Narendra Modi: ನ್ಯೂಯಾರ್ಕ್ ಏರ್ಪೋರ್ಟ್ನಲ್ಲಿ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ
ಅಮೆರಿಕ ಪ್ರವಾಸ ಹಿನ್ನೆಲೆ ಇಂದು ರಾತ್ರಿ ನ್ಯೂಯಾರ್ಕ್ ವಿಮಾನ ನಿಲ್ದಾಣ ತಲುಪಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅನಿವಾಸಿ ಭಾರತೀಯರು ಅದ್ಧೂರಿ ಸ್ವಾಗತ ನೀಡಿದರು.

ನ್ಯೂಯಾರ್ಕ್: ನಾಳೆಯಿಂದ (ಜೂನ್ 21) ಮೂರು ದಿನಗಳ ಅಮೆರಿಕ ಪ್ರವಾಸ ಹಿನ್ನೆಲೆ ಇಂದು (ಜೂನ್ 20) ನ್ಯೂಯಾರ್ಕ್ ವಿಮಾನ ನಿಲ್ದಾಣ ತಲುಪಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಅನಿವಾಸಿ ಭಾರತೀಯರು ಅದ್ಧೂರಿ ಸ್ವಾಗತ ಕೋರಿದರು. ಪ್ರಧಾನಿ ಮೋದಿ ಕಂಡು ಸಂತಸಗೊಂಡ ಅನಿವಾಸಿ ಭಾರತೀಯರು, ಮೋದಿ ಪರ ಜೈಕಾರಗಳನ್ನು ಘೋಷಿಸಿದರು.
3 ದಿನಗಳ ರಾಜ್ಯ ಪ್ರವಾಸದಲ್ಲಿ ಪ್ರಧಾನಿ ಮೋದಿ ಅವರು ನೊಬೆಲ್ ಪ್ರಶಸ್ತಿ ವಿಜೇತರು, ಅರ್ಥಶಾಸ್ತ್ರಜ್ಞರು, ಕಲಾವಿದರು, ವಿಜ್ಞಾನಿಗಳು, ವಿದ್ವಾಂಸರು, ವಾಣಿಜ್ಯೋದ್ಯಮಿಗಳು, ಶಿಕ್ಷಣ ತಜ್ಞರು ಮತ್ತು ಆರೋಗ್ಯ ಕ್ಷೇತ್ರದ ತಜ್ಞರು ಸೇರಿದಂತೆ 24 ಪ್ರಮುಖ ವ್ಯಕ್ತಿಗಳನ್ನು ಭೇಟಿಯಾಗಲಿದ್ದಾರೆ. ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಂಸ್ಥಾಪಕ ಎಲಾನ್ ಮಸ್ಕ್ ಅವರನ್ನು ಎರಡನೇ ಬಾರಿ ಭೇಟಿಯಾಗಲಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ನೇತೃತ್ವದಲ್ಲಿ ಜೂನ್ 21ರಂದು ವಿಶ್ವಸಂಸ್ಥೆಯಲ್ಲಿ ಯೋಗ ದಿನಾಚರಣೆ: ಇಲ್ಲಿದೆ ಕಾರ್ಯಕ್ರಮದ ವೇಳಾಪಟ್ಟಿ
ಅಮೆರಿಕ ಪ್ರವಾಸದ ಮೊದಲ ದಿನ ಮೋದಿ ಅವರು ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಆಯೋಜಿಸಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿಯಾಗಲಿದ್ದಾರೆ. ಯುಎನ್‌ನಲ್ಲಿ 180 ಕ್ಕೂ ಹೆಚ್ಚು ರಾಷ್ಟ್ರಗಳ ಪ್ರಮುಖರೊಂದಿಗೆ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ರಾಜತಾಂತ್ರಿಕರು, ಶಿಕ್ಷಣ ತಜ್ಞರು ಮತ್ತು ಉದ್ಯಮಿಗಳು ಸೇರಿದಂತೆ 180 ಕ್ಕೂ ಹೆಚ್ಚು ದೇಶಗಳ ಜನರು ಭಾಗವಹಿಸುವ ನಿರೀಕ್ಷೆಯಿದೆ.
ಮೋದಿ ಅವರಿಗೆ ಜೂ.22ರಂದು ಅಮೆರಿಕ ಅಧ್ಯಕ್ಷರ ಪರವಾಗಿ ಸಾಂಪ್ರದಾಯಿಕ ಸ್ವಾಗತ ಕೋರಲಾಗುತ್ತದೆ. ಜೊತೆಗೆ ಸರ್ಕಾರ ಕಡೆಯಿಂದ ಔತಣ ಕೂಟ ಆಯೋಜಿಸಲಾಗಿದೆ. ಅಂದು ಮೋದಿ ಅಮೆರಿಕ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಮೂಲಕ ಅಮೆರಿಕ ಸಂಸತ್ತಿನಲ್ಲಿ ಮಾತನಾಡುವ ಭಾರತದ 2ನೇ ಪ್ರಧಾನಿ ಎನ್ನಿಸಿಕೊಳ್ಳಲಿದ್ದಾರೆ. ಜೂ.23ರಂದು ಮೋದಿ ಅವರಿಗೆ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಔತಣ ಕೂಟ ಆಯೋಜಿಸಿದ್ದಾರೆ.
ವಿದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




