ರಾಷ್ಟ್ರೀಯ ಅಸೆಂಬ್ಲಿ ಸ್ಥಾನಗಳಿಗೆ 5121 ಅಭ್ಯರ್ಥಿಗಳಲ್ಲಿ ಒಟ್ಟು 12,85,85,760 ನೋಂದಾಯಿತ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಇವರಲ್ಲಿ 4,807 ಪುರುಷರು, 312 ಮಹಿಳೆಯರು ಮತ್ತು ಇಬ್ಬರು ಟ್ರಾನ್ಸ್-ಜೆಂಡರ್ ಅಭ್ಯರ್ಥಿಗಳು ಸೇರಿದ್ದಾರೆ. ನಾಲ್ಕು ಪ್ರಾಂತೀಯ ವಿಧಾನಸಭೆಗಳಿಗೆ 12,123 ಪುರುಷರು, 570 ಮಹಿಳೆಯರು ಮತ್ತು ಇಬ್ಬರು ತೃತೀಯಲಿಂಗಿಗಳು ಸೇರಿದಂತೆ 12,695 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 100ಕ್ಕೂ ಹೆಚ್ಚು ವಿದೇಶಿ ವೀಕ್ಷಕರು ಮತ್ತು ವಿದೇಶಿ ಪತ್ರಕರ್ತರು ಚುನಾವಣೆ ವರದಿ ಮಾಡಲು ದೇಶಕ್ಕೆ ಬಂದಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ಸಿಕಂದನ್ ಸುಲ್ತಾನ್ ರಜಾ ತಿಳಿಸಿದ್ದಾರೆ.
ಚುನಾವಣೆಗಳು ಬ್ಯಾಲೆಟ್ ಪೇಪರ್‌ನಲ್ಲಿ ನಡೆಯುತ್ತಿವೆ. ಪಾಕಿಸ್ತಾನದಲ್ಲಿ ಅನೇಕ ಸಶಸ್ತ್ರ ಗುಂಪುಗಳು ಸಕ್ರಿಯವಾಗಿವೆ, ಈ ಕಾರಣದಿಂದಾಗಿ ಹಿಂಸಾತ್ಮಕ ಘಟನೆಗಳ ಭಯದಿಂದ ಕಡಿಮೆ ಮತದಾನದ ಸಾಧ್ಯತೆಯಿದೆ, ವಿಶೇಷವಾಗಿ ಖೈಬರ್ ಪಖ್ತುನ್ಖ್ವಾ ಮತ್ತು ಬಲೂಚಿಸ್ತಾನದಂತಹ ಪ್ರದೇಶಗಳಲ್ಲಿ ಭಯದ ವಾತಾವರಣವಿದೆ ಎನ್ನಲಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ