Polar Expedition Record: ಮೈನಸ್ 30 ಡಿಗ್ರಿ ಚಳಿ, 70 ದಿನದಲ್ಲಿ 1,485 ಕಿಮೀ ಪ್ರಯಾಣ: ಪ್ರೀತ್ ಚಾಂದಿ ವಿಶ್ವದಾಖಲೆ

Indian Origin Army Officer Preet Chandi New World Record: ಬ್ರಿಟನ್ ಸೇನಾಧಿಕಾರಿಯಾಗಿರುವ ಭಾರತ ಮೂಲದ ಕ್ಯಾಪ್ಟನ್ ಪ್ರೀತ್ ಚಾಂದಿ ಅವರು ಅಂಟಾರ್ಟಿಕಾದ ಕೊರೆಯುವ ಧ್ರುವ ಪ್ರದೇಶದಲ್ಲಿ 1,485 ಕಿಮೀ ದೂರ ಪ್ರಯಾಣ ಮಾಡಿ ದಾಖಲೆ ಬರೆದಿದ್ದಾರೆ.

Polar Expedition Record: ಮೈನಸ್ 30 ಡಿಗ್ರಿ ಚಳಿ, 70 ದಿನದಲ್ಲಿ 1,485 ಕಿಮೀ ಪ್ರಯಾಣ: ಪ್ರೀತ್ ಚಾಂದಿ ವಿಶ್ವದಾಖಲೆ
ಕ್ಯಾಪ್ಟನ್ ಹರ್​ಪ್ರೀತ್ ಚಾಂದಿ
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Jan 30, 2023 | 12:47 PM

ಲಂಡನ್: ಇದು ಎಂಥವರ ಎದೆಯನ್ನೂ ನಡುಗಿಸುವ ಸಾಹಸ. ಬ್ರಿಟನ್ ಸೇನಾಧಿಕಾರಿಯಾಗಿರುವ ಭಾರತ ಮೂಲದ ಕ್ಯಾಪ್ಟನ್ ಪ್ರೀತ್ ಚಾಂದಿ (Captian Preet Chandi) ಅವರು ಅಂಟಾರ್ಟಿಕಾದ ಕೊರೆಯುವ ಧ್ರುವ ಪ್ರದೇಶದಲ್ಲಿ (Antarctica polar region) 1,485 ಕಿಮೀ ದೂರ ಪ್ರಯಾಣ ಮಾಡಿ ದಾಖಲೆ ಬರೆದಿದ್ದಾರೆ. ಧ್ರುವ ಪ್ರದೇಶದಲ್ಲಿ ಈಗಾಗಲೇ ಬಹಳ ಮಂದಿ ಪ್ರಯಾಣ ಮಾಡಿ ಬಂದಿದ್ದಾರೆ. ಆದರೆ, ಪ್ರೀತ್ ಚಾಂದ್ ವಿಶೇಷತೆ ಎಂದರೆ, ಯಾರ ಸಹಾಯವಿಲ್ಲದೇ, ಯಾರ ಜೊತೆಗಾರಿಕೆ ಇಲ್ಲದೇ ಒಂಟಿಯಾಗಿ ಅತೀ ದೂರು ಪೋಲಾರ್ ಎಕ್ಸ್​ಪೆಡಿಶನ್ ಮಾಡಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಏಕೈಕ ಮಹಿಳೆ ಎಂಬ ದಾಖಲೆ ಕ್ಯಾಪ್ಟನ್ ಪ್ರೀತ್ ಚಾಂದಿ ಅವರದ್ದಾಗಿದೆ.

33 ವರ್ಷದ ಪ್ರೀತ್ ಚಾಂದಿ ಅವರು ಅಂಟಾರ್ಕ್ಟಿಕಾದಲ್ಲಿ 70 ದಿನ 16 ಗಂಟೆಗಳ ಕಾಲ 1,485 ಕಿಮೀಯಷ್ಟು ದೂರ ಪ್ರಯಾಣ ಮಾಡಿದ್ದಾರೆ. ಇವರ ಪ್ರಯಾಣ ಬಹುತೇಕ ಸ್ಕೈಯಿಂಗ್ ಮೂಲಕವೇ. 70 ದಿನದಲ್ಲಿ 1,400ಕ್ಕೂ ಹೆಚ್ಚು ಕಿಮೀ ದೂರ ಹೋಗಬೇಕೆಂದರೆ ದಿನಕ್ಕೆ 10-15 ತಾಸು ಸ್ಕೈಯಿಂಗ್ ಮಾಡಬೇಕಾಗುತ್ತದೆ. ಪ್ರೀತ್ ಚಾಂದಿ ಒಂದು ದಿನದಲ್ಲಿ ಮಲಗುತ್ತಿದ್ದುದು ಐದಾರು ಗಂಟೆ ಮಾತ್ರ. ದಕ್ಷಿಣ ಧ್ರುವದಲ್ಲಿ ಕೆಲವೊಮ್ಮೆ ಮೈನಸ್ 30 ಡಿಗ್ರಿ ಸೆಲ್ಸಿಯಸ್​ವರೆಗೂ ಕೊರೆಯುವ ಚಳಿ ಇರುತ್ತದೆ. ಇಂಥ ಭೀಕರ ವಾತಾವರಣದಲ್ಲಿ ಒಬ್ಬಳೇ ಹುಡುಗಿ ಧೈರ್ಯವಾಗಿ ಪ್ರಯಾಣ ಮಾಡಿ ಜೈಸಿ ಬಂದಿದ್ದು ಅದ್ಭುತ.

ತಪ್ಪಿದ ಗುರಿ

ಇಲ್ಲಿ ಕುತೂಹಲದ ಸಂಗತಿ ಎಂದರೆ ಕ್ಯಾಪ್ಟನ್ ಚಾಂದಿ ಪೋಲಾರ್ ಎಕ್ಸ್​ಪೆಡಿಶನ್​ಗೆ ಹೊರಟಾಗ ಚಿಲಿಯ ಬಳಿ ಇರುವ ತುದಿಯನ್ನು ತಲುಪುವ ಗುರಿ ಇಟ್ಟುಕೊಂಡಿದ್ದರು. ಆದರೆ, ನಿಗದಿತ ಸಮಯದೊಳಗೆ ಅವರು ಆ ಸ್ಥಳ ಮುಟ್ಟಲು ವಿಫಲರಾದರು. ಸುಮಾರು 100 ಮೈಲು (160 ಕಿಮೀ) ಅಂತರದಿಂದ ಹಿಂದೆ ಬಿದ್ದರು. ಆದರೂ ಕೂಡ ಅವರು 1,500 ಕಿಮೀ ಸಮೀಪದಷ್ಟು ದೂರವನ್ನು ಕ್ರಮಿಸುವಲ್ಲಿ ಯಶಸ್ವಿಯಾಗಿದ್ದು ದೊಡ್ಡ ಸಂಗತಿ.

ಅಂಟಾರ್ಕ್ಟಿಕಾ ಗಡಿ ದಾಟುವ ಗುರಿ ಮುಟ್ಟಲು ತಾನು ವಿಫಲಳಾದರೂ ತನ್ನ ಕೈಲಾದಷ್ಟು ಪ್ರಯತ್ನ ಹಾಕಿದೆ. ಒಂದು ದಿನವೂ ವಿಶ್ರಾಂತಿ ಇಲ್ಲದೇ ಪ್ರಯಾಣಿಸಿದ್ದೇನೆ. ನನ್ನ ಈ ಸಾಹಸ ಬೇರೆಯವರಿಗೆ ಉತ್ತೇಜನ ಸಿಗಬಹುದು ಎಂದು ಪಂಜಾಬೀ ಹುಡುಗಿ ಪ್ರೀತ್ ಚಾಂದಿ ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

33 ವರ್ಷದ ಪ್ರೀತ್ ಚಾಂದಿ 120 ಕಿಲೋ ಸಾಮಗ್ರಿಗಳೊಂದಿಗೆ ಒಬ್ಬಳೇ ಸ್ಕೈಯಿಂಗ್ ಮಾಡುತ್ತಾ 70 ದಿನಗಳ ಕಾಲ ನಿರಂತರವಾಗಿ ಪ್ರಯಾಣಿಸುವುದು ಸಾಮಾನ್ಯ ಸಂಗತಿಯಂತೂ ಅಲ್ಲ.

ಕ್ಯಾಪ್ಟನ್ ಚಾಂದಿ 19ರ ವಯಸ್ಸಿನಲ್ಲಿ ಬ್ರಿಟಿಷ್ ಸೇನಾ ಮೀಸಲು ವಿಭಾಗಕ್ಕೆ ಸೇರಿಕೊಂಡಿದ್ದರು. 2012ರಲ್ಲಿ ಅವರು ಸೇನೆಗೆ ನಿಯೋಜನೆಯಾದರು. 27ರ ಹರೆಯದಲ್ಲಿ ಅವರು ರೆಗ್ಯುಲರ್ ಆರ್ಮಿಗೆ ನಿಯೋಜಿತರಾದರು. ಮೆಡಿಕಲ್ ಆಫಿಸರ್ ಆಗಿರುವ ಅವರು ಫಿಸಿಯೋಥೆರಪಿಸ್ಟ್ ಕಾರ್ಯ ಮಾಡುತ್ತಾರೆ. ತರಬೇತಿಯಲ್ಲಿ ಅಥವಾ ಯುದ್ಧದಲ್ಲಿ ಗಾಯವಾದ ಸೈನಿಕರಿಗೆ ಶುಶ್ರೂಷೆ ಮಾಡುತ್ತಾರೆ. ಸದ್ಯ ಇವರು ಇರುವುದು ಇಂಗ್ಲೆಂಡ್​ನ ಬಕಿಂಗ್​ಹ್ಯಾಂಶೈರ್​ನಲ್ಲಿ.